ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ವಾಹನ ನೀರು ಕಟ್ಟಡ ನಿರ್ಮಾಣಕ್ಕೆ ಬಳಕೆ

ನಗರದೆಲ್ಲೆಡೆ ಒಂದು ವಾರದಿಂದ ನೀರಿಗೆ ಹಾಹಾಕಾರ; ಜಿಪಿಎಸ್ ಬಂದರೂ ಪ್ರಯೋಜನವಾಗಿಲ್ಲ
Last Updated 9 ಮಾರ್ಚ್ 2017, 9:04 IST
ಅಕ್ಷರ ಗಾತ್ರ
ಮೈಸೂರು:  ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ವಾಹನದಿಂದ ಕಟ್ಟಡ ಕಾಮಗಾರಿಗೆ ನೀರು ಪೂರೈಕೆ ಮಾಡುತ್ತಿರುವ ಕುರಿತು ದೂರು ಕೇಳಿಬಂದಿದೆ.
 
ನಜರಬಾದ್‌ನ ಇಂದಿರಾನಗರದ 7ನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಸಂಪಿಗೆ ಪಾಲಿಕೆ ವಾಹನ ಸಂಖ್ಯೆ ಕೆ.ಎ. 46–321ನಿಂದ ನೀರು ತುಂಬಿಸಲಾಗಿದೆ. ಜತೆಗೆ, ಈ ಕುರಿತು ಚಾಲಕನನ್ನು ಪ್ರಶ್ನಿಸಿದಾಗ ಆತ ವಾಹನದೊಂದಿಗೆ ಕೂಡಲೇ ಪರಾರಿಯಾದ ಎಂದು ಚಂದ್ರಶೇಖರ್ ಎಂಬುವವರು ದೂರಿದ್ದಾರೆ.
 
ನಿಯಮ ಏನು?: ಬಡಾವಣೆಯ ಎಂಜಿನಿಯರ್ ನೀರಿನ ಕೊರತೆ ಇದೆ ಎಂದು ಶಿಫಾರಸು ಮಾಡಿದ ಬಳಿಕವಷ್ಟೇ ಕೇಂದ್ರದಿಂದ ನೀರು ನೀಡಬೇಕು. ಗೃಹಬಳಕೆಗೆ ಮಾತ್ರ ಸಾರ್ವಜನಿಕರು 8 ಸಾವಿರ ಲೀಟರ್ ಟ್ಯಾಂಕರ್‌ ನೀರಿಗೆ ₹ 200ನ್ನು ಪಾವತಿಸಿ ತಮ್ಮದೇ ವಾಹನದಿಂದ ನೇರವಾಗಿ ಕೇಂದ್ರದಿಂದ ತೆಗೆದುಕೊಂಡು ಹೋಗಬಹುದು. ಯಾವುದೇ ಕಾರಣಕ್ಕೂ ವಾಣಿಜ್ಯ ಬಳಕೆಗೆ ನೀರನ್ನು ನೀಡುವಂತಿಲ್ಲ. ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ನೀರು ನೀಡಬಹುದು. 

ಜಿಪಿಎಸ್ ಬಂದರೂ ಪ್ರಯೋಜನವಿಲ್ಲ: ಇಂತಹ ಅಕ್ರಮಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ಕೇಂದ್ರದಲ್ಲಿರುವ 22 ವಾಹನಗಳಿಗೂ ಹಳದಿ ಬಣ್ಣ ಹಚ್ಚಿ, ವಾಹನದ ಮೇಲ್ಭಾಗ ದಪ್ಪ ಅಕ್ಷರಗಳಲ್ಲಿ ‘ಮೈಸೂರು ಮಹಾನಗರ ಪಾಲಿಕೆ ಉಚಿತ ನೀರು ಸರಬರಾಜು’ ಎಂದು ಬರೆಸಲಾಯಿತು. ಆದರೂ, ಅಕ್ರಮಕ್ಕೆ ಕಡಿವಾಣ ಬೀಳಲಿಲ್ಲ. ನಂತರ, ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಯಿತು. 
 
ಇದರ ಮೂಲಕ ವಾಹನಗಳು ಎಲ್ಲಿ, ಹೇಗೆ, ಎಷ್ಟೊತ್ತಿಗೆ ಹೋಗುತ್ತಿವೆ ಎಂಬ ವಿವರ ಕುಳಿತ ಕಡೆಯೇ ಸಿಗುತ್ತದೆ. ಈ ಭಯದಿಂದಲಾದರೂ ಅಕ್ರಮಗಳಿಗೆ ಕಡಿಮೆಯಾಗಲಿ ಎಂಬುದು ಉದ್ದೇಶವಾಗಿತ್ತು. ಆದರೂ, ಎಗ್ಗಿಲ್ಲದೇ ನಿಯಮ ಮೀರಿ ನೀರು ಸರಬರಾಜು ಮಾಡುತ್ತಿರುವುದು ಅಧಿಕಾರಿಗಳಿಗೆ ಸೋಜಿಗ ತಂದಿದೆ.
 
ನೀರಿಗೆ ಕಾವಲಿಲ್ಲ: ಕೇಂದ್ರದಿಂದ ಸಾರ್ವಜನಿಕರು ತಮ್ಮದೇ ವಾಹನದಲ್ಲಿ ಹಣ ಪಾವತಿಸಿ ನೀರು ತೆಗೆದುಕೊಂಡು ಹೋಗುವ ವ್ಯವಸ್ಥೆಯಲ್ಲೂ ಅಕ್ರಮಗಳು ನಡೆಯುತ್ತಿವೆ. ಕೆಲವರು ತಪ್ಪು ಮಾಹಿತಿ ನೀಡಿ ನೀರು ಪಡೆಯುತ್ತಾರೆ. ಮನೆಯಲ್ಲಿ ಪೂಜೆ, ಸಮಾರಂಭಗಳು ಇವೆ ಎಂತಲೋ ಅಥವಾ ಮತ್ತಾವುದೋ ಕಾರಣ ನೀಡಿ ನೀರನ್ನು ಪಡೆದು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ಪ್ರಸಂಗಗಳೂ ನಡೆಯುತ್ತಿವೆ. 
 
ಹಣ ಪಾವತಿಸಿ ತಮ್ಮದೇ ವಾಹನದಲ್ಲಿ ನೀರನ್ನು ತೆಗೆದುಕೊಂಡು ಹೋಗುವವರ ಮೇಲೆ ಹದ್ದಿನ ಕಣ್ಣಿಡಬೇಕು. ಪಾಲಿಕೆಯ ಸಿಬ್ಬಂದಿಯೊಬ್ಬರು ನೀರು ಗೃಹಬಳಕೆಗೆ ಉಪಯೋಗವಾಗುತ್ತಿದೆ ಎಂಬುದನ್ನು ದೃಢೀಕರಿಸುವ ವ್ಯವಸ್ಥೆಯಾಗಬೇಕಾಗಿದೆ.

ನಗರದಲ್ಲಿ ನೀರಿಲ್ಲ!
ನಗರದಲ್ಲಿ ಕಳೆದೊಂದು ವಾರದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಶೋಕಪುರಂನ 13ನೇ ಕ್ರಾಸ್‌ನಲ್ಲಿ ಪೈಪು ಒಡೆದಿರುವುದರಿಂದ ಸುತ್ತಮುತ್ತಲ ಪ್ರದೇಶಗಳಿಗೆ ನೀರಿಲ್ಲ. ವಿದ್ಯುತ್ ಸಮಸ್ಯೆ, ಮೋಟಾರ್ ರಿಪೇರಿ ಸೇರಿದಂತೆ ಹಲವು ಕಾರಣಗಳಿಂದ ಇತರೆಡೆ ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ. ಈ ಕುರಿತು ಪಾಲಿಕೆ ಕೌನ್ಸಿಲ್ ಸಭೆಯಲ್ಲೂ ಚರ್ಚೆಯಾಗಿತ್ತು. ಆದರೆ, ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ.

* ಕಟ್ಟಡ ಕಟ್ಟುವುದಕ್ಕೆ ನೀರು ನೀಡುವುದು ಅಕ್ಷಮ್ಯ. ಜಿಪಿಎಸ್ ಮೂಲಕ ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು
ಎಲ್.ಎನ್.ಆನಂದ್ , ಕಾರ್ಯನಿರ್ವಾಹಕ ಎಂಜಿನಿಯರ್ವಾ, ಣಿವಿಲಾಸ ನೀರು ಸರಬರಾಜು ಕೇಂದ್ರ

* ಇಂದಿರಾನಗರದಲ್ಲಿ ಪಾಲಿಕೆ ವಾಹನವು ನೀರು ಸರಬರಾಜು ಮಾಡುತ್ತಿರುವ ಕುರಿತು ದೂರು ಬಂದಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ
ಜಿ.ಜಗದೀಶ್,  ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT