ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಪ್ರಶ್ನಿಸಿ, ಪರಿವರ್ತಿಸುವುದೇ ಸಿನಿಮಾ ಆಶಯ

‘ಬರಗೂರು ಸಿನಿ–ದೃಶ್ಯೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ; ಪ್ರೊ. ರಂಗರಾಜ ವನದುರ್ಗ ಅಭಿಪ್ರಾಯ
Last Updated 9 ಮಾರ್ಚ್ 2017, 7:27 IST
ಅಕ್ಷರ ಗಾತ್ರ
ತುಮಕೂರು: ‘ಅಧಿಕಾರಗಳನ್ನು ಪ್ರಶ್ನಿಸುತ್ತಲೇ ಪರಿವರ್ತಿಸುವುದು ಬರಗೂರು ರಾಮಚಂದ್ರಪ್ಪ ಅವರ ಚಿತ್ರಗಳ ಮುಖ್ಯ ಆಶಯ’ ಎಂದು ಪ್ರೊ. ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು.
 
ನಗರದ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿ.ವಿ ಮತ್ತು ಭೂಮಿ ಬಳಗ ಆಯೋಜಿಸಿರುವ ಬರಗೂರು ಸಿನಿ–ದೃಶ್ಯೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. 
 
‘ಧರ್ಮಾಧಿಕಾರ, ಪುರುಷಾಧಿಕಾರಿ, ಜ್ಞಾನಾಧಿಕಾರಿ, ದೈವಾಧಿಕಾರವನ್ನು ಪ್ರಶ್ನಿಸುತ್ತಲೇ ಅವುಗಳನ್ನು ಪರಿವರ್ತಿಸುವ ಅಂಶಗಳನ್ನು ಬರಗೂರರ ಸಿನಿಮಾಗಳಲ್ಲಿ ಕಾಣುತ್ತೇವೆ. ಚಿತ್ರ ಶೀರ್ಷಿಕೆಯೇ ಅವರ ಆಸಕ್ತಿ, ಅಭಿರುಚಿಗಳನ್ನು ಎದ್ದು ತೋರಿಸುತ್ತದೆ’ ಎಂದು ವಿಶ್ಲೇಷಿಸಿದರು.
 
‘ಬುಡಕಟ್ಟು ಸಂಸ್ಕೃತಿಯಿಂದ ಜನಪದ ಸಂಸ್ಕೃತಿ, ಜನಪದದಿಂದ ಆಧುನೀಕ ನಾಗರಿಕತೆಗೆ ಸ್ಥಳಾಂತರವಾಗುತ್ತ ಅಲ್ಲಿನ ತಲ್ಲಣ– ತಾಕಲಾಟಗಳನ್ನು ಸಿನಿಮಾಗಳು ತೋರುತ್ತವೆ. ಬರಗೂರರ ಸಿನಿಮಾಗಳು ಎಂದರೆ ತುಮಕೂರು ಜಿಲ್ಲೆಯ ಸಿನಿಮಾಗಳೇ ಆಗಿವೆ. ಮಧುಗಿರಿ, ದೇವಯರಾಯನದುರ್ಗ ಸೇರಿದಂತೆ ಜಿಲ್ಲೆಯಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಹೇಳಿದರು.
 
‘ವಿಶ್ವವಿದ್ಯಾಲಯಗಳು ಸಮುದಾಯ ಮತ್ತು ಜನಸ್ಪಂದನೆಯತ್ತ ತನ್ನ ಹಾಜರಾತಿಯನ್ನು ತೋರಿದರೆ ಮಾತ್ರ ಜೀವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಂಥ ಕಾರ್ಯಕ್ರಮಗಳು ವಿ.ವಿ. ಆವರಣಗಳಲ್ಲಿ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
 
ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, ‘ಬರಗೂರು ರಾಮಚಂದ್ರಪ್ಪ ಅವರು ಸಿನಿಮಾಗಳಲ್ಲಿ ತನ್ನ ಆಲೋಚನಾ ಕ್ರಮ ಮತ್ತು ಸದಾಶಯಗಳನ್ನು ಅಭಿವ್ಯಕ್ತಿಸುವರು. ಆ ಮೂಲಕ ಒಂದು ಹೊಸ ಚರ್ಚೆಗೆ ಅವಕಾಶ ಮಾಡಿಕೊಡುವರು’ ಎಂದು  ಅಭಿಪ್ರಾಯಪಟ್ಟರು.
 
‘ಅವರ ಸಾಹಿತ್ಯ ಕೃಷಿಯ ಮುಂದುವರಿದ ಭಾಗವಾಗಿ ಸಿನಿಮಾಗಳನ್ನು ನೋಡಬಹುದು. ಬರಗೂರರು ಪರದೆಯ ಮೇಲೂ ಕಾದಂಬರಿ ಮೂಡಿಸಬಲ್ಲರು. ಕನ್ನಡದಲ್ಲಿ ಶಿವರಾಮ ಕಾರಂತರನ್ನು ಹೊರತು ಪಡಿಸಿದರೆ ಬರಗೂರರು ಮಾತ್ರ ಹೀಗೆ ಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಾಹಿತಿ’ ಎಂದು ಪ್ರತಿಪಾದಿಸಿದರು. 
 
‘ರಾಷ್ಟ್ರ ಮಟ್ಟದ ಪ್ರಮುಖ ನಿರ್ದೇಶಕರ ಸಾಲಿನಲ್ಲಿ ಬರಗೂರು ರಾಮಚಂದ್ರಪ್ಪ ಅವರನ್ನು ಕಾಣಬಹುದು. ಇದಕ್ಕೆ ಕಾರಣ ಅವರ ಸಿನಿಮಾ ವಸ್ತಗಳ ಆಯ್ಕೆ. ನಿರ್ಲಕ್ಷಿತ, ಬುಡಕಟ್ಟು, ಜನಪದ ಕಥೆಗಳನ್ನು ಅವರು ಹೊಸ ಕ್ರಮದಲ್ಲಿ ನಿರೂಪಿಸಿದ್ದಾರೆ’ ಎಂದರು. ಇದಕ್ಕೆ ‘ಹಗಲುವೇಷ’ ಸಿನಿಮಾ ಉದಾಹರಿಸಿದರು.
 
‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸಗಳು ಇತ್ತೀಚಿನ ಎರಡು ವರ್ಷಗಳಲ್ಲಿ ನಡೆಯುತ್ತಿವೆ. ಕೇಂದ್ರ ಸೆನ್ಸಾರ್ ಮಂಡಳಿಯು ಸಿನಿಮಾಗಳು ಭಾರತೀಯ ಸಂಪ್ರದಾಯ ಬದ್ಧ ಮೌಲ್ಯಗಳನ್ನು ಪ್ರತಿಪಾದಿಸಬೇಕು ಎಂದು ಒತ್ತಡಗಳನ್ನು ಹೇರುತ್ತಿದೆ. ಈ ಕ್ರಮಗಳು ಬರಗೂರು ಅವರಂಥ ನಿರ್ದೇಶಕರ ಸ್ವಾತಂತ್ರ್ಯವನ್ನು ಕಸಿಯುವ ಯತ್ನ’ ಎಂದು ದೂರಿದರು.
 
ವಿ.ವಿ. ಕುಲಸಚಿವ ಪ್ರೊ.ಎಂ. ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದರು. ಕೌಶಲ ಅಭಿವೃದ್ಧಿ ಮತ್ತು ವೃತ್ತಿ ತರಬೇತಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ, ಭೂಮಿ ಬಳಗದ ಅಧ್ಯಕ್ಷ ಸೋಮಣ್ಣ ವೇದಿಕೆಯಲ್ಲಿ ಇದ್ದರು. 
 
ಕಾರ್ಯಕ್ರಮದ ನಂತರ ‘ಮರಣದಂಡನೆ’ ಚಿತ್ರ ಪ್ರದರ್ಶಿಸಲಾಯಿತು. ‘ಪ್ರಜಾವಾಣಿ’ ಮುಖ್ಯ ಉಪಸಂಪಾದಕ ಚ.ಹ.ರಘುನಾಥ್, ಚಿತ್ರದ ಕುರಿತು ಮಾತನಾಡಿ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಉಪನ್ಯಾಸಕ ಡಾ.ನಾಗಭೂಷಣ ಬಗ್ಗನಡು ಕಾರ್ಯಕ್ರಮ ನಿರ್ವಹಿಸಿದರು. 

* ‘ಬಸವಣ್ಣನವರಿಗೆ ಕಲ್ಯಾಣ ರಾಜ್ಯದ ಕನಸಿತ್ತು. ಅಂಬೇಡ್ಕರ್ ಅವರಿಗೆ ಪ್ರಜಾ ರಾಜ್ಯದ ಕನಸಿತ್ತು. ಗಾಂಧಿ ಅವರಿಗೆ ರಾಮರಾಜ್ಯದ ಕನಸಿತ್ತು. ಅದೇ ರೀತಿ ಬರಗೂರರಿಗೆ –ಬಂಡಾಯ ರಾಜ್ಯದ ಕನಸಿದೆ ಪ್ರೊ.ರಂಗರಾಜ ವನದುರ್ಗ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT