ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣ ಹತ್ಯೆ ತಡೆಗೆ ಮುಂದಾಗಿ: ಡಿ.ಸಿ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಸಿ ನೆಟ್ಟು ಮಹಿಳಾ ದಿನ ಆಚರಣೆ l ವಿದ್ಯೆಗೆ ಪ್ರಾಮುಖ್ಯತೆ ನೀಡಲು ಸಲಹೆ
Last Updated 9 ಮಾರ್ಚ್ 2017, 9:41 IST
ಅಕ್ಷರ ಗಾತ್ರ
ಹಾಸನ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಬುಧವಾರ ಗಿಡ ನೆಡುವ ಮೂಲಕ ಮಹಿಳಾ ದಿನವನ್ನು ವಿನೂತನವಾಗಿ ಆಚರಿಸಲಾಯಿತು. 
 
ಜಿಲ್ಲಾಧಿಕಾರಿ ವಿ.ಚೈತ್ರಾ ಮಾತನಾಡಿ, ದಿನನಿತ್ಯ ಬದುಕಿನಲ್ಲಿ ವೈಯಕ್ತಿಕ ಜೀವನ ಮತ್ತು ಕಚೇರಿ ಜೀವನದಲ್ಲಿ ಒಂದು ಅಂತರ ಬೆಳೆಸಿಕೊಳ್ಳಬೇಕು. ಕಡತ ವಿಲೇವಾರಿ, ಕಾರ್ಯ ವೈಖರಿ, ನಡವಳಿಕೆಯಲ್ಲಿ ಸುಧಾರಣೆ. ಹೀಗೆ ನವೀನತೆಯನ್ನು ಅಳವಡಿಸಿಕೊಳ್ಳುವ ಮೂಲಕ ಉದಾಹರಣೆಯಾಗಿ ಮಾಡಬೇಕು.

ಹೆಣ್ಣು ಹುಟ್ಟಿನಿಂದ ಸಾವಿನವರೆಗೂ ಯಾವುದೇ ಅಪೇಕ್ಷೆಯಿಲ್ಲದೆ ದುಡಿಯುತ್ತಾಳೆ. ಗಂಡು-ಹೆಣ್ಣು ಸೃಷ್ಠಿಯಲ್ಲಿ ಸರಿಸಮಾನರು, ಅದನ್ನು ಅರಿತು ಜೀವನ ನಡೆಸಿದರೆ ಬದುಕು ಸುಂದರ ಎಂದು ನುಡಿದರು. ಎಲ್ಲರು ಒಂದೇ ಕುಟುಂಬದವರಿದ್ದಂತೆ. ಕಾರ್ಯ ಒತ್ತಡದಲ್ಲಿ ಪ್ರತಿಯೊಬ್ಬರು ಕಾಲಮಿತಿಯಿಲ್ಲದೆ ಕೆಲಸ ಮಾಡುತ್ತಿರುತ್ತಾರೆ ಎಂದರು.
 
ಹೆಣ್ಣು ತನ್ನೊಳಗೆ ನಿರಂತರವಾಗಿ ಯುದ್ದ ನಡೆಸುತ್ತಿರುತ್ತಾಳೆ. ಇಂದಿನ ದಿನಗಳಲ್ಲಿ ಮಹಿಳಾ ಶೋಷಣೆ, ಬಾಲ್ಯವಿವಾಹ, ಮಾನವ ಕಳ್ಳ ಸಾಗಾಣೆ, ಭ್ರೂಣ ಹತ್ಯೆಯಂತ ಹೀನ ಕೃತ್ಯಗಳನ್ನು ತಡೆಯಲು ಮುಂದಾಗಬೇಕು. ಹೆಣ್ಣು-ಗಂಡುಗಳ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗಿ ವಿವಾಹ ಬಂಧನಕ್ಕೆ ಒಳಗಾಗಿ ಸಾಂಸಾರಿಕ ಜೀವನ ನಡೆಸಲು ಪಂಜಾಬ್, ಹರಿಯಾಣದಲ್ಲಿ  ಹೆಣ್ಣು ಮಕ್ಕಳ ಕೊರತೆ ಇದ್ದರೆ, ಕೆರಳದಲ್ಲಿ ಗಂಡು ಮಕ್ಕಳ ಕೊರತೆ ಕಂಡುಬರುತ್ತಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
 
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಚುನಾವಣೆ ಶಾಖೆ ತಹಶೀಲ್ದಾರ್ ಮಂಜುನಾಥ್, ಕಚೇರಿ ಸಹಾಯಕರಾದ ತಿಮ್ಮಯ್ಯ ಹಾಗೂ  ಸಿಬ್ಬಂದಿ ವರ್ಗದವರು ಹಾಜರಿದ್ದರು.
ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಸಿರು ಉಡುಗೆಯನ್ನು ಧರಿಸಿದ್ದು ವಿಶೇಷವಾಗಿತ್ತು.
 
ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ
ಕೊಣನೂರು: ಮಹಿಳೆಯರ ಆರೋಗ್ಯದ ವಿಚಾರಕ್ಕೆ ಸಮಾಜ ಇಂದಿಗೂ ಪ್ರಾಮುಖ್ಯತೆ ನೀಡಿಲ್ಲ ಎಂದು ಹಾಸನದ ವಾತ್ಸಲ್ಯ ಆಸ್ಪತ್ರೆಯ ನಿರ್ದೇಶಕಿ ಡಾ.ಭಾರತಿ ರಾಜಶೇಖರ್ ವಿಷಾದ ವ್ಯಕ್ತಪಡಿಸಿದರು.
 
ಕೊಣನೂರಿನ ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ, ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ವಿಭಾಗದ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ‘ಮಹಿಳೆಯರು ಮತ್ತು ಆರೋಗ್ಯ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಗರ್ಭಿಣಿಯಾದಾಗ ಸಿಗುವ ಆರೈಕೆಯೂ ಕೂಡ ಆಕೆಗಲ್ಲದೇ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗಾಗಿಯೇ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜೆ.ಜಿ.ನಟರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎನ್.ಲಕ್ಷ್ಮೀಶ್ ಇದ್ದರು.

ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ: ಸಚಿವ ಮಂಜು
ಹಾಸನ:
ಹೆಣ್ಣು ಮಕ್ಕಳು ವಿದ್ಯೆ ಕಲಿತರೆ ಮಾತ್ರ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಹೆಣ್ಣು ಮಗುವಿಗೂ ಶಿಕ್ಷಣ ನೀಡಬೇಕು ಎಂದು ಸಚಿವ ಎ.ಮಂಜು  ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ ಹಾಗೂ ವಿವಿಧ ಮಹಿಳಾ ಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸಾರವನ್ನು ಸರಿದೂಗಿಸಿಕೊಂಡು  ಬರುವ ಆದಾಯದಲ್ಲಿ ಉಳಿತಾಯ ಮಾಡಿ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಮಹಿಳೆಯರು ಬಹಳ ಮುತುವರ್ಜಿ ವಹಿಸುತ್ತಾರೆ. 

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಒದಗಿಸಿರುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಎಂದರು. ಶಾಸಕ ಎಚ್.ಎಸ್.ಪ್ರಕಾಶ್  ಮಾತನಾಡಿ, ಮಕ್ಕಳಿಗೆ ಮೊದಲ ಗುರು ತಾಯಿ. ಪ್ರತಿಯೊಂದು ಕ್ಷಣದಲ್ಲಿ ತಾಯಿ ಮಕ್ಕಳ ಶ್ರೇಯಸ್ಸು ಬಯಸುತ್ತಾಳೆ. ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ವಿದ್ಯೆಗೆ ಪ್ರಾಮುಖ್ಯತೆ ನೀಡುವ ಮೂಲಕ ಹೆಣ್ಣು ಮಕ್ಕಳು ಯಾರ ಮೇಲು ಅವಲಂಬಿತರಾಗದಂತೆ ಬೆಳಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಚೈತ್ರಾ ಮಾತನಾಡಿ, ನಾರಿಯನ್ನು ಎಲ್ಲಿ  ಪೂಜ್ಯ ಭಾವನೆಯಿಂದ ಕಾಣುತ್ತೇವೆ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಕುಮಾರ್, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಲೋಚನ, ಕೆ.ಡಿ.ಪಿ ಸದಸ್ಯ  ದಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT