ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ಕ್ಕೆ ಸಾಕ್ಷರತಾ ಪರೀಕ್ಷೆ:1.62 ಲಕ್ಷ ವಯಸ್ಕರು ಭಾಗಿ

ಜಿಲ್ಲೆಯಲ್ಲಿ ಸಾಕ್ಷರ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ ಕರೆ
Last Updated 9 ಮಾರ್ಚ್ 2017, 6:42 IST
ಅಕ್ಷರ ಗಾತ್ರ
ಯಾದಗಿರಿ: ‘ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಹಾಗಾಗಿ, ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ಅಧಿಕಾರಿಗಳು ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ ಕರೆ ನೀಡಿದರು.
 
ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಾಕ್ಷರ ಭಾರತ್ ಯೋಜನೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಮಾರ್ಚ್ 19ರಂದು ನಡೆಯಲಿರುವ ಎನ್‌ಐಒಎಸ್ ಪರೀಕ್ಷೆಯಲ್ಲಿ ಜಿಲ್ಲೆಯ 117 ಗ್ರಾಮ ಪಂಚಾಯಿತಿಗಳ ಲೋಕ ಶಿಕ್ಷಣ ಸಮಿತಿ ವ್ಯಾಪ್ತಿಯ 1,62,317 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೆಲವರು ಯಾವುದೋ ಕಾರಣಕ್ಕೆ ಶಿಕ್ಷಣದಿಂದ ದೂರ ಉಳಿದಿರುತ್ತಾರೆ. ಅಂತಹ ವಯಸ್ಕರನ್ನು ಗುರುತಿಸಿ ಶಿಕ್ಷಣಕ್ಕೆ ಪ್ರೇರೇಪಿಸಬೇಕು. ಶಿಕ್ಷಣ ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಆದರೆ, ಸರಿಯಾದ ಸಮಯಕ್ಕೆ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ಹೇಳಿದರು.
 
‘ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಕೆಂಚೇಗೌಡ ಮಾತನಾಡಿ,‘ಎಲ್ಲಾ 117 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಣದತ್ತ ಪ್ರೇರೇಪಿಸಲು ವಯಸ್ಕರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಪರೀಕ್ಷೆ ಬರೆಸುವ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ತಿಳಿಸಿದರು.
 
ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ 36 ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಸಮಿತಿಗಳಿದ್ದು, 36 ಪರೀಕ್ಷಾ ಕೇಂದ್ರಗಳಲ್ಲಿ 47,900 ವಯಸ್ಕರು ಪರೀಕ್ಷೆ ಬರೆಯಲಿದ್ದಾರೆ. 177 ಉಪ ಪರೀಕ್ಷಾ ಕೇಂದ್ರಗಳಿಗೆ 98 ವೀಕ್ಷಕರು ಹಾಗೂ 531 ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅದರಂತೆ ಸುರಪುರ ತಾಲ್ಲೂಕಿನಲ್ಲಿ 42 ಗ್ರಾ.ಪಂ. ಲೋಕ ಶಿಕ್ಷಣ ಸಮಿತಿಗಳಿದ್ದು, 42 ಪರೀಕ್ಷಾ ಕೇಂದ್ರಗಳಲ್ಲಿ 58,541 ವಯಸ್ಕರು ಪರೀಕ್ಷೆ ಬರೆಯಲಿದ್ದಾರೆ.

158 ಉಪ ಪರೀಕ್ಷಾ ಕೇಂದ್ರಗಳಿಗೆ 86 ವೀಕ್ಷಕರು ಹಾಗೂ 478 ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ 39  ಗ್ರಾ.ಪಂ. ಲೋಕ ಶಿಕ್ಷಣ ಸಮಿತಿಗಳಿದ್ದು, 39 ಪರೀಕ್ಷಾ ಕೇಂದ್ರಗಳಲ್ಲಿ 55,873 ವಯಸ್ಕರು ಪರೀಕ್ಷೆ ಬರೆಯಲಿದ್ದಾರೆ. 166 ಉಪ ಪರೀಕ್ಷಾ ಕೇಂದ್ರಗಳಿಗೆ 80 ವೀಕ್ಷಕರು ಹಾಗೂ 469 ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು ಒಟ್ಟು 1,62, 317 ವಯಸ್ಕರು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
 
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯಲ್ಲಪ್ಪ ಚನ್ನಿಕೇರಿ ಪ್ರಾಸ್ತಾವಿಕ ಮಾತನಾಡಿ,‘ನ್ಯಾಷನಲ್ ಇನ್ಸ್‌ಟ್ಯೂಟ್ ಆಫ್ ಒಪನ್ ಸ್ಕೂಲಿಂಗ್ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಸಹಕರಿಸಬೇಕು’ ಎಂದು ಮನವಿ ಮಾಡಿದರು. 
 
ಅದರಂತೆ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲು ಆಯಾ ತಾಲ್ಲೂಕಿನ ವ್ಯಾಪ್ತಿಯ ಗ್ರಾ.ಪಂ.ಲೋಕ ಶಿಕ್ಷಣ ಸಮಿತಿ ಸದಸ್ಯ ಕಾರ್ಯದರ್ಶಿ(ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ)ರನ್ನು ಪರೀಕ್ಷಾ ಅಧೀಕ್ಷರು ಹಾಗೂ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿಗಳನ್ನು ಪರೀಕ್ಷಾ ವೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರಾಗಿ ಶಾಲಾ ಶಿಕ್ಷಕರನ್ನು ನೇಮಿಸಲು ಶಿಕ್ಷಣ ಇಲಾಖೆಗೆ ಕ್ರಮಕೈಗೊಳ್ಳಲು ತಿಳಿಸಿದೆ ಎಂದರು.  
 
ಪರೀಕ್ಷೆ ಬಳಿಕ ಮಾರ್ಚ್ 20 ರಿಂದ 25ರವರೆಗೆ ಆಯಾ ತಾಲ್ಲೂಕು ಕೇಂದ್ರದಲ್ಲಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಅಥವಾ ಉಪಪ್ರಾಚಾರ್ಯರು ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳನ್ನು ಮೌಲ್ಯಮಾಪನ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುವರು. ಅದರಂತೆ ಪ್ರೌಢ ಅಥವಾ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ ಎಂದರು.
 
ಸಂಸದರ ಆದರ್ಶ ಗ್ರಾಮವಾದ ಯಾದಗಿರಿ ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿ 2071 ವಯಸ್ಕರು ಪರೀಕ್ಷೆ ಬರೆಯಲಿದ್ದು, ಮರುದಿನ ಮಾರ್ಚ್ 20ರಂದು ಮೌಲ್ಯಮಾಪನ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
 
ಪ್ರೇರಕರು, ವೀಕ್ಷಕರಿಗೆ ತರಬೇತಿ:  ಶಹಾಪುರ ತಾಲ್ಲೂಕಿನ 36 ಪರೀಕ್ಷಾ ಕೇಂದ್ರಗಳ ಪ್ರೇರಕರು, ವೀಕ್ಷಕರು ಹಾಗೂ ಉಪ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಪರೀಕ್ಷಾ ಮುಖ್ಯ ಅಧೀಕ್ಷಕರಿಗೆ ಮಾರ್ಚ್ 10ರಂದು ಎರಡು ಅವಧಿಯಲ್ಲಿ ತರಬೇತಿ ನೀಡಲಾಗುವುದು.

ಯಾದಗಿರಿ ತಾಲ್ಲೂಕಿನ 39 ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗೆ ಮಾರ್ಚ್ 11ರಂದು ಯಾದಗಿರಿಯಲ್ಲಿ ತರಬೇತಿ ನೀಡಲಾಗುವುದು ಹಾಗೂ ಸುರಪುರದ 42 ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾರ್ಚ್ 14ರಂದು ತರಬೇತಿ ನೀಡಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದ ಮುಖ್ಯಗುರುಗಳು ಹಾಗೂ ವಿವಿಧ ಸಿಬ್ಬಂದಿಗೆ ಮಾಹಿತಿ ನೀಡಿ ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಸಭೆಯಲ್ಲಿ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT