ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗೆ ಮುಂದಾದ ಪುರಸಭೆ

ಮನೆ, ಅಂಗಡಿಗಳಿಂದ ನೇರವಾಗಿ ಕಸ ಸಂಗ್ರಹ ಕಾರ್ಯ
Last Updated 9 ಮಾರ್ಚ್ 2017, 6:15 IST
ಅಕ್ಷರ ಗಾತ್ರ
ಭಾಲ್ಕಿ: ಪುರಸಭೆ ವತಿಯಿಂದ ಎಲ್ಲ ವಾರ್ಡ್‌ಗಳಿಗೆ ಕಸ ಸಂಗ್ರಹ ವಾಹನ ಕಳುಹಿಸಿ ಕಸ ಸಂಗ್ರಹ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಉತ್ತಮ ಪರಿಸರ ಕಲ್ಪಿಸಿಕೊಡಲು ಪುರಸಭೆಯ ಆರು ಟಾಟಾ ಏಸ್‌ ವಾಹನಗಳಿಂದ ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸುವಂತೆ ವೇಳಾಪಟ್ಟಿ ರೂಪಿಸಿದ್ದೇವೆ.

ಬೆಳಿಗ್ಗೆ 5:30ರಿಂದ 10:30ರವರೆಗೆ  ಎಲ್ಲ ಬಡಾವಣೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಮಧ್ಯಾಹ್ನ 2ರಿಂದ 5 ಗಂಟೆವರೆಗೆ ವಾಣಿಜ್ಯ ಮಳಿಗೆಗಳಿಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ವಿಶಾಲ ಪೂರಿ.
 
ವಾಹನದ ಧ್ವನಿವರ್ಧಕದಲ್ಲಿ ಬನ್ನಿ ಸ್ವಚ್ಛತೆ ಕಾಪಾಡೋಣ ಬನ್ನಿ, ಸ್ವಚ್ಛ ಬದುಕು, ಸುಂದರ ಬದುಕು ಎಂಬ ಹಾಡನ್ನು ಮೊಳಗಿಸುತ್ತಾ ತೆರಳುತ್ತೇನೆ. ಹಾಡಿನ ಶಬ್ದ ಕಿವಿಗೆ ಬಿದ್ದೊಡನೆ ಮನೆಗಳಲ್ಲಿನ ಕಸವನ್ನು ಡಬ್ಬಿಯಲ್ಲಿ ತೆಗೆದುಕೊಂಡು ರಸ್ತೆ ಪಕ್ಕಕ್ಕೆ ಜನ ಬಂದು ನಿಲ್ಲುತ್ತಾರೆ. ಇದರಿಂದ ಅಲ್ಪ ಸಮಯದಲ್ಲಿಯೇ ಕಸ ಸಂಗ್ರಹ ಮಾಡಲು ಅನುಕೂಲ ಆಗುತ್ತಿದೆ ಎಂದು ವಾಹನ ಚಾಲಕ ಬಸವರಾಜ್‌ ಕುರುಬಖೇಳಗಿ ಹೇಳಿದರು.
 
ಪಟ್ಟಣದಲ್ಲಿ 40 ಸಾವಿರ ಜನಸಂಖ್ಯೆ ಇದೆ. ಪ್ರತಿ ದಿನ 10ರಿಂದ 11 ಟನ್‌ ಕಸ ಸಂಗ್ರಹ ಮಾಡಲಾಗುತ್ತಿದೆ. ಸಂಗ್ರಹಿಸಿದ ಕಸವನ್ನು ಉದಗೀರ್‌ ರಸ್ತೆಯಲ್ಲಿರುವ ತಾಂಡಾ ಸಮೀಪ ಸುರಿದು, ಅದಕ್ಕೆ ಮೈಕ್ರೊಬಿಯಲ್‌ ಕಲ್ಚರ್‌ ಸಿಂಪಡಿಸುತ್ತೇವೆ. ಇದರಿಂದ ಕಸ ದುರ್ವಾಸನೆ ಸೂಸದೆ, ಕೊಳೆತು ಗೊಬ್ಬರವಾಗುತ್ತದೆ. ಪ್ಲಾಸ್ಟಿಕ್‌ ಮತ್ತು ಇತರ ವಸ್ತುಗಳನ್ನು ಬೇರ್ಪಡಿಸಲು ತ್ಯಾಜ್ಯ ವಿಂಗಡನಾ ಯಂತ್ರ ಖರೀದಿಸಲು ಚಿಂತನೆ ನಡೆದಿದೆ ಎಂದು ಪರಿಸರ ಅಧಿಕಾರಿ ರವೀಂದ್ರನಾಥ ಮಾಹಿತಿ ನೀಡಿದರು.
 
ಪಟ್ಟಣದ ಬಹುತೇಕ ಓಣಿಗಳಲ್ಲಿ ಕಸದ ತೊಟ್ಟಿ ಇರಲಿಲ್ಲ. ಕೆಲವು ಕಡೆ ಇದ್ದರೂ ಅವುಗಳಲ್ಲಿನ ಕಸ ಸಕಾಲಕ್ಕೆ ವಿಲೇವಾರಿ ಮಾಡುತ್ತಿರಲಿಲ್ಲ. ಹಾಗಾಗಿ, ಜನರು ಕಸವನ್ನು ರಸ್ತೆ ಮಧ್ಯೆ ಇಲ್ಲವೇ ಚರಂಡಿಗೆ ಎಸೆಯುತ್ತಿದ್ದರು. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿತ್ತು. ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. 
ಕಳೆದ ಕೆಲವು ತಿಂಗಳಿನಿಂದ ಕಸ ಸಂಗ್ರಹ ವಾಹನ  ಮನೆ, ಅಂಗಡಿಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿರುವುದರಿಂದ ಎಲ್ಲೆಡೆ ಸ್ವಚ್ಛತೆ ಕಂಡು ಬರುತ್ತಿದೆ ಎಂದು ಸಾಯಿ ನಗರದ  ರಾಜಲಕ್ಷ್ಮೀ, ಅಂಕಿತಾ ಗೊಬಲವಾಡೆ ಹೇಳಿದರು.
 
ತರಕಾರಿ ಮಾರುಕಟ್ಟೆ ಸೇರಿದಂತೆ ಕೆಲವು ವಾಣಿಜ್ಯ ಮಳಿಗೆಗಳು ಮಾತ್ರ ಇನ್ನು ಕಸದಿಂದ ಸಂಪೂರ್ಣ ಮುಕ್ತಿ ಪಡೆದಿಲ್ಲ. ಪುರಸಭೆಯವರು ಅತ್ತ ವಿಶೇಷ ಗಮನ ಹರಿಸಿ ಕಸ ಸಂಗ್ರಹ ಮಾಡಬೇಕು ಎನ್ನುತ್ತಾರೆ ಪಟ್ಟಣದ ವಾಸಿಗಳು.

* ಕಸ ಸಂಗ್ರಹ ವಾಹನ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸುತ್ತ ಇರುವುದರಿಂದ ಹೆಚ್ಚಿನ ಸ್ಥಳಗಳಲ್ಲಿ ಸ್ವಚ್ಛತೆ ಕಂಡು ಬರುತ್ತಿದೆ.
ಗೌರಿಶಂಕರ ಬಿರಾದರ, ಪಟ್ಟಣ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT