ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಾಶ್ರಯದಲ್ಲೂ ವೈಚಾರಿಕತೆ ಹೊಂದಿದ್ದ ಕನ್ನಡ ಸಾಹಿತ್ಯ’

Last Updated 9 ಮಾರ್ಚ್ 2017, 6:46 IST
ಅಕ್ಷರ ಗಾತ್ರ
ಗುರುಮಠಕಲ್: ವಿಶ್ವದ ಅತ್ಯಂತ ಚರ್ಚಾ ವಿಷಯವಾದ ವೈಚಾರಿಕತೆ ರಾಜಾಶ್ರಯದ ಸಮಯದಲ್ಲಿಯೇ ಕನ್ನಡ ಸಾಹಿತ್ಯವು ಪ್ರತಿಪಾದಿಸುತ್ತಾ ಬಂದಿದೆ. ರಾಜಾಶ್ರಯದಲ್ಲಿದ್ದ ಪಂಪ ತನ್ನ ರಾಜನನ್ನು ಕಥಾ ನಾಯಕನನ್ನಾಗಿಸಿ ಮಹಾಭಾರತ ಕಾವ್ಯ ಬರೆದಿದ್ದಾನಾದರೂ ಕೊನೆಯಲ್ಲಿ ಕರ್ಣನನ್ನು ಶ್ರೇಷ್ಠ ಎನ್ನುವ ಮೂಲಕ ವೈಚಾರಿಕ ದೃಷ್ಟಿಕೋನವನ್ನು ನೀಡಿದ್ದಾನೆ.

ವೈಚಾರಿಕ ನೆಲೆಗಟ್ಟಿನ ಕಾರ್ಯದಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯ ಪರಂಪರೆ ಬೆಳೆದು ಬಂದಿರುವುದಕ್ಕೆ ಇದು ಉತ್ತಮ ನಿದರ್ಶನ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾ ಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಅಭಿಪ್ರಾಯಪಟ್ಟರು.
 
ಪಟ್ಟಣದ ಹೊರವಲಯದ ಖಾಸಾಮಠದ ಆವರಣದಲ್ಲಿ ಯಾದಗಿರಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ‘ಕನ್ನಡ ನಾಡು - ನುಡಿ ತವಕ ತಲ್ಲಣಗಳು’  ಕುರಿತು ಉಪನ್ಯಾಸ ನೀಡಿದರು.
 
‘ವಚನ ಸಾಹಿತ್ಯದ ಸಮಯದಲ್ಲಿ ಸಮಾಜದ ಶ್ರಮಜೀವಿಗಳನ್ನು ಒಂದು ವೇದಿಕೆಯಲ್ಲಿ ತಂದು, ಅನುಭವದ ಮೂಲಕ ಅನುಭಾವದ ಶಕ್ತಿಯನ್ನು ಹೊರ ಹಾಕಿದ ಬಸವಣ್ಣನವರ ವಚನ ಸಾಹಿತ್ಯವು ಜಾತಿ ತಾರತಮ್ಯವನ್ನು ಕಿತ್ತೆಸೆಯುವ ಸಾಹಸಕ್ಕೆ ಕೈ ಹಾಕುವ ಮೂಲಕ ವೈಚಾರಿಕತೆಯ ಸ್ಪಷ್ಟ ನಿದರ್ಶನವನ್ನು ಜಗತ್ತಿಗೆ 12ನೇ ಶತಮಾನದಲ್ಲಿಯೇ ಕನ್ನಡ ಭಾಷೆ ನೀಡಿದೆ ಎಂದು ಹೇಳಿದರು.
 
ಜಾತಿಯ ಹೆಸರಿನಲ್ಲಿ ಮೇಲ್ಜಾತಿ-ಕೆಳಜಾತಿ ಎಂಬ ತಾರತಮ್ಯ, ಧರ್ಮ ಹಾಗೂ ಮತಗಳ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುವ ಪುರೋಹಿತಶಾಹಿಯ ವಿರುದ್ಧ ವಚನ ಸಾಹಿತ್ಯವು ಯುದ್ಧವನ್ನೇ ಸಾರಿದೆ. ಬಸವಣ್ಣನವರ ವೈಚಾರಿಕ ಕ್ರಾಂತಿಯಿಂದಾಗಿ ಶ್ರಮಜೀವಿಗಳು ಜಾತಿಯ ಹಂಗಿಲ್ಲದೆ ‘ಕಾಯಕವೇ ಕೈಲಾಸ’ ವೈಚಾರಿಕ ತತ್ವದ ಅಡಿ ಮೌಢ್ಯದ ವಿರುದ್ಧ ಹೋರಾಡಿದ ಇತಿಹಾಸ ನಮ್ಮ ಕನ್ನಡ ಭಾಷೆಯದ್ದು ಎಂದು ಅಭಿಪ್ರಾಯಪಟ್ಟರು.
 
ಶತಮಾನಗಳ ಹಿಂದೆಯೇ ಕನ್ನಡ ಭಾಷೆಯು ಜಗತ್ತಿಗೆ ವೈಚಾರಿಕತೆಯನ್ನು ನೀಡಿದೆ. ಆದರೆ ಇಂದು ನಮ್ಮ ಯುವ ಜನರು ಅಂತಹ ವೈಚಾರಿಕತೆಯ ಅರಿವಿಲ್ಲದಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಸಮಾಜದ ಬದಲಾವಣೆಗಾಗಿ ವೈಚಾರಿಕತೆ ನಾಂದಿಯಾಡಿದ ನೆಲದಲ್ಲಿ ವೈಚಾರಿಕತೆ ನಶಿಸುತ್ತಿರವುದ ದುಃಖದ ಸಂಗತಿ’ ಎಂದು ವಿಷಾದ ವ್ಯಕ್ತಪಡಿಸಿದರು.
 
ಒಬ್ಬಂಟಿಗರಾದ ಸಮ್ಮೇಳನಾಧ್ಯಕ್ಷರು: ಸರ್ವಾಧ್ಯಕ್ಷರ ಮೆರವಣಿಗೆ ವೇಳೆ ಮಾರ್ಗಮಧ್ಯ ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಬಾಬುರಾವ್ ಚಿಂಚನಸೂರ ಹಾಗೂ ಇತರರು ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಪೂಜೆ ಸಲ್ಲಿಸಲು ಇಳಿದರು. ಸರ್ವಾಧ್ಯಕ್ಷರಿದ್ದ ಸಾರೋಟ ಕೆಲ ಸಮಯ ಅಲ್ಲಿಯೇ ನಿಂತಿತ್ತು. ಆದರೆ ಮೆರವಣಿಗೆ ಮಾತ್ರ ಇದನ್ನು ಗಮನಿಸದೆ ಮುಂದೆ ಸಾಗಿತು. ಈ ಸಮಯದಲ್ಲಿ ಸುಮಾರು ಹದಿನೈದು ನಿಮಿಷ ಸರ್ವಾಧ್ಯಕ್ಷರು ರಸ್ತೆಯ ಮಧ್ಯೆ ಒಬ್ಬಂಟಿಗರಾಗಿ ನಿಂತಿದ್ದರು.
 
ಭರ್ಜರಿ ಊಟದ ವ್ಯವಸ್ಥೆ:  ಗುರುಮಠಕಲ್ ಭಾಗದ ಪ್ರಮುಖ ಊಟದ ಪದಾರ್ಥಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಸುಮಾರು ಮೂರು ಸಾವಿರ ಜನರು ಊಟ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲಾಗಿತ್ತು. ಗೋದಿ ಹುಗ್ಗಿ, ಜೋಳದ ರೊಟ್ಟಿ, ಬದನೇಕಾಯಿ, ಶೇಂಗಾ ಹಿಂಡಿ, ಮೊಸರು, ಮಜ್ಜಿಗೆ, ಹಪ್ಪಳ, ಸಾಂಬಾರು, ಉಪ್ಪಿನಕಾಯಿ ವ್ಯವಸ್ಥೆಯನ್ನು ಮಾಡಲಾಗಿತ್ತು.
–ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT