ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್ ದುರಂತ ಕಠಿಣ ಶಿಕ್ಷೆಯಾಗಲಿ

Last Updated 8 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಒಳಚರಂಡಿ ಮತ್ತು ಇಳಿಗುಂಡಿಗೆ (ಮ್ಯಾನ್‌ಹೋಲ್) ಇಳಿದ ಮೂವರು ಬೆಂಗಳೂರಿನಲ್ಲಿ ಸತ್ತಿದ್ದಾರೆ. ಇಳಿಗುಂಡಿಗೆ ಇಳಿದವರು ಇಳೆಯನ್ನೇ ತೊರೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಇಳಿಗುಂಡಿಗೆ ಬಿದ್ದು ಕಾರ್ಮಿಕರು ಸಾಯುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಕಾರ್ಮಿಕರು ಸತ್ತಾಗ ಬಣ್ಣಬಣ್ಣದ ಮಾತನಾಡಿ ನಂತರ ಅವರನ್ನು ಮರೆತುಬಿಡುತ್ತದೆ.

‘ಒಳಚರಂಡಿ ಸ್ವಚ್ಛ ಮಾಡಲು ಕಾರ್ಮಿಕರನ್ನು ಬಳಸುವುದಿಲ್ಲ’ ಎಂದು  2012ರಲ್ಲಿಯೇ ಜಲಮಂಡಳಿ, ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಹೇಳಿದೆ. ಈ ಮಾತು ಜಲಮಂಡಳಿಗೆ ಮರೆತುಹೋಗಿದೆ. ಹೀಗೆ ಹೈಕೋರ್ಟ್‌ಗೆ ಭರವಸೆ ನೀಡಿದ ನಂತರವೂ ಕಳೆದ ಮೂರು ವರ್ಷದಲ್ಲಿ 19 ಮಂದಿ ಇಳಿಗುಂಡಿಗೆ ಬಿದ್ದು ಸತ್ತಿದ್ದಾರೆ. ರಾಜ್ಯದಲ್ಲಿ 2008ರಿಂದ ಇಲ್ಲಿಯವರೆಗೆ 59 ಮಂದಿ ಇಳಿಗುಂಡಿಗೆ ಬಲಿಯಾಗಿದ್ದಾರೆ. ಇದರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿಯೇ 28 ಮಂದಿ ಸತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ. ನಾಗರಿಕ ಸಮಾಜ ತಲೆ ತಗ್ಗಿಸುವ ಸಮಾಚಾರ. ಆದರೂ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರೆ ಇದು ನಿರ್ಲಕ್ಷ್ಯದ ಪರಮಾವಧಿ. ಸರ್ಕಾರಕ್ಕೆ ಯಾವುದೇ ಸಂವೇದನೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ.

ಬಡವರ ಜೀವದ ಬಗ್ಗೆ ಸರ್ಕಾರಕ್ಕೆ ಕೊಂಚವೂ ಕಾಳಜಿ ಇಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ. ಇಳಿಗುಂಡಿಗೆ ಬಿದ್ದು ಸತ್ತವರ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರ ನೀಡಿಬಿಟ್ಟರೆ ತನ್ನ ಜವಾಬ್ದಾರಿ ಮುಗಿಯಿತು ಎಂದು ಸರ್ಕಾರ ಭಾವಿಸಿದಂತೆ ಇದೆ. ಸರ್ಕಾರದ ಈ ಭಾವನೆ ಸರ್ವಥಾ ಸರಿಯಲ್ಲ. ಒಳಚರಂಡಿ ಸ್ವಚ್ಛ ಮಾಡುವ ಕಾರ್ಮಿಕರು ಸತ್ತಾಗ ಹಣ ಕೊಡುವುದರಿಂದ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಹೀಗೆ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಯಾವುದೇ  ಸರ್ಕಾರಕ್ಕೆ ಶೋಭೆಯಲ್ಲ.

ಒಳಚರಂಡಿಯನ್ನು ಮನುಷ್ಯರಿಂದ ಸ್ವಚ್ಛಗೊಳಿಸುವುದೇ ಅಪರಾಧ. ಈ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ತೀರ್ಪು ನೀಡಿವೆ. ನ್ಯಾಯಾಲಯಗಳ ಆದೇಶವನ್ನೂ ಉಲ್ಲಂಘಿಸಿ ಕಾರ್ಮಿಕರನ್ನು ಇಳಿಗುಂಡಿಗೆ ಇಳಿಸುವುದು  ಎಗ್ಗಿಲ್ಲದೆ ನಡೆಯುತ್ತಿದೆ. ಒಳಚರಂಡಿ ಮತ್ತು ಮ್ಯಾನ್ ಹೋಲ್‌ಗಳನ್ನು ಯಂತ್ರಗಳ ಮೂಲಕವೇ ಸ್ವಚ್ಛಗೊಳಿಸಬೇಕು. ಒಳಚರಂಡಿ ಸ್ವಚ್ಛತಾ ಕಾರ್ಮಿಕರಿಗೆ ಮುಖಗವಸು, ಗಮ್ ಬೂಟು, ಕೈಗವಸಿನಂತಹ ಸೌಲಭ್ಯಗಳನ್ನು ಒದಗಿಸಬೇಕು. ಒಳಚರಂಡಿ ಸುರಕ್ಷತಾ ನಿಯಮಗಳ ಪ್ರಕಾರ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕಾರ್ಮಿಕರು ಮ್ಯಾನ್‌ಹೋಲ್‌ನಲ್ಲಿ ಇಳಿಯಬಹುದು. ಹೀಗೆ ಒಳಕ್ಕೆ ಇಳಿದಾಗ ಅವರಿಗೆ ಆಮ್ಲಜನಕ ಪೂರೈಸಬೇಕು. ಎಲ್ಲ ಬಗೆಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು. ಹಿರಿಯ ಅಧಿಕಾರಿಯೊಬ್ಬರು ಹಾಗೂ ಇಬ್ಬರು ಸಹಾಯಕರ ಮೇಲ್ವಿಚಾರಣೆಯಲ್ಲಿಯೇ ಇದು ನಡೆಯಬೇಕು. ಮ್ಯಾನ್‌ಹೋಲ್‌ನಲ್ಲಿ ಮಿಥೇನ್, ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳಿರುತ್ತವೆ. ಹೀಗಾಗಿ ಮ್ಯಾನ್‌ಹೋಲ್‌ಗೆ ಇಳಿಯುವುದಕ್ಕೆ  ಕನಿಷ್ಠ ಒಂದು ಗಂಟೆ ಮೊದಲು ಅದರ ಮುಚ್ಚಳವನ್ನು ತೆಗೆದಿಡಬೇಕು. ಮೈಗೆಲ್ಲಾ ಕೊಬ್ಬರಿ ಎಣ್ಣೆ ಸವರಿಕೊಂಡು, ಮುಖಗವಸು, ಕೈಗವಸು ಹಾಕಿಕೊಂಡೇ ಇಳಿಯಬೇಕು. ಆದರೆ ಈ ಯಾವ ನಿಯಮವನ್ನೂ ಪಾಲಿಸದೇ ಇರುವುದು ದುರದೃಷ್ಟಕರ. ಕೋಟಿ ಕೋಟಿ ರೂಪಾಯಿಗಳ  ಬಜೆಟ್ ಮಂಡಿಸುವ ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರ ಬಗ್ಗೆ ಮಾತ್ರ ಕಾಳಜಿ ವಹಿಸುವುದಿಲ್ಲ ಎಂದರೆ ಅದು ಅಮಾನವೀಯವಾಗುತ್ತದೆ. ಇದು ತಪ್ಪಬೇಕು.

ಒಳಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿಗೆ ಸೌಲಭ್ಯ ಒದಗಿಸದೇ ಇರುವುದು ಒಂದೆಡೆಯಾದರೆ ಇಳಿಗುಂಡಿಯಲ್ಲಿ ಪ್ರಾಣ ಕಳೆದುಕೊಳ್ಳಲು ಕಾರಣರಾದವರಿಗೆ ಯಾವುದೇ ಶಿಕ್ಷೆ ವಿಧಿಸದೇ ಇರುವುದು ಕೂಡ ಅಪರಾಧ. ಪ್ರತೀ ಬಾರಿ ಕಾರ್ಮಿಕರು ಸತ್ತಾಗ ಯಾರೋ ಒಬ್ಬಿಬ್ಬರ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆ. ನಂತರ  ಏನಾಯಿತು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಕಾರ್ಮಿಕರು ಸಾಯುತ್ತಲೇ ಇದ್ದಾರೆ. ಆದರೆ ಇದಕ್ಕೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರು ಯಾವುದೇ ಶಿಕ್ಷೆ ಇಲ್ಲದೆ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಈ ಬಾರಿಯೂ ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಗುತ್ತಿಗೆ ಸಂಸ್ಥೆ ವಿರುದ್ಧ ಕೂಡ ಮೊಕದ್ದಮೆ ಹೂಡಲಾಗಿದೆ. ಇಷ್ಟಕ್ಕೇ ಸರ್ಕಾರ ಕೈತೊಳೆದುಕೊಂಡರೆ ಅದನ್ನು ಜನ ಕ್ಷಮಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT