ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಗೆ ‘ತಿಲ್ಲಾಂಚಾಂಗ್‌’ ಸೇರ್ಪಡೆ

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಾರವಾರ: ಕ್ಷಿಪ್ರ ದಾಳಿ ನಡೆಸುವ ಸಾಮರ್ಥ್ಯವಿರುವ ‘ಐಎನ್‌ಎಸ್‌ ತಿಲ್ಲಾಂಚಾಂಗ್‌’ ನೌಕೆಯು ಗುರುವಾರ ಮುಂಜಾನೆ ಇಲ್ಲಿನ ಸೀಬರ್ಡ್‌ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಯಾಯಿತು.

ಸ್ವದೇಶಿ ನಿರ್ಮಿತ ಈ ನೌಕೆಯನ್ನು ಪಶ್ಚಿಮ ನೌಕಾಪಡೆಯ ಚೀಫ್‌ ಕಮಾಂಡಿಂಗ್‌ ಫ್ಲ್ಯಾಗ್‌ ಆಫೀಸರ್‌ ವೈಸ್‌ ಅಡ್ಮಿರಲ್‌ ಗಿರೀಶ್‌ ಲೂಥ್ರಾ ಲೋಕಾರ್ಪಣೆ ಮಾಡಿದರು. ಕರ್ನಾಟಕ ಕರಾವಳಿಯ ತೀರ ಪ್ರದೇಶ ಹಾಗೂ ಸಮುದ್ರದಲ್ಲಿ ಗಸ್ತು ಕಾರ್ಯಕ್ಕಾಗಿ ಈ ಯುದ್ಧನೌಕೆಯನ್ನು ನಿಯೋಜಿಸಲಾಗುತ್ತಿದ್ದು, ಕಾರವಾರ ನೌಕಾನೆಲೆ ಇದರ ಕೇಂದ್ರಸ್ಥಾನವಾಗಿದೆ.

ನಿಕೋಬಾರ್‌ ದ್ವೀಪ ಸಮೂಹದಲ್ಲಿ ಒಂದಾಗಿರುವ ತಿಲ್ಲಾಂಚಾಂಗ್‌ ದ್ವೀಪದ ಹೆಸರನ್ನು ಈ ನೌಕೆಗೆ ಇಡಲಾಗಿದ್ದು, ಇದರಲ್ಲಿ ಅಧಿಕಾರಿಗಳು ಸೇರಿದಂತೆ 50 ನೌಕಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

ಶಸ್ತ್ರಾಸ್ತ್ರ ಅಳವಡಿಕೆ: ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಮಧ್ಯಮ ಹಾಗೂ ಲಘು ಗಾತ್ರದ ಮಷಿನ್‌ ಗನ್‌ಗಳನ್ನು ಈ ನೌಕೆಯಲ್ಲಿ ಅಳವಡಿಸಲಾಗಿದೆ. ಕನಿಷ್ಠ ಮಟ್ಟದ ನೀರಿನಲ್ಲಿ ಕೂಡ ಸಂಚರಿಸುವ ಸಾಮರ್ಥ್ಯ ಹೊಂದಿರುವುದು ಈ ನೌಕೆಯ ವಿಶೇಷ.

ಕೋಲ್ಕತ್ತಾದ ಗಾರ್ಡನ್‌ ರೀಚ್‌ ಶಿಪ್‌ ಬಿಲ್ಡರ್ಸ್‌ ಅಂಡ್‌ ಎಂಜಿನಿಯರ್‍್ಸ್‌ (ಜಿಆರ್‌ಎಸ್‌ಇ) ಸಂಸ್ಥೆಯು ಈ ನೌಕೆಯನ್ನು ನಿರ್ಮಿಸಿದೆ. ಈ ಸರಣಿಯಲ್ಲಿ ನಾಲ್ಕು ಯುದ್ಧ ನೌಕೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಟರ್‌ಮಗ್ಲಿ ಮತ್ತು ತಿಹಾಯು ಎನ್ನುವ ನೌಕೆಗಳು ನೌಕೆಗಳು ವಿಶಾಖಪಟ್ಟಣದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಪಶ್ಚಿಮ ಕರಾವಳಿಗೆ ನೀಡಿರುವ ಪ್ರಥಮ ಯುದ್ಧನೌಕೆ ಇದಾಗಿದೆ. ಈ ಯುದ್ಧನೌಕೆಯಲ್ಲಿ ಪ್ರೊಪೆಲ್ಲರ್ ತಂತ್ರಜ್ಞಾನದ ಬದಲಾಗಿ 3 ಬಲಿಷ್ಠ ವಾಟರ್ ಜೆಟ್ ಎಂಜಿನ್‌ಗಳನ್ನು  ಅಳವಡಿಸಲಾಗಿದೆ. ಟರ್ಬೈನ್‌ ಮಾದರಿಯಲ್ಲಿರುವ ಈ ವಾಟರ್ ಜೆಟ್‌ಗಳು ನೀರನ್ನು ಸೆಳೆದುಕೊಂಡು ನೌಕೆಯನ್ನು ವೇಗವಾಗಿ ಮುನ್ನಡೆಸಿಕೊಂಡು ಹೋಗುತ್ತವೆ.

ರಕ್ಷಣಾ ಕಾರ್ಯಗಳಿಗೂ ಸನ್ನದ್ಧ: ಕಮಾಂಡರ್ ಅದಿತ್‌ ಪಟ್ನಾಯಕ್ ಅವರ ನೇತೃತ್ವದಲ್ಲಿ ಈ ನೌಕೆಯು ಕಾರ್ಯಾಚರಣೆ ನಡೆಸಲಿದೆ. ಕರಾವಳಿ ಮತ್ತು ಸಮುದ್ರದಲ್ಲಿ ಕಣ್ಗಾವಲು, ನುಸುಳುಕೋರರು ಅಥವಾ ಕಳ್ಳ ಸಾಗಾಣಿಕೆಗಾರರ ಮೇಲೆ ನಿಗಾ ಮತ್ತು ತಡೆ, ವಿಶೇಷ ಆರ್ಥಿಕ ವಲಯದ (ಇಇಝಡ್) ನಿಯಂತ್ರಣ, ಕಾನೂನು ಪರಿಪಾಲನೆ ಮಾತ್ರವಲ್ಲದೇ ಮಿಲಿಟರಿಯೇತರ ಕಾರ್ಯಗಳಾದ ರಕ್ಷಣಾ ಕಾರ್ಯಾಚರಣೆ, ಮಾನವೀಯ ನೆರವುಗಳು, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಈ ಯುದ್ಧನೌಕೆ ಸನ್ನದ್ಧವಾಗಿದೆ.

2ನೇ ಹಂತದ ಯೋಜನೆ: ‘ಸೀಬರ್ಡ್‌ ಯೋಜನೆಯ 2ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, 2021–22ನೇ ಸಾಲಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಈ ನೌಕಾನೆಲೆಯು ಅನೇಕ ಯುದ್ಧನೌಕೆಗಳ ತಂಗುದಾಣ ಆಗಲಿದ್ದು, ವಿಮಾನ ವಾಹಕ ಯುದ್ಧನೌಕೆ, ಸಬ್‌ಮರಿನ್‌ಗಳು ಇಲ್ಲಿಂದಲೇ ಕಾರ್ಯಾಚರಣೆ ನಡೆಸಲಿವೆ’ ಎಂದು ಕರ್ನಾಟಕ ಫ್ಲ್ಯಾಗ್‌ ಆಫೀಸರ್‌ ರಿಯರ್ ಅಡ್ಮಿರಲ್ ಕೆ.ಜೆ.ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.

ವೈಶಿಷ್ಟ್ಯಗಳು..
ವೇಗದ ದಾಳಿ ನಡೆಸಬಹುದಾದ ವಾಟರ್‌ ಜೆಟ್‌ ತಂತ್ರಜ್ಞಾನದ ನೌಕೆ
320 ಟನ್‌ ತೂಕದ ಸಾಮಗ್ರಿ ಹೊತ್ತೊಯ್ಯಬಲ್ಲದು
ನೌಕೆಯ ಉದ್ದ 48.9 ಮೀಟರ್‌, ಅಗಲ 7.7 ಮೀಟರ್‌ 
35 ನಾಟಿಕಲ್‌ ಮೈಲು (50 ಕಿ.ಮೀ.) ವೇಗದಲ್ಲಿ ಚಲಿಸುವ ಸಾಮರ್ಥ್ಯ
ಲಘು ಹಾಗೂ ಮಧ್ಯಮ ಗಾತ್ರದ ಗನ್‌ಗಳ ಜೋಡಣೆ

***

ಐಎನ್‌ಎಸ್‌ ತಿಲ್ಲಾಂಚಾಂಗ್‌ ನೌಕೆಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆಗೆ ಇನ್ನಷ್ಟು ಬಲ ಬಂದಿದೆ.
- ಗಿರೀಶ್‌ ಲೂಥ್ರಾ, ವೈಸ್‌ ಅಡ್ಮಿರಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT