ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೆರೆಗೆ ಭರವಸೆಗಳ ಮಹಾಪೂರ

ಸರ್ಕಾರದ ಯಾವುದೇ ಇಲಾಖೆ ವ್ಯಾಪ್ತಿಗೆ ಒಳಪಡದ ಸರ್ಜಾಪುರದ ಕುಡಿಯುವ ನೀರಿನ ಕೆರೆ
ಅಕ್ಷರ ಗಾತ್ರ
ಲಿಂಗಸುಗೂರು:ತಾಲ್ಲೂಕಿನ ಸರ್ಜಾಪುರ ಗ್ರಾಮಸ್ಥರು ಶತಮಾನಗಳ ಹಿಂದೆಯೇ ನಿರ್ಮಿಸಿಕೊಂಡ ಮಳೆಆಶ್ರಿತ ಕುಡಿಯುವ ನೀರಿನ ಕೆರೆಯ ಒಡಲು ಬರಿದಾಗಿದೆ. ಕೆರೆಯ ಹೂಳು ತಗೆಸುವ ಭರವಸೆಗಳು ಹುಸಿಯಾಗಿವೆ.
 
ಕೊಡ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಮುಂದಿನ ದಿನಗಳ ಹೇಗಿರಲಿವೆ ಎಂಬ ದಿಗಿಲು ಗ್ರಾಮಸ್ಥರಲ್ಲಿ ಮನೆಮಾಡಿದೆ. ಸರ್ಜಾಪುರ ಗ್ರಾಮದಿಂದ ಅನತಿ ದೂರದಲ್ಲಿ ನಿರ್ಮಿಸಿಕೊಂಡ ಕುಡಿಯುವ ನೀರಿನ ಕೆರೆಗೆ ಮಳೆ ನೀರಿನಿಂದ ತುಂಬುತ್ತದೆ. ಏಳು ದಶಕದಲ್ಲಿ ಯಾವುದೇ ಆಡಳಿತ ವ್ಯವಸ್ಥೆ ಮಳೆನೀರು ಶುದ್ಧ ನೀರನ್ನಾಗಿ ಪರಿವರ್ತಿಸಿ ಪೂರೈಸುವ ಗೋಜಿಗೆ ಹೋಗಿಲ್ಲ. ಹೂಳು, ದುರಸ್ತಿ, ನಿರ್ವಹಣೆ ಕೆಲಸವನ್ನು ಗ್ರಾಮಸ್ಥರೇ ಹಣ ಹಾಕಿಕೊಂಡು ಮೇಲುಸ್ತುವಾರಿ ವಹಿಸುತ್ತಿದ್ದಾರೆ. 
 
ಕೆರೆಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಕೆಲ ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವಿವಿಧ ಯೋಜನೆಗಳಡಿ ಹಣ ಖರ್ಚು ಮಾಡಿ ತೇಪೆ ಕೆಲಸ ಮಾಡಿದ್ದು ಬಿಟ್ಟರೆ ಉಳಿದಂತೆ ಹಣಕಾಸಿನ ಖರ್ಚನ್ನು ಗ್ರಾಮಸ್ಥರು ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಹೂಳು ತುಂಬುತ್ತಿರುವ ಕೆರೆಯಲ್ಲಿ ನೀರಿನ ಸಂಗ್ರಹಣೆ ಸಾಮರ್ಥ್ಯ ಕ್ಷೀಣಿಸಿದೆ. ಈ ವರ್ಷ ಕೆರೆ ಒಡಲು ಸಂಪೂರ್ಣ ಬರಿದಾಗಿದೆ.
 
‘ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಏಳು ದಶಕಗಳಲ್ಲಿ ವಿವಿಧ ಯೋಜನೆಯಡಿ ಅಪಾರ ಹಣ ಖರ್ಚು ಮಾಡಲಾಗಿದೆ. ಬಿಡುಗಡೆ­ಯಾದ ಹಣ ಜನಪ್ರತಿನಿಧಿಗಳು, ಗುತ್ತಿಗೆದಾರರಿಗೆ ಕಾಮಧೇನುವಾ ಗಿದೆ. ನಮಗೆ ಶುದ್ಧ ನೀರು ಪೂರೈಕೆ ಆಗಿಲ್ಲ’ ಎಂಬುದು ಗ್ರಾಮಸ್ಥರ ಅಸಮಾಧಾನ. 
 
‘ಸರ್ಜಾಪುರದ ಕುಡಿಯುವ ನೀರಿನ ಕೆರೆ ಬತ್ತಿದ್ದು ಇದೇ ಮೊದಲು ಬಾರಿ. ಗ್ರಾಮಸ್ಥರು ಬತ್ತಿದ ಕೆರೆಯ ಹೂಳು ತೆರವಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಅನುದಾನ ಬಿಡುಗಡೆ ಆಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮೇಶ ನೆಲೋಗಿ ಅಸಮಾಧಾನ ವ್ಯಕ್ತಪಡಿಸಿದರು. 
 
ಈ ಕುರಿತು ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಅಬಿದ ಅಲಿ ಅವರನ್ನು ‘ಪ್ರಜಾವಾಣಿ’ ‘ಕೆರೆ ಸಂಜೀವಿನಿ ಯೋಜನೆ­ಯಡಿ ಹೂಳು ಎತ್ತಲು ₹10 ಲಕ್ಷಕ್ಕೆ ಟೆಂಡರ್‌ ಕರೆಯಲಾಗಿದೆ. ರೈತರು ವಾಹನದಲ್ಲಿ ಹೂಳಿನ ಮಣ್ಣು ಒಯ್ಯಲು ಮುಂದಾದರೆ ಗುತ್ತಿಗೆದಾರರು ಫೋಕ್‌ಲೈನ್‌ ಸಹಾಯದಿಂದ ತುಂಬಿಸುತ್ತಾರೆ’ ಎಂದು ತಿಳಿಸಿದರು.

* ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ. ಅಂತರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ತಮ್ಮ ಗ್ರಾಮದ ಅಳಲು ಕೇಳುವವರಿಲ್ಲ. ಆರ್ಸೆನಿಕ್‌ಯುಕ್ತ ನೀರು ಬಳಸುತ್ತಿದ್ದೇವೆ
ನಿಜಗುಣಿ ಸರ್ಜಾಪುರ, ಭಗೀರಥ ಯುವಕ ಸಂಘದ ಮುಖಂಡ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT