ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಾಹಾರ ಸೇವನೆ ಶಂಕೆ: ವಸತಿ ಶಾಲೆಯ 3 ವಿದ್ಯಾರ್ಥಿಗಳ ಸಾವು

ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಘಟನೆ
Last Updated 9 ಮಾರ್ಚ್ 2017, 7:00 IST
ಅಕ್ಷರ ಗಾತ್ರ
ADVERTISEMENT

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಶಾಲೆಯಲ್ಲಿ ಊಟ ಸೇವಿಸಿದ ಮೂವರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಕಾಡತಿಮ್ಮನಹಳ್ಳಿ ಗ್ರಾಮದ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್‌(14), 10ನೇ ತರಗತಿ ವಿದ್ಯಾರ್ಥಿಗಳಾದ ಆಕಾಂಕ್ಷ್‌ ಪಲ್ಲಕ್ಕಿ(15), ಶ್ರೀರಾಮಪುದ ನಿವಾಸಿ ಶಾಂತಮೂರ್ತಿ (15) ಮೃತರು.

ಮತ್ತೊಬ್ಬ ವಿದ್ಯಾರ್ಥಿ ಸುದರ್ಶನ್‌(15) ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಶಾಲೆಯ ಕಾವಲುಗಾರ ರಮೇಶ್‌(40) ಸ್ಥಿತಿ ತೀವ್ರ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ವಿದ್ಯಾವಾರಿಧಿ ವಸತಿ ಶಾಲೆಯಲ್ಲಿ ಬುಧವಾರ ರಾತ್ರಿ 9ಕ್ಕೆ ವಿದ್ಯಾರ್ಥಿಗಳು ಊಟಕ್ಕೆ ಕುಳಿತಿದ್ದಾರೆ. ಈ ಮೂವರು ವಿದ್ಯಾರ್ಥಿಗಳು ಚಪಾತಿ ನಿರಾಕರಿಸಿ ಅನ್ನ, ಸಾಂಬಾರು ಹಾಕಿಸಿಕೊಂಡಿದ್ದಾರೆ. ಒಂದೆರಡು ತುತ್ತು ಸೇವಿಸುತ್ತಿದ್ದಂತೆ ಸಾಂಬಾರು ಕಹಿಯಾಗಿದೆ. ಯಾರೂ ತಿನ್ನಬೇಡಿ ಎಂದು ಸಹವರ್ತಿಗಳಿಗೆ ಹೇಳಿದ್ದಾರೆ. ಬೇರೆ ವಿದ್ಯಾರ್ಥಿಗಳು ಅನ್ನ ಮಜ್ಜಿಗೆ ಸೇವಿಸಿದ್ದಾರೆ.

ಊಟ ಮಾಡಿದ ಒಂದೆರಡು ಗಂಟೆಗಳ ಬಳಿಕ ಮೂವರು ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಆಗಿದೆ. ರಾತ್ರಿ 1ರ ಸುಮಾರಿಗೆ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿರುವುದನ್ನು ಶಾಲೆಯ ಮಾಲೀಕ ಕಿರಣ್‌ಕುಮಾರ್‌ ಅವರಿಗೆ ತಿಳಿಸಲಾಗಿದೆ. ಕೂಡಲೇ ಅವರು ವೈದ್ಯ ಸಿದ್ದರಾಮಣ್ಣ ಅವರೊಂದಿಗೆ ಬಂದು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿಸಿದರು.

ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಅಲ್ಲಿಂದ ಅಂಬುಲೆನ್ಸ್‌ನಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ಮುಂಜಾನೆ 3.30ಕ್ಕೆ ಕರೆತರಲಾಯಿತು. ಆದರೆ, ಅಲ್ಲಿ ಆಕ್ಸಿಜನ್‌ ಕೊರತೆ ಇದ್ದುದರಿಂದ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಮುಗಿಲು ಮುಟ್ಟಿದ ಆಕ್ರಂದನ
ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಾಗಾರದ ಎದುರು ಪೋಷಕರು, ಸಂಬಂಧಿಕರ ಗೋಳಾಟ ನೆರೆದವರ ಕಣ್ಣಂಚಲ್ಲಿ ನೀರು ತರಿಸಿತು. ಮಕ್ಕಳ ಸಾವಿಗೆ ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಕಾರಣ ಎಂದು ದೂರಿ, ಹಿಡಿಶಾಪ ಹಾಕಿದರು. ಮಕ್ಕಳು ಅಸ್ವಸ್ಥಗೊಂಡರೂ ಮಾಹಿತಿ ನೀಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಕಾಂಕ್ಷ್‌ ಪಲ್ಲಕ್ಕಿ ಸಾವಿನಿಂದ ಆಘಾತಗೊಂಡ ಮೃತ ಬಾಲಕನ ಚಿಕ್ಕಮ್ಮ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡು ಕೂಡಲೇ ಪೊಲೀಸ್‌ ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಹೋಮ ಮಾಡಿದರೂ ಬದುಕಲಿಲ್ಲ
ಮಕ್ಕಳ ಶ್ರೇಯೋಭಿವೃದ್ಧಿಗೆ ದೇವರ ಪೂಜೆ, ಮೃತ್ಯುಂಜಯ ಹೋಮ ಮಾಡಿಸಿದ್ದೆ. ಆದರೂ ನನ್ನ ಮಗ ಬದುಕುಳಿಯಲಿಲ್ಲ ಎಂದು ಶ್ರೇಯಸ್‌ ಅವರ ತಂದೆ ನರಳಾಡುವಾಗ ನೆರೆದವರ ಕಣ್ಣುಗಳು ಒದ್ದೆಯಾದವು. ಮೂವರು ವಿದ್ಯಾರ್ಥಿಗಳ ಪೋಷಕರು ಶವಾಗಾರದ ಮುಂದೆ ರೋಧಿಸುತ್ತಿದ್ದ ದೃಶ್ಯ ಕರಳು ಹಿಂಡುವಂತೆ ಮಾಡಿತು. ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್‌, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂಥ್‌ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಕಿರಣ್‌ಕುಮಾರ್‌ ನೆರವಿಗೆ ಬಿಜೆಪಿ ದಂಡು
ಮೂವರು ವಿದ್ಯಾರ್ಥಿಗಳ ಸಾವಿನ ಪ್ರಕರಣದಲ್ಲಿ ಮಾಜಿ ಶಾಸಕ ಕಿರಣ್‌ಕುಮಾರ್‌ ನೆರವಿಗೆ ಬಿಜೆಪಿ ಮುಖಂಡರು ದೌಡಾಯಿಸಿದರು. ಭಿನ್ನಮತಿಯರಾಗಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎಸ್‌.ಶಿವಣ್ಣ, ಮುಖಂಡರಾದ ಶಿವಪ್ರಸಾದ್‌, ಕೆ.ಪಿ.ಮಹೇಶ್‌ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥ ವಿದ್ಯಾರ್ಥಿ ಸುದರ್ಶನ್‌ ಪಕ್ಕದಲ್ಲೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿಯನ್ನು ದಾಖಲಿಸಿ ತದ್ವಿರುದ್ಧ ಹೇಳಿಕೆ ಕೊಡಿಸುವ ಕಸರತ್ತು ನಡೆಸಿದರು. ನಾನೂ ಅನ್ನ ಸಂಬಾರು ತಿಂದೆ. ನನಗೇನು ಆಗಲಿಲ್ಲ ಎಂದು ಹೇಳುವಂತೆ ಪುಸಲಾಯಿಸುತ್ತಿದ್ದರು.
*

ವಸತಿ ಶಾಲೆಯಲ್ಲಿ ತಯಾರಿಸಿದ ಊಟವನ್ನೇ ನಾನು ಮಾಡಿದ್ದೇನೆ. ಊಟದ ನಂತರ ಏನೋ ಆಗಿರುವ ಅನುಮಾನಗಳಿವೆ.
–ಕಿರಣ್‌ಕುಮಾರ್‌,
ಶಾಲೆ ಮಾಲೀಕ

ವಿದ್ಯಾರ್ಥಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸೇವಿಸಿದ ಊಟದ ನಮೂನೆಯನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸಾವಿನ ಕಾರಣ ತಿಳಿಯಲಿದೆ.
–ವೀರಭದ್ರಯ್ಯ,
ಜಿಲ್ಲಾ ಶಸ್ತ್ರ ಚಿಕಿತ್ಸಕ

ಮಾಜಿ ಶಾಸಕ ವಶಕ್ಕೆ
ವಿದ್ಯಾವಾರಿಧಿ ಶಾಲೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಿರಣ್‌ಕುಮಾರ್‌ರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಲೆಯ ಮಾಲೀಕತ್ವ ಕಿರಣ್‌ಕುಮಾರ್‌ ಹಾಗೂ ಪತ್ನಿ ಕವಿತಾ ಹೆಸರಿನಲ್ಲಿದೆ. ಶಾಲೆಯ ವಿರುದ್ಧ ಐಪಿಸಿ ಸೆಕ್ಷನ್‌ 304ರಡಿ ಪ್ರಕರಣ ದಾಖಲಿಸಿರುವ ಪೊಲೀಸರು ಕಿರಣ್‌ಕುಮಾರ್‌ ವಶಕ್ಕೆ ಪಡೆದಿದ್ದಾರೆ.

ತನಿಖೆಗೆ ತಂಡ ರಚನೆ: ಡಿಸಿ
ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳು ಊಟ ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ. ವಿದ್ಯಾರ್ಥಿಗಳ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸ್‌, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನೊಳಗೊಂಡ ತಂಡವನ್ನು ಶಾಲೆಗೆ ಕಳುಹಿಸಲಾಗಿದೆ. ಆಹಾರದ ನಮೂನೆಯನ್ನು ಫೋರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ತಿಳಿಸಿದ್ದಾರೆ. ವಿಷಪೂರಿತ ಊಟ ಸೇವನೆ ಸಾಬೀತಾದರೆ ಶಾಲೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT