ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸಾಧನೆ ಅರಿವಿಗೆ ಬರುತ್ತಿಲ್ಲ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಕಾನೂನು ಆಯೋಗದ ಅಧ್ಯಕ್ಷ ಎಸ್‌.ಆರ್‌.ನಾಯಕ್‌ ಅಭಿಪ್ರಾಯ
Last Updated 9 ಮಾರ್ಚ್ 2017, 7:14 IST
ಅಕ್ಷರ ಗಾತ್ರ
ಕೋಲಾರ: ‘ಸರ್ಕಾರಗಳ ನಿರ್ಲಕ್ಷ್ಯ ದಿಂದಾಗಿ ಮಹಿಳಾ ಸಬಲೀಕರಣ ಸಾಧ್ಯವಾಗಿಲ್ಲ’ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್‌.ಆರ್‌. ನಾಯಕ್‌ ಅಭಿಪ್ರಾಯಪಟ್ಟರು.
 
ರಾಜ್ಯ ಮಾನವ ಹಕ್ಕು ಜಾಗೃತಿ ಮೂಡಿಸುವವ ಕ್ಷೇಮಾಭಿವೃದ್ಧಿ ಸಂಘವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾ ಚರಣೆ ಹಾಗೂ ‘ಸ್ತ್ರೀ ಸಂವೇದನೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಸಂವಿಧಾನದ ಅವಕಾಶಗಳು ಪರಿಣಾಮಕಾರಿಯಾಗಿ ಬಳಸಿಕೊಂಡರೆ  ಮಹಿಳೆಯರು ಪುರುಷರನ್ನು ಮೀರಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಮಹಿಳಾ ದಿನಾಚರಣೆಯು ಮಹಿಳಾ ಹೋರಾಟ ಮತ್ತು ಚಳವಳಿಗಳನ್ನು ನೆನಪಿಸುತ್ತದೆ. ನಿರಂತರ ಹೋರಾಟದ ಫಲವಾಗಿ ಮಹಿಳೆಯರಿಗೆ ಹಕ್ಕುಗಳು ಪ್ರಾಪ್ತಿಯಾಗಿವೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವಿಜ್ಞಾನ, ರಾಜಕೀಯ, ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಆದರೆ, ಅವರ ಸಾಧನೆಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ. ಈ ಕಾರಣಕ್ಕಾಗಿ ಮಹಿಳೆಯರ ಸಾಧನೆ ಸಮಾಜದ ಅರಿವಿಗೆ ಬರುತ್ತಿಲ್ಲ ಎಂದು ಅವರು ತಿಳಿಸಿದರು.
 
ಮಹಿಳೆಯರು ರಾಜಕೀಯವಾಗಿ ಆಡಳಿತದ ಚುಕ್ಕಾಣಿ ಹಿಡಿದರೆ ಮಹಿಳಾ ಸಮುದಾಯ ಅಭಿವೃದ್ಧಿಯಾಗುತ್ತದೆ. ಆಳುವ ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಆಯೋಗಗಳು, ರಕ್ಷಣಾ ಘಟಕಗಳು ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿವೆ. ಆದರೆ, ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಅನುದಾನ ಮೀಸಲಿಡುತ್ತಿಲ್ಲ. ಇದಕ್ಕೆಲ್ಲಾ ಪುರುಷ ರಾಜಕಾರಣಿಗಳೇ ಕಾರಣ ಎಂದು ದೂರಿದರು.
 
ಅಧಿಕಾರದಲ್ಲಿರುವ ರಾಜಕೀಯ ನಾಯಕರು ಬಜೆಟ್‌ನಲ್ಲಿ ತಮಗೆ ಅನುಕೂಲವಾಗುವಂತೆ ಅನುದಾನ ಘೋಷಿಸಿಕೊಳ್ಳುತ್ತಾರೆ. ಆದರೆ, ಮಹಿಳೆಯರ ಸಬಲೀಕರಣ ಮತ್ತು ಅಭಿವೃದ್ಧಿಗೆ ಅನುದಾನ ಕೊಡಲು ಹಿಂದೇಟು ಹಾಕುತ್ತಾರೆ. ಬಜೆಟ್‌ ಸಿದ್ಧಪಡಿಸುವ ಜವಾಬ್ದಾರಿಯನ್ನು ಮಹಿಳಾ ನಾಯಕಿಯರಿಗೆ ವಹಿಸಬೇಕು ಎಂದು ಸಲಹೆ ನೀಡಿದರು.
 
ಆತಂಕಕಾರಿ ಬೆಳವಣಿಗೆ: ವಿಶ್ವ ಸಂಸ್ಥೆಯು 1980ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಶೇ 48.4ರಷ್ಟು ಮಹಿಳೆಯ ರಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸ್ತ್ರೀಯರು ತುಳಿತಕ್ಕೆ ಒಳಗಾಗಿದ್ದಾರೆ. 18ನೇ ಶತಮಾನದಲ್ಲೇ ಬಸವಣ್ಣನವರು ಮಹಿಳೆಯರ ಸಬಲೀಕರಣಕ್ಕಾಗಿ ಅನುಭವ ಮಂಟಪ ಸ್ಥಾಪಿಸಿದರು. ಆದರೆ, ಈಗ ಅನುಭವ ಮಂಟಪದ ಆಶಯಗಳಿಗೆ ವಿರುದ್ಧವಾಗಿ ಮಹಿಳೆಯರ ಮೇಲೆ ದಬ್ಬಾಳಿಕೆ, ಶೋಷಣೆ, ಭ್ರೂಣ ಹತ್ಯೆನಡೆಸಲಾಗುತ್ತದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಅವರು  ಕಳವಳ ವ್ಯಕ್ತಪಡಿಸಿದರು.
 
ಲಿಂಗ ಭೇದವು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಕುಟುಂಬ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕ್ರೌರ್ಯ ಮತ್ತು ದಬ್ಬಾಳಿಕೆಯಿಂದ ಮಹಿಳೆಯರು ಮೂಲೆಗುಂಪಾಗುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೊಳಿಸಿ ದ್ದರೂ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ ಪ್ರಕರಣಗಳು ತಪ್ಪಿಲ್ಲ ಎಂದು ವಿಷಾದಿಸಿದರು.
 
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್.ಶಂಕರಪ್ಪ ಅವರ ರಚನೆಯ ‘ಸ್ತ್ರೀ ಸಂವೇದನೆಗಳು’ ಪುಸ್ತಕವನ್ನು ಕಾರ್ಯ ಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ನರಸಿಂಹರೆಡ್ಡಿ, ರಾಜ್ಯ ಮಾನವ ಹಕ್ಕು ಜಾಗೃತಿ ಮೂಡಿಸುವವರ ಕ್ಷೇಮಾಭಿ ವೃದ್ಧಿ ಸಂಘದ ಅಧ್ಯಕ್ಷ ರಮೇಶ್‌ ಬಿ.ರೆಡ್ಡಿ, ಕಾರ್ಯಾಧ್ಯಕ್ಷ ಬಿ.ಟಿ.ವಿಶ್ವನಾಥ್, ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಮಾಜಿ ಸದಸ್ಯ ಜಿ.ಕೆ.ಆದರ್ಶ್ ಪಾಲ್ಗೊಂಡಿದ್ದರು.

* ಸಂವಿಧಾನವು ಸಮಾಜದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಕಲ್ಪಿಸಲಾಗಿದೆ. ಆದರೆ, ಮಹಿಳೆಯರು ಆ ಅವಕಾಶ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ.
ಎಸ್‌.ಆರ್‌. ನಾಯಕ್‌, ರಾಜ್ಯ ಕಾನೂನು ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT