ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಭಾವ ಸಲ್ಲ’

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
Last Updated 9 ಮಾರ್ಚ್ 2017, 12:06 IST
ಅಕ್ಷರ ಗಾತ್ರ
ರಾಮನಗರ: ‘ಕಳೆದ ಅರವತ್ತೈದು ವರ್ಷಗಳಲ್ಲಿ ಮಹಿಳಾ ಕ್ಷೇತ್ರದಲ್ಲಿ ಬಹಳ ದೊಡ್ಡ ಬದಲಾವಣೆ ಆಗಿದ್ದರೂ ಹೆಣ್ಣು ಮಗು ಜನಿಸಿದರೆ ಶಾಪ ಎನ್ನುವ ಭಾವನೆ ಸಮಾಜದಲ್ಲಿ ಇನ್ನು ಅಳಿಸಿ ಹೋಗಿಲ್ಲ’ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಎಂ. ಪದ್ಮಾವತಿ ಬೇಸರ ವ್ಯಕ್ತಪಡಿಸಿದರು.
 
ಡಾನ್‌ ಬೋಸ್ಕೊ ಯುವ ಮಾರ್ಗದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
‘ಇಂದಿನ ವಿದ್ಯಾವಂತ ಸಮಾಜದಲ್ಲಿಯೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ಇದಕ್ಕೆ ವರದಕ್ಷಿಣೆ ಪಿಡುಗು ಮತ್ತು ವಂಶೋದ್ಧಾರಕ ಬೇಕು ಎಂಬ ಮೂಢನಂಬಿಕೆ ಕಾರಣ’ ಎಂದರು.
 
‘ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದೇ ಕಷ್ಟಸಾಧ್ಯವಾಗಿತ್ತು. ಇಂದು ಶಿಕ್ಷಣ ಉದ್ಯೋಗ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಅವಕಾಶ ಅರಸಿ ಹೋಗುತ್ತಿದ್ದಾರೆ. ವೈದ್ಯಕೀಯ, ಕಾನೂನು ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಿ ಪುರುಷರಿಗೆ ಸರಿಸಾಟಿ ಆಗಿರುವುದು ಕ್ರಾಂತಿಕಾರಿ ಬದಲಾವಣೆ. ಇದರಿಂದ ಹೆಣ್ಣು ಮಕ್ಕಳ ಎಲ್ಲಾ ಸಮಸ್ಯೆಗಳು ಮುಗಿದಿದೆ ಎಂದು ಅರ್ಥ ಅಲ್ಲ’ ಎಂದು ತಿಳಿಸಿದರು.
 
ಡಾನ್‌ ಬೋಸ್ಕೊ ಯುವ ಮಾರ್ಗದ ನಿರ್ದೇಶಕ ಸೋಣಿಚನ್‌ ಮ್ಯಾಥ್ಯೂ ಮಾತನಾಡಿ ‘ಇಂದು ದೊಡ್ಡ ಸಮಸ್ಯೆಯೆಂದರೆ ಮಹಿಳಾ ಸುರಕ್ಷತೆ, ಆಕೆ ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಭರವಸೆ ಇಲ್ಲ ಎಂದ ಹೇಳಿದರು. ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಮಹಿಳೆ ತಾನು ಸುರಕ್ಷಿತಳು ಎಂಬ ಭಾವನೆ ಮೂಡುವ ವಾತಾವರಣ ನಿರ್ಮಾಣ ಆಗಬೇಕು’ ಎಂದರು.
 
ಕಾಲೇಜಿನ ಪ್ರಾಚಾರ್ಯೆ ಟಿ.ಡಿ. ಕನಕಾ ಮಾತನಾಡಿ ‘ಮಹಿಳಾ ಪರ ಕಾನೂನು ಬಲಗೊಂಡಿದ್ದರೂ ಅವರ ಮೇಲಿನ ದೌರ್ಜನ್ಯ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ದೇಶದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಕಾನೂನಿನಿಂದ ಸಾಧ್ಯವಿಲ್ಲ ಎಂದರು. 
 
ಹಾಗಾಗಿ ಮಹಿಳೆಯರು ಧೈರ್ಯದಿಂದ ತಮ್ಮ ಎಲ್ಲಾ ಸಮಸ್ಯೆಗಳನ್ನು ಎದುರಿಸಬೇಕು. ಮಹಿಳೆಯರು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವ ಮೂಲಕ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.
 
ಡಾನ್‌ ಬೋಸ್ಕೊ ಯುವ ಮಾರ್ಗದ ಸಾಮಾಜಿಕ ಕಾರ್ಯಕರ್ತರಾದ ಪುಷ್ಪಲತಾ, ಪುಷ್ಪಾವತಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯರಾದ ಎನ್‌. ವಸುಧಾ, ವೀಣಾ, ಅಕ್ಷರ ದಾಸೋಹ ಸಂಘಟನೆಯ ನಿರ್ಮಲಾ, ಲತಾ, ಸ್ಪಂದನ ಸಂಘಟನೆಯ ರೋಜ್‌ಮೇರಿ, ಆಪ್ತ ಸಮಾಲೋಚಕಿ ಎಸ್. ಪದ್ಮರೇಖಾ ಇತರರು ಇದ್ದರು. 
 
ಸಾಧಕರ ಸನ್ಮಾನ
ಇದೇ ಸಂದರ್ಭದಲ್ಲಿ ಜನಪದ ಗಾಯಕಿಯರಾದ ಮಾಯಮ್ಮ, ಬಾನಂದೂರುಬೋರಮ್ಮ, ‘ದಾರಿ ದೀಪ’ ವೃದ್ಧಾಶ್ರಮದ ಸಂಸ್ಥಾಪಕಿ ಕವಿತಾರಾವ್‌, ಸಮಾಜಸೇವಕಿ ವನಜಾಕ್ಷಿ ಹೆಗಡೆ, ಪಿ. ಶಿಲ್ಪ ಅವರನ್ನು ಸನ್ಮಾನಿಸಲಾಯಿತು.

ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಎನ್‌. ವಸುಧಾ ಬರೆದಿರುವ ‘ವಿಮೆನ್‌ ಇನ್‌ ದಿ ಲೈಫ್‌ ಆಫ್‌ ಸಾಮ್ರಾಟ್‌ ಅಶೋಕ’ ಎಂಬ ಕೃತಿಯನ್ನು ಪ್ರಾಚಾರ್ಯೆ ಟಿ.ಡಿ. ಕನಕಾ ಅವರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT