ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದಲಾವಣೆ ಮನೆಯಿಂದ ಆಗಲಿ’

ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅಭಿಮತ
Last Updated 9 ಮಾರ್ಚ್ 2017, 10:41 IST
ಅಕ್ಷರ ಗಾತ್ರ
ಧಾರವಾಡ: ‘ಬದಲಾವಣೆ ಮನೆಯಿಂದಲೇ ಆರಂಭಗೊಳ್ಳಬೇಕು. ಇದಕ್ಕೆ ಮಹಿಳೆಯರನ್ನು ಗೌರವಿಸುವ ಪರಂಪರೆ ಕೂಡಾ ಹೊರತಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಹೇಳಿದರು. 
 
ಇಲ್ಲಿಗೆ ಸಮೀಪದ ಹೈಕೋರ್ಟ್‌ ಸಭಾಭವನದಲ್ಲಿ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 
‘ಮನೆಯಲ್ಲಿನ ನಮ್ಮ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಸರಿಯಾದ ಅವಕಾಶಗಳು ದೊರೆತರೆ ಅವರು ಕೂಡಾ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾನ ಅವಕಾಶಗಳನ್ನು ದೊರಕಿಸುವ ಮೂಲಕ ಸಮಾಜದಲ್ಲೂ ಬದಲಾವಣೆ ತರಲು ಸಾಧ್ಯವಿದೆ ಎಂದರು.
 
ವಕೀಲೆ ಪ್ರಫುಲ್ಲಾ ನಾಯಕ್‌ ಮಾತನಾಡಿ, ‘ಪ್ರಸ್ತುತ ದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಹಲವು ನ್ಯಾಯಾಲಯಗಳ ತೀರ್ಪುಗಳು ಮಹಿಳೆಯರ ಪರವಾಗಿ ಅವರ ಹಿತರಕ್ಷಣೆ ಮಾಡಿವೆ. ಆದರೆ ಕಾನೂನು, ತೀರ್ಪುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಇರುವುದರಿಂದ ಮಹಿಳೆಯರ ಸಮಸ್ಯೆಗಳು ಇಂದಿಗೂ ಕೂಡಾ ಹಾಗೆ ಉಳಿದಿವೆ ಎಂದು ಅವರು ಹೇಳಿದರು. 
 
‘ಹಿಂದೆ ಮಹಿಳೆಯರು ಹೆಚ್ಚು ಮಾತನಾಡುತ್ತಿರಲಿಲ್ಲ. ಕುಟುಂಬದ ಸದಸ್ಯರೊಂದಿಗೆ ಸೌಹಾರ್ದಯುತ ಸಂಬಂಧ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಖುಷಿಯಿಂದ ಬದುಕುತ್ತಿದ್ದರು. ಇಂದು ನಾವು ಹೆಚ್ಚು ಮಾತನಾಡುತ್ತಿದ್ದೇವೆ. ಅದರಿಂದ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಪುರುಷ, ಮಹಿಳೆ ಎನ್ನುವ ಕಂದಕ ಮುಚ್ಚುವ ನಿಟ್ಟಿನಲ್ಲಿ ಒಬ್ಬರಿಗೊಬ್ಬರೂ ಪೂರಕವಾಗಿ, ಅರ್ಥಮಾಡಿಕೊಂಡು ಬದುಕುವ ಅಗತ್ಯವಿದೆ’ ಎಂದರು.
 
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಎಲ್‌.ನಾರಾಯಣಸ್ವಾಮಿ, ವಿನೀತ ಕೊಠಾರಿ, ರಿಜಿಸ್ಟ್ರಾರ್‌ ರಾಮಚಂದ್ರ ಹುದ್ದಾರ, ವಕೀಲರ ಸಂಘದ ಅಧ್ಯಕ್ಷ ಆರ್.ಡಿ.ದೇಸಾಯಿ ಮತ್ತು ನ್ಯಾಯಾಲಯದ ಮಹಿಳಾ ಸಿಬ್ಬಂದಿ, ವಕೀಲರು ಪಾಲ್ಗೊಂಡಿದ್ದರು. 

* ಸರಿಯಾದ ಅವಕಾಶಗಳು ದೊರೆತರೆ ಮಹಿಳೆಯರು ಕೂಡಾ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾನ ಅವಕಾಶಗಳಮೂಲಕ ಸಮಾಜದಲ್ಲೂ ಬದಲಾವಣೆ ಸಾಧ್ಯವಿದೆ
ಆನಂದ ಬೈರಾರೆಡ್ಡಿ, ಹೈಕೋರ್ಟ್ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT