ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಭೋಜನವಿದು!

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಈ ತಾರಾ ಪಟ್ಟ, ಜನಪ್ರಿಯತೆ, ಹಣ ಎಲ್ಲವೂ ಅಭಿಮಾನಿಗಳು ನೀಡಿದ್ದು. ಅವರ ಪ್ರೀತಿ ಎಲ್ಲಕ್ಕಿಂತ ಮಿಗಿಲು. ಅವರಿಗೆ ಮನರಂಜನೆ ನೀಡುವುದಷ್ಟೇ ನಮ್ಮ ಕೆಲಸ’

–ಸಾಮಾನ್ಯವಾಗಿ ಎಲ್ಲ ತಾರಾ ನಟರು ವಿನಯಪೂರ್ವಕವಾಗಿಯೂ, ಸೋಗಿನಲ್ಲಿಯೂ, ರಕ್ಷಣಾತ್ಮಕವಾಗಿಯೂ ಪದೇ ಪದೇ ಹೇಳುವ ಮಾತುಗಳು ಇವು.
ಜನರಿಂದಲೇ ರೂಪುಗೊಂಡ ಸೂಪರ್‌ಸ್ಟಾರ್‌ಗಳು ಅಪಾರ ಜನಸಮೂಹಕ್ಕೆ ‘ಮಾದರಿ’ಯೂ ಆಗಿರುತ್ತಾರೆ.

ಹಾರ–ತುರಾಯಿ, ಶಿಳ್ಳೆ, ಕೇಕೆ, ಹೋದಲ್ಲೆಲ್ಲ ಗುಂಪುಗಟ್ಟಿ ನಿಲ್ಲುವ ಜನರು, ಊರಿಗೊಂದೊಂದು ಅಭಿಮಾನಿ ಸಂಘ ಇವೆಲ್ಲ ಸಂಭ್ರಮದ ನಡುವೆ ಕೆಲವು ನೈತಿಕ ಜವಾಬ್ದಾರಿಗಳೂ ಅವರಿಗೆ ಇರುತ್ತವೆ. ಆದರೆ ಕೀರ್ತಿಯ ಪ್ರಭಾವ, ಅಭಿಮಾನದ ಪ್ರವಾಹ ಈ ಜವಾವ್ದಾರಿಯನ್ನು ಮರೆಸಿಬಿಡುತ್ತವೆಯೇ?

ಇತ್ತೀಚೆಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಅಭಿಮಾನಿ ವಲಯದಲ್ಲಿ ಸಾಕಷ್ಟು ಚರ್ಚಿತವಾಗುತ್ತಿರುವ, ವಿವಾದಕ್ಕೆ ಕಾರಣವಾಗಿರುವ ದರ್ಶನ್‌ ಮತ್ತು ಸುದೀಪ್‌ ಟ್ವಿಟರ್‌ ಗುದ್ದಾಟ ಈ ಎಲ್ಲ ಅನುಮಾನಗಳನ್ನೂ ಒಡಲಲ್ಲಿರಿಸಿಕೊಂಡಿದೆ.

ಹಿಂದೊಮ್ಮೆ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಸುದೀಪ್‌, ‘ದರ್ಶನ್‌ ಅವರಿಗೆ ‘ಮೆಜೆಸ್ಟಿಕ್‌’ ಸಿನಿಮಾದಲ್ಲಿ ಅವಕಾಶ ಕೊಡಿಸಿದ್ದು ನಾನು’ ಎಂಬರ್ಥದ ಮಾತುಗಳನ್ನು ಆಡಿದ್ದರು. ಆ ದೃಶ್ಯಾವಳಿಯನ್ನು ಇತ್ತೀಚೆಗೆ ನೋಡಿದ ದರ್ಶನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ‘ನಾನು ಹಾಗೂ ಸುದೀಪ್‌ ಸ್ನೇಹಿತರಲ್ಲ. ಕನ್ನಡ ಚಿತ್ರರಂಗಕ್ಕೆ ಕೆಲಸ ಮಾಡುತ್ತಿರುವ ಕಲಾವಿದರು ಅಷ್ಟೇ. ಇದನ್ನೆಲ್ಲ ಸುದ್ದಿ ಮಾಡದೆ ಇಲ್ಲಿಗೆ ಮುಗಿಸಿ’ ಎಂದು ಟ್ವೀಟ್‌ ಮಾಡಿದ್ದರು.

ನಂತರ ಈ ಬಗ್ಗೆ ಹಲವು ಸುದ್ದಿವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ, ಪರ ವಿರೋಧ ವಾಗ್ವಾದಗಳು ನಡೆದದ್ದಂತೂ ಬಹುತೇಕರಿಗೆ ಗೊತ್ತೇ ಇದೆ.


-ಸುದೀಪ್
ಇಲ್ಲಿ ಯಾರು ಸರಿ, ಯಾರು ತಪ್ಪು, ಅವರು ಹೇಳಿರುವ ಮಾತುಗಳಲ್ಲಿ ಎಷ್ಟು ಸತ್ಯವಿದೆ, ಯಾರೋ ಒಬ್ಬರು ಸಾಚಾ, ಇನ್ನೊಬ್ಬರು ತಪ್ಪಿತಸ್ಥ ಎಂದು ತೀರ್ಮಾನಿಸುವ ಸರ್ಕಸ್‌ ಅನ್ನು ಬಿಟ್ಟು ತಾರಾನಟರ ನೈತಿಕ ಜವಾಬ್ದಾರಿಗಳು, ಅವರ ಈ ರೀತಿಯ ಶೀತಲ ಸಮರ ಚಿತ್ರರಂಗದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚಿಸುವುದು ಹೆಚ್ಚು ಅರ್ಥಪೂರ್ಣ.

ಈ ವಿವಾದಕ್ಕೆ ಕಾರಣವಾದ ವಿಷಯದ ವಾಸ್ತವ ಸತ್ಯ ಏನು ಎನ್ನುವುದು ತಿಳಿದಿರುವುದು ದರ್ಶನ್‌ ಮತ್ತು ಸುದೀಪ್‌ ಇಬ್ಬರಿಗೆ ಮಾತ್ರ. ಈ ಇಬ್ಬರೂ ಈ ಸಂಗತಿಯ ಬಗ್ಗೆ ನೇರವಾಗಿ ಮಾತನಾಡುತ್ತಿಲ್ಲ.

ಮಾಧ್ಯಮದವರ ಎದುರು ‘ನೋ ಕಮೆಂಟ್ಸ್‌’ ಎಂದು ಹೇಳಿ ಟ್ವಿಟ್ಟರ್‌ ಮೂಲಕ ಕೆಸರೆರಚಾಟ, ಪರೋಕ್ಷ ಟಾಂಗ್‌ ಕೊಡುವ ಹೇಳಿಕೆಗಳಲ್ಲಿಯೇ ಮುಳುಗಿರುವುದು ನೋಡಿದರೆ ಇದು ಒಮ್ಮೆಲೇ ಬಗೆಹರಿಯುವುದು ಇಬ್ಬರಿಗೂ ಬೇಕಾಗಿಲ್ಲವೇನೋ ಎಂಬ ಅನುಮಾನ ಹುಟ್ಟುತ್ತದೆ. ಈ ವಿವಾದದ ವಿಷಯಕ್ಕೆ ಬಂದರೆ ಇಬ್ಬರೂ ದುಡುಕಿದ್ದಾರೆ ಎಂಬುದು ಅವರವರದ್ದೇ ಅನಿಸಿಕೆ.

ದರ್ಶನ್‌ಗೆ ಅವಕಾಶ ಕೊಡಿಸಿದ್ದು ಸುದೀಪ್ ಎಂದು ಇದನ್ನು ಅರ್ಥೈಸುವುದು ತಪ್ಪು ಎಂದು ಹಿರಿಯ ನಟ ಶ್ರೀನಿವಾಸಮೂರ್ತಿ ಒಲ್ಲದ ಮನಸ್ಸಿನಿಂದಲೇ ಪ್ರತಿಕ್ರಿಯೆ ನೀಡಿದರು.

ಇಂಥ ಸಂಗತಿಗಳನ್ನು ನಿರ್ಲಕ್ಷಿಸುವುದು ಸೂಕ್ತ. ಅನಗತ್ಯವಾಗಿ ದೃಶ್ಯ ಮಾಧ್ಯಮಗಳು ಉತ್ಪ್ರೇಕ್ಷೆ ಮಾಡುತ್ತಿವೆ ಎನ್ನುವ ಅವರು, ಒಂದು ವೇಳೆ ದುರುದ್ದೇಶದಿಂದ ಸುದೀಪ್ ಕೆಣಕಿದ್ದರೆ ಅದೂ ತಪ್ಪು ಎನ್ನುತ್ತಾರೆ. ಈ ವಿವಾದವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇನ್ನೂ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ.

ದರ್ಶನ್, ಸುದೀಪ್ ಇಬ್ಬರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟರು. ಕನ್ನಡ ಚಿತ್ರರಂಗದ ಪ್ರೇಕ್ಷಕರ ಸಂಖ್ಯೆಯನ್ನೂ, ಮಾರುಕಟ್ಟೆಯನ್ನೂ ವಿಸ್ತರಿಸಿದವರು. ಅವರ ವೇಷಭೂಷಣ, ವರ್ತನೆ, ನುಡಿ ಎಲ್ಲವನ್ನೂ ಅನುಕರಿಸುವ, ಸಮರ್ಥಿಸುವ ಸಾಕಷ್ಟು ಜನರಿದ್ದಾರೆ.

ಈ ಎಚ್ಚರಿಕೆ ಇಬ್ಬರಿಗೂ ಇರಬೇಕು. ಭಿನ್ನಾಭಿಪ್ರಾಯ, ವೈಮನಸ್ಸುಗಳು ಸಹಜ. ದರ್ಶನ್ ಮತ್ತು ಸುದೀಪ್ ಇಬ್ಬರೂ ಯಾವ ಕಾಲಕ್ಕೂ ಆಪ್ತಮಿತ್ರರೇನೂ ಆಗಿರಲಿಲ್ಲ ಎನ್ನುವುದು ತಿಳಿದಿರುವ ಸಂಗತಿಯೇ.

ಆದರೆ ತಮ್ಮ ವೈಮನಸ್ಸನ್ನು ನಿಭಾಯಿಸುವ ರೀತಿ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸುವ ವಿವೇಕ ಇಬ್ಬರಲ್ಲಿಯೂ ಕಾಣುತ್ತಿಲ್ಲ. ಇವರ ಟ್ವಿಟ್ಟರ್ ಕದನ ತಂತಮ್ಮ ಅಂಧ ಅಭಿಮಾನಿಗಳ ನಡುವಿನ ತಿಕ್ಕಾಟಕ್ಕೂ ಕಾರಣವಾಗುತ್ತಿದೆ.


-ಶ್ರೀನಿವಾಸಮೂರ್ತಿ
ಶ್ರೀನಿವಾಸಮೂರ್ತಿ ಅವರೂ ಇದೇ ಆತಂಕ ವ್ಯಕ್ತಪಡಿಸುತ್ತಾರೆ. ‘ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ಜಗಳವಾಡಿಕೊಳ್ಳುವುದರಿಂದ ಅವರ ಅಭಿಮಾನಿ ವರ್ಗದಲ್ಲಿ ಸುಮ್ಮನೆ ದ್ವೇಷ ಬೆಳೆಯುತ್ತದೆ. ಅವರ ನಡುವೆ ದೊಡ್ಡ ಜಗಳವಾಗಿ ಹಿಂಸೆ ಉಂಟಾದರೆ ಅದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸುವ ಅವರು, ‘ಯಾರೊಬ್ಬರ ಪರವಾಗಿ ಮಾತನಾಡಿದರೆ ಇನ್ನೊಬ್ಬರಿಗೆ ಕೋಪ ಬರುತ್ತದೆ’ ಎಂದು ತಮ್ಮ ಧರ್ಮಸಂಕಟವನ್ನು ತೋಡಿಕೊಳ್ಳುತ್ತಾರೆ.

ಅವರ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ‘ಒಬ್ಬರ ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು ಇನ್ನೊಬ್ಬರ ಸಿನಿಮಾದಲ್ಲಿ ನಟಿಸಬಾರದು ಎಂಬ ಅತಿರೇಕದ ಕಂದಕವೂ ನಿರ್ಮಾಣವಾಗಬಹುದು’ ಎಂಬುದು ಊಹೆಯಷ್ಟೇ ಅಲ್ಲ. ಈ ಹಿಂದೆ ಈ ರೀತಿ ಆಗಿರುವುದಕ್ಕೆ ನಿದರ್ಶನಗಳಿವೆ. ಇಂಥ ಸೂಕ್ಷ್ಮಗಳೆಲ್ಲ ತಿಳಿಯದಷ್ಟು ಸಂವೇದನಾರಹಿತರಂತೂ ದರ್ಶನ್‌ ಮತ್ತು ಸುದೀಪ್‌ ಅಲ್ಲ. ಆದರೂ ಅವೆಲ್ಲಕ್ಕಿಂತ ತಮ್ಮ ಪ್ರತಿಷ್ಠೆಯೇ ಮುಖ್ಯವಾಯಿತೆ?


-ರಮೇಶ್‌ ಭಟ್‌
‘ದರ್ಶನ್‌  ಬೆಟ್ಟದೆತ್ತರಕ್ಕೆ ಬೆಳೆದಿದ್ದಾರೆ. ಸುದೀಪ್‌ ಕೂಡ ಅಷ್ಟೇ ಎತ್ತರದ ನಟ. ನಾವು ಇವರ ಮಾತು ತಪ್ಪು ಎಂದಾಗಲಿ, ಅವರ ಸಮಜಾಯಿಷಿ ಸರಿ ಎಂದಾಗಲಿ ಒಪ್ಪಿಕೊಳ್ಳಲಾಗುವುದಿಲ್ಲ. ಸತ್ಯ ಏನು ಎನ್ನುವುದು ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತದೆ’ ಎನ್ನುತ್ತಾರೆ ಶ್ರೀನಿವಾಸಮೂರ್ತಿ. ಇನ್ನೋರ್ವ ಹಿರಿಯ ನಟ ರಮೇಶ್‌ ಭಟ್‌ ಕೂಡ ಶ್ರೀನಿವಾಸಮೂರ್ತಿ ಅವರ ಮಾತುಗಳನ್ನು ಅನುಮೋದಿಸುತ್ತಾರೆ.

‘ದರ್ಶನ್‌ ಮತ್ತು ಸುದೀಪ್‌ ರೋಲ್‌ ಮಾಡೆಲ್‌ಗಳು. ಅವರು ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಸಲಹೆ ನೀಡುವ ರಮೇಶ್‌, ‘ಮನಸ್ತಾಪ ಇಲ್ಲಿಯೇ ಮುಗಿದರೆ ನಮಗೆಲ್ಲರಿಗೂ ಸಂತೋಷ. ಯಾರು ಯಾರಿಗೂ ವೈರಿಗಳಾಗುವುದು ನಮಗ್ಯಾರಿಗೂ ಇಷ್ಟವಿಲ್ಲ’ ಎನ್ನುತ್ತಾರೆ. ಇಂಥ ವಿವಾದಗಳು ಹುಟ್ಟಿಕೊಳ್ಳುವುದರ ಹಿಂದಿನ ಮನಸ್ಥಿತಿಯನ್ನೂ ಅವರು ವಿಶ್ಲೇಷಿಸುತ್ತಾರೆ.

‘ಮೊದಲೆಲ್ಲ ಪತ್ರಿಕಾ ಮಾಧ್ಯಮ ಮಾತ್ರ ಇತ್ತು. ಈಗ ವಾಟ್ಸ್‌ಆ್ಯಪ್‌, ಟ್ವಿಟ್ಟರ್‌ಗಳಂಥ ಮಾಧ್ಯಮಗಳು ಬಂದಿರುವುದರಿಂದ ತಮ್ಮ ದಿನಚರಿ ಪುಸ್ತಕದಲ್ಲಿ ಬರೆದುಕೊಳ್ಳಬೇಕಾದ ವೈಯಕ್ತಿಕ ಸಂಗತಿಗಳನ್ನು ಟ್ವಿಟ್ಟರ್‌ನಲ್ಲಿ ಬರೆದುಕೊಳ್ಳುತ್ತಿದ್ದಾರೆ.

ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಹೀಗೆ ಬಹಿರಂಗವಾಗಿ ಹಂಚಿಕೊಳ್ಳುವುದು ಎಷ್ಟು ಸರಿ ಎಂದು ಅವರೇ ಯೋಚಿಸಬೇಕು’ ಎಂದು ಇಂಥ ವಿವಾದಗಳಿಗೆ ಕಾರಣವಾದ ಸಂಗತಿಗಳನ್ನು ವಿಶ್ಲೇಷಿಸುತ್ತಾರೆ.

ಈ ವಿವಾದವು ಮತ್ತೆ ಮತ್ತೆ ಚರ್ಚಿತವಾದರೆ ಲಾಭ ಯಾರಿಗಿದೆ ಎಂಬುದನ್ನು ಯೋಚಿಸಿದರೆ ಇದರ ಇನ್ನೊಂದು ಆಯಾಮವೂ ತೆರೆದುಕೊಳ್ಳುತ್ತದೆ.
ಸುದೀಪ್‌ ಅಭಿನಯದ ದೊಡ್ಡ ಬಜೆಟ್‌ನ ‘ಹೆಬ್ಬುಲಿ’ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ರಾಜ್ಯದ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಸುದೀಪ್‌, ಒಂದು ಕಡೆ ಈ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ನೋ ಕಮೆಂಟ್ಸ್‌’ ಎಂದು ಹೇಳಿದರೆ, ಇನ್ನೊಂದೆಡೆಗೆ ‘ನೀವು ನನಗೆ ಗೌರವ ಕೊಟ್ಟರೆ ನಾನೂ ನಿಮಗೆ ಗೌರವ ಕೊಡುತ್ತೇನೆ’ ಎಂದು ಪರೋಕ್ಷವಾಗಿ ಟಾಂಗ್‌ ಕೊಡುತ್ತಾರೆ. ನಂತರ ಅದು ದರ್ಶನ್‌ ಉದ್ದೇಶಿಸಿ ಹೇಳಿದ್ದಲ್ಲ ಎಂದು ನುಣುಚಿಕೊಳ್ಳುತ್ತಾರೆ.

ಇನ್ನೊಂದೆಡೆ ದರ್ಶನ್‌ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದ್ದರಿಂದ ಸುದ್ದಿಯಲ್ಲಿರುವುದು ಅವರಿಗೂ ಲಾಭಕರ. ಈ ದೃಷ್ಟಿಕೋನದಿಂದ ನೋಡಿದರೆ ಈ ಇಡೀ ವಿವಾದವೇ ವ್ಯವಸ್ಥಿತ ಪ್ರಚಾರ ತಂತ್ರ ಆಗಿರಬಹುದಾ ಎಂದೂ ಅನುಮಾನ ಹುಟ್ಟುತ್ತದೆ.

ಸುದೀಪ್, ಉಪೇಂದ್ರ ಅಭೀನಯದ ‘ಮುಕುಂದ ಮುರಾರಿ’ ಹಾಗೂ ಯಶ್ ನಟಿಸಿದ್ದ ‘ಸಂತು ಸ್ಟ್ರೇಟ್‌ ಫಾರ್ವರ್ಡ್’ ಚಿತ್ರ ಬಿಡುಗಡೆಯಾದಾಗಲೂ ಸಣ್ಣದೊಂದು ವಿವಾದದ ಕಿಡಿ ಹೊತ್ತಿದ್ದನ್ನು ನೆನಪಿಸಿಕೊಳ್ಳಬಹುದು. ಸುದೀಪ್ ಆಗ ಯಶ್ ಕಾಲೆಳೆದಿದ್ದರು.

ಚಿತ್ರರಂಗವನ್ನು ಗಂಭೀರ ಸಮಸ್ಯೆಗಳು ಕಾಡುತ್ತಿವೆ. ಡಬ್ಬಿಂಗ್‌ ವಿವಾದ ಒಂದು ಕಡೆ.   ಪೋಷಕ ಕಲಾವಿದರ ಸಮಸ್ಯೆಗಳು, ಚಿತ್ರಮಂದಿರಗಳ ಸಮಸ್ಯೆ, ಮಲ್ಟಿಪ್ಲೆಕ್ಸ್‌ಗಳ ಪಾರಮ್ಯ, ಪರಭಾಷಾ ಚಿತ್ರಗಳ ಹಾವಳಿ ಇನ್ನೊಂದು ಕಡೆ.

ಚಿತ್ರರಂಗದ ಹೊರತಾಗಿ ನಾಡನ್ನು ಕಾಡುತ್ತಿರುವ ರೈತರ ಸಮಸ್ಯೆ, ಬರ ಪರಿಸ್ಥಿತಿಗೆ ನಟರು ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಯಶ್‌ ಒಂದು ಮಾದರಿ ಒದಗಿಸಿಕೊಟ್ಟಿದ್ದಾರೆ. ಇವ್ಯಾವ ಸಮಸ್ಯೆಗಳಿಗೂ ಸಂಬಂಧಿಸಿದಂತೆ ಇದುವರೆಗೆ ಸುದೀಪ್‌ ಅಥವಾ ದರ್ಶನ್‌ ಇಬ್ಬರೂ ಎಲ್ಲಿಯೂ ಸ್ಪಂದಿಸಿಲ್ಲ.

‘ಇಂದು ನಮ್ಮ ಚಿತ್ರರಂಗದವನ್ನು ಕಾಡುತ್ತಿರುವ  ಡಬ್ಬಿಂಗ್‌ನಂಥ ಸಮಸ್ಯೆಯ ಬಗ್ಗೆ ಯಾಕೆ ಇವರ್‍ಯಾರೂ ಮಾತನಾಡುತ್ತಿಲ್ಲ’ ಎಂದು ರಮೇಶ್‌ ಭಟ್‌ ಇನ್ನೊಂದು ಪ್ರಶ್ನೆ ಹಾಕುತ್ತಾರೆ.

‘ಇಂದು ಡಬ್ಬಿಂಗ್‌ ಚಿತ್ರಗಳ ವಿರುದ್ಧದ ಚಳವಳಿ ಸೊರಗಿದೆ. ಇನ್ನೂ ಸಾಕಷ್ಟು ಸಮಸ್ಯೆಗಳು ಚಿತ್ರರಂಗವನ್ನು ಕಾಡುತ್ತಿವೆ. ಅಂಥ ಸಮಸ್ಯೆಗಳತ್ತ ತಮ್ಮ ಗಮನ ಕೇಂದ್ರೀಕರಿಸಲಿ’ ಎಂಬ ಸಲಹೆ ನೀಡುತ್ತಾರೆ ಶ್ರೀನಿವಾಸಮೂರ್ತಿ.

‘ತಾರಾನಟರು ಚಿತ್ರರಂಗದ ಇಂದಿನ ಸಮಸ್ಯೆಗಳನ್ನು ಎದುರಿಸಲು–ಬಗೆಹರಿಸಲು ಮುಂದಾಗಬೇಕು. ಯಾಕೆಂದರೆ ಅವರಿಗೆ ಜನಬೆಂಬಲ ಇದೆ. ನಾವು ಕರೆದರೆ ಐದು ಜನ ಬರಬಹುದು. ಆದರೆ ಅಂಥವರು ಕರೆದರೆ ಐದು ಲಕ್ಷ ಜನ ಬರಬಹುದು, ಐದು ಕೋಟಿ ಜನರೂ ಬರಬಹುದು. ಆದ್ದರಿಂದ ದರ್ಶನ್‌ ಸುದೀಪ್‌ ಅವರಂಥವರು ಮುಂದಾಳತ್ವ ತೆಗೆದುಕೊಂಡು ಹೋರಾಡಲಿ. ಅವರಿಬ್ಬರ ಅಭಿಮಾನಿಗಳೂ ಅದರಲ್ಲಿ ತೊಡಗಿಕೊಳ್ಳಲಿ’ ಎಂಬ ರಮೇಶ್‌ ಅವರ ಮಾತು ಚಿತ್ರರಂಗದ ಅನೇಕರ, ಸಹೃದಯರ ಅನಿಸಿಕೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT