ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿ ಬಳಿ ಸುಳಿದರೆ ಸಾಕು ಸಂದೇಶ ರವಾನೆ!

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ, 32 ಕೇಂದ್ರಗಳಿಗೆ ಏಕಕಾಲಕ್ಕೆ ಪ್ರಶ್ನೆಪತ್ರಿಕೆ ರವಾನೆ
Last Updated 9 ಮಾರ್ಚ್ 2017, 5:33 IST
ಅಕ್ಷರ ಗಾತ್ರ
ಶಿವಮೊಗ್ಗ: ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಬಂಡಲ್‌ ಇಟ್ಟಿರುವ ಜಿಲ್ಲಾ ಖಜಾನೆಯ ಕೊಠಡಿ ಬಳಿ ಯಾರಾದರೂ ಸುಳಿದರೂ ಸಾಕು ಪರಿಕ್ಷಾ ಮಂಡಳಿ, ಜಿಲ್ಲಾಡಳಿತಕ್ಕೆ ದೃಶ್ಯ ಸಹಿತ ಸಂದೇಶ ರವಾನೆಯಾಗುತ್ತದೆ!
 
ಪರೀಕ್ಷೆ ಮಾರ್ಚ್‌ 9ರಿಂದ ಜಿಲ್ಲೆಯ 32 ಕೇಂದ್ರಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ. 
 
ಕೊಠಡಿಯ ಸುತ್ತ ನಾಲ್ಕು ಮೂಲೆಗಳಲ್ಲೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ದಿನದ 24 ಗಂಟೆಯೂ ಕೊಠಡಿ ಸುತ್ತಲ ಚಲನವಲನ ಸೆರೆಹಿಡಿದು ಪಿಯು ಪರೀಕ್ಷಾ ಮಂಡಳಿ ಅಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೊಬೈಲ್‌ಗಳಿಗೆ ಸಂದೇಶ ರವಾನಿಸುತ್ತವೆ. ಯಾರಾ
ದರೂ ಅಲ್ಲಿ ಸುಳಿದರೆ ಅವರ ನೆರಳು ಸೋಕುತ್ತಿದಂತೆ ಈ ಮೂವರು ಅಧಿಕಾರಿಗಳ ಮೊಬೈಲ್‌ಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.
 
‘ಮೊಬೈಲ್‌ಗಳಿಗೆ ಸಿಸಿಟಿವಿ ಸೆರೆಹಿಡಿದ ದೃಶ್ಯಗಳು ನೇರವಾಗಿ ತಲುಪುತ್ತದೆ. ಯಾರಾದರೂ ಅಲ್ಲಿ ಸುಳಿದರೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ತಕ್ಷಣವೇ ಭದ್ರತಾ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಯಾರೊಬ್ಬರೂ ಪ್ರಶ್ನೆಪತ್ರಿಕೆ ಬಂಡಲ್‌ ಇಟ್ಟಿರುವ ಕೊಠಡಿ ಬಳಿ ಸುಳಿಯಲು ಸಾಧ್ಯವಿಲ್ಲ. ಈ ಬಾರಿ ಪ್ರಶ್ನೆ ಪತ್ರಿಕೆ ಬಹಿರಂಗ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ.
 
ಬೆಳಿಗ್ಗೆ 5.30ಕ್ಕೇ ಪ್ರಕ್ರಿಯೆ ಆರಂಭ: ಎಲ್ಲ 32 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಬಂಡಲ್‌ ತಲುಪಿಸುವ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ತ್ರಿಸದಸ್ಯ ಸಮಿತಿ ರಚಿಸಲಾಗಿದೆ.
ಈ ಸಮಿತಿ ಸದಸ್ಯರು ಪರೀಕ್ಷೆ ನಡೆಯುವ ದಿನ ಬೆಳಿಗ್ಗೆ 5.30ಕ್ಕೆ ಖಜಾನೆಯಲ್ಲಿ ಹಾಜರಿರುತ್ತಾರೆ. ಬಯೋಮೆಟ್ರಿಕ್ ನೀಡಿದ ನಂತರ ಪ್ರಶ್ನೆ ಪತ್ರಿಕೆ ಬಂಡಲ್‌ ಪಡೆದುಕೊಳ್ಳುತ್ತಾರೆ. ನಂತರ ನಿಯೋಜಿತ ಸರ್ಕಾರಿ ವಾಹನದಲ್ಲಿ ಪೊಲೀಸ್ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಏಕ ಕಾಲಕ್ಕೆ ಪ್ರಶ್ನೆಪತ್ರಿಕೆ ಕಳುಹಿಸಿಕೊಡುತ್ತಾರೆ. ಪೊಲೀಸ್ ಭದ್ರತೆ ನಡುವೆಯೇ ಪ್ರಶ್ನೆ ಪತ್ರಿಕೆ ಪಡೆದು ಕೇಂದ್ರಕ್ಕೆ ಹೋಗವುದು ಹಾಗೂ ಹಿಂತಿರುಗುವುದು ಕಡ್ಡಾಯ.
 
ಪ್ರಶ್ನೆ ಪತ್ರಿಕೆಗಳ ಬಂಡಲ್‌ ಪರೀಕ್ಷಾ ಕೇಂದ್ರ ತಲುಪಿದ ತಕ್ಷಣ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಬೇಕು. ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 9ಕ್ಕೆ ವೀಕ್ಷಕರು ಹಾಜರಿರಬೇಕು. ಯಾವುದೇ ಪರೀಕ್ಷಾ ಅಕ್ರಮ ನಡೆಯದಂತೆ ನಿಗಾವಹಿಸಬೇಕು. ಅಭ್ಯರ್ಥಿಗಳ ಹಾಜರಾತಿ ಮತ್ತು ಗೈರು  ಮಾಹಿತಿಯನ್ನೂ ಎಸ್ಎಂಎಸ್ ಮೂಲಕ ರವಾನಿಸಬೇಕು. 
 
ಕೊಠಡಿಯ ಒಳಗೂ ಕಣ್ಗಾವಲು: ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್‌ ಖರೆ ಪರಿಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಿದ್ದಾರೆ.
 
ಕೊಠಡಿಯ ಒಳಗೂ ಯಾವುದೇ ನಕಲಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ. ಹಲವು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೊಠಡಿ ಮೇಲ್ವಿಚಾರಕರ ಮೇಲೆ ಪರೀಕ್ಷಾ ಕೇಂದ್ರದ  ಮುಖ್ಯಸ್ಥರು, 10 ವಿಚಕ್ಷಣ ದಳಗಳ ಸಿಬ್ಬಂದಿ ನಿಗಾ ವಹಿಸಲಿದ್ದಾರೆ.
 
ಸ್ಮಾರ್ಟ್‌ವಾಚ್ ನಿಷೇಧ: ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳು ಸ್ಮಾರ್ಟ್‌ವಾಚ್, ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್, ಪುಸ್ತಕ, ಬ್ಯಾಗ್, ಪರ್ಸ್‌, ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ. ಗುರುತಿನಚೀಟಿ, ಪ್ರವೇಶಪತ್ರ ಹಾಗೂ ಲೇಖನಿ ಮಾತ್ರ  ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. 
 
ಬಾಲಕಿಯರೇ ಹೆಚ್ಚು: 31,098 ವಿದ್ಯಾರ್ಥಿಗಳು ಇದೇ ಮೊದಲ ಬಾರಿ (ಫ್ರೆಷರ್‍ಸ್) ಪರೀಕ್ಷೆ ತೆಗೆದುಕೊಂಡಿದ್ದಾರೆ. ಅವರಲ್ಲಿ 18,451 ಬಾಲಕಿಯರು. 12,647 ಬಾಲಕರು. ಕಲಾವಿಭಾಗದಲ್ಲಿ 8841 ವಿದ್ಯಾರ್ಥಿಗಳು (ಬಾಲಕರು 3363, ಬಾಲಕಿಯರು 5478), ವಿಜ್ಞಾನ ವಿಭಾಗದಲ್ಲಿ 10,852 ವಿದ್ಯಾರ್ಥಿಗಳು (ಬಾಲಕರು 4611, ಬಾಲಕಿಯರು 6,241), ವಾಣಿಜ್ಯ ವಿಭಾಗದಲ್ಲಿ 11,405 ವಿದ್ಯಾರ್ಥಿಗಳು (ಬಾಲಕರು 4673, ಬಾಲಕಿಯರು 6732) ಪರೀಕ್ಷೆ ಎದುರಿಸುತ್ತಿದ್ದಾರೆ. 3,879 ವಿದ್ಯಾರ್ಥಿಗಳು (ರಿಪೀಟರ್‍ಸ್‌) ಮರು ಪರೀಕ್ಷೆ ತೆಗೆದುಕೊಂಡಿದ್ದಾರೆ. 1,942 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT