ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ನುಂಗಿದ ಸಾಧಕಿಯರು...

Last Updated 8 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಫುಟ್‌ಬಾಲ್ ಆಟ ಅಷ್ಟೊಂದು ಜನಪ್ರಿಯಗೊಂಡಿಲ್ಲ. ಆದರೂ ಫುಟ್‌ಬಾಲ್ ಅಭಿಮಾನಿಗಳ ಸಂಖ್ಯೆಗೇನೂ ಕಡಿಮೆ ಇಲ್ಲ! ಶಾಲಾ ದಿನಗಳಲ್ಲಿ ಫುಟ್‌ಬಾಲ್ ಆಡುತ್ತ ಬೆಳೆದು, ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಿ, ಇದೀಗ ಅಂತರರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಪಂದ್ಯಗಳಿಗೆ ರೆಫ್ರಿಯಾಗಿರುವ ಯುವ ಸಾಧಕಿ ರೂಪಾದೇವಿ ಅವರ ಸಾಧನೆ ಕಥೆ ಇದು. ಭಾರತದ ಮೊಟ್ಟಮೊದಲ ಅಂತರರಾಷ್ಟ್ರೀಯ ಮಹಿಳಾ ರೆಫ್ರಿ ಎಂಬ ಕೀರ್ತಿಗೂ ರೂಪಾದೇವಿ ಪಾತ್ರರಾಗಿದ್ದಾರೆ.

ರೂಪಾದೇವಿ ತಮಿಳುನಾಡಿನ ದಿಂಡಿಗಲ್ ಪಟ್ಟಣದವರು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ರೂಪಾದೇವಿಗೆ ಚಿಕ್ಕ ವಯಸ್ಸಿನಿಂದಲೂ ಫುಟ್‌ಬಾಲ್ ಕ್ರೀಡೆ ಅಂದರೆ ಅತೀವ ಪ್ರೀತಿ. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸಕ್ಕಿಂತಲೂ ಫುಟ್‌ಬಾಲ್ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಮಹಿಳಾ ಫುಟ್‌ಬಾಲ್ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ದೇಶದ ಗಮನ ಸೆಳೆದಿದ್ದರು.

ಪದವಿ ಓದುವಾಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿ 5 ಗೋಲ್‌ಗಳನ್ನು ಹೊಡೆದಿದ್ದರು. ಇದು ಅವರ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಫುಟ್‌ಬಾಲ್ ಕ್ರೀಡೆಯಲ್ಲಿ ಚಿಗುರುತ್ತಿರುವಾಗಲೇ ದುರಾದೃಷ್ಟವಶಾತ್ ರೂಪಾದೇವಿ, ಒಂದೇ ವರ್ಷದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಆರ್ಥಿಕ ನೆರವು ಮತ್ತು ನೈತಿಕ ಸ್ಥೈರ್ಯ ತುಂಬಲು ಯಾರೂ  ಮುಂದೆ ಬರಲಿಲ್ಲ. ಆದರೂ ಫುಟ್‌ಬಾಲ್ ಮೇಲಿನ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ.

ಆರ್ಥಿಕ ಮುಗ್ಗಟ್ಟು ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಫುಟ್‌ಬಾಲ್ ಆಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಅವರು, ರಾಷ್ಟ್ರೀಯ ರೆಫ್ರಿ ಪರೀಕ್ಷೆಗೆ ಕುಳಿತರು. ಇದರಲ್ಲಿ ಉತ್ತೀರ್ಣರಾಗಿ ರಾಷ್ಟ್ರೀಯ ರೆಫ್ರಿಯಾಗಿ ಆಯ್ಕೆಯಾದರು. ನಂತರ ಅಂತರರಾಷ್ಟ್ರೀಯ ಮಟ್ಟದ ಫಿಫಾ ರೆಫ್ರಿ ಪರೀಕ್ಷೆ ತೆಗೆದುಕೊಂಡು ಯಶಸ್ವಿಯಾದರು.

ಪರಿಶ್ರಮದ ಮೂಲಕ ಉನ್ನತ ಸ್ಥಾನಕ್ಕೆ ಬಂದ ರೂಪಾದೇವಿಯ ಸಾಧನೆ ಅನನ್ಯವಾದುದು. ಮುಂದಿನ ದಿನಗಳಲ್ಲಿ ಅವರಿಗೆ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯಗಳಿಗೆ ರೆಫ್ರಿಯಾಗುವ ಅವಕಾಶಗಳೂ ಬಂದಿವೆ.

*

ಫಲ್ಗುಣಿ ಶಾ
ಭಾರತೀಯ ಮೂಲದವರಾದ ಫಲ್ಗುಣಿ ಶಾ ನೆಲೆಸಿರುವುದು ಅಮೆರಿಕದಲ್ಲಿ. ಅಲ್ಲಿ ಫಾಲೂ ಎಂಬ ಹೆಸರಿನಲ್ಲಿ ಅವರು ಜನಪ್ರಿಯರಾಗಿದ್ದಾರೆ. ಹಿಂದೂಸ್ತಾನಿ ಮತ್ತು ಪಾಶ್ಚಿಮಾತ್ಯ ಸಂಗೀತದಲ್ಲಿ ಪ್ರಾವೀಣ್ಯ ಪಡೆದಿರುವ ಫಾಲೂ, ಈ ಎರಡು ಸಂಗೀತ ಪ್ರಕಾರಗಳನ್ನು ಮಿಶ್ರ ಮಾಡಿ ಹಾಡುವುದು ಅವರ ವೈಶಿಷ್ಟ್ಯ.

ಮುಂಬೈನವರಾದ ಫಾಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಸ್ಥಳೀಯವಾಗಿ ಸಂಗೀತ ಕಛೇರಿ ನಡೆಸುವುದು ಹಾಗೂ ಆರ್ಕೆಸ್ಟ್ರಾಗಳಲ್ಲಿ ಹಾಡುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದರು.

ಪಾಶ್ಚಿಮಾತ್ಯ ಸಂಗೀತದಲ್ಲಿ ಆಸಕ್ತಿ ಇದ್ದುದರಿಂದ ವಿದೇಶಕ್ಕೆ ಹೋಗಿ ಆ ಸಂಗೀತ ಪ್ರಕಾರ ಅಭ್ಯಾಸ ಮಾಡಬೇಕು ಎಂಬುದು ಅವರ ಗುರಿಯಾಗಿತ್ತು. ಗೆಳೆಯರ ಬಳಿ 5 ಲಕ್ಷ ರೂಪಾಯಿ ಸಾಲ ಪಡೆದು ಪಾಶ್ಚಿಮಾತ್ಯ ಸಂಗೀತ ಕಲಿಯಲು 2000ನೇ ವರ್ಷದಲ್ಲಿ ಅಮೆರಿಕಕ್ಕೆ ತೆರಳುತ್ತಾರೆ.

ಆ ವಿದೇಶಿ ನೆಲದಲ್ಲಿ ಏಕಾಂಗಿಯಾಗಿ ಅನುಭವಿಸಿದ ಕಷ್ಟಗಳನ್ನು ಫಾಲೂ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ನಂತರ ಪರಿಚಿತರೊಬ್ಬರ ನೆರವಿನಿಂದ ಭಾರತೀಯ ಮೂಲದ ಕರಿಷ್ಮಾ ಆರ್ಕೆಸ್ಟ್ರಾ ಸೇರಿಕೊಂಡು ಸಂಗೀತ ಅಭ್ಯಾಸದಲ್ಲಿ ತೊಡಗುತ್ತಾರೆ.

ಸಂಗೀತ ಕಲಿಕೆಯ ಸಂದರ್ಭದಲ್ಲಿ ಹಿಂದೂಸ್ತಾನಿ ಮತ್ತು ಪಾಶ್ಚಿಮಾತ್ಯ ಸಂಗೀತವನ್ನು ಮಿಶ್ರ ಮಾಡಿ ಹಾಡಿದರೆ ಹೇಗೆ ಎಂಬ ಯೋಚನೆ ಹೊಳೆಯುತ್ತದೆ. ತಡ ಮಾಡದೇ ಈ ಪ್ರಯೋಗಕ್ಕೆ ಮುಂದಾಗುತ್ತಾರೆ.

ಸ್ವತಃ ಹಾಡುಗಳನ್ನು ಬರೆದುಕೊಂಡು, ಸಂಗೀತ ನೀಡಿ ಗೋಷ್ಠಿಗಳಲ್ಲಿ ಹಾಡುವ ಪ್ರಯತ್ನ ಮಾಡುತ್ತಾರೆ. ಈ ಹೊಸ ಪ್ರಕಾರ ಅಮೆರಿಕನ್ನರಿಗೆ ಇಷ್ಟವಾಗುತ್ತದೆ. ಕೆಲವೇ ದಿನಗಳಲ್ಲಿ ಫಾಲೂ ಅಮೆರಿಕದ ಜನಪ್ರಿಯ ಹಾಡುಗಾರ್ತಿಯಾಗಿ ಹೆಸರು ಮಾಡುತ್ತಾರೆ.

ಫಾಲೂ ಕಳೆದೊಂದು ದಶಕದಲ್ಲಿ ವಿಶ್ವದಾದ್ಯಂತ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಾಡಿನಿಂದ ಬಂದ ವರಮಾನದಲ್ಲಿ
ಶೇ 25ರಷ್ಟು ಹಣವನ್ನು ಬಡಮಕ್ಕಳ ಸಂಗೀತಾಭ್ಯಾಸ ಮತ್ತು ರೆಡ್‌ಲೈಟ್ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯರ ಪುನರ್ವಸತಿಗೆ ನೀಡುತ್ತಿದ್ದಾರೆ. ಯುವತಿ ಫಾಲೂ ಅವರ ಈ ಸಾಧನೆ ಮತ್ತು ಸೇವೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
www.facebook/falgunisha/singer

*


ಟೆಸ್ಸಿ ಥಾಮಸ್
ಅದು 2012ರ ಜನವರಿ ತಿಂಗಳು. ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾತನಾಡುತ್ತ ‘ಇಂದು ಮಹಿಳೆಯರು ಪರಂಪರಾಗತ ರೂಢಿ, ಸಂಪ್ರದಾಯವನ್ನು ಮುರಿದು, ಪುರುಷ ಪ್ರಾಬಲ್ಯ ಕ್ಷೇತ್ರಗಳಿಗೂ ಲಗ್ಗೆ ಹಾಕಿ, ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಿದ್ದಾರೆ, ನಮ್ಮ ಅಗ್ನಿ ಕ್ಷಿಪಣಿಯ ರೂವಾರಿ ಕೂಡ ಮಹಿಳೆ ಎಂಬುದು ವಿಶೇಷ. ಅವರೇ, ಟೆಸ್ಸಿ ಥಾಮಸ್’ ಎಂಬ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

ಹೌದು. ಪರಮಾಣು ಸಿಡಿತಲೆಗಳನ್ನು ಸುಮಾರು 5 ಸಾವಿರ ಕಿಲೋ ಮೀಟರ್ ವರೆಗೂ ಕೊಂಡೊಯ್ಯುವ, ಶತ್ರುಪಡೆಗಳ ಮೇಲೆ ನಿಖರ ದಾಳಿ ನಡೆಸುವ ಅಗ್ನಿ ಕ್ಷಿಪಣಿಯ ರೂವಾರಿ ಟೆಸ್ಸಿ ಥಾಮಸ್. ಕ್ಷಿಪಣಿ ನಿರ್ಮಾಣದಂತಹ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿರುವುದು ಥಾಮಸ್ ಅವರ ಹೆಗ್ಗಳಿಕೆ. ಇವರ ಸಾಧನೆಗೆ ಮಾಧ್ಯಮಗಳು ‘ಭಾರತದ ಅಗ್ನಿ ಪುತ್ರಿ’ ಎಂದು ಕರೆದಿವೆ.

ಸಂಕಷ್ಟಗಳನ್ನು ಮೆಟ್ಟಿ ನಿಂತು, ಕಠಿಣ ಪರಿಶ್ರಮದ ಮೂಲಕ ಟೆಸ್ಸಿ ಥಾಮಸ್ ಈ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಟೆಸ್ಸಿ ಥಾಮಸ್ ಕೇರಳ ರಾಜ್ಯದ ತ್ರಿಶೂರ್ ನವರು. ಬಾಲ್ಯದಲ್ಲಿನ ಬಡತನ ಉನ್ನತವಾದುದನ್ನು ಸಾಧಿಸಬೇಕು ಎಂಬ ಪಾಠ ಕಲಿಸಿತು. ಕಷ್ಟಪಟ್ಟು ಓದಿ ಎಂಜಿನಿಯರಿಂಗ್ ಪದವಿ ಪಡೆದರು.

ಬಳಿಕ ಪುಣೆಯಲ್ಲಿ ರಾಕೆಟ್ ತಂತ್ರಜ್ಞಾನ ವಿಷಯದಲ್ಲಿ ಎಂ.ಟೆಕ್ ಪದವಿ ಪಡೆದರು. ಓದುವ ಸಂದರ್ಭದಲ್ಲಿ ಕಾಲೇಜಿನ ಶುಲ್ಕ ಕಟ್ಟಲು ಪರದಾಡಿದ್ದು ಮತ್ತು ಕೆಲವು ಸಲ ಊಟ ಮಾಡದೇ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡ ಸಂದರ್ಭಗಳೂ ಇವೆ ಎನ್ನುತ್ತಾರೆ ಟೆಸ್ಸಿ. ನಂತರದ ದಿನಗಳಲ್ಲಿ ಡಿಆರ್‌ಡಿಒ ಸಂಸ್ಥೆಗೆ ಸೇರುವ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಇಂದು ದೇಶದ ಹೆಮ್ಮೆಯ ವಿಜ್ಞಾನಿ.

ಅಗ್ನಿ-3, ಅಗ್ನಿ-4 ಮತ್ತು ಅಗ್ನಿ-5 ಈ ಕ್ಷಿಪಣಿಗಳನ್ನು ರೂಪಿಸಿದ್ದು ಟೆಸ್ಸಿ ಥಾಮಸ್ ನೇತೃತ್ವದ ತಂಡ. ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಈ ಕ್ಷಿಪಣಿಗಳನ್ನು ದೇಶದ ರಕ್ಷಣಾ ಪಡೆಗೆ ನೀಡಲಾಗಿದೆ. ರಾಷ್ಟ್ರೀಯ ಶಾಂತಿ ಭಟ್ನಾಗರ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಶಸ್ತಿಗಳು  ಇವರಿಗೆ ಸಂದಿವೆ. www.facebook /tessythomas/drdo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT