ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾರ್ಪಣೆಗೆ ಭರದ ಸಿದ್ಧತೆ

ಮಸಗೋಡು ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೊದ್ಧಾರ ಕಾರ್ಯ ಚುರುಕು
Last Updated 9 ಮಾರ್ಚ್ 2017, 8:36 IST
ಅಕ್ಷರ ಗಾತ್ರ
ಸೋಮವಾರಪೇಟೆ:  ಇಲ್ಲಿಗೆ ಸಮೀಪದ ಮಸಗೋಡು ಗ್ರಾಮದಲ್ಲಿ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಬಿರುಸಿನಿಂದ ನಡೆದಿದ್ದು, ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ. 
 
ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯ ದುಃಸ್ಥಿತಿಯಲ್ಲಿತ್ತು. ಅದನ್ನು ತೆರವುಗೊಳಿಸಿ ನೂತನ ದೇವಾಲಯವನ್ನು ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

ವೀರಶೈವ ದೊರೆಗಳು ಕೊಡಗು ಜಿಲ್ಲೆಯನ್ನಾಳಿದ ಇತಿಹಾಸವನ್ನು ಹೇಳುವ ಕೊಡಗು ಇತಿಹಾಸದಲ್ಲಿ ಬಾಳೆಹೊನ್ನೂರಿನ ಶಾಖಾ ಮಠವೊಂದು ಈ ಮಸಗೋಡು ಗ್ರಾಮದಲ್ಲಿತ್ತೆಂದು ಗೆಜೇಟಿಯರ್‌ನಲ್ಲಿ ತಿಳಿದು ಬರುತ್ತದೆ. ಇದನ್ನು ಪುಷ್ಠೀಕರಿಸಲು ಗ್ರಾಮದಲ್ಲಿ 19 ಮಾಸ್ತಿಕಲ್ಲು ಹಾಗೂ 21 ವೀರಗಲ್ಲುಗಳು ಇದ್ದವು. ಅವುಗಳಲ್ಲಿ ಸುಮಾರು 10ಕ್ಕಿಂತ ಹೆಚ್ಚಿನವುಗಳನ್ನು ಗ್ರಾಮಸ್ಥರು ಸಂರಕ್ಷಿಸಿದ್ದು, ಇವುಗಳನ್ನು ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಕಾಣಬಹುದಾಗಿದೆ.
 
ದೇವಾಲಯವನ್ನು ಅಂದು ಹುಲ್ಲಿನ ಮೇಲು ಹಾಸಿನಿಂದ, ಮಣ್ಣಿನ ಗೋಡೆಗಳಿಂದ ನಿರ್ಮಿಸಲಾಗಿತ್ತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಅದು ಶಿಥಿಲಾವಸ್ಥೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು ಸೇರಿಕೊಂಡು ಹೆಂಚಿನ ಮಾಡನ್ನು ಹಾಕುವ ಮೂಲಕ ಜೀರ್ಣೋದ್ಧಾರ ಮಾಡಲಾಗಿತ್ತೆಂದು ತಿಳಿದು ಬಂದಿದೆ. 
 
2014ರ ಮಾರ್ಚ್‌ ತಿಂಗಳಲ್ಲಿ ಬಂಟ್ವಾಳದ ಸುಬ್ರಮಣ್ಯ ಭಟ್ ತಂತ್ರಿಗಳು ನಡೆಸಿಕೊಟ್ಟ ತಾಂಬೂಲ ಪ್ರಶ್ನೆಯಿಂದ ತಿಳಿದು ಬಂದ ಪ್ರಕಾರದಂತೆ ಗ್ರಾಮಸ್ಥರು ಹಾಗೂ ಇತರೆ ದಾನಿಗಳ ಸಹಕಾರದಿಂದ ಸುಮಾರು ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದ್ದು, ಶೇ. 80ರಷ್ಟು ಕಾಮಗಾರಿ ಮುಗಿದಿದ್ದು, ದೇವಾಲಯವನ್ನು ಮೇ ತಿಂಗಳಿನಲ್ಲಿ ಉದ್ಘಾಟಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ.
 
ದೇವಾಲಯ ಸಮಿತಿ ಅಧ್ಯಕ್ಷರಾದ ಎಂ.ಬಿ. ಮೂರ್ತಿ ಮಾತನಾಡಿ, ದೇವಾಲಯದಲ್ಲಿ ಮೊದಲಿದ್ದ ವಿಗ್ರಹಗಳು ವಿಘ್ನಗೊಂಡಿರುವ ಹಿನ್ನೆಲೆಯಲ್ಲಿ ನೂತನವಾಗಿ ಶಿಲಾ ವಿಗ್ರಹಗಳನ್ನು ನಿರ್ಮಿಸಿ, ಪ್ರತಿಷ್ಠಾಪಿಸುವ ಕಾರ್ಯಗಳು ನಡೆಯಬೇಕಿದೆ.  
 
ಮೇ 14, 15ರಂದು ಹಾಸನದ ವೇದ ಘನಪಾಟಿಗಳಾದ ಕೃಷ್ಣಮೂರ್ತಿಯವರ ಪೌರೋಹಿತ್ಯದಲ್ಲಿ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ದೇವಾಲಯದ ಲೋಕಾರ್ಪಣೆ ಕಾರ್ಯ ನಡೆಯಲಿರುವುದರಿಂದ ಕಾಮಗಾರಿ ಸಂಪೂರ್ಣವಾಗಬೇಕಾಗಿದೆ. ಇದಕ್ಕಾಗಿ ಕಾಲಾವಕಾಶ ಕಡಿಮೆ ಇರುವ ನಿಟ್ಟಿನಲ್ಲಿ ಆರ್ಥಿಕ ಸಹಾಯಕ್ಕಾಗಿ ದಾನಿಗಳ ಮೊರೆಹೋಗುವ ಅನಿವಾರ್ಯತೆ ಬಂದೊದಗಿದೆ.

ಇಂತಹ ಮಹತ್ಕಾರ್ಯಕ್ಕೆ ದಾನ ಮಾಡಲು ಇಚ್ಛಿಸುವವರು ಕಾವೇರಿ ಗ್ರಾಮೀಣ ಬ್ಯಾಂಕ್, ಸೋಮವಾರಪೇಟೆ ಶಾಖೆಯಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಖಾತೆ ಸಂಖ್ಯೆ 13293023357ಗೆ (ಐಎಫ್ಎಸ್ ಕೋಡ್; ಎಸ್‌ಬಿಎಂವೈಒಆರ್ಆರ್‌ಸಿಕೆಜಿಬಿ) ಜಮೆ ಮಾಡಬಹುದೆಂದು  ಮನವಿ ಮಾಡಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT