ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುರಸ್ತೆಯಲ್ಲಿ ರೌಡಿಯ ಬರ್ಬರ ಹತ್ಯೆ

ಅಟ್ಟಾಡಿಸಿ ಕೊಂದ ಹಂತಕರು
Last Updated 8 ಮಾರ್ಚ್ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕಮಲಾನಗರದ ಚಂದ್ರಪ್ಪ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ರೌಡಿಗಳ ಗುಂಪೊಂದು ಸುನೀಲ್ ಅಲಿಯಾಸ್ ಸುನಿ (24) ಎಂಬಾತನನ್ನು ಮಚ್ಚು–ಲಾಂಗುಗಳಿಂದ ಕೊಚ್ಚಿ ಕೊಲೆಗೈದಿದೆ.

ಕುವೆಂಪು ರಸ್ತೆಯ ಸುನೀಲ್, ಬೆಳಿಗ್ಗೆ 8.30ರ ಸುಮಾರಿಗೆ ಮನೆ ಹತ್ತಿರದ ಹೋಟೆಲ್‌ನಲ್ಲಿ ಟೀ ಕುಡಿಯುತ್ತಿದ್ದ. ಈ ವೇಳೆ ರಾಜಗೋಪಾಲನಗರ ಠಾಣೆ ರೌಡಿಶೀಟರ್ ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಹಾಗೂ ಆತನ ಐವರು ಸಹಚರರು ಮಾರಕಾಸ್ತ್ರಗಳೊಂದಿಗೆ ಆತನ ಮೇಲೆರಗಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಆತ, ಜೀವ ಉಳಿಸಿಕೊಳ್ಳಲು ಗಲ್ಲಿ–ಗಲ್ಲಿಗಳಲ್ಲಿ ಓಡಿದ್ದಾನೆ. ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಆತನನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಕಂಡು ಬೆಚ್ಚಿ ಬಿದ್ದ ಸ್ಥಳೀಯರು, ಓಡೋಡಿ ಮನೆ ಸೇರಿಕೊಂಡಿದ್ದಾರೆ.

ಮನೆಗೆ ನುಗ್ಗಿದರು: ಎದುರಾಳಿ ಗುಂಪಿನಿಂದ ತಪ್ಪಿಸಿಕೊಂಡು ಚಂದ್ರಪ್ಪ ರಸ್ತೆಗೆ ಬಂದ ಸುನೀಲ್, ರಮೇಶ್ ಎಂಬುವರ ಮನೆಯೊಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾನೆ. ಆಗ ಬಾಗಿಲು ಮುರಿದು ಒಳ ಹೋದ ದುಷ್ಕರ್ಮಿಗಳು, ಆತನನ್ನು ಹೊರಗೆಳೆದು ತಂದಿದ್ದಾರೆ.

ಇದೇ ವೇಳೆ ಸ್ಥಳಕ್ಕೆ ಬಂದ ಸುನೀಲ್‌ನ ತಾಯಿ ಉಷಾ, ಮಗನ ರಕ್ಷಣೆಗೆ ಅಂಗಲಾಚಿದ್ದಾರೆ. ಆಗ ಆರೋಪಿಗಳು ಉಷಾ ಅವರ ಕೈಗಳಿಗೂ ಮಚ್ಚಿನಿಂದ ಹೊಡೆದಿದ್ದಾರೆ. ನೆರವಿಗೆ ಬಂದ ಸ್ಥಳೀಯ ಯುವಕರಿಗೂ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ನಂತರ ಜನರ ಎದುರೇ ಸುನೀಲ್‌ನ ತಲೆ ಹಾಗೂ ಮುಖಕ್ಕೆ ಮಚ್ಚು–ಲಾಂಗುಗಳಿಂದ ಮನಸೋಇಚ್ಛೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಪೊಲೀಸರು ಆ ವಿಡಿಯೋ ಪರಿಶೀಲಿಸಿ ಹಂತಕರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

‘ಉಷಾ ಅವರು ಖಾಸಗಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಹೇಳಿಕೆ ಆಧರಿಸಿ ನಾಗರಾಜ ಹಾಗೂ ಐವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್‌ಐಆರ್ ಮಾಡಲಾಗಿದೆ. ಹಂತಕರ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರ್ಷದ ಹಿಂದಿನ ದ್ವೇಷ
‘ಸುನೀಲ್ ಹಾಗೂ ನಾಗರಾಜ ಅಕ್ಕಪಕ್ಕದ ಮನೆಯವರು. ಭೂವ್ಯಾಜ್ಯದ ವಿಚಾರವಾಗಿ 2016ರ ಮಾರ್ಚ್‌ನಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಆಗ ಸುನೀಲ್ ತನ್ನ ಸಹಚರ ಯತಿರಾಜ್ ಜತೆ ಸೇರಿಕೊಂಡು ನಾಗರಾಜನ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಾಗಿತ್ತು. ಆ ಜಗಳದ ನಂತರ ಪರಸ್ಪರರ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಹೇಳಿದರು.

‘ಸುನೀಲ್ ಸಹ ರೌಡಿಶೀಟರ್ ಆಗಿದ್ದು, ಡಕಾಯಿತಿಗೆ ಸಂಚು ರೂಪಿಸಿದ್ದ ಆರೋಪದಡಿ ಇದೇ ಜನವರಿಯಲ್ಲಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಫೆ.22ರಂದು ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT