ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಾರಿದೆ ದಾವಣಗೆರೆ!

ಎಂಟು ದಿನಗಳಿಗೆ ಒಮ್ಮೆ ಕಾರ್ಪೊರೇಷನ್‌ ನೀರು
Last Updated 9 ಮಾರ್ಚ್ 2017, 5:14 IST
ಅಕ್ಷರ ಗಾತ್ರ
ದಾವಣಗೆರೆ: ನೆತ್ತಿ ಸುಡುವ ಬಿಸಿಲು. ಕಣ್ಣು ಕುಕ್ಕುವ ಧಗೆ. ತಂಪುಪಾನೀಯ ಚಪ್ಪರಿಸಿದರೂ ನೀಗದ ಬಾಯಾರಿಕೆ. ಶುದ್ಧ ನೀರನ್ನಾದರೂ ಕುಡಿದು ದಣಿವಾರಿಸಿಕೊಳ್ಳೋಣ ಎಂದರೆ ಸದ್ದು ಮಾಡುವ ಖಾಲಿ ಪಾತ್ರೆಗಳು. ವಾರ ಕಳೆದರೂ ಬಾರದ ಕುಡಿಯುವ ನೀರು. ಮನೆ ಎದುರಿನ ಕಾರ್ಪೊರೇಷನ್‌ ನಳ ಸದ್ದು ಮಾಡುವುದನ್ನೇ ಕಾಯುತ್ತಿರುವ ಜನ...
 
ಸತತ ಎರಡನೇ ವರ್ಷವೂ ಕಾಡಿದ ಬರದಿಂದಾಗಿ ನಗರದ ಕುಡಿಯುವ ನೀರಿನ ಮೂಲವಾದ ತುಂಗಭದ್ರಾ ನದಿಯ ಒಡಲು ಬರಿದಾಗಿದೆ. ಭದ್ರಾ ಕಾಲುವೆ ನೀರನ್ನು ಒಡಲಿನಲ್ಲಿ ತುಂಬಿಸಿಕೊಂಡಿದ್ದ ಕುಂದವಾಡ ಕೆರೆ ಹಾಗೂ ಟಿ.ವಿ ಸ್ಟೇಷನ್‌ ಕೆರೆ ಬರಿದಾಗುವ ಹಂತಕ್ಕೆ ಬಂದಿವೆ. ಹೀಗಾಗಿ ನಗರದ ಬಹುತೇಕ ಕಡೆ ಎಂಟು ದಿನಗಳಾದರೂ ಕುಡಿಯುವ ನೀರು ಬರುತ್ತಿಲ್ಲ. ಬಿಸಿಲಿನ ತಾಪದಂತೆ ನಾಗರಿಕರ ನೀರಿನ ಪರದಾಟವೂ ಹೆಚ್ಚಾಗುತ್ತಿದೆ. ನಗರದಲ್ಲಿ ಒಂದು ಸುತ್ತು ಹಾಕಿದರೆ ಈಗ ಎಲ್ಲೆಲ್ಲೂ ನೀರಿನದ್ದೇ ಗೋಳು. 
 
‘ಬಾಯಿಗಿಟ್ಟ ಅನ್ನದ ತುತ್ತು ಗಂಟಲಿಗೆ ಸಿಕ್ಕಿಕೊಂಡರೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ಎಂಟು ದಿನಗಳಾದರೂ ಕಾರ್ಪೊರೇಷನ್‌ ನೀರು ಬಂದಿಲ್ಲ. ಕುಡಿಯಲು ನೀರಿಲ್ಲ. ಪಾಲಿಕೆ ಸದಸ್ಯರು ಕಳುಹಿಸಿಕೊಡುವ ಟ್ಯಾಂಕರ್‌ ನೀರನ್ನು ಹಿಡಿದುಕೊಳ್ಳಲು ಕಾಯುತ್ತಿದ್ದೇನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಲೇಬರ್‌ ಕಾಲೊನಿಯ ಮಹಿಳೆಯೊಬ್ಬರ ಮಾತೇ ಸಮಸ್ಯೆಯ ತೀವ್ರತೆಗೆ ಕನ್ನಡಿ ಹಿಡಿಯುತ್ತದೆ. 
 
ಎಲ್ಲೆಡೆ ನೀರಿನದ್ದೇ ಗೋಳು: ‘ಎಂಟು ದಿನಗಳಿಗೆ ಒಮ್ಮೆ ಕಾರ್ಪೊರೇಷನ್‌ ನೀರು ಬಿಡುತ್ತಿದ್ದಾರೆ. ಅದು ಒಂದು ಗಂಟೆಯಷ್ಟೂ ಬರುವುದಿಲ್ಲ. ಅಡುಗೆಗೆ, ಕುಡಿಯಲು ಆ ನೀರನ್ನೇ ನಂಬಿಕೊಂಡಿದ್ದೇವೆ. ರಾತ್ರಿಯ ವೇಳೆ ನೀರು ಬಿಡುತ್ತಿರುವುದರಿಂದ ನಿದ್ದೆಗೆಡಬೇಕಾಗಿದೆ. ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಸಿಹಿ ನೀರಿನ ಬಳಕೆಯೂ ಹೆಚ್ಚುತ್ತಿದೆ. ನಾಲ್ಕೈದು ದಿನಗಳಿಗೆ ಒಮ್ಮೆ ನೀರು ಕೊಟ್ಟರೆ ಹೇಗೋ ನಿಭಾಯಿಸಬಹುದು. ಎಂಟು– ಹತ್ತು ದಿನಗಳಿಗೆ ನೀರು ಕೊಟ್ಟರೆ ಈ ಬಾರಿ ಬೇಸಿಗೆ ದೂಡುವುದು ಬಹಳ ಕಷ್ಟವಾಗಲಿದೆ’ ಎಂದು ಬಂಬೂಬಜಾರ್‌ ರಸ್ತೆಯ ನಿವಾಸಿ ಫಾತಿಮಾ ಅಲವತ್ತುಕೊಂಡರು. 
 
‘ದಿನಾಲೂ ಬೆಳಿಗ್ಗೆ ಹಾಗೂ ಸಂಜೆ ಒಂದು ಗಂಟೆ ಕಾಲ ಕೊಳವೆಬಾವಿಯಿಂದ ಟ್ಯಾಂಕಿಗೆ ನೀರು ಬಿಡುತ್ತಾರೆ. ದಿನಬಳಕೆಗೆ ಹೇಗೋ ಈ ನೀರನ್ನೇ ಹಿಡಿದುಕೊಳ್ಳುತ್ತೇವೆ. ಇದನ್ನು ಕುಡಿಯಲು ಸಾಧ್ಯವಿಲ್ಲ. ನಮಗೆ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆ’ ಎಂದು ಹೇಳಿದ ಬಂಬೂ ಬಜಾರ್‌ನ ಮದಿನಾ ಮಸೀದಿ ಹಿಂಭಾಗದ 3ನೇ ಕ್ರಾಸ್‌ನ ವೃದ್ಧ ಚಮನ್‌ಸಾಬ್‌, ಸುಡು ಬಿಸಿಲಿನಲ್ಲೇ ಬಿಂದಿಗೆಯಲ್ಲಿ ನೀರು ಹಿಡಿದುಕೊಂಡು ಮನೆಯತ್ತ ಹೆಜ್ಜೆ ಹಾಕಿದರು. 
 
ಮಾಗಾನಹಳ್ಳಿ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಹಲವು ನಿವಾಸಿಗಳು ಕುಡಿಯುವ ನೀರಿನ ಸಲುವಾಗಿ ಅಕ್ಕ ಪಕ್ಕದ ಬಡಾವಣೆಗಳಿಗೆ ಕಾರ್ಪೊರೇಷನ್‌ ನೀರು ಬಿಟ್ಟಾಗ ಬಿಂದಿಗೆ ಹಿಡಿದು ಸಾಗುತ್ತಿದ್ದಾರೆ. ಹೆಗಡೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಪಾಲಿಕೆ ಸಕಾಲಕ್ಕೆ ನೀರು ಬಿಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 
 
ಕೂಲಿ ಕಳೆದುಕೊಳ್ಳುವ ಸಂಕಟ: ‘ನಮ್ಮಲ್ಲಿ ಕೊಳವೆಬಾವಿ ಸೌಲಭ್ಯವೂ ಇಲ್ಲ. ಕಾರ್ಪೊರೇಷನ್‌ ನೀರು ಬಿಡದೇ ಹತ್ತು ದಿನ ಕಳೆಯಿತು. ಮನೆಯಲ್ಲಿ ಕುಡಿಯಲೂ ನೀರಿಲ್ಲ. ಆಜಾದ್‌ನಗರ ಪೊಲೀಸ್‌ ಠಾಣೆ ಪಕ್ಕದ ಬೀಡಿ ಲೇಔಟ್‌ನಲ್ಲಿ ಕಾರ್ಪೊರೇಷನ್‌ ನೀರು ಬಿಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಒಂದೂವರೆ ಕಿ.ಮೀ. ದೂರದಿಂದ ಇಲ್ಲಿಗೆ ಬಂದಿದ್ದೆವು. ಆದರೆ, ಇಲ್ಲಿಗೆ ಬರುವಷ್ಟರಲ್ಲೇ ನೀರು ನಿಂತುಹೋಯಿತು. ನಮ್ಮ ಬಡಾವಣೆಗೆ ಟ್ಯಾಂಕರ್‌ನಲ್ಲಾದರೂ ನೀರು ಕೊಡಬೇಕು’ ಎಂದು ಹೇಳಿದ ರಾಮಕೃಷ್ಣ ಹೆಗಡೆ ನಗರದ 12ನೇ ಕ್ರಾಸ್‌ ನಿವಾಸಿ ರೆಹಮತ್‌ವುಲ್ಲಾ ಅವರು ಖಾಲಿ ಕೊಡವನ್ನು ಪ್ರದರ್ಶಿಸಿದರು.
 
‘ಪುರುಷರು ಅಕ್ಕ ಪಕ್ಕದ ಬಡಾವಣೆಗಳಿಗೆ ತೆರಳಿ ಕುಡಿಯುವ ನೀರಿನ್ನು ಹಿಡಿದುಕೊಂಡು ಬರಬೇಕಾಗಿದೆ. ಇದರಿಂದಾಗಿ ಮಂಡಕ್ಕಿ ಭಟ್ಟಿ ಕೆಲಸಕ್ಕೆ ಸರಿಯಾಗಿ ಹೋಗಲಾಗುತ್ತಿಲ್ಲ. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ₹ 200 ಕೂಲಿ ಕಳೆದುಕೊಳ್ಳುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದ ರೆಹಮತ್‌ವುಲ್ಲಾ, ಮನೆಯತ್ತ ಹೊರಟರು. 
 
‘ಕೊಳವೆಬಾವಿ ನೀರನ್ನು ಕೆಲವೊಮ್ಮೆ ದಿನಕ್ಕೆ ಒಂದು ತಾಸು ಬಿಡುತ್ತಿದ್ದಾರೆ. ಅದರಲ್ಲೂ ನೀರು ಕಡಿಮೆಯಾಗುತ್ತಿದೆ. ಹದಿನೈದು ದಿನಗಳಿಂದ ಕುಡಿಯುವ ನೀರನ್ನು ಕೊಟ್ಟಿಲ್ಲ. ಈ ಬಾರಿ ಬೇಸಿಗೆ ಕಳೆಯುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಭಾಷಾನಗರದ ನಿವಾಸಿ ಸನಾವುಲ್ಲಾ. 
 
ತಳ್ಳುವ ಗಾಡಿ ಮೇಲೆ ಬಿಂದಿಗೆಗಳನ್ನು ಇಟ್ಟುಕೊಂಡು ಕುಡಿಯುವ ನೀರನ್ನು ಅಕ್ಕನ ಮನೆಗೆ ಒಯ್ಯುತ್ತಿದ್ದ ಮಹಮದ್‌ ಸನಾವುಲ್ಲಾ, ನೀರಿನ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡಿದ್ದು ಹೀಗೆ: ‘ಎಂಟು ದಿನಕ್ಕೆ ಒಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ. ನರಸರಾಜ ಪೇಟೆಯಲ್ಲಿರುವ ಅಕ್ಕನ ಮನೆಯಲ್ಲಿ ಕುಡಿಯುವ ನೀರು ಖಾಲಿಯಾಗಿದೆ. ಹೀಗಾಗಿ ಅಹಮದ್‌ನಗರದ ನಾಲ್ಕನೇ ಕ್ರಾಸ್‌ನಲ್ಲಿರುವ ನಮ್ಮ ಮನೆಯಿಂದ ಕುಡಿಯುವ ನೀರನ್ನು ಒಯ್ಯುತ್ತಿದ್ದೇನೆ. ಈ ಬಾರಿ ಕುಡಿಯುವ ನೀರಿಗೆ ಎಲ್ಲರೂ ಪರದಾಡುವಂತಾಗಿದೆ’. ಇಷ್ಟು ಹೇಳುವಷ್ಟರಲ್ಲಿ ಅವರು ಮುಖದ ಮೇಲಿದ್ದ ಬೆವರಿನ ಹನಿಗಳನ್ನು ಒರೆಸಿಕೊಂಡರು. 
 
‘ದಿನಬಳಕೆಗೆ ಬನ್ನಿ ಕಾಳಮ್ಮ ದೇವಸ್ಥಾನದ ಬಳಿ ಹೋಗಿ ಕೊಳವೆಬಾವಿ ನೀರನ್ನು ಹಿಡಿದುಕೊಂಡು ಬರುತ್ತೇವೆ. 10 ದಿನಗಳಿಂದ ಕುಡಿಯುವ ನೀರು ಬಿಟ್ಟಿಲ್ಲ. ನೀರು ಬಂದಾಗ ಡ್ರಮ್‌ ಹಾಗೂ 10 ಬಿಂದಿಗೆಗಳಲ್ಲಿ ಹಿಡಿದುಕೊಳ್ಳುತ್ತೇವೆ. ಆದರೆ, ಐದಾರು ದಿನಗಳ ಬಳಿಕ ಬಿಂದಿಗೆಯಲ್ಲಿರುವ ನೀರಿನಲ್ಲಿ ಹುಳ ಆಗುತ್ತಿದೆ’ ಎಂದು ವಿಜಯನಗರ 1ನೇ ಕ್ರಾಸ್‌ ನಿವಾಸಿ ಹಾಲಮ್ಮ ಸಮಸ್ಯೆಯನ್ನು ಬಿಚ್ಚಿಟ್ಟರು. 
 
‘ದಿನಕ್ಕೆ ಒಮ್ಮೆ ಕೊಳವೆಬಾವಿ ನೀರು ಬಿಡುತ್ತಿದ್ದಾರೆ. ದಿನಬಳಕೆಗೆ ಅದನ್ನು ಹಿಡಿದುಕೊಳ್ಳುತ್ತಿದ್ದೇವೆ. ಎಂಟು ದಿನಗಳಿಗೆ ಒಮ್ಮೆ ಕುಡಿಯುವ ನೀರನ್ನು ಬಿಡುತ್ತಿದ್ದು, ಆ ನೀರು ವಾರದೊಳಗೆ ಖಾಲಿಯಾಗುತ್ತಿದೆ. ಕೆಲವೆಡೆ ಹಳೆ ನಳವನ್ನು ತೆಗೆದು ಹೊಸ ನಳ ‌ ಅಳವಡಿಸಲಾಗಿದೆ. ಆದರೆ, ಇನ್ನೂ ಹಳೇ ನಲ್ಲಿಯಲ್ಲೇ ಕುಡಿಯುವ ನೀರು ಬಿಡಲಾಗುತ್ತಿದೆ. ಹೊಸ ನಳದಲ್ಲಿ ಬಿಟ್ಟರೆ ಹೆಚ್ಚಿನ ಪ್ರಮಾಣದಲ್ಲಾದರೂ ನೀರು ಸಿಗುತ್ತಿತ್ತು’ ಎನ್ನುತ್ತಾರೆ ಹಳೇ ಜಾಲಿನಗರದ 3ನೇ ಕ್ರಾಸ್‌ ನಿವಾಸಿ ಅಜ್ಜಪ್ಪ. 
 
‘ಇಲ್ಲಿ ಒಂದೇ ಕೊಳವೆಬಾವಿ ಇದೆ. ನಾಲ್ಕು ಲೈನ್‌ಗೆ ಒಂದೇ ಬಾರಿ ಬಿಡುತ್ತಿರುವುದರಿಂದ ಸಣ್ಣದಾಗಿ ನೀರು ಬರುತ್ತಿದೆ. ಕುಡಿಯುವ ನೀರು ಸಾಕಷ್ಟು ಸಿಗುತ್ತಿಲ್ಲ. ಕೊನೆ ಪಕ್ಷ ನಿತ್ಯ ಬಳಕೆಗಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಗುವಂತಾಗಲಿ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನೂರ್‌ಅಹಮದ್‌.
 
‘ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿದೆ. ಹೀಗಾಗಿ ಫೆಬ್ರುವರಿ ಆರಂಭದಲ್ಲೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಯುಗಾದಿ ಹಬ್ಬದ ವೇಳೆ ಒಂದೆರಡು ಒಳ್ಳೆಯ ಮಳೆಯಾದರೆ ಬೇಸಿಗೆಯಲ್ಲಿ ಪಶು–ಪಕ್ಷಿಗಳು ಬದುಕಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಲೇಬರ್‌ ಕಾಲೊನಿ ನಿವಾಸಿ ವೆಂಕಟೇಶ್‌. 
 
ನೀರು ಕುಡಿಯುವ ಮುನ್ನ...
ದಾವಣಗೆರೆ: ಬೇಸಿಗೆಯ ತೀವ್ರತೆ ಹೆಚ್ಚಿದಂತೆ ಜಲ ಮೂಲಗಳು ಬತ್ತುತ್ತಿವೆ. ನದಿ, ಕೆರೆಗಳ ಒಡಲು ಬರಿದಾಗುತ್ತಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಮೂಲ ಕಲುಷಿತಗೊಂಡು ಜಲ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಭೀತಿ ಇದೆ. ಹೀಗಾಗಿ ನೀರನ್ನು ಶುದ್ಧಗೊಳಿಸಿಯೇ ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

‘ಕಲುಷಿತ ನೀರಿನ ಸೇವನೆಯಿಂದ ವಾಂತಿ–ಭೇದಿ, ಜಾಂಡಿಸ್‌, ಟೈಫಾಯ್ಡ್‌, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಯಿದೆ. ಹೀಗಾಗಿ ಬೇಸಿಗೆಯಲ್ಲಿ ಶುದ್ಧ ನೀರನ್ನು ಕುಡಿಯಲು ಜನರು ಒತ್ತು ನೀಡಬೇಕು’ ಎಂದು ಸಲಹೆ ನೀಡುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್‌ ಕೆ.ಎಚ್‌.

‘ಕೊಳವೆಬಾವಿ, ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು ಸೇರಿ ಕಲುಷಿತಗೊಂಡ ನೀರನ್ನು ಕುಡಿದರೆ ವಾಂತಿ–ಭೇದಿ ಶುರುವಾತ್ತದೆ. ಜಾಂಡಿಸ್‌ ರೋಗಪೀಡಿತ ವ್ಯಕ್ತಿ ಬಯಲಿನಲ್ಲಿ ವಿಸರ್ಜಿಸಿದ ಮಲದಿಂದ ರೋಗಾಣು ಅಂತರ್ಜಲ ಸೇರಿದರೆ ಅದನ್ನು ಕುಡಿಯುವ ಜನರಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಈ ರೋಗ ಇದ್ದವರು ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಸೋಪಿನಿಂದ ಸರಿಯಾಗಿ ಕೈ ತೊಳೆದುಕೊಳ್ಳದೇ, ಕುಡಿಯುವ ನೀರಿನ ಪಾತ್ರೆಯನ್ನು ಮುಟ್ಟಿದರೂ ಅದರಲ್ಲೂ ರೋಗಾಣು ಸೇರಿಕೊಳ್ಳುತ್ತದೆ. ಆಹಾರ ಸೇವನೆಯ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಎಲ್ಲರೂ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು’ ಎಂದು ಗಂಗಾಧರ್‌ ಸಲಹೆ ನೀಡಿದ್ದಾರೆ.

‘ಸಾಧ್ಯವಾದರೆ ಮನೆಯಲ್ಲಿ ಆರ್‌.ಒ ಫಿಲ್ಟರ್‌ ಹಾಕಿಕೊಳ್ಳಬೇಕು. ಇಲ್ಲದಿದ್ದರೆ, ಕ್ಯಾಂಡಲ್‌ ಇರುವ ಸಾಮಾನ್ಯ ಫಿಲ್ಟರ್‌ ಇಟ್ಟುಕೊಳ್ಳಬೇಕು. ಕೊನೆ ಪಕ್ಷ ನೀರನ್ನು ಕಾಯಿಸಿ ಆರಿಸಿಯಾದರೂ ಕುಡಿಯಬೇಕು. ಶುದ್ಧ ನೀರನ್ನು ಕುಡಿದರೆ ಜಲಸಂಬಂಧಿ ರೋಗಗಳು ಬರುವುದನ್ನು ಶೇ 75ರಷ್ಟು ತಡೆಯಲು ಸಾಧ್ಯ’ ಎನ್ನುತ್ತಾರೆ ಡಾ.ಗಂಗಾಧರ್‌.

ನೀರಿನ ಪರೀಕ್ಷೆ: ‘ಆರೋಗ್ಯ ಇಲಾಖೆಯ ರೋಗಗಳ ಕಣ್ಗಾವಲು (ಸರ್ವೆಲನ್ಸ್‌) ಘಟಕವು ಪ್ರತಿ ತಿಂಗಳು ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುತ್ತಿದೆ.
ನೀರಿನ ಮೂಲ ಕಲುಷಿತಗೊಂಡಿರುವುದು ಪತ್ತೆಯಾದರೆ, ತಕ್ಷಣವೇ ಕ್ಲೋರಿನೇಶನ್‌ ಮಾಡಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ
ತಿಂಗಳು ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ.

ಆಶಾ ಕಾರ್ಯಕರ್ತೆಯರ ಮೂಲಕ ಶುದ್ಧ ನೀರನ್ನೇ ಕುಡಿಯುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಇದುವರೆಗೂ ಜಿಲ್ಲೆಯಲ್ಲಿ ಜಲಸಂಬಂಧಿ ಸಾಂಕ್ರಾಮಿಕ ರೋಗದಿಂದ ಜೀವ ಹಾನಿ ಸಂಭವಿಸಿಲ್ಲ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತ್ರಿಪುಲಾಂಬಾ ‘ಪ್ರಜಾವಾಣಿ’ಗೆ ತಿಳಿಸಿದರು.
 
ಬಿಂದಿಗೆ ವ್ಯಾಪಾರ ಜೋರು
‘ಈ ಬಾರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ನೀರನ್ನು ಹಿಡಿದಿಟ್ಟುಕೊಳ್ಳಲು ಜನರು ಬಿಂದಿಗೆಗಳನ್ನು ಹೆಚ್ಚೆಚ್ಚು ಕೊಳ್ಳುತ್ತಿದ್ದಾರೆ. ದಿನಕ್ಕೆ 20 ಲೀಟರ್‌ ಸಾಮರ್ಥ್ಯದ 50ಕ್ಕೂ ಹೆಚ್ಚು ಬಿಂದಿಗೆಗಳನ್ನು ಮಾರಾಟ ಮಾಡುತ್ತಿದ್ದೇನೆ. ಒಂದು ಬಿಂದಿಗೆಗೆ₹ 50ರಂತೆ ಕೊಡುತ್ತಿದ್ದೇನೆ’ ಎನ್ನುತ್ತಾರೆ ಬೈಕ್‌ನಲ್ಲಿ ಬಿಂದಿಗೆ ಇಟ್ಟುಕೊಂಡು ಮಾರಾಟ ಮಾಡುವ ಅಲ್ಲಾಭಕ್ಷ್‌.

‘ಬೆಳಿಗ್ಗೆ ಹೊತ್ತು ನಗರದ ವಿವಿಧೆಡೆ ಸಂಚರಿಸಿ ವ್ಯಾಪಾರ ಮಾಡುತ್ತೇನೆ. ಮಧ್ಯಾಹ್ನದ ಬಳಿಕ ಆವರಗೆರೆ, ತೋಳಹುಣಸೆ, ಶಾಮನೂರು ಸೇರಿದಂತೆ ನಗರದ ಹೊರವಲಯದಲ್ಲಿ ವ್ಯಾಪಾರ ಮಾಡುತ್ತೇನೆ. ಒಂದು ದಿನಕ್ಕೆ ಖರ್ಚು ತೆಗೆದು ದಿನಕ್ಕೆ ಸರಾಸರಿ ₹ 500 ಲಾಭ ಸಿಗುತ್ತಿದೆ’ ಎನುತ್ತಾ ಅಲ್ಲಾಭಕ್ಷ್‌, ಬೈಕನ್ನು ಏರಿ ಬಿಂದಿಗೆ ಮಾರಲು ಹೊರಟರು.
 
ಜನಪ್ರತಿನಿಧಿಗಳಿಗೂ ನೀರಿನ ‘ಬರೆ’!
ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿರುವುದರಿಂದ ನಗರದ ಬಡಾವಣೆಯ ನಿವಾಸಿಗಳು ತಮ್ಮ ವಾರ್ಡ್‌ನ ಸದಸ್ಯರಿಗೆ ನೀರು ಬಿಡಿಸುವಂತೆ ದುಂಬಾಲು ಬೀಳುತ್ತಿದ್ದಾರೆ.

ಈ ಬೇಸಿಗೆಯಲ್ಲಿ ಜನರಿಗೆ ನೀರು ಕೊಡದಿದ್ದರೆ ಮುಂದಿನ ಚುನಾವಣೆಯಲ್ಲಿ ಜನ ತಮಗೆ ‘ಬರೆ’ ಎಳೆಯುತ್ತಾರೆ ಎಂಬ ಭೀತಿಯೂ ಜನಪ್ರತಿನಿಧಿಗಳಲ್ಲಿ ಮೂಡಿದೆ. ಹೀಗಾಗಿ ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗೆ ಹೆಚ್ಚಿನ ಸಮಯ ಕುಡಿಯುವ ನೀರು ಬಿಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ತಮ್ಮ ಬಡಾವಣೆಗೆ ಪಾಲಿಕೆಯಿಂದ ಟ್ಯಾಂಕರ್‌ ಮೂಲಕ ನೀರು ಕೊಡಿಸಲು ಮುಂದಾಗುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಖರ್ಚಿನಲ್ಲೇ ದಿನಕ್ಕೆ ಒಂದೆರಡು ಟ್ಯಾಂಕರ್‌ಗಳಲ್ಲಿ ನೀರು ಕೊಡಲು ಆರಂಭಿಸಿದ್ದಾರೆ.
 
‘ನನ್ನ ವಾರ್ಡ್‌ನ ಕೆಲವೆಡೆ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ಪಾಲಿಕೆಯಿಂದ ಟ್ಯಾಂಕರ್‌ ನೀರು ಪೂರೈಕೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ನಾನೇ ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ ನೀರನ್ನು ನೀಡಲು ಆರಂಭಿಸಿದ್ದೇನೆ. ನೀರಿಗಾಗಿ ಜನ ತೊಂದರೆ ಪಡುವಂತಾಗಬಾರದು’ ಎಂದು 25ನೇ ವಾರ್ಡ್‌ ಸದಸ್ಯ ಜೆ.ಎನ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
 
ಟ್ಯಾಂಕರ್‌ ಮಾಲೀಕರಿಗೆ ಸುಗ್ಗಿ
ನಗರದ ನಾಗರಿಕರು ಪಡುತ್ತಿರುವ ಕುಡಿಯುವ ನೀರಿನ ಬವಣೆ, ನೀರು ಪೂರೈಸುವ ಟ್ಯಾಂಕರ್‌ಗಳ ಮಾಲೀಕರ ಪಾಲಿಗೆ ‘ಸುಗ್ಗಿ’ಯನ್ನು ತಂದಿದೆ. ಬೇಸಿಗೆ ಬರುತ್ತಿದ್ದಂತೆ ನೀರಿನ ಟ್ಯಾಂಕರ್‌ಗಳ ಅಬ್ಬರವೂ ಹೆಚ್ಚಾಗುತ್ತಿದೆ. ನಗರದ ಹೊರವಲಯದ ಜಮೀನುಗಳಲ್ಲಿರುವ ಕೊಳವೆಬಾವಿಗಳಿಂದ ನೂರಕ್ಕೂ ಹೆಚ್ಚು ಟ್ಯಾಂಕರ್‌ಗಳಿಗೆ ನೀರನ್ನು ನಿರಂತರವಾಗಿ ತುಂಬಿಸಿಕೊಂಡು ನಗರದ ಬಡಾವಣೆಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 5000 ಲೀಟರ್‌ನ ಒಂದು ಟ್ಯಾಂಕರ್‌ ನೀರಿಗೆ ₹ 600ರಿಂದ ₹ 900ರವರೆಗೂ ಹಣ ಪಡೆಯುತ್ತಿದ್ದಾರೆ. ತೀರಾ ಅಗತ್ಯ ಬಿದ್ದಾಗ ಜನರು ಟ್ಯಾಂಕರ್‌ ನೀರು ತರಿಸಿಕೊಂಡು ಮನೆಯ ಸಂಪಿನಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.
 
ಬಾಯಾರಿಕೆ ನೀಗಿಸದ ಶುದ್ಧ ನೀರಿನ ಘಟಕ
ಮಹಾನಗರ ಪಾಲಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಗರದ 17 ಕಡೆ ಶುದ್ಧ ಕುಡಿಯುವ ನೀರಿನ ಘಟಕ (ಶುದ್ಧಗಂಗಾ) ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿದೆ. ‘ಶುದ್ಧಗಂಗಾ’ ಘಟಕದಲ್ಲಿ ₹ 2ಕ್ಕೆ 20 ಲೀಟರ್‌ ನೀರು ಒದಗಿಸಲು ಉದ್ದೇಶಿಸಲಾಗಿದೆ. ಆದರೆ, ಮೇ ತಿಂಗಳ ಒಳಗೆ ಇವು ಕಾರ್ಯಾರಂಭ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲಿ ಇವು ಜನರ ಬಾಯಾರಿಕೆ ನೀಗಿಸುವ ಸಾಧ್ಯತೆ ಕಡಿಮೆ.

ಕಾರ್ಪೊರೇಷನ್‌ ನೀರು ಸಕಾಲಕ್ಕೆ ಬಾರದೇ ಇರುವುದರಿಂದ ನಗರದಲ್ಲಿ ಹಲವರು 20 ಲೀಟರ್‌ನ ‘ಪ್ಯಾಕೇಜ್ಡ್‌ ವಾಟರ್‌’ ಕ್ಯಾನ್‌ಗಳನ್ನು ಮನೆಗೆ, ಕಚೇರಿಗಳಿಗೆ ತರಿಸಿಕೊಳ್ಳುತ್ತಿದ್ದಾರೆ. ಇಂಥ ಒಂದು ಕ್ಯಾನ್‌ಗೆ ₹ 40ರಿಂದ ₹ 50ರವರೆಗೆ ಪಡೆಯಲಾಗುತ್ತಿದೆ.
 
ಸೊಳ್ಳೆ ತಂದೀತು ಆಪತ್ತು...
ವಾರಕ್ಕೆ ಒಮ್ಮೆ ಕುಡಿಯುವ ನೀರು ಬಿಡುತ್ತಿರುವುದರಿಂದ ಹಲವರು ಬಿಂದಿಗೆ, ಪುಟ್ಟ ಟ್ಯಾಂಕ್‌ಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಆದರೆ, ಈ ಶುದ್ಧ ನೀರಿನಲ್ಲಿ ‘ಈಡಿಸ್‌ ಈಜಿಪ್ಟಾ’ ಸೊಳ್ಳೆಗಳು ಮೊಟ್ಟೆಗಳನ್ನು ಇಡುತ್ತವೆ. ಐದಾರು ದಿನಗಳ ಬಳಿಕ ಅವು ಮರಿಯಾಗುತ್ತವೆ. ಬೆಳವಣಿಗೆ ಹೊಂದಿದ ಈ ಸೊಳ್ಳೆಗಳೇ ಮನೆ ಮಂದಿಗೆ ಕಡಿಯುವುದರಿಂದ ಡೆಂಗಿ, ಚಿಕುನ್‌ಗುನ್ಯ ರೋಗಗಳು ಬರುತ್ತವೆ.

ಹೀಗಾಗಿ ಸೊಳ್ಳೆಯ ಮೊಟ್ಟೆ ಮರಿಯಾಗುವುದನ್ನು ತಪ್ಪಿಸಲು ನೀರನ್ನು ಸಂಗ್ರಹಿಸುವ ಬಿಂದಿಗೆ, ಪಾತ್ರೆ, ಬಕೆಟ್‌, ಟ್ಯಾಂಕ್‌ಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು. ಕೊನೆ ಪಕ್ಷ ಸೊಳ್ಳೆ ಮೊಟ್ಟೆ ಇಡುವುದನ್ನು ತಪ್ಪಿಸಲು ಅವುಗಳನ್ನು ಸರಿಯಾಗಿ ಮುಚ್ಚಿಡಬೇಕು ಎಂದು ಡಾ.ಗಂಗಾಧರ್‌ ಸಲಹೆ ನೀಡಿದ್ದಾರೆ.
 
ಎಸ್‌.ಟಿ.ಪಿ ಇನ್ನೂ ಬಲು ದೂರ
ನಗರದ ಹೊರವಲಯದ ಬೂದಿಹಾಳ– ಕಲಪನಹಳ್ಳಿ ರಸ್ತೆಯಲ್ಲಿ 20 ಎಂ.ಎಲ್‌.ಡಿ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌.ಟಿ.ಪಿ) ಹಾಗೂ ಆವರಗೆರೆಯಲ್ಲಿ 5 ಎಂ.ಎಲ್‌.ಡಿ ಸಾಮರ್ಥ್ಯದ ಎಸ್‌.ಟಿ.ಪಿ ನಿರ್ಮಾಣ ಹಂತದಲ್ಲಿದೆ. ಈ ಎರಡೂ ಘಟಕ ಕಾರ್ಯಾರಂಭ ಮಾಡಿದರೆ ಪ್ರತಿ ದಿನ 25 ಎಂ.ಎಲ್‌.ಡಿ ನೀರು ಲಭಿಸಲಿದೆ. ಇದನ್ನು ನಗರದ ಕೈಗಾರಿಕೆಗಳಿಗೆ ಹಾಗೂ ಉದ್ಯಾನಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ.

ನಗರದಲ್ಲಿ ಒಳಚರಂಡಿ ನಿರ್ಮಾಣ ಕೆಲಸ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕವೇ ಚರಂಡಿ ನೀರಿನ ಪೈಪನ್ನು ಎಸ್‌.ಟಿ.ಪಿಗೆ ಜೋಡಿಸಲು ಸಾಧ್ಯ. ಎಸ್‌.ಟಿ.ಪಿ ಕಾರ್ಯಾರಂಭ ಮಾಡಲು ಇನ್ನೂ ಎರಡು ವರ್ಷ ಬೇಕಾಗಬಹುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT