ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಾರಥಿ ಬದಲಾವಣೆಯಿಂದ ಸಂಚಲನ

ಭಾರತೀಶ್‌ ಆಯ್ಕೆಗೆ ಆರ್‌ಎಸ್‌ಎಸ್‌ ನಾಯಕರ ಒಲವು; ಒಕ್ಕಲಿಗ ನಾಯಕನಿಗೆ ಅಧ್ಯಕ್ಷ ಸ್ಥಾನ
Last Updated 9 ಮಾರ್ಚ್ 2017, 8:44 IST
ಅಕ್ಷರ ಗಾತ್ರ
ಮಡಿಕೇರಿ:  ಬಿಜೆಪಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಮನು ಮುತ್ತಪ್ಪ ಅವರನ್ನು ದಿಢೀರ್‌ ಬದಲಾವಣೆ ಮಾಡಲು ವರಿಷ್ಠರು ತೀರ್ಮಾನಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ.
 
ಆರು ತಿಂಗಳ ಹಿಂದೆಯಷ್ಟೇ ಅಧ್ಯಕ್ಷ ಗಾದಿಗೇರಿದ್ದ ಮನು ಮುತ್ತಪ್ಪ ಅವಧಿಗೂ ಮುನ್ನವೇ ತಮ್ಮ ಸ್ಥಾನ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮುತ್ತಪ್ಪ ಅವರಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಬೆಂಬಲವಿದ್ದರೂ ಫಲ ನೀಡಲಿಲ್ಲ. 
 
ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ನಡುವಿನ ಮುನಿಸು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಗೆ ಕಾರಣವಾಯಿತೇ ಎಂಬ ವಿಶ್ಲೇಷಣೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಆದರೆ, ಕೊಡಗು ಜಿಲ್ಲಾ ಅಧ್ಯಕ್ಷರ ಬದಲಾವಣೆಗೆ ಕಾರಣವಾಗಿದ್ದು, ರಾಜ್ಯ ನಾಯಕರ ಭಿನ್ನಮತ ಮಾತ್ರವಲ್ಲ; ಬದಲಾಗಿ ಜಿಲ್ಲಾ ನಾಯಕರಲ್ಲಿದ್ದ ‘ಅಸಮಾಧಾನ’ವೂ ಪ್ರಬಲ ಕಾರಣವಾಗಿದೆ. ಜತೆಗೆ, ಅಧ್ಯಕ್ಷರ ಬದಲಾವಣೆಗೆ ಸಂಘ ಪರಿವಾರದ ಬೆಂಬಲವೂ ಇತ್ತು ಎನ್ನಲಾಗಿದೆ.
 
ಯಡಿಯೂರಪ್ಪ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಲಾಬಿ ಪ್ರಾರಂಭಗೊಂಡಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗಿದ್ದ ಮನು ಮುತ್ತಪ್ಪ ಹಾಗೂ ಕಾಳಪ್ಪ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ವೇಳೆ ಜಿಲ್ಲೆಯ ಶಾಸಕರೊಬ್ಬರ ಪ್ರಭಾವ ಬಳಸಿ ಅಚ್ಚರಿ ರೀತಿಯಲ್ಲಿ ಮನು ಮುತ್ತಪ್ಪ ಅಧ್ಯಕ್ಷ ಗಾದಿಗೆ ಏರಿದ್ದರು.

ಇದು ಸಂಘ ಪರಿವಾರದ ನಾಯಕರ ಕಣ್ಣು  ಕೆಂಪಾಗಿಸಿತ್ತು. ಜಿಲ್ಲೆಯಲ್ಲಿನ ಒಂದು ಬಣ ಅಸಮಾಧಾನ ವ್ಯಕ್ತಪಡಿಸಿ, ವರಿಷ್ಠರಿಗೆ ಮನವಿ ಸಹ ಮಾಡಿತ್ತು. ಇದೀಗ ರಾಜ್ಯ ನಾಯಕರಲ್ಲಿ ಉಂಟಾದ ಭಿನ್ನಮತದ ವೇಳೆ ಕೊಡಗು ಅಧ್ಯಕ್ಷರ ಬದಲಾವಣೆಗೂ ಅಸ್ತು ಎನ್ನಲಾಗಿದೆ. ಮನು ಜಿಲ್ಲಾ ಅಧ್ಯಕ್ಷರಾದ ಬಳಿಕ ರವಿ ಕುಶಾಲಪ್ಪ ಅವರಿಗೆ ಪ್ರಧಾನ ಕಾರ್ಯದರ್ಶಿ     ಹುದ್ದೆಗೆ ಆಹ್ವಾನಿಸಲಾಗಿತ್ತು. ಅವರು ಇದನ್ನು ತಿರಸ್ಕರಿಸಿ, ದೂರವೇ ಉಳಿದಿದ್ದರು.
 
ಒಕ್ಕಲಿಗ ನಾಯಕನಿಗೆ ಮನ್ನಣೆ: ಮನು ಮುತ್ತಪ್ಪ ಅವರ ಜಾಗಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್‌ ಅವರ ನೇಮಕಕ್ಕೆ ಒಲವು ತೋರಿರುವುದು ಅಚ್ಚರಿ ಬೆಳವಣಿಗೆಗೆ ಕಾರಣವಾಗಿದೆ. ಸೋಮವಾರಪೇಟೆ ಭಾಗದಲ್ಲಿ ಪ್ರಾಬಲ್ಯವಿರುವ ಒಕ್ಕಲಿಗ ಸಮುದಾಯಕ್ಕೆ ಭಾರತೀಶ್‌ ಸೇರಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ಗೆ ಹಾದಿಗೆ ಈ ಆಯ್ಕೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ  ಸಮುದಾಯದ ಮತದಾರರು ಹರಿದು ಹಂಚಿಹೋಗಿದ್ದರು. ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಲಭಿಸಿರುವುದು ಮತದಾರರ ಸೆಳೆಯಲು ಅನುಕೂಲವಾದರೂ ಅಚ್ಚರಿಯಿಲ್ಲ! ಈ ಬದಲಾವಣೆ ಬೋಪಯ್ಯ ಅವರಿಗೆ ಸ್ವಲ್ಪ ಹಿನ್ನಡೆ ಆಗಬಹುದು ಎಂಬ ಚರ್ಚೆ ಜಿಲ್ಲೆಯಲ್ಲಿದೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಬದಲಾವಣೆಗೆ ವಿರೋಧ ವ್ಯಕ್ತವಾಯಿತು. ಕೊನೆಗೆ ಸಂಘ ಪರಿವಾರದ ನಾಯಕರೇ ಅಂತಿಮ ಮುದ್ರೆ ಒತ್ತಿದ್ದ ಕಾರಣ ಯಾರೂ ಅಪಸ್ವರ ತೆಗೆಯಲಿಲ್ಲ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ. 
 
ಸುಂಟಿಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾರತೀಶ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಅನುಭವ ಅವರ ಬೆನ್ನಿಗಿದೆ. ಅನುಭವದ ಆಧಾರದಲ್ಲಿ ಭಾರತೀಶ್‌ ಅವರನ್ನು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಪ್ರತಾಪಸಿಂಹ ರಾಜ್ಯ ಸಮಿತಿಗೆ ನೇಮಕ ಮಾಡಿಕೊಳ್ಳಲು ಒಲವು ತೋರಿದ್ದರು. ಆದರೆ, ಜಿಲ್ಲಾ ಅಧ್ಯಕ್ಷ ಸ್ಥಾನ ಇದೀಗ ಹುಡುಕಿಕೊಂಡು ಬಂದಿದೆ.
 
‘ವರಿಷ್ಠರು ಗುರುವಾರ ಅಧಿಕೃತವಾಗಿ ಆಯ್ಕೆಯ ಪತ್ರ ಕಳುಹಿಸಲಿದ್ದಾರೆ. ಚಿಕ್ಕಂದಿನಿಂದಲೂ ಪಕ್ಷದ ಸಕ್ರಿಯ ಕಾರ್ಯಕರ್ತ. ನನ್ನ ಇತಿಮಿತಿಯೊಳಗೆ ಕೆಲಸ ಮಾಡುತ್ತೇನೆ. ಪಕ್ಷದ ಜವಾಬ್ದಾರಿ ನಿರ್ವಹಿಸಬೇಕೆಂಬ ಅಪೇಕ್ಷೆಯಿತ್ತು. ಪಕ್ಷವೂ ಆ ನಿಟ್ಟಿನಲ್ಲಿ ಗುರುತಿಸಿರುವುದು ಸಂತೋಷವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆ ಹಿರಿಯರ ಅಭಿಪ್ರಾಯ ಕಡೆಗಣಿಸಿ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂಬ ಅಪಸ್ವರವಿತ್ತು.

ಪಕ್ಷದಲ್ಲಿರುವ ಈ ಎಲ್ಲ ಸಣ್ಣಪುಟ್ಟ ವ್ಯತ್ಯಾಸಗಳನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ. ಪಕ್ಷಕ್ಕೆ ಹಾನಿಯುಂಟು ಮಾಡುವ ಅಪಸ್ವರಗಳೇನೂ ಅಲ್ಲ. ಎಲ್ಲರೂ ಒಂದೇ ಮನೆಯ ಮಕ್ಕಳು. ಬೇರೆ ಬೇರೆ ಪಕ್ಷಗಳಲ್ಲಿದ್ದ ನಾಯಕರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು’ ಎಂದು ನಿಯೋಜಿತ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

* ಹಿರಿಯರ ಅಭಿಪ್ರಾಯ ಕಡೆಗಣಿಸಿ ಹಿಂದಿನ ಅಧ್ಯಕ್ಷರ ಆಯ್ಕೆ ನಡೆದಿದೆ ಎಂಬ ಅಪಸ್ವರಗಳು ಕೇಳಿಬಂದಿದ್ದು, ಪಕ್ಷದ ಸಣ್ಣಪುಟ್ಟ ವ್ಯತ್ಯಾಸಗಳನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ
ಬಿ.ಬಿ. ಭಾರತೀಶ್‌, ನಿಯೋಜಿತ ಕೊಡಗು ಜಿಲ್ಲಾ ಅಧ್ಯಕ್ಷ, ಬಿಜೆಪಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT