ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾಸಿರಿ: ಹಣ ಬಿಡುಗಡೆ ವಿಳಂಬ

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮುಂದೆ ಫಲಾನುಭವಿ ವಿದ್ಯಾರ್ಥಿಗಳ ಅಳಲು
Last Updated 9 ಮಾರ್ಚ್ 2017, 9:26 IST
ಅಕ್ಷರ ಗಾತ್ರ
ಚಾಮರಾಜನಗರ: ‘ಸರ್ಕಾರಿ ಹಾಸ್ಟೆಲ್ ಸೌಲಭ್ಯ ದೊರೆಯದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ 10 ತಿಂಗಳಿಗೆ ₹ 15 ಸಾವಿರ ನೀಡಲಾಗುತ್ತದೆ. ಆದರೆ, ಕೋರ್ಸ್‌ ಪೂರ್ಣ ಗೊಂಡ ನಂತರ ಹಣ ದೊರೆಯುತ್ತಿದೆ. ಇದರಿಂದ ಪ್ರಯೋಜನವಾಗುತ್ತಿಲ್ಲ.  ಪ್ರತಿ ತಿಂಗಳು ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಬೇಕು’  
 
–ಇದು ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಾರ್ತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಮನ ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರ ಮುಂದೆ ವಿದ್ಯಾರ್ಥಿಗಳು ಮಂಡಿಸಿದ ಬೇಡಿಕೆ. 
 
‘ಯೋಜನೆಯಡಿ ಸರಿಯಾಗಿ ಹಣ ತಲುಪುತ್ತಿಲ್ಲ. ನನಗೆ ಕೇವಲ ₹ 9 ಸಾವಿರ ಮಾತ್ರ ಲಭಿಸಿದೆ. ಉಳಿದ ಹಣ ಇಂದಿಗೂ ನೀಡಿಲ್ಲ’ ಎಂದರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಶಿವರಾಜ್.
 
ಅದೇ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಮಾತನಾಡಿ, ‘ಕೇವಲ ಮೆರಿಟ್‌ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾಸಿರಿ ಸೌಲಭ್ಯ ಲಭಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ವಿಸ್ತರಿಸಬೇಕು’ ಎಂದು ಸಲಹೆ ಮುಂದಿಟ್ಟರು.
 
ಬಿ.ಇಡಿ ವಿದ್ಯಾರ್ಥಿ ಅಭಿಲಾಷ್‌ ಮಾತನಾಡಿ, ‘ಸಾಮಾನ್ಯ ವರ್ಗದಲ್ಲೂ ಕಡುಬಡವರಿದ್ದಾರೆ. ತಾಯಂದಿರ ತಾಳಿ ಅಡವಿಟ್ಟು ಮಕ್ಕಳ ವಿದ್ಯಾಭ್ಯಾಸ ಮಾಡಿಸುವ ಸ್ಥಿತಿಯಿದೆ. ನಮಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡುತ್ತಿರುವ ಸೌಲಭ್ಯ ನೀಡಬೇಕು. ಕನಿಷ್ಠ ಶೈಕ್ಷಣಿಕ ಅಭಿವೃದ್ಧಿಗಾದರೂ ಈ ಸೌಲಭ್ಯ ಕಲ್ಪಿಸಬೇಕು’ ಎಂದು ಕೋರಿದರು.
 
‘ಸರ್ಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಅಧಿಕಾರಿ ಗಳು ಕೆಲಸವನ್ನು ದೇವರಿಗೆ ಬಿಟ್ಟಿದ್ದಾರೆ. ಕಚೇರಿಗೆ ತೆರಳಿ ವಿಳಂಬದ ಬಗ್ಗೆ ಮಾಹಿತಿ ಕೇಳಿದರೆ ಸರಿಯಾಗಿ ಸ್ಪಂದಿಸುವುದಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು. 
 
ವಿದ್ಯಾರ್ಥಿ ಶರತ್‌ ಮಾತನಾಡಿ, ‘ಪ್ರಸ್ತುತ ನೀಡುತ್ತಿರುವ ಹಣ ವಸತಿ ಮತ್ತು ಊಟಕ್ಕೆ ಸಾಕಾಗುವುದಿಲ್ಲ. ಈ ಮೊತ್ತ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು. ಸಚಿವ ಖಾದರ್ ಮಾತನಾಡಿ, ‘ವಿದ್ಯಾಸಿರಿ ಯೋಜನೆ ಯಡಿ ಆರ್ಥಿಕ ನೆರವು ವಿಳಂಬವಾಗುತ್ತಿರುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಜತೆಗೆ, ವಿದ್ಯಾರ್ಥಿ ಗಳ ಖಾತೆಗೆ ಪ್ರತಿ ತಿಂಗಳು ಹಣ ಪಾವತಿಗೆ ಕ್ರಮ ವಹಿಸಲಾಗು ವುದು’ ಎಂದು ಭರವಸೆ ನೀಡಿದರು.
 
ಎಲ್ಲ ವಿದ್ಯಾರ್ಥಿಗಳಿಗೂ ಯೋಜನೆಯಡಿ ಸೌಲಭ್ಯ ನೀಡಲು ಸಾಧ್ಯವಿಲ್ಲ. ಹಾಗಾಗಿ, ಮೆರಿಟ್‌ ವಿದ್ಯಾರ್ಥಿಗಳಿಗೆ ಮಾತ್ರವೇ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಹಿಂದೆ ಸೌಲಭ್ಯವೇ ಇರಲಿಲ್ಲ. ರಾಜ್ಯ ಸರ್ಕಾರ ಕಲ್ಪಿಸಿರುವ ಸೌಲಭ್ಯವನ್ನು ಬಳಸಿ ಕೊಳ್ಳುವುದು ವಿದ್ಯಾರ್ಥಿಗಳ ಹೊಣೆಯಾಗಿದೆ ಎಂದು ತಿಳಿಸಿದರು.
 
ಮೈತ್ರಿ, ಮನಸ್ವಿನಿ, ಋಣಮುಕ್ತ, ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳೊಂದಿಗೆ ಸಚಿವರು ಸಂವಾದ ನಡೆಸಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಶಾಸಕ ಆರ್.ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮ ಚಂದ್ರ, ಉಪಾಧ್ಯಕ್ಷ ಎಸ್‌. ಬಸವರಾಜು, ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕಾ ಹಾಜರಿದ್ದರು.

ಟೆಟ್ರಾಪ್ಯಾಕ್ ಹಾಲು ಕೇಳಿದ ಮಕ್ಕಳು
ಚಾಮರಾಜನಗರ: ‘ಪೌಡರ್‌ ಹಾಲು ನಮಗೆ ಬೇಡ. ಟೆಟ್ರಾಪ್ಯಾಕ್‌ ಹಾಲು ನೀಡಿದರೆ ಉತ್ತಮ. ಇದರೊಂದಿಗೆ ಬಾದಾಮಿ, ಪಿಸ್ತಾ ಪೌಡರ್ ಬೆರೆಸಿಕೊಡಬೇಕು. ಪ್ರತಿದಿನವೂ ಹಾಲು ನೀಡಲು ಕ್ರಮವಹಿಸಬೇಕು. ತಿಂಗಳಿಗೆ ಎರಡು ಬಾರಿ ಮಾತ್ರ ಹಾಲಿನ ಜತೆಗೆ ಬಿಸ್ಕೆಟ್‌ ನೀಡಲಾಗುತ್ತಿದೆ. ಪ್ರತಿನಿತ್ಯವೂ ಬಿಸ್ಕೆಟ್‌ ನೀಡಬೇಕು’

–ಕ್ಷೀರಭಾಗ್ಯ ಯೋಜನೆಯ ಪರಾಮರ್ಶೆ ವೇಳೆ ವಿದ್ಯಾರ್ಥಿ ಗಳಾದ ಮದನ್‌, ರಂಜಿತಾ, ಮಹೇಶ್ವರಿ, ಕೀರ್ತನಾ ಈ ಬೇಡಿಕೆ ಮಂಡಿಸಿದರು. ಇದಕ್ಕೆ ಸಚಿವ ಖಾದರ್‌ ಪ್ರತಿಕ್ರಿಯಿಸಿ, ‘ಕ್ಷೀರಭಾಗ್ಯ ಯೋಜನೆಯಡಿ ಮತ್ತಷ್ಟು ಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧವಿದೆ. ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 100ರಷ್ಟು ಫಲಿತಾಂಶ ತಂದುಕೊಟ್ಟರೆ ಎಲ್ಲ ಸೌಲಭ್ಯ ಕಲ್ಪಿಸುತ್ತೇನೆ’ ಎಂದರು.

* ಮೈತ್ರಿ ಯೋಜನೆಯ ಫಲಾನುಭವಿಗಳ ಬಗ್ಗೆ ತಾರತಮ್ಯ ಸಲ್ಲದು. ಫಲಾನುಭವಿಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು
ಯು.ಟಿ. ಖಾದರ್,  ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT