ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮನಸ್ಸುಗಳ ಬೆಸೆಯುವ ಎಂಜಿನಿಯರ್

ಜಿಲ್ಲೆಯ ಹಲವೆಡೆ ಮಹಿಳಾ ದಿನಾಚರಣೆ l ಸ್ತ್ರೀಪರವಾದ ಚಿಂತನ–ಮಂಥನ ಕಾರ್ಯಾಗಾರ l ಮಹಿಳಾ ಸಬಲೀಕರಣ ಕುರಿತು ಸಂವಾದ
Last Updated 9 ಮಾರ್ಚ್ 2017, 5:51 IST
ಅಕ್ಷರ ಗಾತ್ರ
ಚಿತ್ರದುರ್ಗ: ಸಮಾಜದಲ್ಲಿ ಮಹಿಳೆಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ. ಇದರಿಂದಾಗಿ ಕೆಲವೆಡೆ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ವಿಷಾದಿಸಿದರು.
 
ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳ ಅಕ್ರಮ ಸಾಗಣೆ ಮತ್ತು ಲೈಂಗಿಕ ದೌರ್ಜನ್ಯ ತಡೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
 
ಮಹಿಳೆಯರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವ ಮನೋಧರ್ಮ ಅಧಿಕಾರಿಗಳಲ್ಲಾಗಲಿ, ಪೊಲೀಸರಿಗಾಗಲಿ ಇಲ್ಲವಾಗಿದೆ. ಇದರಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಲು ಮುಂದಾಗುತ್ತಿದ್ದಾಳೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮನೆಯಾಗಲಿ, ಕಚೇರಿಯಾಗಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗ ದೂರು ನೀಡಲು ಹೋದರೆ, ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಸರಿ ಅಲ್ಲ ಎಂದು ಆಕ್ಷೇಪಿಸಿದರು.
ಪ್ರಸ್ತುತ ಜಾರಿಗೆ ತಂದಿರುವ ಕಾನೂನುಗಳು ಮಹಿಳೆಯರ ಪರವಾಗಿ ಇವೆ. ಆದರೆ, ಕೆಲವರು ಅವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಿಜವಾಗಲೂ ನೊಂದವರಿಗೆ ಸೂಕ್ತ ನ್ಯಾಯ ದೊರೆಯುವುದಿಲ್ಲ  ಎಂದು ಹೇಳಿದರು.
 
ನ್ಯಾಯಾಧೀಶೆ ವಿಮಲಾ ಆರ್.ನಂದಗಾಂವ ಮಾತನಾಡಿ, ‘ಸಮಾಜದಲ್ಲಿ ಮಹಿಳೆ ವಿವಿಧ ರೀತಿಯ ಸ್ಥಾನಗಳನ್ನು ಅಲಂಕರಿಸುವ ಮೂಲಕ ತನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದ್ದಾಳೆ. ಅದರ ಜತೆಯಲ್ಲಿ ಆಕೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಿದೆ ಎಂದರು. 
 
ನ್ಯಾಯಾಧೀಶೆ ಟಿ.ಎಂ.ನಿವೇದಿತಾ ಮಾತನಾಡಿ, ‘ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು  ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು. 
 
ನ್ಯಾಯಾಧೀಶ ದಿಂಡಲಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ನಾಗರಾಜ್, ಉಪಾಧ್ಯಕ್ಷೆ ಎಂ.ವಿ.ವೀಣಾ, ಕಾರ್ಯದರ್ಶಿ ಎಂ.ಕೆ.ಲೋಕೇಶ್, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಕೊಲ್ಲಿ ಲಕ್ಷ್ಮಿ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಎಸ್.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ  ವಕೀಲೆ ಡಿ.ಕೆ.ಶೀಲಾ ಮತ್ತು ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಎಂ.ಎಸ್.ಸುಧಾದೇವಿ ಮಹಿಳೆಯರ ಕುರಿತು ವಿಶೇಷ ಉಪನ್ಯಾನ ನೀಡಿದರು.
 
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
 
‘ಹೆಣ್ಣು ತ್ಯಾಗದ ಸಂಕೇತ’
ಚಿತ್ರದುರ್ಗ: ಕುಟುಂಬದೊಳಗಿನ ಸಂಬಂಧಗಳನ್ನು ಬೆಸೆಯುವ ಹಾಗೂ ಮನಸ್ಸುಗಳನ್ನು ಜೋಡಿಸುವ ಮಹಿಳೆಯೇ ನಿಜವಾದ ಎಂಜಿನಿಯರ್’ ಎಂದು ಜಿಲ್ಲಾ ಆಸ್ಪತ್ರೆ ವೈದ್ಯೆ ಡಾ.ಎಂ.ರೂಪಶ್ರೀ ಅಭಿಪ್ರಾಯಪಟ್ಟರು.
 
ನಗರದ ಎಸ್‌ಜೆಎಂ ಮಹಿಳಾ ಕಾಲೇಜಿನಲ್ಲಿ ಐಕ್ಯುಎಸಿ ಅಡಿಯಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಬುಧವಾರ  ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ಹೆಣ್ಣು ತ್ಯಾಗದ ಸಂಕೇತ. ಚಿಕ್ಕವಳಿದ್ದಾಗಿನಿಂದಲೇ ಮತ್ತೊಬ್ಬರಿಗಾಗಿ ತ್ಯಾಗಮಯಿಯಾಗಿ ಬೆಳೆಸುತ್ತಾರೆ. ಆದರೆ, ಪುರುಷರಿಗೆ ಇಂತಹ ನಿರ್ದೇಶನಗಳು ಇರುವುದಿಲ್ಲ. ಹೀಗಾಗಿ ಮನೆಯಿಂದಲೇ ಲಿಂಗ ತಾರತಮ್ಯ ಆರಂಭವಾಗುತ್ತದೆ. ಇದನ್ನು ಹೋಗಲಾಡಿಸುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.
 
‘ಹೆಣ್ಣನ್ನು ಸೌಂದರ್ಯಕ್ಕಿಂತ ಸಾಮರ್ಥ್ಯದ ಮೂಲಕ ಅರ್ಥ ಮಾಡಿಕೊಳ್ಳಬೇಕು. ತಾಯಿಯಿಲ್ಲದೆ ಒಂದು ದಿನವೂ ಮನೆ ಪರಿಪೂರ್ಣವಾಗುವುದಿಲ್ಲ. ಇಂಥ ಮಹತ್ವ ಅರಿಯದ ಸಮಾಜ ಇಂದಿಗೂ ಹೆಣ್ಣು ಭ್ರೂಣ ಹತ್ಯೆಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಂಥಾಲಯ ಮುಖ್ಯಸ್ಥ ಪ್ರೊ.ಎನ್. ಚಲುವರಾಜು ಮಾತನಾಡಿ, ‘ಹೆಣ್ಣು ಹೊರಗಿನ ಹಿಂಸೆಯಿಂದಷ್ಟೇ ಅಲ್ಲದೆ, ಮನೆಯೊಳಗಿನ ಹಿಂಸೆಯಿಂದಲೂ ಬಾಧಿತಳಾಗುತ್ತಿದ್ದಾಳೆ ಎಂದರು.
 
ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಪ್ರೊ.ಪಿ.ಸಿ.ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಫ್ರಾನ್ಸ್ ಕೈಗಾರಿಕಾ ಕ್ರಾಂತಿಯೊಂದಿಗೆ ಮಹಿಳಾ ಹೋರಾಟ ಆರಂಭವಾಯಿತು. ಸಮಾನತೆ, ಅಭಿವೃದ್ಧಿ, ಮೀಸಲಾತಿ ಇವೆಲ್ಲವೂ ಹೋರಾಟದ ರೂಪು ತಳೆಯುವಲ್ಲಿ ಮಹಿಳಾ ಚಳವಳಿ ಸಹಾಯ ಮಾಡಿದೆ. ದೊಡ್ಡಮಟ್ಟದ ಅರಿವಿನ ಕ್ರಾಂತಿಯಾಗುವ ಮೂಲಕ ಮಹಿಳೆಯ ಸಾಧನೆ ಎಲ್ಲ ರಂಗಕ್ಕೂ ಮುಟ್ಟಬೇಕು’ ಎಂದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಸ್.ಬಿ.ಶಿವಕುಮಾರ್, ಮಾತನಾಡಿ, ‘ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಮಸ್ಯೆಗಳ ಪರಿಹಾರದ ಕ್ರಮವಾಗಿ ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು. ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು. ಸ್ತ್ರೀಗೆ ಅರ್ಹ ಸ್ಥಾನಮಾನ ಕಲ್ಪಿಸದಿದ್ದರೆ ಅಂಥ ಸಮಾಜ ಎಂದಿಗೂ ಬದಲಾಗದು ಎಂಬ ವಿವೇಕಾನಂದರ ಮಾತು ಸ್ಮರಣೀಯ. ಹೆಣ್ಣನ್ನು ಹೌಸ್‌ವೈಫ್, ಹೌಸ್‌ಮೇಕರ್ ಆಗಿ ನೋಡುವುದನ್ನು ಮೊದಲು ನಿಲ್ಲಿಸಬೇಕು. ಆಕೆಗೆ, ಬೇಕಾಗಿರುವುದು ಅನುಕಂಪವಲ್ಲ ಅವಕಾಶ ಎಂದು ಅಭಿಪ್ರಾಯಪಟ್ಟರು.
 
ವಿದ್ಯಾರ್ಥಿಗಳಾದ ಪ್ರಿಯಾ, ಜಯಮ್ಮ, ಮಂಜುಳಾ ಮಹಿಳಾ ದಿನ ಕುರಿತು ಅಭಿಪ್ರಾಯ ಹಂಚಿಕೊಂಡರು. ಅಂಜುಂ ಪ್ರಾರ್ಥಿಸಿದರು. ಸಿ.ಸುಧಾರಾಣಿ ಸ್ವಾಗತಿಸಿದರು. ಪ್ರೊ.ರಾಜಾನಾಯಕ್ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಶಶಿಧರ ಮೂರ್ತಿ, ಪ್ರೊ.ಚಿತ್ತಪ್ಪ ಬೋಧಕ–ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
‘ಮಹಿಳಾ ಹಕ್ಕು ರಕ್ಷಣೆ ಎಲ್ಲರ ಹೊಣೆ’
ಹೊಸದುರ್ಗ: ಮಹಿಳೆಯರ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಜಿ.ದಿನೇಶ್‌ ಹೇಳಿದರು.
ಪಟ್ಟಣದ ಎಸ್‌ವಿಎಸ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ನಿಯಂತ್ರಣಕ್ಕೆ ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು. ಹಿಂದಿನ ಕಾಲದಲ್ಲಿ ಮಹಿಳೆ ಪುರುಷನ ಹತೋಟಿಯಲ್ಲಿಯೇ ಜೀವಿಸಬೇಕಿತ್ತು. ಆದರೆ, ಇಂದು ವ್ಯವಸ್ಥೆ ಬದಲಾಗಿದೆ. ಮಹಿಳೆಯರು ಪುರುಷರಷ್ಟೆ ಸಮಾನರು ಎಂಬುದನ್ನು ಸಾರಲು ಸರ್ಕಾರಗಳು ಅನೇಕ ಸೌಲಭ್ಯ ನೀಡಿವೆ. ಪಿತ್ರಾರ್ಜಿತ ಆಸ್ತಿಯ ಹಕ್ಕು ನೀಡಲಾಗಿದೆ ಎಂದರು.
 
ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆ ಮತ್ತು ಮಹಿಳಾ ಸಬಲೀಕರಣ ಕುರಿತು ವಕೀಲರಾದ ರುಕ್ಮಿಣಿ, ವಾಣಿ ಉಪನ್ಯಾಸ ನೀಡಿದರು. ಕನಕ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಚ್‌.ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ವಕೀಲ ಷಡಕ್ಷರಪ್ಪ, ಎನ್‌.ಗುರುಬಸಪ್ಪ, ಸಿಡಿಪಿಒ ಲೋಕೇಶ್ವರಪ್ಪ, ಪ್ರಾಂಶುಪಾಲ ವೆಂಕಟೇಶ್‌, ಬಾನುಪ್ರಕಾಶ್‌ ಹಾಜರಿದ್ದರು.
 
‘ಮಹಿಳಾ ದೌರ್ಜನ್ಯ ತಡೆ ಅಗತ್ಯ’
ಹಿರಿಯೂರು: ಮಹಿಳೆಯರ ಮೇಲೆ ಈಗಲೂ ದೌರ್ಜನ್ಯಗಳು ನಡೆಯುತ್ತಿದ್ದು, ಅದನ್ನು ತಡೆಯಲು ಪರಿಣಾಮಕಾರಿ ಪ್ರಯತ್ನದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಸ್.ಪಲ್ಲೇದ್ ಹೇಳಿದರು.
 
ನಗರದ ಗಿರೀಶ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ದೌರ್ಜನ್ಯ ತಡೆಗೆ ನ್ಯಾಯಾಲಯಗಳು, ಕಾನೂನು ಸೇವಾ ಸಮಿತಿ, ಹಲವು ಸೇವಾ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ ಎಂದು ಅವರು ತಿಳಿಸಿದರು.
 
ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಹನುಮಂತರಾಯಪ್ಪ ಮಾತನಾಡಿ, ಮಹಿಳೆಯರಿಲ್ಲದ ಜೀವ ಮತ್ತು ಜೀವನ ವ್ಯರ್ಥ. ಕಾನೂನುಗಳಿಂದ ಸಾಕಷ್ಟು ರಕ್ಷಣೆ ಸಿಕ್ಕಿದ್ದರೂ ಪೂರ್ಣ ಪ್ರಮಾಣದಲ್ಲಿ ಸುರಕ್ಷತೆ ಇಲ್ಲವಾಗಿದೆ. ಶಾಲಾ ಮಕ್ಕಳಿಗೆ ಆತ್ಮರಕ್ಷಣೆಗೆ ಕರಾಟೆ ಕಲಿಸಲಾಗುತ್ತಿದೆ ಎಂದರು.
 
ಹಿರಿಯ ವಕೀಲರಾದ ಎಂ.ಮೀನಾಕ್ಷಿ ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಭ್ರೂಣಹತ್ಯೆ ಕಾಯ್ದೆ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಲ್ಲಿ ನೆರವು ನೀಡಿವೆ ಎಂದರು.
 
ವಕೀಲರ ಸಂಘದ ಅಧ್ಯಕ್ಷ ಟಿ.ಪಾಂಡುರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗಿರೀಶ ಸಂಸ್ಥೆ ಅಧ್ಯಕ್ಷ ಬಿ.ಎನ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಸೌಭಾಗ್ಯವತಿ ದೇವರು, ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ.ಎ.ಸುಧಾ ಮಾತನಾಡಿದರು. ಹಿರಿಯ ವಕೀಲರಾದ ಎಂ.ಸತೀಶ್ ಬಾಬು, ಎಂ.ಆರ್.ಪ್ರಭಾಕರ್, ಜಗದೀಶ್, ಟಿ.ಧೃವಕುಮಾರ್, ಬಿ.ಜಗದೀಶ್, ಎಸ್.ಈರಣ್ಣ, ಸೈಯದ್ ನವಾಜ್, ಬಿ.ಟಿ.ಸವಿತಾ ಉಪಸ್ಥಿತರಿದ್ದರು.
 
‘ಶೋಷಣೆ ತಡೆಗೆ ಜಾಗೃತಿ ಬೇಕು’
ಚಳ್ಳಕೆರೆ: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪುರುಷರಿಗಿಂತ ಮಹಿಳಾ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿತ್ತು. ಇದರ ವಿರುದ್ದ ಪ್ರಥಮವಾಗಿ ಮಹಿಳಾ ಸಂಘಟನೆಗಳು ಹೋರಾಟ ರೂಪಿಸಿದ ದಿನವನ್ನು ವಿಶ್ವಸಂಸ್ಥೆ ವಿಶ್ವ ಮಹಿಳಾ ದಿನವನ್ನಾಗಿ ಘೋಷಿಸಿದೆ ಎಂದು ಸಾಹಿತಿ ಪಿ.ಬಿ.ತಿಪ್ಪಮ್ಮ ತಿಳಿಸಿದರು.
 
ನಗರದ ತೇಜಸ್ವಿ ಕಾಂಪ್ಲೆಕ್ಸ್‌ನಲ್ಲಿರುವ ಮಾನವ ಬಂಧುತ್ವ ವೇದಿಕೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
 
ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಘಟಕ ಸಂಚಾಲಕ ಸಿ.ಟಿ.ರಾಘವೇಂದ್ರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿದೆ. ಅನಕ್ಷರತೆ, ಕಾನೂನು ಅರಿವಿನ ಕೊರತೆ ಮತ್ತು ಬಡತನ ಇವಕ್ಕೆ ಮುಖ್ಯ ಕಾರಣಗಳು. ಸ್ತ್ರೀಯರು ಕುಟುಂಬದ ಎಲ್ಲಾ ಜವಾಬ್ದಾರಿ ವಹಿಸಿ ಜೀವನ ಸಾಗಿಸುತ್ತಿದ್ದರೂ ಪುರುಷರಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದರು.
 
ತಾಲ್ಲೂಕು ಮಹಿಳಾ ಸಂಘದ ಪದಾಧಿಕಾರಿಗಳಾದ ಮಂಗಳಮ್ಮ, ರೂಪಶ್ರೀ, ಸ್ವಪ್ನ, ಸೂರ್ಯಪ್ರಭ, ಯಶೋದಮ್ಮ, ಶಾಂತಮ್ಮ, ಸೌಭಾಗ್ಯ ತಿಪ್ಪೇಸ್ವಾಮಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಸಂಚಾಲಕ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ ಇದ್ದರು.

ಇವರೆಲ್ಲ ನಮ್ಮೂರಲ್ಲೇ ಇದ್ದಾರಾ.. !
ಚಿತ್ರದುರ್ಗ: ‘ಇವರೆಲ್ಲ ನಮ್ಮೂರಲ್ಲೇ ಇದ್ದಾರಾ...’  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟಗೊಂಡ ಮಹಿಳಾ ಸಾಧಕರ ವಿಶೇಷ ಪುರವಣಿ ಓದಿದವರು ಅಚ್ಚರಿಯಿಂದ ಪ್ರತಿಕ್ರಿಯಿಸಿದ ಪರಿ ಇದು. ರಂಗನಟಿ ಮಾಬವ್ವ ಅವರ ಪರಿಚಯ, ಸ್ಥಳೀಯರಿಗೆ ವಿಶೇಷ ಎನಿಸಿದೆ. ಎಲ್ಲ ಸಾಧಕಿಯರ ಪರಿಶ್ರಮ ವನ್ನು ಓದುಗರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

* ಮಾಬವ್ವ ಕುರಿತ ಬರಹ ‘ಮಾಬವ್ವ ರಂಗದಿನಗಳು’ ಸೊಗಸಾಗಿದೆ. ಎಲ್ಲ ಓದಿದ ಮೇಲೆ ಇವರು ನಮ್ಮೂರಲ್ಲೇ ಇದ್ದಾರಾ ಅಂತ ಅಚ್ಚರಿಯಾಯಿತು. ವ್ಯಕ್ತಿಪರಿಚಯ ಮಹಿಳಾ ದಿನಕ್ಕೆ ಸೂಕ್ತವಾಗಿದೆ.
– ಮೃತ್ಯುಂಜಯಪ್ಪ, ಹಿರಿಯ ನಾಗರಿಕರು, ಚಿತ್ರದುರ್ಗ

* ರಂಗನಟಿ ಮಾಬವ್ವ ಕುರಿತ ವರದಿ ಸೊಗಸಾಗಿದೆ. ಅವರು ನಮ್ಮೂರಲ್ಲೇ ನೆಲೆಸಿದ್ದಾರೆಂದು ಕೇಳಿ ಖುಷಿಯಾಯಿತು. ವಿಶ್ವ ಮಹಿಳಾ ದಿನಾಚರಣೆಗೆ ಪತ್ರಿಕೆ ಉತ್ತಮ ಕಾರ್ಯ ಮಾಡಿದೆ.
– ಬಸವರಾಜು, ರಂಗಕರ್ಮಿ

* ವಿಶ್ಮ ಮಹಿಳಾ ದಿನಾಚರಣೆ ದಿನ ಮಹಿಳೆಯರ ಸಾಧನೆ ಮೇಲೆ ಬೆಳಕು ಚೆಲ್ಲುವ ಹಾಗೂ ಉತ್ತೇಜನ ನೀಡುವಂಥ ವರದಿ ಪ್ರಕಟಿಸಿರುವುದು ಶ್ಲಾಘನೀಯ.
–ರುಕ್ಮಿಣಿ, ವಕೀಲರು, ಹೊಸದುರ್ಗ

* ವಿಶ್ವ ಮಹಿಳಾ ದಿನದಂದು ಪ್ರಕಟಿತ ವರದಿ ಪರಿಣಾಮಕಾರಿಯಾಗಿದೆ. ಆದರೆ, ಅಬಲೆ, ವರದಕ್ಷಿಣೆ, ದೌರ್ಜನ್ಯ, ಅತ್ಯಾಚಾರ, ಮಹಿಳೆಯ ಮೇಲಿನ ದೊಡ್ಡ ಹೊರೆ. ಈ ಬಗ್ಗೆ ಬೆಳಕು ಚೆಲ್ಲುವ ಲೇಖನಗಳೂ ಬೇಕಿತ್ತು. 
-ನಾಗರತ್ನ, ಗೃಹಿಣಿ, ಭರಮಸಾಗರ

* ಎಲೆಮರೆ ಕಾಯಿಯಂತಿದ್ದು, ಅವಿರತವಾಗಿ ಸಮಾಜ ಮತ್ತು ದೇಶಕ್ಕಾಗಿ ಸೇವೆ ಮತ್ತು ಕೊಡುಗೆ ನೀಡಿದಂತಹ ಸಾಧಕಿಯರನ್ನು  ಗುರುತಿಸಿ ಮಹಿಳಾ ದಿನಾಚರಣೆಯಂದು ಪ್ರಕಟವಾದ ಲೇಖನಗಳು ಇತರೆ ಮಹಿಳೆಯರಿಗೆ ಸ್ಫೂರ್ತಿ ಮತ್ತು ಮಾದರಿಯಾಗಿವೆ. ರಂಗಭೂಮಿ,  ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಮೂಲಕ ಮಹಿಳೆಯರಿಗೆ ಪತ್ರಿಕೆ ವಿಶೇಷ ಗೌರವ ನೀಡಿರುವುದು ಶ್ಲಾಘನೀಯ. 
-ರಾಮಲಿಂಗಶೆಟ್ಟಿ, ಅಧ್ಯಕ್ಷ ತಾಲ್ಲೂಕು ಕಸಾಪ

* ಹೆಣ್ಣು ಅಬಲೆಯಲ್ಲ ಎಂಬುದನ್ನು ಹಿಂದಿನಿಂದಲೂ ಸಾಬೀತು ಮಾಡುತ್ತಾ ಬಂದಿದ್ದಾಳೆ. ಆದರೆ ಪ್ರಸ್ತುತ ಪತ್ರಿಕೆಗಳ ಮೂಲಕ ಸಾಧಕರನ್ನು ಪತ್ರಿಕೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ.
-ಮಾಲತಿ, ಶಿಕ್ಷಕಿ

* ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳು ಪಡುತ್ತಿರುವ ಶ್ರಮವನ್ನು ಗುರುತಿಸಿ ಅವರ ಸಾಧನೆಯನ್ನು  ಮಹಿಳಾ ದಿನಾಚರಣೆಯಂದು ‘ಪತ್ರಿಕೆ’ ಪ್್ರೋತ್ಸಾಹಿಸುವ ಕೆಲಸ ಮಾಡಿರುವುದು ಸಂತಸದ ಸಂಗತಿ.
-ಪವಿತ್ರ, ಬಿ.ಇಡಿ ಪ್ರಶಿಕ್ಷಣಾರ್ಥಿ.

* ಜಾಹೀರಾತುಗಳಲ್ಲಿ ಹೆಣ್ಣನ್ನು ಬಳಸಿಕೊಳ್ಳುವ ರೀತಿ ಸರಿಯಿಲ್ಲ. ಹಾಗಾಗಿ ಈ ವಿಷಯದ ಕುರಿತು ಹೋರಾಟ ನಡೆಸಬೇಕು.
– ಎಸ್.ಬಿ.ವಸ್ತ್ರಮಠ,  ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT