ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಗುಂದದೆ ಮುನ್ನುಗ್ಗಿ ಸವಾಲುಗಳನ್ನು ಎದುರಿಸಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಎಸ್ಪಿ ಎನ್‌.ಚೈತ್ರಾ ಅಭಿಮತ
Last Updated 10 ಮಾರ್ಚ್ 2017, 8:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹೆಣ್ಣುಮಕ್ಕಳು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಎದೆಗುಂದದೆ ಮುನ್ನುಗ್ಗಿ ಸವಾಲುಗಳನ್ನು ಎದುರಿಸಿ ಕೆಲಸ ಮಾಡುವ ಸ್ವಭಾವ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್ಪಿ) ಎನ್‌.ಚೈತ್ರಾ ಪ್ರತಿಪಾದಿಸಿದರು.

ನಗರ ಹೊರವಲಯದಲ್ಲಿರುವ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಇತ್ತೀಚೆಗೆ ಭಾರತೀಯ ಎಂಜಿನಿಯರ್ ಸಂಸ್ಥೆ (ಐಇಐ) ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಸಹಯೋಗದಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗ ಅವರನ್ನು ನೋಡುವ ದೃಷ್ಟಿಕೋನ, ಸ್ವೀಕರಿಸುವ ಮನೋಭಾವದಲ್ಲಿಯೇ ತಾರತಮ್ಯವಿದೆ. ಆದ್ದರಿಂದ ಇವತ್ತು ಹೆಣ್ಣುಮಕ್ಕಳು ತಮ್ಮ ಸ್ವಭಾವ ಬದಲಾಯಿಸಿಕೊಳ್ಳುವ ಅಗತ್ಯವಿದೆ.

ಎಂತಹ ಸನ್ನಿವೇಶಗಳಲ್ಲೂ ದೃತಿಗೇಡದೆ ಉನ್ನತ ಗುರಿಗಳನ್ನು ಇಟ್ಟುಕೊಂಡು ಅವುಗಳತ್ತ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಬೆಳಗಾವಿ ಕೆಎಲ್‌ಇ ಎಂ.ಎಸ್.ಶೇಷಗಿರಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥೆ ಪ್ರೋ ಭಾರತಿ ವಿ.ಚಿನಿವಾಲರ್ ಮಾತನಾಡಿ, ‘ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಮತ್ತು ಧನ್ಮಾತ್ಮಕ ಚಿಂತನೆಗಳು ಮನೆ ಮಾಡುತ್ತವೆ ಎನ್ನುವುದು ನಮ್ಮ ಸಂಸ್ಕಾರ.

ಆದರೆ ಈ ತಂತ್ರಜ್ಞಾನ ಯುಗದಲ್ಲಿಯೂ ಅದು ಮುಂದುವರಿಯಬೇಕಿತ್ತು. ಹಾಗಾಗುತ್ತಿಲ್ಲ. ನಿರ್ಭಯಾ ಪ್ರಕರಣ ನಡೆಯಬಾರದಿತ್ತು. ಈ ಹೊತ್ತಿನಲ್ಲಿ ನಮ್ಮ ಆ ಸಂಸ್ಕಾರವನ್ನು ಮುನ್ನಡೆಸಿಕೊಂಡು ಬರುವ ಜವಾಬ್ದಾರಿ ಸಮಾಜ ಮತ್ತು ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ಮಹಿಳಾ ಶೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ಗೀಳಾಗಿದೆ. ಯುವತಿಯವರು ಕೇವಲ ಫೇಸ್‌ಬುಕ್‌ನಲ್ಲಿ ಬರುವ ವಿಚಾರಗಳಿಗೆ ಲೈಕ್ ಮಾಡಬೇಡಿ. ನಿಮ್ಮ ಅಸ್ತಿತ್ವ ತೋರಿಸಿಕೊಳ್ಳುವ ಜತೆಗೆ ಮಹಿಳಾ ಪರವಾದ ಕೆಲಸಗಳಿಗೆ ಕೈಜೋಡಿಸಿ.

ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಇವತ್ತು ಮಹಿಳೆ ಕೇವಲ ಹೆಣ್ಣಾಗಿ ಉಳಿಯಬಾರದು. ಧೀಮಂತವಾದ ಕೆಲಸಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಏನಾದರೂ ಮರಳಿ ಕೊಡಬೇಕು’ ಎಂದರು.

ಎನ್‌.ಚೈತ್ರಾ, ಪ್ರೋ ಭಾರತಿ ವಿ.ಚಿನಿವಾಲರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸುವರ್ಣಾ, ಶಾಂತಲಾ, ಬಿ.ಆರ್.ಜಯಲಕ್ಷ್ಮಿ, ಎಂ.ರಾಜೇಶ್ವರಿ ಮತ್ತು ಬಿ.ಸುರೇಖಾ ಅವರನ್ನು ಸನ್ಮಾನಿಸಲಾಯಿತು.

ನಾಗಾರ್ಜುನ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಎಸ್‌.ಜಿ.ಗೋಪಾಲ್ ಕೃಷ್ಣ, ಜಿ.ಎಸ್.ವೆಂಕಟೇಶ್, ಐಇಐ ರಾಜ್ಯ ಕೇಂದ್ರದ ಅಧ್ಯಕ್ಷ ಎನ್‌.ಚಿಕ್ಕಣ್ಣ, ಪ್ರೊ.ರಘೋತ್ತಮ್ ರಾವ್, ಎಸ್.ಸಾಕಮ್ಮ ಹಾಜರಿದ್ದರು.

*
ಪ್ರತಿಫಲಾಪೇಕ್ಷೆ ಇಲ್ಲದೆ ಕಷ್ಟಪಟ್ಟು ಮಕ್ಕಳನ್ನು ಬೆಳೆಸುವ ತಾಯಿ ಪ್ರತಿಯೊಬ್ಬರ ಜೀವನದಲ್ಲಿ ಮಹಾನ್ ತ್ಯಾಗಮಯಿ. ಆದ್ದರಿಂದ ಮಕ್ಕಳು ಪೋಷಕರ ಪಾಲನೆ ಮರೆಯಬಾರದು.
-ಎನ್‌.ಚೈತ್ರಾ, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT