ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಗೈರು: ಸಭೆ ಮುಂದಕ್ಕೆ

ಜಗಳೂರು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
Last Updated 9 ಮಾರ್ಚ್ 2017, 4:55 IST
ಅಕ್ಷರ ಗಾತ್ರ
ಜಗಳೂರು: ಅರಣ್ಯ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸದಸ್ಯರು, ಸಭೆಯಲ್ಲಿ ಭಾಗವಹಿಸಿ ಇಲಾಖಾ ಯೋಜನೆಗಳ ಬಗ್ಗೆ  ಮಾಹಿತಿ ನೀಡುವವರೆಗೆ ಸಭೆ ನಡೆಯುವುದು ಬೇಡ ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದರಿಂದ ಬುಧವಾರ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.
 
ವಲಯ ಅರಣ್ಯಾಧಿಕಾರಿ ರಾಮಮೂರ್ತಿ, ಸಾಮಾಜಿಕ ಅರಣ್ಯಾಧಿಕಾರಿ ನಿಂಗಪ್ಪ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಎಲ್ಲಾ  ಪ್ರಗತಿ ಪರಿಶೀಲನಾ ಸಭೆಗೂ ಅರಣ್ಯ ಇಲಾಖೆ ಅಧಿಕಾರಿ ಗೈರು ಹಾಜರಾಗುತ್ತಾರೆ. ಬರದ ಸಂದರ್ಭದಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೂ ಹಾಜರಾಗದೆ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ ಎಂದು  ಅಸಮಾಧಾನ ವ್ಯಕ್ತಪಡಿಸಿದರು.
 
ತಾಲ್ಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದೆ. ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ವಲಯ ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ.  ತಾಲ್ಲೂಕಿನಲ್ಲಿ ಕಳೆದ ಮಳೆಗಾಲದಲ್ಲಿ ನೆಟ್ಟಿರುವ ಸುಮಾರು ಎರಡು ಲಕ್ಷ ಸಸಿಗಳಿಗೆ ನೀರು ಹಾಕದ ಕಾರಣ ಬಿಸಿಲಿಗೆ ಒಣಗಿ ನಿಂತಿವೆ.  

ಹನಿ ನೀರಿಗೂ ಪರದಾಡುವ ಇಂತಹ ಸಮಯದಲ್ಲಿ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಟ್ರೀಪಾರ್ಕಿನ  ರಸ್ತೆ ಪಕ್ಕದ ಟ್ರೆಂಚ್‌ನಲ್ಲಿ   ಸಸಿಗಳನ್ನು ನೆಡುತ್ತಿರುವುದು  ಯಾವ ಪುರುಷಾರ್ಥಕ್ಕೆ ಎಂದು ಸದಸ್ಯ ಮರೇನಹಳ್ಳಿ ಟಿ. ಬಸವರಾಜ್‌ ಪ್ರಶ್ನಿಸಿದರು. 
 
ಮಳೆಗಾಲದಲ್ಲಿ ನೆಡಬೇಕಾದ ಸಸಿಗಳನ್ನು ಸುಡು ಬಿಸಿಲಿನಲ್ಲಿ ಆರ್ಥಿಕ ವರ್ಷಾಂತ್ಯದಲ್ಲಿ ಆತುರಾತುರವಾಗಿ ನೆಡುತ್ತಿರುವ ಹಿಂದಿನ ಉದ್ದೇಶ ಏನು? ಅರಣ್ಯ ಇಲಾಖೆಯಲ್ಲಿ ಭಾರಿ ಅವ್ಯವಹಾರದ  ಆರೋಪಗಳಿದ್ದು, ಅಧಿಕಾರಿ ಖುದ್ದು ಸಭೆಗೆ ಹಾಜರಾಗಿ  ಮಾಹಿತಿ ನೀಡಲಿ ಎಂದು ಪಟ್ಟು ಹಿಡಿದರು.
 
ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ, ಕೂಲಿಕಾರರಿಗೆ ಕೆಲಸ ಇಲ್ಲದಿರುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಕಳೆದ ಐದು ತಿಂಗಳಿಂದ ಸಾಮಾನ್ಯ ಸಭೆ ಕರೆದಿಲ್ಲ. ಕಾರ್ಯನಿರ್ವಾಹಕ ಅಧಿಕಾರಿ ಎ.ಸಿ. ಕೊಠಡಿಯಲ್ಲಿ ತಣ್ಣಗೆ ಕುಳಿತಿರುತ್ತಾರೆ. ಹಳ್ಳಿಗಳತ್ತ ಮುಖಮಾಡುತ್ತಿಲ್ಲ. ಅಧ್ಯಕ್ಷರೂ ಸಹ ಹಳ್ಳಿಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸುತ್ತಿಲ್ಲ ಎಂದು ಸದಸ್ಯ ತಿಮ್ಮೇಶ್‌ ಆರೋಪಿಸಿದರು.
 
ಇಒ ಲಕ್ಷ್ಮೀಪತಿ ಪ್ರತಿಕ್ರಿಯಿಸಿ, ನಾವೇನೂ ಸುಮ್ಮನೆ ಕುಳಿತಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.
ಸದಸ್ಯ ಸಿದ್ದೇಶ್‌ ಮಾತನಾಡಿ, ನೀವು ಹಳ್ಳಿಗಳಿಗೆ ಭೇಟಿ ನೀಡುವಾಗ ಆ ಭಾಗದ ಸದಸ್ಯರ ಗಮನಕ್ಕೆ ತನ್ನಿ. ನೀವೊಬ್ಬರೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
 
ಗೈರುಹಾಜರಾದ ಎಲ್ಲಾ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು. ಮುಂದಿನ ಸಭೆಯನ್ನು ಇದೇ ಮಾರ್ಚ್ 22ಕ್ಕೆ ನಿಗದಿಪಡಿಸಲಾಗಿದೆ ಎಂದು ಅಧ್ಯಕ್ಷೆ ಮಂಜುಳಾ ಸ್ಪಷ್ಟಪಡಿಸಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಬಸವರಾಜ್‌ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT