ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರಿಗೆ ಹಕ್ಕುಪತ್ರ ನೀಡಲು ಆದೇಶ

94ಸಿ ಮತ್ತು 94ಸಿಸಿ ಅನ್ವಯ ಅರ್ಜಿ ಸಲ್ಲಿಕೆ– ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ
Last Updated 10 ಮಾರ್ಚ್ 2017, 9:37 IST
ಅಕ್ಷರ ಗಾತ್ರ

ಉಡುಪಿ: ಮನೆ ನಿವೇಶನಕ್ಕಾಗಿ ಕಂದಾಯ ತಿದ್ದುಪಡಿ ಕಾಯ್ದೆ 94ಸಿ ಮತ್ತು 94ಸಿಸಿ ಅನ್ವಯ ಅರ್ಜಿ ಸಲ್ಲಿಸಿ ರುವ ಅರ್ಹರಿಗೆ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆಯಿಂದ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ನಮೂನೆ 50–53, ಹಾಗೂ 94ಸಿ, 94ಸಿಸಿ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಮೀನಿನ ವಿಶೇಷ ಹಕ್ಕು ಕಾಯ್ದೆಯಡಿ ಸರ್ಕಾರಿ ಜಾಗವನ್ನು ಗುರುತಿಸಿ ಅರ್ಹರಿಗೆ ಹಂಚಲಾಗುವುದು.

ಕುಮ್ಕಿ ಮತ್ತು ಡೀಮ್ಡ್‌ ಫಾರೆಸ್ಟ್ ಸಂಬಂಧಿಸಿದ ವಿಷಯ ವನ್ನು ಸಂಪುಟ ಉಪಸಮಿತಿಯು ಪರಿಶೀಲಿಸುತ್ತಿದ್ದು, 15 ದಿನಗಳ ಒಳಗೆ ನಿರ್ಣಯ ತೆಗೆದುಕೊಂಡು ಆದೇಶ ಹೊರಡಿಸಲಾಗುವುದು. ಕುಮ್ಕಿ ಭೂಮಿ ಸರ್ಕಾರಿ ಭೂಮಿ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದು, ಈ ಬಗ್ಗೆ ಸುತ್ತೋಲೆ ಕಳುಹಿಸಲಾಗುವುದು. ಈ ಸುತ್ತೋಲೆಯನ್ನು ಅನುಷ್ಠಾನಕ್ಕೆ ತನ್ನಿ ಎಂದು ಕಂದಾಯ ಇಲಾಖೆ ಅಧಿಕಾರಿ ಗಳಿಗೆ ಅವರು ಸೂಚನೆ ನೀಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಸಂಬಂ ಧಪಟ್ಟ ಗ್ರಾಮ ಅರಣ್ಯ ಸಮಿತಿಗೆ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಗೋಮಾಳಕ್ಕೆ ಸಂಬಂಧಿಸಿದಂತೆ ಕಳುಹಿಸಿರುವ ಸುತ್ತೋಲೆಗಳನ್ನು ತಹಶೀಲ್ದಾರ್‌ಗಳು ಸ್ಪಷ್ಟವಾಗಿ ಓದಿ ಅನುಷ್ಠಾನಕ್ಕೆ ತರಬೇಕು. ಮಾಹಿತಿಯ ಕೊರತೆಯಿಂದ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೆ ಅರ್ಜಿಯನ್ನು ಈಗಲೂ ಸ್ವೀಕರಿಸಿ ಎಂದು ತಾಕೀತು ಮಾಡಿದರು. 

ಬಾಪೂಜಿ ಸೇವಾ ಕೇಂದ್ರ ದಲ್ಲಿ ನೀಡುವ ಸೇವೆಗಳ ಬಗ್ಗೆ ಮಾಹಿತಿ ನೀಡಿ. ಬರ, ಕುಡಿಯುವ ನೀರು, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಣಕ್ಕೆ ಕೊರತೆ ಇಲ್ಲ, ಅಂದಾಜುಪಟ್ಟಿ ತಯಾರಿಸಿ ಕಳುಹಿಸಿಕೊಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಪಂಚಾಯಿತಿಗಳು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರ ಕಳುಹಿಸುವ ಸುತ್ತೋಲೆಗಳ ಮಾಹಿತಿಯನ್ನು ಜನರಿಗೆ ನೀಡಬೇಕು ಎಂದರು.

ಗೋಮಾಳಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು, ಈ ಆದೇಶ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹೇಳಿದರು.

ಪೋಡಿ ಮುಕ್ತ ಗ್ರಾಮ, ಪಿಂಚಣಿ ಅದಾಲತ್, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಸರ್ವೇಯರ್ ಬಗ್ಗೆ, ಹುದ್ದೆ ಮಂಜೂರಾತಿ ಬಗ್ಗೆ, ವಿದ್ಯಾರ್ಥಿ ನಿಲಯಗಳಿಗೆ ಭೂಮಿ ಕಾಯ್ದಿರಿಸುವಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಚಿವ ಪ್ರಮೋದ್ ಮಧ್ವರಾಜ್‌, ಶಾಸಕರಾದ ವಿನಯ ಕುಮಾರ್‌ ಸೊರಕೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಹೆಚ್ಚುವರಿ ಜಿಲ್ಲಾ ಧಿಕಾರಿ ಜಿ. ಅನುರಾಧಾ, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್‌  ಉಪಸ್ಥಿತರಿದ್ದರು.

ಅಧಿಕಾರಕ್ಕಾಗಿ ಪಕ್ಷ ಬದಲಾವಣೆ ಸಲ್ಲ: ಸಚಿವ
ಮಂಗಳೂರು:
ಅಧಿಕಾರ ಇರಲಿ, ಇಲ್ಲದಿರಲಿ ಒಂದು ಪಕ್ಷಕ್ಕೆ ಸೇರಿದ ಮೇಲೆ ಅದರ ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಆದರೆ ಅಧಿಕಾರಕ್ಕಾಗಿಯೇ ಪಕ್ಷ ಬದಲಾಯಿಸುವುದು ಒಳ್ಳೆಯದಲ್ಲ.  ಕುಮಾರ್ ಬಂಗಾರಪ್ಪ ಮತ್ತು ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಪಕ್ಷ ತೊರೆದರೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗಲ್ಲ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಅನೇಕ ನಾಯಕರು ಇದ್ದಾರೆ. ಎಸ್.ಎಂ.ಕೃಷ್ಣ ತುಂಬಾ ಹಿರಿಯ ನಾಯಕರು. ರಾಜಕಾರಣಿಗಳು ಕಾರ್ಯಕ್ರಮ, ಸಿದ್ಧಾಂತ ಆಧಾರದಲ್ಲಿ ಪಕ್ಷ ಸೇರುತ್ತಾರೆ.  ಎಲ್ಲ ಅಧಿಕಾರ ಅನುಭವಿಸಿದ ನಂತರ ಈಗ ಅದು ಕೊಳೆತು ಹೋಯಿತಾ? ಎಂದು ಪ್ರಶ್ನಿಸಿದರು. ಇಲ್ಲಿ ಸಂತೆ ವ್ಯಾಪಾರ ಮಾಡುವುದು ಸರಿಯಲ್ಲ ಎಂದರು.

ಪಕ್ಷದ ಹಿರಿಯರು ನನ್ನನ್ನು ರಾಜಕೀಯವಾಗಿ ತುಳಿದರು ಎಂದು ಕುಮಾರ್‌ ಬಂಗಾರಪ್ಪ ಮಾಡಿರುವ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ತಂದೆ ತಾಯಿಯನ್ನು ಹೊರಹಾಕಿದ್ದಾಗಿ, ಅವರಪ್ಪನೇ ನನ್ನಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ನಾನೇನು ಹೆಚ್ಚಿಗೆ ಮಾತನಾಡುವುದಿಲ್ಲ’ ಎಂದು ಹೇಳಿದರು.

*
ಅರಣ್ಯ ಹಕ್ಕು ಸಮಿತಿಯು ಶಿವಮೊಗ್ಗ ಮಾದರಿಯನ್ನು ಅನುಸರಿಸಿದರೆ ಭೂಮಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. ಈ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸುತ್ತೇನೆ.
-ಕಾಗೋಡು ತಿಮ್ಮಪ್ಪ,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT