ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರ ಸಂಧ್ಯಾರಾಗಕ್ಕೆ ನಮ್ಮ ಶ್ರುತಿ

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹಿರಿಯರಿಗೆ ಕುಟುಂಬದಲ್ಲಿ ಪ್ರಥಮ ಸ್ಥಾನ ನೀಡುವ ಭಾರತ ದೇಶದ ನಾಗರಿಕತೆ ಅಬ್ಬರದಿಂದ ಅಟ್ಟಹಾಸ ಮಾಡುತ್ತ ಇರುವ ಈ ಹೊತ್ತಿನಲ್ಲಿ ಹಿರಿಯರೊಂದಿಗೆ ಹೇಗಿರಬೇಕು ಎಂಬ ಪ್ರಶ್ನೆ ಬಹುಜನರ ಸಮಸ್ಯೆಯಾಗಿದೆ. ಅವರಿಗೆ ವೃದ್ಧಾಶ್ರಮವೇ ಸರಿ ಎಂದು  ಕಿರಿಯರು ಭಾವಿಸುತ್ತಿರುವ ಸಂದರ್ಭಗಳು ಹೆಚ್ಚಾಗುತ್ತಿರುವಂತೆಯೇ, ವೃದ್ಧಾಶ್ರಮಗಳ ಸಂಖ್ಯೆಗಳೂ ಹೆಚ್ಚುತ್ತಿರುವಂತೆಯೇ, ಹಿರಿಯರು ಕೂಡ ಮಾನಸಿಕವಾಗಿ ತಮಗೆ ವೃದ್ಧಾಶ್ರಮವೇ ಅನುಕೂಲವಾದ ಸ್ಥಳ ಎಂದು ತಿಳಿದುಕೊಳ್ಳುತ್ತಿರುವವರ ಸಂಖ್ಯೆಯೂ ದಿನೇ ದಿನೇ ಅಧಿಕವಾಗುತ್ತಿದೆ. 

ಇಂತಹುದನೆಲ್ಲ ಯೋಚಿಸಲು ಆಗದಂತಹ ಕಾಲ ನಮ್ಮ ಸನಿಹದಲ್ಲೇ ಇತ್ತು.  ಕೇವಲ ಇಪ್ಪತ್ತು, ಮೂವತ್ತು ವರ್ಷಗಳ ಹಿಂದೆ ಕೂಡ ಹಿರಿಯರು ತಮ್ಮ ಗಂಡುಮಕ್ಕಳೊಂದಿಗೆ ತಮ್ಮ ಮುಂದಿನ ಜೀವನ ಎಂದು ಗಟ್ಟಿ ಮಾಡಿಕೊಂಡು ಅದಕ್ಕೆ ಅನುಗುಣವಾಗಿಯೇ ತಮ್ಮ ಭವಿಷ್ಯವನ್ನು ಚಿಂತಿಸುತ್ತಿದ್ದ ಕಾಲವೇ ಇತ್ತು.  ತಮ್ಮ ತಮ್ಮ ಅಸ್ತಿತ್ವಗಳಿಗೆ ತಾವು ಚೆನ್ನಾಗಿ ಇರುವಾಗಲೇ ಅಡಿಪಾಯ ಹಾಕಿಕೊಂಡು, ಗಂಡುಮಕ್ಕಳ ಮನೆಯಲ್ಲಿ ಇರುವುದು ತಮ್ಮ ಹಕ್ಕು, ಅಧಿಕಾರ ಎಂಬ ಭಾವನೆಯಲ್ಲಿ ನಿರಾಳವಾಗಿಯೇ ಇದ್ದರು. 

ಗಂಡುಮಕ್ಕಳು ಕೂಡ ಅಂತಹುದಕ್ಕೆ ಮಾನಸಿಕವಾಗಿಯೇ ತಯಾರಾಗಿ ಇರುತ್ತಿದ್ದರು. ಆದರೆ ಕಾಲ ಬದಲಾಯಿತು. ಕ್ರಮೇಣ ‘ಗಂಡುಮಗ ಬೇಡ, ಹೆಣ್ಣುಮಕ್ಕಳ ಮನೆಯೇ ಸರಿ’ ಎಂಬ ನಿಲುವಿಗೂ ಹಲವರು ಬಂದರು. ಹೆಣ್ಣುಮಕ್ಕಳಿಗೂ ಅವರ ಅಗತ್ಯದ ಅರಿವು ಆಯಿತು. ಗಂಡಾಗಲಿ, ಹೆಣ್ಣಾಗಲಿ ಅವರ ಮನೆಯಲ್ಲೇ ಆಶ್ರಯ ಎಂಬ ವಿಚಾರ ತಪ್ಪೇನಲ್ಲ ಎಂಬುದು ಗಟ್ಟಿಯಾಯಿತು. ಈಗ ಹಣದ ಅಗತ್ಯ, ಬಯಕೆ, ಕೆರಿಯರ್‌ಗಳ ಹುಚ್ಚು, ಆಧುನಿಕ ಜೀವನದ ಶೈಲಿಗೆ ಮನಸ್ಸು ಸೋತಿತು... ಸಮಸ್ತ ಸಮಾಜವೇ ಬದಲಾಯಿತು.

ಹೊಂದಾಣಿಕೆ ಕಠಿಣವಾಗತೊಡಗಿತು. ವೃದ್ಧಾಶ್ರಮಗಳು ಪರ್ಯಾಯ ಎಂಬಂತೆ ಹುಟ್ಟಿಕೊಳ್ಳತೊಡಗಿದವು. ಈಗ ಅದೇ ಸರಿ ಎಂಬ ಭಾವನೆ ಬಲಿತುಕೊಳ್ಳುತ್ತಹೋಗುತ್ತಿದೆ. ಕೆಲವರು ಹಿರಿಯರನ್ನು ಕಾಶಿಯಲ್ಲಿ ಬಿಟ್ಟು ತಾವು ವಾಪಸ್‌ ಬಂದುಬಿಡುತ್ತಾರೆ. ಅಲ್ಲಿ ಅವರ ತಾಯ್ತಂದೆಯರು ಭಿಕ್ಷಾಟನೆ ಮಾಡುತ್ತಾ ಸಾವು ಎಂದು ಬಂದೀತು ಎಂದು ಕಾಯುತ್ತಾ ಕುಳಿತಿರುತ್ತಾರೆ.  ಪ್ರತಿನಿತ್ಯ ಬೆಳಿಗ್ಗೆ ಎದ್ದಾಗ ‘ಅಯ್ಯೋ ಇವತ್ತು ಸಾಯಲಿಲ್ಲವೇ? ಎದ್ದುಬಿಟ್ಟೆನೇ!’ ಎಂದು ಪರಿತಪಿಸುತ್ತಾರೆ.

ಹಿರಿಯರನ್ನು ನೋಡಿಕೊಳ್ಳುವ ಈ ವ್ಯವಸ್ಥೆಯು ನಿಸರ್ಗದಲ್ಲಿ ಕೇವಲ ಮನುಷ್ಯನಿಗೆ ಮಾತ್ರ ದೊರಕಿರುವಂತಹ ಅಪರೂಪದ ಅವಕಾಶ.   ಮಾನವಸಂವೇದನೆಗಳು ಬೆಳೆದು, ಪಕ್ವವಾಗುವ ಅದ್ಭುತ ಅವಕಾಶ ಕೇವಲ ಮನುಷ್ಯನಿಗೆ ಮಾತ್ರವೇ ದೊರಕಿದೆ. ಆದರೆ ಅವನ ಸಂವೇದನೆಯ ತಕ್ಕಡಿ ಮಾತ್ರ ಯಾವಾಗಲೂ ಅಸಮತೋಲನವಾಗುತ್ತದೆ. 

ಕೆಲವು ಪ್ರಾಣಿಗಳಲ್ಲಿ ಕೂಡ ಇಂತಹ ಸಂವೇದನೆಗಳು ಕಂಡುಬರುತ್ತವೆ.  ಕಾಲ ಬದಲಾದರೂ ಕೂಡ ಪ್ರಾಣಿಗಳಲ್ಲಿ ಇರುವ ಸಂವೇದನೆಗಳು ಬದಲಾಗಲಿಲ್ಲ. ಆದರೆ ಮನುಷ್ಯನಲ್ಲಿ ಮಾತ್ರ ಬೇಕೆಂದಾಗ ಬದಲಾಗುತ್ತಾ ಅದಕ್ಕೆ ಕಾಲವನ್ನು ದೂರುತ್ತಾ ಸಾಗುವುದು ಯಾವ ನ್ಯಾಯ! 

ಕೆಲವು ದೃಷ್ಟಾಂತಗಳು
ಆಧುನಿಕ ಸೊಸೆ ಅತ್ತೆ ಇಲ್ಲದ ಮನೆಗೆ ಬಂದಿದ್ದಾಳೆ.  ಮಾವ ಹಳ್ಳಿಯ ರೈತ. ಅವರಿಗೆ ಅವರ ಕಾಲೇ ನೀರಿನಂತೆ.  ಏನಾದರೂ ತಿಂಡಿಗಳನ್ನು ತಿಂದಾಗ ಕೈಯನ್ನು ಕಾಲಿಗೇ ಒರೆಸಿಕೊಳ್ಳುವುದು ರೂಢಿ. ಚಕ್ಕುಲಿ, ವಡೆ ಇತ್ಯಾದಿ. ಸೊಸೆಗೆ ಎಲ್ಲದಕ್ಕೂ ಟಿಶ್ಯೂ ಪೇಪರ್ ಬೇಕು.  ಅವಳು ದೋಸೆ ಮಾಡಿದಳು. 
ಮಾವನಿಗೆ ಕೊಡದೆ ತಾನೇ ತಿನ್ನುತ್ತಾಳೆ.

ಮಗ ತಿಂಡಿಗೆ ಬಂದವನು ಹೆಂಡತಿಯನ್ನು ಕೇಳುತ್ತಾನೆ ‘ಅಪ್ಪ ತಿಂದರಾ?’  ಅವಳು ಹೇಳುತ್ತಾಳೆ ‘ಅವರಿಗೆ ತಿಂಡಿ ಬೇಡವಂತೆ.’   ಯಾಕೆ ಎಂದು ಮಗ ಕೇಳಲಿಲ್ಲ. ತಾನು ತಿಂದ ಆಫೀಸಿಗೆ ಹೋದ.  ಸೊಸೆ ತನ್ನ ಗೆಳತಿಗೆ ಹೇಳುತ್ತಾಳೆ: ‘ನಮ್ಮ ಮಾವ ಬಹಳ ಗಲೀಜು.  ಕಾಲಿಗೆ ಒರೆಸಿಕೊಳ್ಳುತ್ತಾರೆ. ಅದಕ್ಕೆ ಬುದ್ಧಿ ಕಲಿಸಲು ಹೀಗೆ ಮಾಡಿದೆ.’

ದೂರದ ಬಾಂಬೆಯಲ್ಲಿ ಮಗ ಇದ್ದಾನೆ. ಅವನು ಅಮ್ಮನಿಗೆ ಫೋನ್ ಮಾಡಿದ; ’ಮುಂದಿನ ವಾರದಿಂದ ಪುಟ್ಟನಿಗೆ ರಜ.  ಹದಿನೈದು ದಿನ ಬಂದುಬಿಡು’.  ತಾಯಿ ತನ್ನ ಬಿ.ಪಿ., ಶುಗರ್, ಹೃದಯದೊತ್ತಡ ಇರುವ ಗಂಡನನ್ನು ಬಿಟ್ಟು, ಪೂಜಿಸುತ್ತಿದ್ದ ದೇವರು, ಸುತ್ತುತ್ತಿದ್ದ ತುಳಸಿಕಟ್ಟೆ ಎಲ್ಲ ಬಿಟ್ಟು, ತನ್ನ ಅನಾರೋಗ್ಯಗಳನ್ನು ಬದಿಗೊತ್ತಿ, ಕೆಲಸದವಳಿಗೆ ಸಾರಿ ಸಾರಿ ಹೇಳಿ, ಔಷಧಿ ಮಾತ್ರ ಮರೆಯದೆ ಸೇವಿಸಲು ಹೇಳಿ, ಕೇವಲ ಹದಿನೈದು ದಿನ ಮಾತ್ರ ಎಂದು ಕಣ್ಣೀರು ಹಾಕಿಕೊಳ್ಳುತ್ತಾ ಮಗನ ಮನೆಗೆ ಹೋದರು.

ಅಲ್ಲಿ, ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಸಂಜೆ ಏಳು ಗಂಟೆಗೆ ಮನೆಗೆ ಹಿಂತಿರುಗುವ ಮಗ–ಸೊಸೆ. ನಾಲ್ಕೂವರೆ ವರ್ಷದ ಮೊಮ್ಮಗನನ್ನು ಮಂಡಿನೋವಿರುವ ಅಜ್ಜಿ ನೋಡಿಕೊಳ್ಳುವ ಪರಿ ಇದೆಯಲ್ಲ ಅದು ಬಹಳ ಕಷ್ಟಕರ.  ಐದು ನಿಮಿಷವೂ ಸುಮ್ಮನಿಲ್ಲದ ಮೊಮ್ಮಗ ಹತ್ತು ನಿಮಿಷ ಕೂಡ ಮಲಗಲು ಅವಕಾಶ ಕೊಡುವುದಿಲ್ಲ.

ಇವೆಲ್ಲದರ ಜೊತೆಗೆ ಅವನು ಪುಸ್ತಕ ಹರಿದರೆ, ಗ್ಲಾಸ್ ಕೆಳಗೆ ಬೀಳಿಸಿ ಒಡೆದರೆ,‘ಟೀವಿ ರಿಮೋಟ್ ಕೆಡಿಸಿದರೆ ಎಲ್ಲದಕ್ಕೂ ‘ಏನಮ್ಮ ನಿನಗೆ ಸರಿಯಾಗಿ ನೋಡಿಕೊಳ್ಳಲು ಆಗಲ್ವ?  ಎಷ್ಟು ಕಾಸ್ಟ್ಲಿ ಗೊತ್ತಾ ಇದೆಲ್ಲ...’ ಎಂದು ಬೈಯುವ ಮಗ–ಸೊಸೆ; ತಾನು ಅಪರಾಧಿಸ್ಥಾನದಲ್ಲಿ ನಿಂತು ತಲೆ ತಗ್ಗಿಸಬೇಕಾದ ಸ್ಥಿತಿ. ಎರಡು ಬಾರಿ ಹೀಗೆಲ್ಲ ಆದನಂತರ ಹೋಗುವುದಿಲ್ಲ ಎಂದು ತಾಯಿ ನಿರ್ಧರಿಸಿದರು. ಈಗ ಮನೆ ಇಬ್ಭಾಗ.

ಕೆಲವು ಘಟನೆಗಳಲ್ಲಿ ತಾಯಿ ತಂದೆಯರನ್ನು ಬೇರೆ ಬೇರೆ ಇಟ್ಟು ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡುಬಿಡುತ್ತಾರೆ. ಕೆಲವು ಘಟನೆಗಳಲ್ಲಿ ಹೆಣ್ಣುಮಕ್ಕಳ ಮನೆಗೆ ಹೋಗಿ ಅವರ ಮಕ್ಕಳನ್ನು ನೋಡಿಕೊಂಡು ರಜೆ ಇದ್ದಾಗ ಆ ಮಗುವನ್ನೂ ಕರೆದುಕೊಂಡು ಗಂಡನ ಬಳಿಗೆ ರಜೆ ಕಳೆಯಲು ಬರುವಂತಹ ಪರಿಸ್ಥಿತಿ.  ಮತ್ತೆ ಕೆಲವು ಕಡೆ ಹೆಣ್ಣುಮಕ್ಕಳಿಗೆ ತಮ್ಮ ಮಕ್ಕಳು ಬೆಳೆದ ನಂತರ ತಾಯ್ತಂದೆಯರ ಅವಶ್ಯಕತೆ ಭಾರ ಆಗಿಬಿಡುತ್ತದೆ. 

ಪ್ರತಿ ನಿಮಿಷವೂ ನಿಮ್ಮ ಅಗತ್ಯ ನಮಗಿಲ್ಲ ಎಂದು ಪರೋಕ್ಷವಾಗಿ ತಿಳಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ.  ಯಾವ ರೋಗ ಬಡಿದಿದೆ ನಮ್ಮ ಪೀಳಿಗೆಗಳಿಗೆ. ಯಾವುದನ್ನು ಯಾವುದಕ್ಕೆ ಮಾರಾಟ ಮಾಡುತ್ತಿದ್ದಾರೆ ಇವರೆಲ್ಲ? ತಿಳಿಯುತ್ತಿಲ್ಲ!  ಹೌದು ಹಿರಿಯರನ್ನು ನೋಡಿಕೊಳ್ಳುವುದು ಎಲ್ಲ ರೀತಿಗಳಿಂದಲೂ ಒಂದು ಸವಾಲು. ಹೇಗೆ ಅವರನ್ನು ನೋಡಿಕೊಳ್ಳುವುದು? ಹೇಗೆ ನೋಡಿಕೊಂಡರೂ ಅವರಿಗೆ ತೃಪ್ತಿಯೇ ಸಿಗುತ್ತಿಲ್ಲ ಎಂಬ ಕೊರಗು ನಮ್ಮ ಪೀಳಿಗೆಗೆ ಇದೆ.

ಮೊದಲನೆಯದಾಗಿ ಅವರ ಸ್ಥಾನ, ಮಾನಗಳಲ್ಲಿ ಕುಂದು ಬರದಂತೆ ಎಚ್ಚರ ವಹಿಸಬೇಕು.  ಅವರು ಮಾಡುತ್ತಿದ್ದ ಕೆಲಸಗಳನ್ನು ಅವರೇ ಮಾಡಲು ಬಿಡಿ. ಅವರಿಗೆ ನಮಗಿಂತ ವಯಸ್ಸಾಗಿದೆ ಅಷ್ಟೆ, ಆದರೆ ಅಶಕ್ತರಲ್ಲ. ಅವರು ಅಡುಗೆ ಮಾಡಲಿ, ತಿಂಡಿ ಮಾಡಲಿ, ತರಕಾರಿ ತರಲಿ, ಹಣ್ಣು ಹಂಪಲು ತರಲಿ – ಎಲ್ಲವೂ ಅವರ ಆಯ್ಕೆ. ಅವರ ಹಕ್ಕು. ಅವರು ಮಾಡಲಾಗದ, ಮಾಡದೇ ಇರುವ ಕೆಲಸಗಳಿಗೆ ಮಾತ್ರ ನಿಮ್ಮನ್ನು ಒಡ್ಡಿಕೊಳ್ಳಿ. 

ಇದು ನಿಮಗೂ ಸುಲಭವಾಗುತ್ತದೆ. ಅವರು ಹಳೆಯ ಕಾಲದ ಶಿಸ್ತು, ಮೌಲ್ಯಗಳೊಂದಿಗೆ ಬದುಕಿದವರು.  ಈಗಲೂ ಅವರು ಹಾಗೇ ಇರುತ್ತಾರೆ.  ಬದಲಾದವರು ನಾವು. ಅವರಿಗೆ ಈ ಬದಲಾವಣೆಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ.  ಆದ್ದರಿಂದ ಹೊಂದಿಕೊಳ್ಳಬೇಕಾದವರು ನಾವೇ.

ಪ್ರತಿದಿನ ಅವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಸುಲಭದ ಉಪಾಯ ಎಂದರೆ ಒಟ್ಟಿಗೇ ಊಟ ಮಾಡಿ.  ಟೀವಿ. ನಿಮ್ಮಕುಟುಂಬದ ಸ್ವಾಸ್ಥ್ಯವನ್ನು ಕೆಡಿಸದೇ ಇರಲಿ.  ಊಟ ಮಾಡುವಾಗ ನಿಮ್ಮ ಕಚೇರಿಯ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳಿ, ಸಣ್ಣ ಪುಟ್ಟ ಸಾಮಾಜಿಕ ವಿಚಾರಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿ.

ಅವರಿಗೆ ಪತ್ರಿಕೆಯ ಯಾವುದಾದರೂ ಒಂದು ಅಂಶವನ್ನು ಓದಲು ಹೇಳಿ ‘ನನಗೆ ಟೈಂ ಇಲ್ಲ. ನೀವು ಓದಿ ಸಂಜೆ ಬಂದಾಗ ನನಗೆ ವಿಶಯ ತಿಳಿಸಿ’ ಅನ್ನಿ. ಅವರು ಕಡ್ಡಾಯವಾಗಿ ಓದಿರುತ್ತಾರೆ; ರಾತ್ರಿ ಊಟದ ಸಮಯದಲ್ಲಿ ಆ ಕುರಿತು ಹೇಳುತ್ತಾರೆ. 

ಅವರು ಯಾವ ಕೆಲಸವನ್ನೂ ಮಾಡದಿದ್ದರೆ ದಿನವೂ ಗಿಡಗಳಿಗೆ ನೀರುಹಾಕುವ, ಮನೆಯಲ್ಲಿ ನಡೆಯುವ ಕೆಲಸಗಳ ಬಗ್ಗೆ  ನಿಗಾ ವಹಿಸುವಂಥ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಅವರಿಗೆ ವಹಿಸಿ. ಮೊಮ್ಮಕ್ಕಳು ಆಡುವಾಗ ಅವರ ಜೊತೆಯಲ್ಲೇ ಅವರೂ ಇರಲಿ. ಅವರು ಇಷ್ಟ ಪಡುವಂತಹ ಕೆಲಸಗಳನ್ನು  ಮಾಡಲು ಬಿಡಿ. 

ಟೀವಿ, ಟೇಬಲ್ ಮುಂತಾದವನ್ನು ಒರೆಸುವುದು, ಬೆಳಿಗ್ಗೆ ಕಿಟಕಿ ತೆಗೆಯುವುದು, ಸಂಜೆ ಕರ್ಟನ್‌ಗಳನ್ನು ಹಾಕುವುದು, ಹಾಲು ಹಾಕಿಸಿಕೊಳ್ಳುವುದು ಅಥವಾ ತರುವುದು, ಪೇಪರ್ ನ್ಯೂಸ್ ಅನ್ನು ಗಟ್ಟಿಯಾಗಿ ಓದುವುದು, ಮನೆ ಮುಂದೆ ತರಕಾರಿ–ಹೂ ಬಂದರೆ ಅವುಗಳನ್ನು ತೆಗೆದುಕೊಳ್ಳುವುದು ಮುಂತಾದವು ಅವರದೇ ಕೆಲಸ ಎಂಬಂತೆ ಒಪ್ಪಿಸಿ. ಇದನ್ನು ಅವರು ಆನಂದದಿಂದ ಮಾಡುತ್ತಾರೆ; ಇದರಿಂದ ನಿಮ್ಮ ಕೆಲಸಗಳೂ ಹಗುರವಾಗುತ್ತವೆ.

ಯಾವುದೇ ಕಾರಣಕ್ಕೂ ತಾಯಿ–ತಂದೆಯರನ್ನು ಬೇರೆ ಬೇರೆ ಇರುವಂತೆ ಮಾಡಬೇಡಿರಿ. ಅದು ನೀವೇ ನರಕವನ್ನು ಸೃಷ್ಟಿಸಿದಂತೆ ಆಗುತ್ತದೆ.  ಆರು ಮಕ್ಕಳು ಇದ್ದಾಗ ಕೂಡ ತಾಯ್ತಂದೆಯರನ್ನು ಬೇರೆ ಬೇರೆಯಾಗಿ ಇಟ್ಟುಕೊಂಡಿರುವುದನ್ನು ನೋಡಿದ್ದೇನೆ. ನಿಮ್ಮ ನಿಮ್ಮ ಹಣಕಾಸಿನ ಸಮಸ್ಯೆ ಏನೇ ಇದ್ದರೂ ನೀವು ಮಕ್ಕಳೇ ಸೇರಿ ಪರಿಹರಿಸಿಕೊಳ್ಳಬೇಕು.

ಯಾರ ಮನೆಯಲ್ಲಿ ಇದ್ದಾಗ ತಾವು ಸತ್ತರೆ ಹೇಗೋ ಎಂಬ ಚಿಂತೆ ಅವರನ್ನು ಪದೇ ಪದೇ ಕಾಡುತ್ತದೆ.  ಒಂದೇ ಮನೆಯಲ್ಲಿ ಅವರು ತಮ್ಮ ಮುಂದಿನ ಜೀವನದ ಅಸ್ತಿತ್ವವನ್ನು ಕಂಡುಕೊಳ್ಳಲು ಬಿಡಿರಿ. ಅದು ಹೆಣ್ಣುಮಕ್ಕಳೇ ಆಗಲಿ, ಗಂಡುಮಕ್ಕಳೇ ಆಗಲಿ – ಅದು ನಿಮ್ಮದೇ ಜವಾಬ್ದಾರಿ ಆಗಿರುತ್ತದೆ.

ಅವರ ಕೆಲವು ಅಭ್ಯಾಸಗಳು, ನಡವಳಿಕೆಗಳು ನಿಮಗೆ ಸಮಸ್ಯೆ ಆಗಬಹುದು. ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿರಿ.  ಅದಕ್ಕೆ ಪರ್ಯಾಯವಾಗಿ ನಿಂದನೀಯ ನಡವಳಿಕೆ ಬೆಳೆಸಿಕೊಳ್ಳಬೇಡಿ. ಅವರಿಂದ ಆಗುವ ಸಮಸ್ಯೆ ತಿಳಿಸಿ. ಅಗತ್ಯ ಬಿದ್ದರೆ ಒಬ್ಬ ಕೌನ್ಸಿಲರ್ ಜೊತೆ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಲು ಯತ್ನಿಸಿ.

ಭಾನುವಾರ ಪತ್ರಿಕೆಗಳಲ್ಲಿ ಬರುವ ’ಪದಬಂಧ’ ಒಟ್ಟಾಗಿ ಮಾಡಿರಿ.  ಒಬ್ಬರು ಜೋರಾಗಿ ಹೇಳಿದಾಗ ಉಳಿದವರು ಅದಕ್ಕೆ ಉತ್ತರ ನೀಡಬೇಕು. ಮೊದಲು ಉತ್ತರ ನೀಡಿದವರಿಗೆ ಒಂದು ಅಂಕ ನೀಡಿ.  ಕುಟುಂಬದ ಎಲ್ಲರೂ ಭಾಗವಹಿಸುವಂತೆ ಆಗುತ್ತದೆ. ಪತ್ರಿಕೆಗಳಲ್ಲಿ ಬರುವ ಹಾಸ್ಯಪ್ರಸಂಗಗಳನ್ನು ಅವರು ಜೋರಾಗಿ ಓದಲಿ ಎಲ್ಲರೂ ಕೇಳಿ.  ಮಕ್ಕಳಿಗೂ ಇಂತಹ ಅಭ್ಯಾಸಗಳು ಒಳ್ಳೆಯದು. ಒಟ್ಟಿಗೇ ಟೀವಿ ಹಾಸ್ಯಕಾರ್ಯಕ್ರಮಗಳನ್ನು ಕುಳಿತು ನೋಡಿ ನಗಬಹುದು. 

ನೀವು ಬೇರೆ ಊರುಗಳಿಗೆ ಹೋಗುವಾಗ ಅವರನ್ನೂ ಕರೆದೊಯ್ಯಿರಿ. ಅವರನ್ನು ಮನೆಯ ಕಾವಲಿಗೆಂದು ಬಿಡಬೇಡಿರಿ. ಹಾಗೆಯೇ ಅವರನ್ನು ಮತ್ತೊಬ್ಬರ ಮನೆಗೆ ರವಾನಿಸಿ ನಿಮ್ಮ ಪ್ರವಾಸವನ್ನು ಆನಂದಿಸಬೇಡಿರಿ.  ಅವರು ತಮ್ಮ ಕಾಲದಲ್ಲಿ ಅನೇಕ ಸ್ಥಳಗಳನ್ನು ನೋಡಲು ಅವಕಾಶ ಸಿಕ್ಕಿರುವುದಿಲ್ಲ.  ಈಗ ನಿಮಗೆ ಸಮಸ್ಯೆ ಆದರೂ ಕರೆದೊಯ್ಯಿರಿ. ನೆನಪಿರಲಿ, ನಿಮ್ಮ ಚಿಕ್ಕಮ್ಮಂದಿರ, ಅತ್ತೆಯಂದಿರ ಮನೆಗಳ ಮದುವೆ, ಮುಂಜಿಗಳಿಗೆಲ್ಲ ಅವರು ನಿಮ್ಮನ್ನು ಕರೆದುಕೊಂಡೇ ಹೋಗಿರುತ್ತಾರೆ. ನಿಮ್ಮ ದೊಡ್ಡ ದೊಡ್ಡ ಕೊಳ್ಳುವಿಕೆಗಳು, ಅಡುಗೆಮನೆಯ ಸಾಮಗ್ರಿ ಖರೀದಿಗಳಲ್ಲಿ ಅವರನ್ನೂ ಒಳಗೊಳ್ಳಿರಿ. 

‘ಮನೆಗೆ ಇಂತಹ ವಸ್ತು ತರಬೇಕು ಎಂದು ಹೊರಟಿದ್ದೇವೆ. ಪಟ್ಟಿ ಹೀಗಿದೆ’ ಎಂದೆಲ್ಲ ಅವರಿಗೆ ವಿವರಿಸಿ ಹೋಗಿ ತನ್ನಿ. ಅಂಗಡಿ–ಮಾಲ್‌ಗಳಿಗೆ ಅವರನ್ನೂ ಕರೆದೊಯ್ಯಿರಿ. ಅಡುಗೆಮನೆಯ ಪದಾರ್ಥಗಳಲ್ಲಿ ಅವರು ಬಯಸಿದ್ದನ್ನು ಖರೀದಿಸಿರಿ. ನಿಮಗೆಂದು ಬಟ್ಟೆ ಖರಿಸಿಸುವಾಗ ಅವರ ಕಡೆ ಗಮನ ಇರಲಿ.  ಮುಖ್ಯವಾಗಿ ಒಳ ಉಡುಪುಗಳು, ಟವೆಲ್, ಕರ್ಚೀಫ್ ಮುಂತಾದ ಅಗತ್ಯದ ಬಟ್ಟೆಗಳನ್ನು ಅವರಿಗೆ ನೀವೇ ಖರೀದಿಸಿ. ಅದೆಲ್ಲವನ್ನೂ ಅವರು ನಿಮ್ಮಲ್ಲಿ ಕೇಳಲು ಆಗುವುದಿಲ್ಲ.

ಪೆನ್ಶನ್ ಇಲ್ಲದ ಹಿರಿಯರಿಗೆ, ನಿಮ್ಮ ಮಕ್ಕಳಿಗೆ ಪಾಕೆಟ್ ಮನಿ ನೀಡುವಂತೆ ಅವರಿಗೂ ನೀಡಿ. ನೀವು ನೀಡುವ ಪಾಕೆಟ್ ಮನಿ ಅವರ ಅಗತ್ಯ ಪೂರೈಸಿಕೊಳ್ಳಲು, ಔಷಧಿ ಮುಂತಾದವನ್ನು ಕೊಂಡುಕೊಳ್ಳಲು ಆಗುವಂತೆ ಎಚ್ಚರ ವಹಿಸಿ. ತಮ್ಮ ಖರ್ಚನ್ನು ಅವರು ಅದರಲ್ಲೇ ನಿಭಾಯಿಸುವ ಆನಂದವನ್ನು ಅವರಿಗೆ ನೀಡಿ. ಸಾಧ್ಯವಾದರೆ ಅವರಿಗೆಂದು ಒಂದು ಸಣ್ಣ ಇಡಿಗಂಟನ್ನು ಇಡಿ. ಅದು ಅವರದೇ, ಎಂದು ಬೇಕಾದರೂ ಬಳಸಬಹುದು ಎಂಬ ಆಶ್ವಾಸನೆ ಅವರಲ್ಲಿರಲಿ.

ಅವರ ಆಸಕ್ತಿ ಇರುವ ಪುಸ್ತಕ, ಸಿ.ಡಿ., ನ್ಯೂಸ್ ಮ್ಯಾಗಸೀನ್‌ಗಳು ಎಲ್ಲವನ್ನೂ ಗಮನಿಸಿ ಅವರಿಗೆ ತಂದು ಕೊಡಿ. ದುಡಿಯುವ ಮಕ್ಕಳಿದ್ದರೂ ಸಂಗೀತದ ಸಿ.ಡಿ. ತಂದು ಕೊಡಿ ಎಂದು ನಮ್ಮ ಮನೆಗೆ ಬರುತ್ತಿದ್ದ ಹಿರಿಯರು ಈ ಹೊತ್ತಿನಲ್ಲಿ ನೆನಪಾಗುತ್ತಾರೆ.  ಅವರ ಹವ್ಯಾಸಗಳಿಂದ ಅವರು ದೂರ ಆಗದಿರುವಂತೆ ನೋಡಿಕೊಳ್ಳಿ.

ಮುಖ್ಯವಾಗಿ ಅನೇಕರಿಗೆ ಬೆಳಗಿನ ಜಾವವೇ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ.  ಅದಕ್ಕೆ ಸೂಕ್ತ ವ್ಯವಸ್ಥೆ ಇರಲಿ.  ಅವರು ರಾತ್ರಿ ಎರಡು ಗಂಟೆಗೇ ಎದ್ದರೂ ಕಾಫಿ ಕುಡಿಯಬೇಕು ಎನಿಸಿದರೆ ಕುಡಿಯಲು ಅವರಿಗೆ ಸ್ವಾತಂತ್ರ್ಯ ಇರಬೇಕು.  ಅವರ ತಿಂಡಿ ಸಮಯ, ಊಟದ ಸಮಯಗಳನ್ನು ತಪ್ಪಿಸಬೇಡಿರಿ. ದೊಡ್ಡ ಹುದ್ದೆಯಲ್ಲಿದ್ದು ವೃದ್ಧಾಪ್ಯದ ಕಡೆಗೆ ಕಾಲಿಟ್ಟಾಗ ಅವರು ಕಾಫಿ, ತಿಂಡಿ, ಊಟಕ್ಕೆಂದು ಬೇರೆಯವರ ಮನೆಗೆ ಅಲೆಯುವ ಅನಿವಾರ್ಯತೆಯನ್ನು ಅವರಿಗೆ ಉಂಟು ಮಾಡಬೇಡಿರಿ.

ಅವರ ಕೋಣೆಯಲ್ಲಿ ಅಟ್ಯಾಚ್ಡ್ ಬಾತ್ ರೂಂ ವ್ಯವಸ್ಥೆ ಇರಲಿ. ನೆಲಕ್ಕೆ ನುಣುಪು ಟೈಲ್ಸ್‌ಗಳನ್ನು ಹಾಕಿಸಬೇಡಿರಿ. ಪ್ರತಿ ಹೆಜ್ಜೆಯೂ ಅವರಿಗೆ ಸವಾಲಾಗಬಾರದು. ಅವರ ವಿಶ್ವಾಸ ಕುಸಿಯಬಾರದು. ಅವರಿಗೆಂದು ಒಂದು ಟೀವಿ ಇರಲಿ. ಅವರ ಸ್ವಾತಂತ್ರ್ಯಕ್ಕೆ ಭಂಗ ಬಾರದಂತೆ ಎಚ್ಚರ ವಹಿಸಿ.
ಪ್ರತಿ ಐದರರಿಂದ ಏಳು ವರ್ಷಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಗ್ರಂಥಿಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ. 

ಅದು ಅವರ ದೈಹಿಕ, ಮಾನಸಿಕ, ಭಾವನಾತ್ಮಕ ಜಗತ್ತಿನ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಅವರಿಗೆ ಒಮ್ಮೆ ಸರಿ ಅನ್ನಿಸಿದ್ದು ಮತ್ತೆ ತಪ್ಪು ಅನ್ನಿಸುತ್ತದೆ. ಇಂತಹ ಸಮಯಗಳಲ್ಲಿ ಹೊಂದಿಕೊಳ್ಳುವ ಘಟನೆಗಳು ಅನೇಕ ಇರುತ್ತವೆ. ಆದ್ದರಿಂದ ಕೆಲವು ಸಲಹೆಗಳನ್ನು ತಜ್ಞರಿಂದ ಪಡೆದು ಅವರನ್ನು ನೋಡಿಕೊಳ್ಳುವುದು ಸೂಕ್ತ.

ಅವರು ದೂರದೂರಿನಲ್ಲಿದ್ದರೆ ಫೋನ್ ಮಾಡಿ ವಿಚಾರಿಸಿಕೊಳ್ಳಿ. ಈಗ ಸ್ಕೈಪ್‌ನಂತಹ ತಂತ್ರಜ್ಞಾನವಿದೆ.  ಅದರ ಮೂಲಕ ವಾರಕ್ಕೊಂದು ಅಥವಾ ತಿಂಗಳಿಗೊಂದು ಬಾರಿಯಾದರೂ ಮಾತನಾಡಿರಿ. ಅವರಿಗೆಂದು ಪರವೂರಿನ ವಸ್ತುಗಳನ್ನು ಎಂದಾದರೂ ಗಿಫ್ಟ್ ಎಂದು ಕಳಿಸಿಕೊಡಿರಿ.

ಅವರು ಅತ್ಯಂತ ಕೃಶರಾದರೆ ಅವರನ್ನು ನೋಡಿಕೊಳ್ಳಲು ಒಳ್ಳೆಯ ನರ್ಸ್ ಅನ್ನು ನೇಮಿಸಿರಿ. ಜೊತೆಗೆ ನೀವೂ ಇರಿ. ಅವರ ಆಹಾರ ಯಾವುದು ಉತ್ತಮವೋ ಅದನ್ನೇ ಮಾಡಿ ನೀಡಿರಿ. ಬಹುತೇಕ ಅವರಿಗೆ ಮೆತ್ತಗಿನ ಆಹಾರವೇ ಬೇಕಾಗುತ್ತದೆ.

ಹಣ್ಣಿನ ಜ್ಯೂಸ್‌ಗಳನ್ನು ಕಾಲ ಕಾಲಕ್ಕೆ ನೀವೇ ಮಾಡಿಕೊಡಿರಿ. ಅದಕ್ಕಾಗಿ ನೀವು ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ. ಅದನ್ನು ನೀವು ನಿರ್ವಹಿಸಲೇ ಬೇಕು. ಈಗಂತೂ ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮಾಡುವಂತಹ ವ್ಯವಸ್ಥೆಗಳೂ ಬಂದಿದೆ. 

ಒಟ್ಟಿನಲ್ಲಿ ’ಹಿರಿಯರು ಹೊರೆ’ ಎಂಬ ಭೂತವನ್ನು ನಿಮ್ಮ ಮನಸ್ಸಿನಿಂದ ಹೊರದೂಡಿರಿ. ಕಾಲ ಎಷ್ಟೆ ಬದಲಾದರೂ ಕುಟುಂಬ ವ್ಯವಸ್ಥೆಯಲ್ಲಿ ಮಾರ್ಪಾಟಾಗಬಹುದೇ ಹೊರತು ಅವ್ಯವಸ್ಥಿತ ಚಿಂತನೆಗಳಿಂದ ಕುಟುಂಬವೇ ಶಿಥಿಲವಾಗಬಾರದು ಈ ಎಚ್ಚರಿಕೆ ನಿಮ್ಮಲ್ಲಿ ಇರಲಿ. ಯಾವುದೂ ನೂರು ಶೇಕಡ ಸರಿಯಾಗಿರುವುದಿಲ್ಲ. ಇದು ನೆನಪಿರಲಿ. ನಾವೆಲ್ಲರೂ ಐವತ್ತು ಭಾಗ ಪೂರ್ಣರು; ಐವತ್ತು ಭಾಗ ಅಪೂರ್ಣರು. ಈ ತಿಳಿವಳಿಕೆಯೇ ನಮ್ಮನ್ನೂ ಅವರನ್ನೂ ಕಾಯಬೇಕು.

ಹಿರಿಯರನ್ನು ಹೀಗೆ ನೋಡಿಕೊಳ್ಳಿ
*ಮುಪ್ಪು ಆವರಿಸಿತು ಎಂದಾಕ್ಷಣ ಹಿರಿಯರ ಮಾತುಗಳನ್ನು ನಿರ್ಲಕ್ಷಿಸದಿರಿ.
*ಮುಪ್ಪು ಆವರಿಸುವ ಮೊದಲು ಅವರು ಹೇಗೆ ಬದುಕಿದ್ದರೋ ಹಾಗೇ ಇಳಿವಯಸ್ಸಿನಲ್ಲೂ ಬದುಕಲು ಬಿಡಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವರ ಬದುಕನ್ನು ಬದಲಾಯಿಸಬೇಡಿ.
*ಹಿರಿಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ. ಮನೆಯ ಹಾಗೂ ಆಫೀಸಿನ ವಿಷಯಗಳನ್ನು ಅವರೊಂದಿಗೆ ಚರ್ಚಿಸಿ.
*ವಯಸ್ಸಾದ ತಂದೆ ತಾಯಿಯರನ್ನು ಬೇರೆ ಬೇರೆ ಇರುವಂತೆ ಮಾಡಬೇಡಿ. ಇದರಿಂದ ಇಳಿ ವಯಸ್ಸಿನಲ್ಲಿ ಒಂಟಿತನ ಕಾಡಿ, ಮಾನಸಿಕವಾಗಿ ದುರ್ಬಲರಾಗುತ್ತಾರೆ.
*ಇಳಿವಯಸ್ಸಿನಲ್ಲಿ ಮನಸ್ಸು ಮಕ್ಕಳಂತೆ ಚಂಚಲವಾಗಿರುತ್ತದೆ. ಅವರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಿ.
*ಬೇರೆ ಬೇರೆ ಊರುಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ. ಇದರಿಂದ ಅವರ ಮನಸ್ಸು ಆಹ್ಲಾದಕರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT