ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ತೊಂದರೆಯಾದರೆ ಕಠಿಣ ಕ್ರಮ

ಬರ ಪರಿಹಾರ ಕಾಮಗಾರಿಗಳ ಪರಿಶೀಲಿಸಿದ ಶಾಸಕ ಸುಧಾಕರ್
Last Updated 8 ಮಾರ್ಚ್ 2017, 10:38 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸೋಮವಾರ  ಹಮ್ಮಿಕೊಂಡಿದ್ದ  ಸಭೆಯಲ್ಲಿ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಬಗ್ಗೆ ಶಾಸಕ ಡಿ.ಸುಧಾಕರ್ ಅವರು ತಹಶೀಲ್ದಾರ್ ವೆಂಕಟೇಶಯ್ಯ, ತಾಲ್ಲೂಕು ಪಂಚಾಯ್ತಿ ಇಒ ಡಾ.ಶ್ರೀಧರ್ ಬಾರಿಕೇರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಚರ್ಚೆ ನಡೆಸಿದರು.

‘ತಾಲ್ಲೂಕಿನಲ್ಲಿ ಭೀಕರ ಬರ  ಇರುವುದರಿಂದ ಜನ-ಜಾನುವಾರಿಗೆ ಕುಡಿಯುವ ನೀರಿನ ತೊಂದರೆಯಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ   ಕ್ರಮ ಕೈಗೊಳ್ಳಲಾಗುವುದು. ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು, ಅಧಿಕಾರಿಗಳು ಕುಡಿಯುವ ನೀರು ಮತ್ತು ಜಾನುವಾರು ಮೇವಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು. ನೀರನ್ನು ಮಿತವಾಗಿ ಬಳಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಶಾಸಕರು ಸೂಚನೆ ನೀಡಿದರು.

ಅಂತರ್ಜಲ ಸಂರಕ್ಷಣೆ:  ‘ಅಂತರ್ಜಲ ಸಂರಕ್ಷಣೆಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ 65 ಕೃಷಿ ಹೊಂಡ ನಿರ್ಮಿಸಲಾಗಿದೆ. ಹೊಸದಾಗಿ 200 ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ಅಸ್ಲಂ ತಿಳಿಸಿದರು.

ತಹಶೀಲ್ದಾರ್ ವೆಂಕಟೇಶಯ್ಯ, ‘ಸರ್ಕಾರ ಜೀವ ಜಲ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ಎಲ್ಲ ರೈರಿಗೂ ಅನುಕೂಲವಾಗಿ ಎಂದು ಕೃಷಿ ಹೊಂಡ ನಿರ್ಮಾಣದ ನಿಯಮಗಳನ್ನು ಸಡಿಲ ಗೊಳಿಸಿದೆ. ಈ ಬಗ್ಗೆ ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

‘ತಾಲ್ಲೂಕಿನ ಉಡುವಳ್ಳಿ, ಕತ್ತೆಹೊಳೆ, ಮೇಟಿಕುರ್ಕೆ ಗ್ರಾಮಗಳ ಕೆರೆಯಂಗಳಗಳಲ್ಲಿ ಬಿತ್ತನೆ ಮಾಡಿರುವ ಮೇವಿನ ಬೆಳೆಯನ್ನು ವೀಕ್ಷಿಸಲು ಶೀಘ್ರ  ಕಂದಾಯ ಹಾಗೂ ಕೃಷಿ ಸಚಿವರು ಬಲಿದ್ದಾರೆ. ಸ್ಥಳೀಯವಾಗಿ ಮೇವು ಬೆಳೆಯಲು ಆಸಕ್ತಿ ತೋರಿಸುವ ರೈತರಿಗೆ ಹೆಚ್ಚು ಮೇವಿನ ಕಿಟ್  ವಿತರಿಸಬೇಕು’ ಎಂದು ಶಾಸಕರು ತಿಳಿಸಿದರು. 

ತಾಲ್ಲೂಕಿನ  ಗೋಶಾಲೆಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ಅಳವಡಿಸಿ ಮೇವನ್ನು ಕತ್ತರಿಸಿ ವಿತರಣೆ ಮಾಡುವುದರಿಂದ ಮೇವು ಉಳಿತಾಯವಾಗುತ್ತದೆ.  ಆಂಧ್ರ  ಪ್ರದೇಶದಲ್ಲಿ ಮೇವು ಕೊರತೆ ಇರುವುದರಿಂದ ಶೀಘ್ರ ಮೇವು ಪೂರೈಕೆ ಸ್ಥಗಿತವಾಗುವ ಸಂಭವವಿದ್ದು,  ಮೇವು ಬೆಳೆಯಲು ರೈತರ ಮನವೊಲಿಸಬೇಕು ಎಂದು ಶಾಸಕರು ತಿಳಿಸಿದರು.

ಜೂನ್‌ವರೆಗೆ ಕುಡಿಯುವ ನೀರು: ವಾಣಿ ವಿಲಾಸ ಜಲಾಶಯದಲ್ಲಿ ಪ್ರಸ್ತುತ 66.5 ಅಡಿ ನೀರಿನ ಸಂಗ್ರಹವಿದ್ದು ಜೂನ್‌ವರೆಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ ಎಂದು ನೀರಾವರಿ ಇಲಾಖೆ ಎಂಜಿನಿಯರ್ ವೀರಭದ್ರಸ್ವಾಮಿ ಮಾಹಿತಿ ನೀಡಿದರು.

ಜಲಾಶಯದಿಂದ ಪೈಪ್ ಲೈನ್ ಮೂಲಕ ಪೂರೈಕೆಯಾಗುತ್ತಿರುವ ನೀರು ಹಿರಿಯೂರು-ಚಳ್ಳಕೆರೆ ನಗರದಲ್ಲಿ ಹೆಚ್ಚು ಪೋಲಾಗುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಸುಧಾಕರ್ ತಾಕೀತು ಮಾಡಿದರು.

ತಾಲ್ಲೂಕಿನ ಕೃಷ್ಣಾಪುರ, ಹುಚ್ಚವ್ವನಹಳ್ಳಿ, ಚಿಗಳಕಟ್ಟೆ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ರಾಮಚಂದ್ರನಾಯ್ಕ್ ಸಭೆಯ ಗಮನಕ್ಕೆ ತಂದರು.

ಅಧಿಕಾರಿಗಳಿಗೆ ತರಾಟೆ:  ಪಡಿತರ ವಿತರಣೆ ಮತ್ತು  ಭೂ ಸೇನಾ ನಿಗಮದ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಕಮಿಷನ್‌ಗೆ ಒತ್ತಾಯಿಸುತ್ತಿರುವ  ಬಗ್ಗೆ ಸಾಕಷ್ಟು ದೂರು ಕೇಳಿಬಂದಿದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು. 

ಬೆಸ್ಕಾಂ ಅಧಿಕಾರ ಅಮಾನತಿಗೆ ಪತ್ರ:  ತಾಲ್ಲೂಕಿನ ವಿವಿಧೆಡೆ ಕುಡಿಯುವ ನೀರಿನ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಮಾಡಿದ ಮತ್ತು ಸಭೆಗೆ ಗೈರಾದ ಅಧಿಕಾರಿ ವಿರುದ್ಧ ಕೋಪಗೊಂಡ ಶಾಸಕರು ತಕ್ಷಣ ಅಧಿಕಾರಿ ಅಮಾನತಿಗೆ ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಲ್ಲೂಕು ಪಂಚಾಯ್ತಿ ಇಒ ಡಾ.ಶ್ರೀಧರ್, ವೃತ್ತ ನಿರೀಕ್ಷಕ ಸುದರ್ಶನ್, ಎಇಇ ಮಂಜುನಾಥ್, ಬೆಸ್ಕಾಂ ಎಇಇ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT