ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವ ರಕ್ಷಣೆಗೆ ಸಾಹಸ ಕಲೆ ಕಲಿತುಕೊಳ್ಳಿ

ಮಹಿಳೆಯರಿಗೆ ವಿವಿಧ ಸ್ಪರ್ಧೆ l ಮಾನವ ಸರಪಳಿ ನಿರ್ಮಾಣ l ಜಾಗೃತಿ ಜಾಥಾ l ಸಾಧಕಿಯರಿಗೆ ಸನ್ಮಾನ
Last Updated 9 ಮಾರ್ಚ್ 2017, 8:02 IST
ಅಕ್ಷರ ಗಾತ್ರ
ಮಂಡ್ಯ: ಹೆಣ್ಣು ಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ವಿವಿಧ ಸಾಹಸ ಕಲೆಗಳನ್ನು ಕಲಿಯಬೇಕು. ಆ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ ಮಾಜಿ ಅಧ್ಯಕ್ಷೆ ವಸುಮತಿ ರಾವ್‌ ಸಲಹೆ ನೀಡಿದರು.
 
ನಗರದ ವಿವೇಕಾನಂದ ರಂಗಮಂದಿರದಲ್ಲಿ ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಬುಧವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಹೆಣ್ಣು ಮಕ್ಕಳು ಆಕರ್ಷಣೀಯವಾಗಿ ಸಿಂಗಾರ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಹೋಗುವ ಕೆಲಸ ಮಾಡಬಾರದು. ಗುಂಪಿನಲ್ಲಿ ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
 
ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್‌ಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿನಿಯರು ಬದುಕು ಮುಗಿಯಿತು ಎಂದು ಆತ್ಮಹತ್ಯೆ ದಾರಿ ತುಳಿಯಬಾರದು. ಪ್ರತಿ ಹೆಜ್ಜೆಗೂ ಸಮಸ್ಯೆ ಹಿಂಬಾಲಿಸುತ್ತಿರುತ್ತದೆ. ಅದನ್ನು ಧೈರ್ಯವಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
 
ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಅನಿಲ್‌ಕುಮಾರ್‌ ಮಾತನಾಡಿ, ಸಮಾಜದಲ್ಲಿನ ಘಾತುಕ ಶಕ್ತಿಗಳಿಂದ ಪಾರಾಗಲು ಮಹಳೆಯರೇ ಸಾಹಸ ಕಲೆಗಳನ್ನು ಕಲಿತುಕೊಳ್ಳಬೇಕು ಎಂದರು.
 
ಪ್ರೊ.ಜ್ಯೋತ್ಸ್ನಾ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕರಾಟೆಪಟು ವಿದ್ಯಾರ್ಥಿನಿ ಭೂಮಿಕಾ ಅವರು ಕೆಲವು ರಕ್ಷಣಾತ್ಮಕ ಕರಾಟೆ ಭಂಗಿಗಳ ಸಾಹಸ ಪ್ರದರ್ಶನ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
 
ಮಹಿಳೆಯ ಸಾಧನೆ ಅನನ್ಯ
ಮಂಡ್ಯ:  ಮಹಿಳೆಯು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡಿದ್ದಾಳೆ ಎಂದು ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಭಾರ ನಿರ್ದೇಶಕ ನಾಗರಾಜು ಹೇಳಿದರು. 
 
ತಾಲ್ಲೂಕಿನ ಕನ್ನಹಟ್ಟಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿವಿ, ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬುಧವಾರ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿ.ಬಿ ಸನತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗೃಹ ವಿಜ್ಞಾನ ವಿಷಯ ತಜ್ಞೆ ಡಾ. ಕಮಲಾಬಾಯಿ ಕೂಡಗಿ, ರೇಷ್ಮೆ ಕೃಷಿ ತಜ್ಞ ಎಚ್.ಎಂ. ಮಹೇಶ್, ಪಿಡಿಒ ಸೌಭಾಗ್ಯ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
 
ಇದಕ್ಕೂ ಮುನ್ನ ಮಹಿಳೆಯರಿಗೆ ಲೆಮನ್ ಮತ್ತು ಸ್ಪೂನ್, ರಂಗೋಲಿ, ಬಕೆಟ್‌ಗೆ ಬಾಲ್ ಎಸೆತ ಸೇರಿದಂತೆ ವಿವಿಧ ಗ್ರಾಮೀಣ ಆಟಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ನೀಡಲಾಯಿತು.
 
ದೌರ್ಜನ್ಯ ನಿಲ್ಲಲಿ
ಮಂಡ್ಯ:  ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಎಲ್ಲರ ಸಹಕಾರದ ಅಗತ್ಯ ಇದೆ ಎಂದು ಶಿವಳ್ಳಿ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಭವಿತಾ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಕೃಷಿ ವಿಜ್ಞಾನಿ ಡಾ. ಸುಬ್ರಮಣಿ ಮಾತನಾಡಿ, ಜೀವನದಲ್ಲಿ ಎಲ್ಲ ಬದಲಾದರೂ ಮನುಷ್ಯನ ಗೊಂದಲ ಬದಲಾಗುವುದಿಲ್ಲ. ಅದಕ್ಕೆ ಉಪದೇಶ ಮುಖ್ಯ ಆಗುತ್ತದೆ. ಹೆಣ್ಣು ಸಹನೆ ಮತ್ತು ತ್ಯಾಗದ ಪ್ರತೀಕ ಆಗಿದ್ದಾಳೆ ಎಂದರು. ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎ.ಬಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು.  ಪಿ.ಎಸ್. ಚಂದ್ರಮ್ಮ ಇದ್ದರು.

ಮಹಿಳೆ ಭೋಗದ ವಸ್ತುವಲ್ಲ
ಶ್ರೀರಂಗಪಟ್ಟಣ: 
ಮಹಿಳೆ ಎಂದರೆ ಭೋಗದ ವಸ್ತು, ಮನೆಯ ಕೆಲಸದಾಳು, ಗಂಡ ಮತ್ತು ಮಕ್ಕಳಿಗಾಗಿ ದುಡಿಯಲು ಇರುವ ಯಂತ್ರ ಎಂದು ಭಾವಿಸದೆ ತಾಯಿ, ಸಹೋದರಿ, ಪತ್ನಿಯಾಗಿ ಗೌರವದಿಂದ ಕಾಣಬೇಕು ಎಂದು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ ಹೇಳಿದರು.

ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುರುಷರಷ್ಟೇ ಮಹಿಳೆಯರೂ ಸಮರ್ಥರು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಮಹಿಳೆಯರು ನಮ್ಮ ನಡುವೆ ಸಾಕಷ್ಟಿದ್ದಾರೆ. ಕ್ರೀಡೆಯಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದವರೂ ಇದ್ದಾರೆ. ಹಾಗಾಗಿ, ಲಿಂಗ ತಾರತಮ್ಯ ಬಿಟ್ಟು ಮಹಿಳೆಯರಿಗೂ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಅವರು ಹೇಳಿದರು.

ಮಹಿಳಾ ಘಟಕದ ಸಂಚಾಲಕಿ ಮುನಿರಾ ಮಾತನಾಡಿದರು. ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಶೀಲಾ ನಂಜುಂಡಯ್ಯ ಮತ್ತು ಯೂರೋಪಿಯನ್ನರ ಸ್ಮಶಾನ ಕಾಯುತ್ತಿರುವ ವಿದ್ಯಾಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಆಡಂಬರದ ವ್ಯಾಮೋಹಕ್ಕೆ ಜೀವನ ಹಾಳು
ಮಂಡ್ಯ: 
ಜಾಹೀರಾತು ಹಾಗೂ ಧಾರಾವಾಹಿಗಳಲ್ಲಿ ಬರುವ ಆಡಂಬರದ ಜೀವನ ವ್ಯಾಮೋಹಕ್ಕೆ ಮನಸೋತು ಹೆಣ್ಣು ಮಕ್ಕಳು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕವಿಯತ್ರಿ ಬಿ.ಎಸ್‌. ಮೀನಾಕ್ಷಿ ಆತಂಕ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ನೆಹರೂ ಯುವ ಕೇಂದ್ರ, ವಿಬ್‌ಸಿಟಿ, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್, ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ವತಿಯಿಂದ ‘ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ’ ಅಂಗವಾಗಿ ಬುಧವಾರ ನಡೆದ ‘ಮಂಡ್ಯ ಜಿಲ್ಲಾ ಸಾಂಸ್ಕೃತಿಕ ಹಬ್ಬ’ ಉದ್ಘಾಟಿಸಿ ಅವರು ಮಾತನಾಡಿದರು.

ಮರ್ಯಾದಾ ಹತ್ಯೆ, ಹೆಣ್ಣಿನ ಮೇಲೆ ವಿವಿಧ ಶೋಷಣೆಗಳು ಹೆಚ್ಚುತ್ತಲೇ ಇವೆ. ಇದರ ವಿರುದ್ಧ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು. ವಿಬ್‌ಸಿಟಿ ನಿರ್ದೇಶಕ ಕೆ.ಎಸ್. ಬಸವರಾಜು, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ, ವಿಶ್ರಾಂತ ಪ್ರಾಂಶುಪಾಲ ಅರ್ಜುನಪುರಿ ಅಪ್ಪಾಜಿಗೌಡ ಮತ್ತಿತರರು ಉಪಸ್ಥಿತರಿದ್ದರು.

* ಶಿಕ್ಷಣ ಕಲಿತ ಹೆಣ್ಣೊಂದು ಮನೆಯಲ್ಲಿದ್ದರೆ, ಆ ಮನೆ ವಿದ್ಯಾವಂತರ ಬೀಡಾಗುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಪ್ರಸ್ತುತದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತದೆ. ಹೆಣ್ಣಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು
ನಾಗರಾಜು, ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಭಾರ ನಿರ್ದೇಶಕ

ದೌರ್ಜನ್ಯ ಹತ್ತಿಕ್ಕಲು ಸಂಘಟಿತರಾಗಿ
ಮದ್ದೂರು: ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳನ್ನು ಹತ್ತಿಕ್ಕಲು ಸಂಘಟಿತರಾಗಬೇಕೆಂದು  ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್.ಪಿ.ಗೌಡ ಹೇಳಿದರು.

ತಾಲ್ಲೂಕು ಕಾನೂನು ಸೇವಗಳ ಸಮಿತಿ, ವಕೀಲರ ಸಂಘ, ಅಬಕಾರಿ ಇಲಾಖೆ ಸಹಯೋಗದಲ್ಲಿ ಬುಧವಾರ ಇಲ್ಲಿನ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಂಶುಪಾಲ ಎಚ್. ಕೃಷ್ಣೇಗೌಡ ಅಧ್ಯಕ್ಷತೆ  ವಹಿಸಿದ್ದರು. ಬಿ.ಎಸ್.ದಿವ್ಯಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವರದರಾಜು ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.

ಪುರಸಭೆ ಪರಿಸರ ಎಂಜಿನಿಯರ್‌ ಎಸ್.ಮೀನಾಕ್ಷಿ ಪುರಸಭೆ, ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ, ಪ್ರೊ.ಎಸ್.ಪಿ. ಪ್ರಸಾದ್, ಸಹಾಯಕ ಸರ್ಕಾರಿ ಅಭಿಯೋಜಕಿ ಜಿ.ವೆಂಕಟಲಕ್ಷ್ಮಿ, ವಕೀಲರಾದ ಮಹೇಶ್, ಎಚ್.ಪಿ.ನಾಗೇಶ್ ಇದ್ದರು.

ಆರೋಗ್ಯದ ಕಾಳಜಿ ವಹಿಸಿ 
ಮದ್ದೂರು:
  ಮಹಿಳೆಯರು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಪೃಥ್ವಿ ಪ್ರಿಯದರ್ಶಿನಿ ಸಲಹೆ ನೀಡಿದರು. 

ಪಟ್ಟಣದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ವತಿಯಿಂದ ಬುಧವಾರ ನಡೆದ ಅಂತರರಾಷ್ಟ್ರೀಯ  ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಲಲನಾ ಅಪ್ಪಾಜಿಗೌಡ, ಭಾಗ್ಯಾ, ಮಂಗಳಾ ಸಿದ್ದರಾಜು, ಕನ್ನಗಿ ಶ್ರೀನಿವಾಸ್‌, ರಶ್ಮಿ, ಸೌಮ್ಯಾ, ಪದ್ಮಶ್ರೀ, ಹರ್ಷಿತಾ, ಧನಲಕ್ಷ್ಮಿ, ಪದ್ಮಾ,  ಜಯಶ್ರೀ, ವಿಜಯಾ ಮಲ್ಲಕಾರ್ಜುನ, ಕಲಾವತಿ, ಜಯಾ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT