ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಕುಡಿಯುವ ನೀರಿಗೆ ಯೋಜನೆ

ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್‌.ರಾಗಪ್ರಿಯ ಜಂಟಿ ಪತ್ರಿಕಾಗೋಷ್ಠಿ
Last Updated 8 ಮಾರ್ಚ್ 2017, 10:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಮಗ್ರ ಕುಡಿಯುವ ನೀರಿನ ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯಲ್ಲಿ ಹುಟ್ಟುವ ನದಿಗಳು ಇನ್ನೆಲ್ಲಿಯೋ ಹೋಗಿ ಸೇರುತ್ತಿವೆ. ಜಿಲ್ಲೆಯಲ್ಲಿ ಸಾಕಷ್ಟು ನೀರು ಹರಿದರೂ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪುಗೊಳ್ಳದಿ ರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಗೊಳಿಸಲು, ನಗರ ಒಳಗೊಂಡಂತೆ ಇಡೀ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಹೊಸ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಯಗಚಿಯಿಂದ ಪ್ರತಿದಿನ ನಗರಕ್ಕೆ 9.3 ಕ್ಯೂಸೆಕ್‌ನಂತೆ ಕುಡಿಯುವ ನೀರನ್ನು ಆಗಸ್ಟ್‌ವರೆಗೂ ಕೊಡಲು ತೊಂದರೆ ಇಲ್ಲ ವೆಂದು ಯಗಚಿ ಜಲಾಶಯದ ಎಂಜಿನಿಯರ್‌ಗಳು ಪ್ರಾದೇಶಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ. ಜಲಾಶಯದಲ್ಲಿ ಕಡಿಮೆ ನೀರು ಇದ್ದು, ಹಾಸನಕ್ಕೆ ನೀರು ಹರಿಸಿದರೆ ಚಿಕ್ಕಮಗಳೂರು ನಗರಕ್ಕೆ ತೊಂದರೆಯಾಗುತ್ತದೆ ಯೆಂದು ಬಲವಾದ ಆಕ್ಷೇಪ ವ್ಯಕ್ತಪಡಿಸಿದೆವು.

35 ಕಿ.ಮೀ. ದೂರದ ಹಾಲವಾಗಿಲು ನಾಲೆಯಲ್ಲಿ ನೀರು ಹರಿಸಿದರೆ ನೀರು ಕೊನೆ ಮುಟ್ಟುವುದಿಲ್ಲ. ನಾಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿವೆ. ಹೀಗಾಗಿ ಕುಡಿಯುವ ನೀರು ಕೃಷಿ ಭೂಮಿ ಸೇರುತ್ತದೆ ಎನ್ನುವ ವಾದ ಮಂಡಿಸಿದೆವು. ಹಾಲುವಾಗಿಲು ಪಿಕಪ್‌ಗೆ ನೀರು ಹರಿಸುವುದಾದರೆ ಚಿಕ್ಕಮಗಳೂರಿಗೆ ಕೊಡಬೇಕಿರುವ 0.01 ಟಿಎಂಸಿ ನೀರನ್ನು ಕೊಡಲೇಬೇಕೆಂದು ಪ್ರಾಧಿಕಾರ ಒತ್ತಾಯಿಸಲಾಗಿದೆ.

ಈಗಾಗಲೇ ಕಡೂರು ತಾಲ್ಲೂಕು ಅಂತರ್ಜಲ ಅತೀ ಬಳಕೆ ತಾಲ್ಲೂಕಾಗಿ ಕೆಂಪು ಪಟ್ಟಿಯಲ್ಲಿದೆ. ಈ ಭಾಗಗಳಿಗೆ ಬಹುಗ್ರಾಮ ಯೋಜನೆಯಡಿ ಯಗಚಿಯಿಂದ ಕುಡಿಯುವ ನೀರು ಒದಗಿಸಬೇಕೆನ್ನುವ ಪ್ರಸ್ತಾವನೆಯನ್ನು ಸರ್ಕಾರಕ್ಕೂ ಸಲ್ಲಿಸಲಾಗಿದ್ದು, ಇದು ಪರಿಶೀಲನೆಯಲ್ಲಿದೆ ಎಂದರು.

ಜಿಲ್ಲೆಯ 87 ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಚಿಕ್ಕಮಗಳೂರು 17, ಕಡೂರು 41, ಮೂಡಿಗೆರೆ 5 ಹಾಗೂ ತರೀಕೆರೆಯಲ್ಲಿ 24 ಗ್ರಾಮಗಳಿಗೆ ಟ್ಯಾಂಕರ್‌ ನೀರು ಕೊಡಲಾಗುತ್ತಿದೆ. ಈವರೆಗೆ ಟ್ಯಾಂಕರ್‌ ನೀರು ಪೂರೈಕೆಗೆ ₹1.46 ಕೋಟಿ ವಿನಿಯೋಗಿಸಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ₹85 ಲಕ್ಷ, ಕಡೂರಿನಲ್ಲಿ ₹35 ಲಕ್ಷ, ತರೀಕೆರೆಯಲ್ಲಿ ₹8 ಲಕ್ಷ ವಿನಿಯೋಗವಾಗಿದೆ.

ಮೂಡಿಗೆರೆಗೆ ₹6 ಲಕ್ಷ, ಶೃಂಗೇರಿಗೆ ₹4 ಲಕ್ಷ, ಕೊಪ್ಪ ₹4 ಲಕ್ಷ ಹಾಗೂ ಎನ್‌.ಆರ್‌.ಪುರದಲ್ಲಿ ₹4 ಲಕ್ಷ ಬಿಡುಗಡೆ ಮಾಡಿದ್ದು, ಕುಡಿಯುವ ನೀರಿಗೆ ತೊಂದರೆ ಎದುರಾಗದ ಕಾರಣಕ್ಕೆ ವಿನಿಯೋಗವಾಗಿಲ್ಲ. ನಗರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ, ಒಂದೇ ಒಂದು ವಾರ್ಡ್‌ನಲ್ಲಿ ಮಾತ್ರ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒಂದೂವರೆ ಲಕ್ಷ ಎಕರೆ ಬೆಳೆ ನಷ್ಟ
ರೈತರ ತಾಕುಗಳಿಗೆ ಭೇಟಿ ನೀಡಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದು, ಬರಗಾಲದಿಂದ ಜಿಲ್ಲೆಯಲ್ಲಿ ಅಂದಾಜು 1,45,000 ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ರೈತರ ಖಾತೆಗಳಿಗೆ ಪರಿಹಾರ ಧನ ಪಾವತಿಸಲು ತಂತ್ರಾಂಶದಲ್ಲಿ ಇನ್‌ಪುಟ್‌ ಸಬ್ಸಿಡಿ ನೋಂದಣಿ ಮಾಡಬೇಕು. ಈಗಾಗಲೇ 1,44,000 ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಧನ ಪಾವತಿಸಲಾಗಿದೆ.

ಇನ್ನು 30 ಸಾವಿರ ರೈತರು ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡದಿರು ವುದರಿಂದ ಇನ್‌ಪುಟ್‌ ಸಬ್ಸಿಡಿ ಹಾಕಲು ಸಾಧ್ಯವಾಗಿಲ್ಲ. ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಕಾರ್ಡ್‌ ಜೋಡಿಸದೆ ಇರುವ ರೈತರು ಕಡ್ಡಾಯವಾಗಿ ಇದೇ 10ರೊಳಗೆ ಬ್ಯಾಂಕ್‌ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಆಧಾರ್ ಕಾರ್ಡ್‌ ಸಂಖ್ಯೆ ಜೋಡಿಸಿ, ಪರಿಹಾರ ಧನ ತಮ್ಮ ಖಾತೆಗಳಿಗೆ ಪಾವತಿ ಮಾಡಿಸಿಕೊಳ್ಳಲು ನೆರವಾಗಬೇಕು ಎಂದು ಜಲ್ಲಾಧಿಕಾರಿ ಮನವಿ ಮಾಡಿದರು.

ಮೇವಿಗೆ ಕೊರತೆ: ಜಿಲ್ಲೆಯಲ್ಲಿ ಮೇವಿನ ಕೊರತೆ ಇದ್ದು, ಕೆಲವು ಕಡೆ ಗೋಶಾಲೆ ತೆರೆಯಲು ಬೇಡಿಕೆ ಇದ್ದರೆ, ಇನ್ನೂ ಕೆಲವು ಕಡೆ ಗುಣಮಟ್ಟದ ಮೇವು ಪೂರೈಕೆಗೆ ಬೇಡಿಕೆ ಇದೆ. ಹಾಸನ ಜಿಲ್ಲೆಯಲ್ಲಿ ತೆರೆದಿದ್ದ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಿರುವ ಕಾರಣಕ್ಕೆ ಅಲ್ಲಿ ಗೋಶಾಲೆ ಮುಚ್ಚಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 6 ಮತ್ತು ಕಡೂರು ತಾಲ್ಲೂಕಿನಲ್ಲಿ 10 ಮೇವು ವಿತರಣಾ ಕೇಂದ್ರ ತೆರೆದಿದ್ದು, ಮೇವು ವಿತರಿಸಲಾಗುತ್ತಿದೆ.

ಶಿಕಾರಿಪುರ, ಶಿರಾಳಕೊಪ್ಪದಿಂದ ಮೇವು ತಂದು ವಿತರಿಸುತ್ತಿದ್ದು, ಪ್ರತಿಯೊಬ್ಬ ರೈತರಿಗೆ ಪ್ರತಿ ಕೆ.ಜಿ.ಗೆ ₹2ರ ದರದಲ್ಲಿ ಕನಿಷ್ಠ 50 ಕೆ.ಜಿ. ಮೇವು ವಿತರಿಸುವುದು ಜಿಲ್ಲಾಡಳಿತದ ಉದ್ದೇಶ. 7 ಸಾವಿರ ಅರ್ಜಿಗಳಿಗೆ 456 ಟನ್‌ ಮೇವು ವಿತರಿಸಲಾಗಿದೆ ಎಂದರು.

ಹೊರಗಿನಿಂದ ಮೇವು ಖರೀದಿಸುವುದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲೇ ಮೇವು ಬೆಳೆಸಲು 12,467 ಮಿನಿಕಿಟ್‌ ತರಿಸಲಾಗಿದೆ. ನೀರಾವರಿ ಸೌಲಭ್ಯವಿರುವ ರೈತರಿಗೆ 6 ಸಾವಿರ ಮಿನಿಕಿಟ್‌ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಾಮಾಜಿಕ ಅರಣ್ಯದಲ್ಲಿ ಬೆಳೆಸಿರುವ ಸುಮಾರು 50 ಟನ್‌ ಮೇವು ಕಟಾವಿಗೆ ಬಂದಿದೆ ಎಂದು ತಿಳಿಸಿದರು.

ನೀರಿಗೆ 14ನೇ ಹಣಕಾಸು ಅನುದಾನ ಬಳಕೆ
ಚಿಕ್ಕಮಗಳೂರು:
ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 14ನೇ ಹಣಕಾಸು ಯೋಜನೆಯ ಅನುದಾನ ಸಂಪೂರ್ಣ ಬಳಕೆ ಮಾಡಿಕೊಳ್ಳಲು ಆದೇಶ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಆರ್‌.ರಾಗಪ್ರಿಯ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರತಿ ವಾರ ನೋಡೆಲ್‌ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುತ್ತಿದೆ.

ಜಿಲ್ಲೆಯಲ್ಲಿ 651 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದು, ಇದರಲ್ಲಿ 249 ಗ್ರಾಮಗಳಲ್ಲಿ ವಿವಿಧ ಯೋಜನೆಗಳಡಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಪ್ರತಿ ತಾಲ್ಲೂಕಿಗೆ ₹40 ಲಕ್ಷ ಅನುದಾನ, ಜಿಲ್ಲೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವೇಚನಾ ನಿಧಿ ₹50 ಲಕ್ಷ, ಟಾಸ್ಕ್‌ ಫೋರ್ಸ್‌ ಅಡಿ ಶಾಸಕರ ನಿಧಿ ₹40 ಲಕ್ಷ ಪ್ರತಿ ತಾಲ್ಲೂಕಿಗೆ ಬಿಡುಗಡೆಯಾಗಿದೆ. 14ನೇ ಹಣಕಾಸು ಯೋಜನೆಯಡಿ ಯ ಅನುದಾನವನ್ನು ಸಂಪೂರ್ಣ ಕುಡಿಯುವ ನೀರಿನ ಬಳಕೆಗೆ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ.

ಈಗಾಗಲೇ ಈ ಯೋಜನೆಯಡಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ₹2.26 ಕೋಟಿ, ಕಡೂರಿನಲ್ಲಿ ₹2.31 ಕೋಟಿ, ತರೀಕೆರೆಯಲ್ಲಿ ₹61 ಲಕ್ಷ ಹಾಗೂ ಮೂಡಿಗೆರೆಯಲ್ಲಿ 61 ಲಕ್ಷ ವಿನಿಯೋಗಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಬಾಡಿಗೆ ಆಧಾರದಲ್ಲಿ 2 ಕೊಳವೆ ಬಾವಿಗಳನ್ನು ರೈತರಿಗೆ ಗೌರವ ಧನ ಕೊಟ್ಟು ನೀರು ಪೂರೈಕೆಗೆ ಬಳಸಿಕೊಳ್ಳಲಾಗುತ್ತಿದೆ. ₹12 ಸಾವಿರದಿಂದ ₹15 ಸಾವಿರ ಗೌರವ ಧನ ನೀಡಲಾಗುತ್ತಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 10, ತರೀಕೆರೆ ತಾಲ್ಲೂಕಿನಲ್ಲಿ 10 ಹಾಗೂ ಕಡೂರು ತಾಲ್ಲೂಕಿನಲ್ಲಿ 15 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

*
ಜಿಲ್ಲೆ 5 ನದಿಗಳ ಉಗಮಸ್ಥಾನವಾಗಿದ್ದರೂ ಜನರು ಕುಡಿಯುವ ನೀರಿಗೆ ಬವಣೆ ಅನುಭವಿಸುತ್ತಿರುವುದು ದುರದೃಷ್ಟಕರ.
-ಜಿ. ಸತ್ಯವತಿ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT