ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ ಬಳಿ ಹೊಸ ನಗರ ನಿರ್ಮಾಣ

ಟೆಂಡರ್‌ ಕರೆದು ಸಾಧ್ಯಾಸಾಧ್ಯತೆ ಕುರಿತ ವರದಿ ಪಡೆಯಲು ನಿರ್ಧಾರ
Last Updated 9 ಮಾರ್ಚ್ 2017, 12:01 IST
ಅಕ್ಷರ ಗಾತ್ರ
ಬೆಂಗಳೂರು: ಬೆಂಗಳೂರು ನಗರದ ಮೇಲಿನ ಒತ್ತಡ ತಗ್ಗಿಸಲು ಕೆಜಿಎಫ್‌ ಬಳಿ ಹೊಸ ನಗರವೊಂದನ್ನು ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು  ನಗರಾಭಿವೃದ್ಧಿ ಹಾಗೂ ಮೂಲ ಸೌಕರ್ಯ  ಸಚಿವ ಆರ್‌.ರೋಷನ್‌ ಬೇಗ್‌ ತಿಳಿಸಿದರು.
 
‘ಆಂಧ್ರಪ್ರದೇಶ ರಾಜಧಾನಿ ಅಮರಾವತಿ ಮಾದರಿಯಲ್ಲೇ ನಾವು ಹೊಸ ನಗರ ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕೆಜಿಎಫ್‌ನಲ್ಲಿ ಭಾರತ್‌ ಗೋಲ್ಡ್‌ಮೈನ್‌ ಲಿಮಿಟೆಡ್‌ಗೆ (ಬಿಜಿಎಂಎಲ್‌) ಸೇರಿದ 12,000 ಎಕರೆ ಭೂಮಿ ಇದೆ. ಬಿಜಿಎಂಎಲ್‌ಗೆ  ರಾಜ್ಯ ಸರ್ಕಾರವೇ ಭೂಮಿ ನೀಡಿತ್ತು. ಈಗ ಅಲ್ಲಿ ಚಿನ್ನದ ಗಣಿಗಾರಿಕೆ  ನಿಲ್ಲಿಸಿರುವುದರಿಂದ ಭೂಮಿಯನ್ನು ರಾಜ್ಯ ಸರ್ಕಾರಕ್ಕೇ ಹಿಂದಿರುಗಿಸುವಂತೆ ಕೇಂದ್ರ ಸರ್ಕಾರ ಬಿಜಿಎಂಎಲ್‌ಗೆ ಸೂಚಿಸಿದೆ ಎಂದರು.
 
 11,000 ಎಕರೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೊಸ ನಗರ ನಿರ್ಮಿಸುವುದು ಸರ್ಕಾರದ ಉದ್ದೇಶ. ಇದಕ್ಕೆ ಜಾಗತಿಕ ಟೆಂಡರ್‌ ಕರೆದು ಸಾಧ್ಯಾಸಾಧ್ಯತೆ ಕುರಿತ ವರದಿ ಪಡೆಯುವುದಾಗಿ ಅವರು ತಿಳಿಸಿದರು.
 
ಉದ್ದೇಶಿತ ಹೊಸ  ನಗರದಲ್ಲಿ 20 ಲಕ್ಷ ಜನ ವಸತಿಗೆ  ವ್ಯವಸ್ಥೆ ಮಾಡಲಾಗುವುದು. ಇದರಿಂದ ಬೆಂಗಳೂರಿನಲ್ಲಿ ಜನ ದಟ್ಟಣೆ ಕಡಿಮೆ ಆಗುತ್ತದೆ.   ಕೆಜಿಎಫ್‌ನಲ್ಲಿ  1911 ರಲ್ಲೇ ನಿರ್ಮಿಸಿದ ಗಾಲ್ಫ್‌ ಮೈದಾನ ಇದೆ. ಎರಡು ಹೆಲಿಪ್ಯಾಡ್‌ಗಳಿವೆ. 140 ಪಾರಂಪರಿಕ ಬಂಗಲೆಗಳಿವೆ ಎಂದರು.
 
ಕ್ಲಸ್ಟರ್‌ ಸಿಟಿ ಯೋಜನೆ: ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ದೊಡ್ಡಬಳ್ಳಾಪುರ, ದಾಬಸ್‌ಪೇಟೆ, ಹಾರೋಹಳ್ಳಿ ಮುಂತಾದವುಗಳನ್ನು ಉಪನಗರಗಳನ್ನಾಗಿ ಅಭಿವೃದ್ಧಿಪಡಿಸಲು ಕ್ಲಸ್ಟರ್‌ ಸಿಟಿ ಯೋಜನೆಯನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್‌  ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ರೋಷನ್‌ ಬೇಗ್‌ ತಿಳಿಸಿದರು.
 
ಮೊದಲ ಹಂತದಲ್ಲಿ ದೇವನಹಳ್ಳಿ ಬಳಿ ₹2,800 ಕೋಟಿ ಅಂದಾಜು ವೆಚ್ಚದಲ್ಲಿ  ಉಪನಗರ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ  ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ ₹ 400 ಕೋಟಿ ನೆರವು ಪಡೆಯಲಾಗುವುದು. ಉದ್ಯೋಗ ಮತ್ತು  ವಸತಿ ಎರಡೂ ಹತ್ತಿರ ಇರುವಂತೆ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ 8,000 ಎಕರೆ ಭೂಮಿ ಬೇಕಾಗುತ್ತದೆ. ಸಮಗ್ರ  ಯೋಜನಾ ವರದಿ ತಯಾರಿಸಿದ ನಂತರವೇ ಭೂಮಿ ಗುರುತಿಸಲಾಗುವುದು ಎಂದು ಹೇಳಿದರು.
 
ಬೆಂಗಳೂರು  ಸುತ್ತಮುತ್ತ  ಕ್ಲಸ್ಟರ್‌ಸಿಟಿಗಳನ್ನು ಅಭಿವೃದ್ಧಿಪಡಿಸುವುದರಿಂದಲೂ  ಬೆಂಗಳೂರಿನ ಜನ ದಟ್ಟಣೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
 
ನಿರಂತರ ಸಮಗ್ರ ನೀರು ಯೋಜನೆ
ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆ ಮಾಡುವ ನಿರಂತರ ಸಮಗ್ರ ನೀರು ಯೋಜನೆ ರಾಜ್ಯದ 55 ನಗರ–ಪಟ್ಟಣಗಳಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ರೋಷನ್‌ ಬೇಗ್‌ ತಿಳಿಸಿದರು.

ಈಗಾಗಲೇ ಇಳಕಲ್‌ ನಗರದಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಎಷ್ಟು ನೀರು ಬಳಸುತ್ತಾರೋ ಅಷ್ಟಕ್ಕೆ ಬಿಲ್‌ ನೀಡಬೇಕು. ಈ ವರ್ಷ ಒಟ್ಟು 15 ನಗರ– ಪಟ್ಟಣಗಳಲ್ಲಿ ಯೋಜನೆ ಕಾರ್ಯಗತವಾಗಲಿದೆ. ಉಳಿದವು ಮೂರು ವರ್ಷಗಳ ಒಳಗೇ ಜಾರಿಯಾಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT