ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮರು ವಿಂಗಡಣೆಗೆ ಆಗ್ರಹ

ಪಾಲಿಕೆ ವಾರ್ಡ್ ಮರು ವಿಂಗಡಣೆ ಅವೈಜ್ಞಾನಿಕ: ಬಿಜೆಪಿ ಆರೋಪ
Last Updated 10 ಮಾರ್ಚ್ 2017, 8:58 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್‌ ವಿಂಗಡಣೆ  ಹಲವಾರು ಲೋಪದೋಷಗಳಿಂದ ಕೂಡಿದೆ ಎಂದು  ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ.ಎನ್.ರಮೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶಯ್ಯ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾರ್ಡ್ ಮರು ವಿಂಗಡಣೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಹದಿನೈದು ದಿನಗಳ ಗಡುವು ನೀಡಬೇಕು. ಆದರೆ 13 ದಿನಗಳ ಗಡುವು ನೀಡಲಾಗಿದೆ. ಗಡುವು ನೀಡಿರುವ ಗೆಜೆಟ್‌ ಪ್ರಕಟಣೆಯೂ ತಪ್ಪಿನಿಂದ ಕೂಡಿದೆ ಎಂದು ಟೀಕಿಸಿದ್ದಾರೆ.

2011ರ ಜನಗಣತಿಯ ಆಧಾರದ ಮೇಲೆ ಪ್ರಾದೇಶಿಕ ಚುನಾವಣಾ ಕ್ಷೇತ್ರವನ್ನು ವಿಂಗಡಿಸಿರುವುದು ಸಮಂಜಸ ಅಲ್ಲ.  ಪುನರ್ ವಿಂಗಡಣೆಯ ವೇಳೆ ಜನ ವಸತಿ ಪ್ರದೇಶ, ಬಡಾವಣೆಗಳ ಚೆಕ್ಕು ಬಂದಿ, ಭೌಗೋಳಿಕ ಪ್ರದೇಶ– ಎಲ್ಲವನ್ನು ಸಹ ಕೂಲಂಕಷವಾಗಿ ಪರಿಶೀಲಿಸದೆ ಆತುರ ಆತುರದಲ್ಲಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಾರ್ಡ್‌ವಾರು ಜನಸಂಖ್ಯೆಯ ನಿರ್ಧರಣೆಯಲ್ಲಿಯೂ ಅಧಿಕ ಮಟ್ಟದ ತಾರತಮ್ಯವಿರುವುದು ಕಾಣುತ್ತದೆ. ಬನಶಂಕರಿಯ 17ನೇ ವಾರ್ಡ್‌ನ ಜನಸಂಖ್ಯೆ 6624 ಇದ್ದರೆ, ಅದರ ಪಕ್ಕದ ವಾರ್ಡ್‌ ಶಾಂತಿನಗರದ ಜನಸಂಖ್ಯೆ 11 ಸಾವಿರ ಇದೆ. ಇದಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪುನರ್ ವಿಂಗಡಣೆಯಲ್ಲಿ ರಾಜಕೀಯ ಹಸ್ತಕ್ಷೇಪವಿರುವುದು ಎದ್ದು ಕಾಣುತ್ತದೆ. ಅಲ್ಪಸಂಖ್ಯಾತರ ಮತಗಳನ್ನ ನಿರ್ಣಾಯಕ ಮಾಡುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಉದಾಹರಣೆಗೆ 18ನೇ ವಾರ್ಡ್‌ನ ಬನಶಂಕರಿಗೆ ಉಪ್ಪಾರಹಳ್ಳಿಯ ಟೈಲ್ಸ್ ಫ್ಯಾಕ್ಟರಿಯ ಎಡ ಹಾಗೂ ಬಲ ಭಾಗದ ಮನೆಗಳನ್ನು ಮತ್ತು ಮಸೀದಿಯ ಹಿಂಭಾಗದ ಮನೆಗಳನ್ನು ದುರುದ್ದೇಶದಿಂದ ಸೇರಿಸಲಾಗಿದೆ.

ಮತ್ತು 12ನೇ ವಾರ್ಡ್‌ನ ಸದಾಶಿವನಗರ ಬಡಾವಣೆಗೆ ನಜರಾಬಾದ್‌ನ 1 ರಿಂದ 5ನೇ ಕ್ರಾಸ್, ಸತ್ತಾರ್ ಸಾಬ್ ರಸ್ತೆ, ಅಲೀಸಾಬ್ ಮನೆ ಹಿಂಭಾಗ, ಮಸೀದಿ ರಸ್ತೆ ಸೇರಿಸಿರುವುದು. ಹಾಗೇಯೇ 15ನೇ ವಾರ್ಡ್‌ಗೆ ಈದ್ಗಾ ಮೊಹಲ್ಲಾದ 1,2,3ನೇ ಅಡ್ಡ ರಸ್ತೆಗಳನ್ನು ಸೇರಿಸಲಾಗಿದೆ. ಈ ಬಡಾವಣೆಗಳನ್ನು ಸೇರಿಸಲು ಶಾಸಕರು ರಾಜಕೀಯ ಹಸ್ತಕ್ಷೇಪಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಮರು ವಿಂಗಡಣೆಯಲ್ಲಿ ವಾರ್ಡ್‌ ಸರಹದ್ದಿನ ವ್ಯಾಪ್ತಿಗೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ, ರೈಲ್ವೆಹಳಿಗಳನ್ನು ಒಳಗೊಂಡಂತೆ ವ್ಯಾಪ್ತಿಯನ್ನು ನಿರ್ಧರಿಸದಂತೆ ನಿಯಮವಿದೆ. ಆದರೆ ಹಲವಾರು ಕಡೆ ಈ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮರು ವಿಂಗಡಣೆ ಸರಿ ಇಲ್ಲವೆಂದು ಬಿಜೆಪಿಯಿಂದ ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಂಡು ವಾರ್ಡ್‌ಗಳನ್ನು ಮತ್ತೆ ಮರು ವಿಂಗಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT