ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ವಿರುದ್ಧ ಸುಪ್ರೀಂ ಕೋರ್ಟ್‌ ವಾರಂಟ್

Last Updated 10 ಮಾರ್ಚ್ 2017, 10:44 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಮೂರ್ತಿಗಳ ವಿರುದ್ಧ ಆರೋಪ ಹೊರಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕೋಲ್ಕತ್ತ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರ ಬಂಧನಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಪ್ರಕರಣ ಸಂಬಂಧ ಖುದ್ದು ಹಾಜರಾಗದ ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರ ಬಂಧನಕ್ಕೆ ವಾರಂಟ್‌ ಜಾರಿ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರನ್ನೊಳಗೊಂಡ ಏಳು ನ್ಯಾಯಾಧೀಶರ ಪೀಠ ಹೇಳಿದೆ.

ನ್ಯಾಯಮೂರ್ತಿ ಸಿ.ಎಸ್‌. ಕರ್ಣನ್‌ ಅವರನ್ನು ಬಂಧಿಸಿ, ಮುಂದಿನ ವಿಚಾರಣೆ ದಿನಾಂಕ ಮಾರ್ಚ್‌ 31ರ ಒಳಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್‌ ಮಹಾ ನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿತು.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ. ಚಲಮೇಶ್ವರ್‌, ರಂಜನ್ ಗೊಗೋಯ್, ಎಂ.ಬಿ. ಲೋಕೂರ್, ಪಿ.ಸಿ. ಘೋಷ್ ಮತ್ತು ಕುರಿಯನ್ ಜೋಸೆಫ್ ಅವರನ್ನೊಳಗೊಂಡ ಪೀಠ, ಪ್ರಕರಣ ಸಂಬಂಧ ಲಿಖಿತ ಪ್ರತಿಕ್ರಿಯೆ ನೀಡುವುದನ್ನೂ ಪರಿಗಣಿಸಲು ನಿರಾಕರಿಸಿದೆ.

ವಿವರ: ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕಲ್ಕತ್ತ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರು, ‘ಮೇಲ್ಜಾತಿಯ ನ್ಯಾಯಮೂರ್ತಿಗಳಿಗೆ ದಲಿತ ನ್ಯಾಯಮೂರ್ತಿಯೊಬ್ಬ ಕರ್ತವ್ಯ ನಿರ್ವಹಿಸುವುದು ಬೇಕಾಗಿಲ್ಲ’ ಎಂದು ಹೇಳಿದ್ದರು.

‘ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ನನ್ನ ವಿರುದ್ಧ ಪೂರ್ವಗ್ರಹ ಹೊಂದಿದ್ದಾರೆ. ನನ್ನ ಪ್ರಕರಣವನ್ನು ಸಂಸತ್ತಿಗೆ ವರ್ಗಾಯಿಸಬೇಕು’ ಎಂದೂ ಕರ್ಣನ್ ಹೇಳಿಕೆ ನೀಡಿದ್ದರು.

ಕರ್ಣನ್‌ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿರುವ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ, ಫೆಬ್ರುವರಿ 13ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತ್ತು. ಕರ್ಣನ್ ಅವರಿಗೆ ನ್ಯಾಯದಾನದ ಹಾಗೂ ನ್ಯಾಯಾಂಗದ ಆಡಳಿತಕ್ಕೆ ಸಂಬಂಧಿಸಿದ ಯಾವ ಕೆಲಸವನ್ನೂ ನೀಡಬಾರದು ಎಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT