ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಧರ್ಮೀಯರಿಗೆ ದೇಗುಲದ ಹಣ: ಸತ್ಯಕ್ಕೆ ದೂರ

ಚನ್ನಕೇಶವ ದೇಗುಲಕ್ಕೆ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಭೇಟಿ
Last Updated 9 ಮಾರ್ಚ್ 2017, 9:37 IST
ಅಕ್ಷರ ಗಾತ್ರ
ಬೇಲೂರು: ‘ಮುಜರಾಯಿ ಇಲಾಖೆ ದೇವಾಲಯಕ್ಕೆ ಸೇರಿದ ಹಣವನ್ನು ಅನ್ಯಧರ್ಮೀಯರಿಗೆ ನೀಡಲಾಗುತ್ತಿದೆ ಎಂಬುದು ಊಹಾಪೋಹ ಮಾತ್ರ’ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು. 
 
ಇಲ್ಲಿನ ಚನ್ನಕೇಶವ ದೇವಾಲಯಕ್ಕೆ ಬುಧವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಹಣವನ್ನು ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದೆ. ಹಿಂದೂ ದೇವಾಲಯಗಳ ಹುಂಡಿಗಳಿಗೆ ಹಣ ಹಾಕಬೇಡಿ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಿ ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
 
ಮುಜರಾಯಿ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾಯ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಈ ಬಗ್ಗೆ ಯಾರೂ ತಪ್ಪು ತಿಳಿಯುವುದು ಬೇಡ. ದೇವಾಲಯಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ನಿಧಿ ಹಣದ ಪೈಕಿ ಶೇ 60ರಷ್ಟನ್ನು ಮುಜರಾಯಿ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇನ್ನುಳಿದ ಶೇ 40ರಷ್ಟು ಹಣವನ್ನು ಮುಜರಾಯಿಯೇತರ ದೇವಾಲಯಗಳ ಅಭಿವೃದ್ಧಿಗೆ  ಬಳಸಲಾಗುತ್ತಿದೆ ಎಂದು ಹೇಳಿದರು.
 
ಸಿ ವರ್ಗಕ್ಕೆ ಸೇರಿದ ಮುಜರಾಯಿ ದೇವಾಲಯಗಳ ತಸ್ತಿಕ್‌ ಹಣವನ್ನು ₹ 50ಸಾವಿರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದ್ದು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ.
 
ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸಂಬಳವನ್ನು ಹೆಚ್ಚಿಸಲಾಗುವುದು. ₹ 2 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದಲೇ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಉದ್ದೇಶವಿದೆ. ಹೆಚ್ಚು ಹಣ ಸಂಗ್ರಹವಾಗುವ ಎ ವರ್ಗದ ದೇವಾಲಯಗಳ ಹಣವನ್ನು ದೇವಾಲಯದ ಅಭಿವೃದ್ಧಿಯ ಜತೆಗೆ ಆ ಊರಿನ ಅಭಿವೃದ್ಧಿಗೂ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
 
ದಾಸೋಹ ವ್ಯವಸ್ಥೆ ಇಲ್ಲದ ದೇವಸ್ಥಾನಗಳಲ್ಲಿ ದಾಸೋಹ ಮಾಡಲು ಉದ್ದೇಶಿಸಿದ್ದು, ದಾಸೋಹ ಮಾಡುವುದರಿಂದ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುವುದರ ಜತೆಗೆ ಆದಾಯವೂ ಹೆಚ್ಚಾಗಲಿದೆ. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ₹ 8.40 ಕೋಟಿ ವೆಚ್ಚದಲ್ಲಿ ದಾಸೋಹ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಸಚಿವ ರುದ್ರಪ್ಪ ಲಮಾಣಿ ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ₹ 5 ಕೋಟಿ ಹಣ ನೀಡಲಾಗಿದ್ದು ಮೂಲ ಸೌಕರ್ಯಕ್ಕೆ ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT