ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಭ್ರೂಣಹತ್ಯೆ, ಶಿಶುಮರಣ ಪ್ರತಿಧ್ವನಿ

1995ರಲ್ಲಿ ಭ್ರೂಣಹತ್ಯೆ ನಿಷೇಧ ಕಾಯ್ದೆ ಜಾರಿ:ಇನ್ನೂ ನಿರಂತರ
Last Updated 9 ಮಾರ್ಚ್ 2017, 7:03 IST
ಅಕ್ಷರ ಗಾತ್ರ
ಕೊಪ್ಪಳ:  ಸ್ತ್ರೀ ಭ್ರೂಣಹತ್ಯೆ ಮತ್ತು ಶಿಶು ಮರಣ ಮಾನವ ಸಂಕುಲದ ಗಂಭೀರ ಸಮಸ್ಯೆಗಳು ಎಂದು ಬೆಂಗಳೂರಿನ ನಂದಿನಿ ಹೇಳಿದರು.
 
ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸ್ತ್ರೀ ಭ್ರೂಣಹತ್ಯೆ ಮತ್ತು ಶಿಶು ಮರಣ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
 
1995ರಲ್ಲಿ ಭ್ರೂಣಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡು 22 ವರ್ಷ ಕಳೆದರೂ ಭ್ರೂಣ ಹತ್ಯೆ ನಿರಂತರವಾಗಿವೆ. ಕಾಯ್ದೆ ಕೇವಲ ಕಾಗದದಲ್ಲಿದೆ. ಈ ಬಗ್ಗೆ ನಾವೇ ಅವಲೋಕಿಸಬೇಕು. ಧನಾತ್ಮಕ ವಾತಾವರಣ ನಿರ್ಮಿಸಿ, ಪುರುಷ ಹೃದಯಗಳನ್ನು ಸಂವೇದನೆಗೊಳಿಸುವಂತೆ ಬೆಳೆಸುವ ಮೂಲಕ ಲಿಂಗ ಸಮಾನತೆಯನ್ನು ಪಠ್ಯದಲ್ಲಿ ಸೇರಿಸಬೇಕು. ಮದುವೆಯ ವ್ಯಾಪಾರೀಕರಣ ತಪ್ಪಿಸಬೇಕು. ಈ ಮೂಲಕ ಭ್ರೂಣಹತ್ಯೆ ತಪ್ಪಿಸಬಹುದು ಎಂದರು.
 
ಜೀವ ನೀಡುವ ಹೆಣ್ಣು, ಜೀವದ ಮೂಲ ಜಲ. ಜೀವಿಗಳ ಆಶ್ರಯ ಮಣ್ಣು. ಈ ಮೂರೂ ಮನುಷ್ಯನ ದೌರ್ಜನ್ಯಕ್ಕೆ ಒಳಗಾಗಿವೆ. ಇಂದು ಹೆಣ್ಣನ್ನು ನಿರಾಕರಿಸುವ ಗುಣ ಹೆಚ್ಚುತ್ತಿದೆ. ಆದ್ದರಿಂದಲೇ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳುವ ಮನಸ್ಥಿತಿ ನವ ಉದಾರೀಕರಣ ನೀತಿಗಳು ಅವರ ಸ್ತ್ರೀಯರ ಮೇಲೆ ಹಿಡಿತ ಸಾಧಿಸಲು ಬಳಕೆಯಾಗುತ್ತಿವೆ. ಹೆಣ್ಣನ್ನು ಕೇವಲ ಅಲಂಕಾರಿಕ ವಸ್ತುವಾಗಿ ನೋಡಲಾಗುತ್ತಿದೆ. ಕೊಡುವ ವಸ್ತುವಾಗಿ ಕಾಣಲಾಗುತ್ತಿದೆ ಎಂದು ಹೇಳಿದರು. 
 
ಗಂಗಾವತಿಯ ಡಾ.ಸೋಮಕ್ಕ ಮಾತನಾಡಿ, ಭಾರತ ಕಂಡಿರುವ ಕಳಂಕಗಳಲ್ಲಿ ಸ್ತ್ರೀ ಭ್ರೂಣ ಹತ್ಯೆಯೂ ಒಂದು. ತಂತ್ರಜ್ಞಾನ ಮಾನವನ ಅಧಃಪತನಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಜನಿಸುವ ಸಾವಿರ ಜನನಗಳ ಪೈಕಿ 44 ಶಿಶುಗಳು ಸಾವನ್ನಪ್ಪುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದನ್ನು ತಪ್ಪಿಸಲು ಕಾಂಗರೂ ಮಾದರಿ ಆರೈಕೆಯನ್ನು ದೇಶದಲ್ಲಿ ಪರಿಚಯಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಕೊಪ್ಪಳ ಜಿಲ್ಲೆ ಆಯ್ಕೆಯಾಗಿದೆ ಎಂದರು. ವಿದ್ಯಾಪಾಟೀಲ್‌, ಶರಣಮ್ಮ ಯಲಬುರ್ಗಾ ಇದ್ದರು. ವಿಸ್ತಾರ್‌ ಸಂಸ್ಥೆಯ ಆಶಾ ಹಾಗೂ ಲಕ್ಷ್ಮೀದೇವಿ ನಿರೂಪಿಸಿದರು. 

ಹಸಿರು ಕ್ರಾಂತಿಯ ವೈಫಲ್ಯ: ರಂಜನಾ
ಕೊಪ್ಪಳ:
ಹಸಿರು ಕ್ರಾಂತಿಯ ವಿಫಲತೆ ರೈತರನ್ನು ಆತ್ಮಹತ್ಯೆಯ ಹಾದಿ ಹಿಡಿಸಿದೆ. ಹಸಿರು ಕ್ರಾಂತಿಯ ಜತೆಗೇ ರೈತರ ಆತ್ಮಹತ್ಯೆಗಳೂ ಆರಂಭವಾದವು. ದೇಶದ ಆಹಾರದ ಕಣಜವೆಂದೇ ಖ್ಯಾತಿವೆತ್ತ ಪಂಜಾಬ್‌ನಲ್ಲಿ ಅಗಾಧ ಪ್ರಮಾಣದಲ್ಲಿ ಯುವಜನರು ಮಾದಕ ವಸ್ತುಗಳ ದಾಸರಾಗಿದ್ದಾರೆ. ಅಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಬಂಡವಾಳಷಾಹಿ ವ್ಯವಸ್ಥೆ ತನ್ನ ಹಿಡಿತದಲ್ಲಿಟ್ಟುಕೊಂಡಿದೆ.

ಅಂದರೆ ಬಡತನ ಮತ್ತು ಅನಾರೋಗ್ಯ ಬಂಡವಾಳಷಾಹಿ ವ್ಯವಸ್ಥೆಗೆ ಬೇಕು. ಮಾದಕ ವಸ್ತುಗಳ ದಾಸರಾಗಿರುವವರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೀಗೆ ವೈದ್ಯಕೀಯ ಕ್ಷೇತ್ರದ ಮಾಫಿಯಾ ಅವರ ಚಿಕಿತ್ಸೆಯ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಪಂಜಾಬ್‌ನಲ್ಲಿ ಬಿಕಾನೇರ್‌ ಎಕ್ಸ್‌ಪ್ರೆಸ್‌ ರೈಲು ಕ್ಯಾನ್ಸರ್‌ ಎಕ್ಸ್‌ಪ್ರೆಸ್‌ ಎಂದೇ ಹೆಸರಾಗಿದೆ. ಆ ಪ್ರಮಾಣದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ಬಿಕಾನೇರ್‌ಗೆ ಹೋಗುತ್ತಿದ್ದಾರೆ ಎಂದು ಒಡಿಶಾದ ಹೋರಾಟಗಾರ್ತಿ ರಂಜನಾ ಪಾಡಿ ಕಳವಳ ವ್ಯಕ್ತ ಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT