ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಹಕ್ಕುಗಳ ಸಮಿತಿ ಸದಸ್ಯರ ಪ್ರತಿಭಟನೆ

ಸಾವಿನ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ
Last Updated 9 ಮಾರ್ಚ್ 2017, 7:12 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಗುಡಿಬಂಡೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಓದುತ್ತಿದ್ದ ದಲಿತ ವಿದ್ಯಾರ್ಥಿ ಮುರುಳಿ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. 
 
ನಗರದ ಶನೈಶ್ಚರಸ್ವಾಮಿ ದೇವಾಲಯದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಎಸ್ಪಿ ಎನ್‌.ಚೈತ್ರಾ ಅವರಿಗೆ ಮನವಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ‘ವಿದ್ಯಾರ್ಥಿ ಮುರಳಿ ಸಾವಿನ ಪ್ರಕರಣದಲ್ಲಿ ಹಲವು ಅನುಮಾನಕ್ಕೆ ಎಡೆ ಮಾಡುವ ಅಂಶಗಳು ಗೋಚರಿಸುತ್ತಿವೆ. ಅದೊಂದು ವ್ಯವಸ್ಥಿತ ಕೊಲೆಯಾಗಿದೆ. ಆದರೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಗಳು ನಡೆದಿವೆ’ ಎಂದು ಆರೋಪಿಸಿದರು. 
 
‘ಸವರ್ಣೀಯ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದೆ ವಿದ್ಯಾರ್ಥಿಯ ಸಾವಿಗೆ ಕಾರಣವಾಗಿದೆ. ಆತನ ಪೋಷಕರು ಅದು ಕೊಲೆ ಹೇಳಿಕೆ ನೀಡಿದರೂ ಪೊಲೀಸರು ಅದನ್ನು ಪರಿಗಣಿಸದೇ ಆತ್ಮಹತ್ಯೆ ಎಂದು ನಮೂದಿಸಿದ್ದಾರೆ. ಈ ಪ್ರಕರಣದಿಂದ ದಲಿತರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
 
‘ಈ ಪ್ರಕರಣದ ಕುರಿತು ಯಾವೊಬ್ಬ ಜನಪ್ರತಿನಿಧಿಯೂ ಚಕಾರ ಎತ್ತದೆ ಇರುವುದು ದುರಂತ. ಅದ್ದೂರಿಯಾಗಿ ಅಂಬೇಡ್ಕರ್‌ ಜಯಂತಿ ಆಚರಿಸಿದ ಶಾಸಕ ಸುಧಾಕರ್‌ ಅವರು ಕೂಡ ತುಟಿ ಬಿಚ್ಚದಿರುವುದು ಅವರ ದಲಿತ ಪರ ಕಾಳಜಿ ತೋರಿಸುತ್ತದೆ. ಇವತ್ತು ದಲಿತರನ್ನು ಕೇವಲ ಮತಗಳಿಗಾಗಿ ಬಳಕೆ ಮಾಡಲಾಗುತ್ತಿದೆ. ಅವರ ಏಳಿಗೆಗೆ ಶ್ರಮಿ ಸುವವರು ಇಲ್ಲ’ ಎಂದು ಕಿಡಿಕಾರಿದರು. 
 
‘ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ಮರು ಶವಪರೀಕ್ಷೆ ಮಾಡಬೇಕು. ವಿದ್ಯಾರ್ಥಿಯ ಕುಟುಂಬಕ್ಕೆ ₹ 10 ಲಕ್ಷ  ಪರಿಹಾರ ನೀಡಬೇಕು. ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯ ಪ್ರಕರಣಗಳನ್ನು ಮಟ್ಟ ಹಾಕಬೇಕು’ ಎಂದು ಒತ್ತಾಯಿಸಿದರು. 
 
ದಲಿತ ಹಕ್ಕುಗಳ ಸಮಿತಿ ರಾಜ್ಯ ಘಟಕದ ಸಂಚಾಲಕ ಗೋಪಾಲ ಅರಳಹಳ್ಳಿ, ಮುಖಂಡರಾದ ಕೆ.ನಾಗರಾಜ್, ಆರ್. ಜಯಪ್ಪ, ಮಹೇಶ್, ವಿಶ್ವನಾಥರೆಡ್ಡಿ, ರಘುರಾಮರೆಡ್ಡಿ, ಬಿ.ಎನ್. ಮುನಿಕೃಷ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT