ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿಸುವುದೇ ಭಗೀರಥ ಯತ್ನ?

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರಾದೇಶಿಕ ಸಂಸ್ಕೃತಿಗಳು ಇಂದು ಜಾಗತೀಕರಣದ ಏಕಮುಖಿ ಸಂಸ್ಕೃತಿಯ ಹೊಡೆತಕ್ಕೆ ಸಿಕ್ಕಿ ತತ್ತರಿಸಿವೆ. ಇಂತಹ ಸಂದರ್ಭದಲ್ಲಿ ಹೈಕೋರ್ಟ್‌ಗಳಲ್ಲಿ ಪ್ರಾಂತೀಯ ಭಾಷೆ ಬಳಸುವ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಸಂವಿಧಾನದಲ್ಲಿ ಎಲ್ಲಿಯೂ ರಾಷ್ಟ್ರಭಾಷೆ ಎಂಬ ಶಬ್ದ ಉಲ್ಲೇಖವಾಗಿಲ್ಲ ಎಂಬುದು ಗಮನಾರ್ಹ. 343ನೇ ವಿಧಿಯ (1), (2) ಮತ್ತು (3) ಇದನ್ನು ಸ್ಪಷ್ಟಪಡಿಸುತ್ತವೆ.  ಆದಾಗ್ಯೂ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಭಾಷೆ ಅಧಿಕೃತವಾಗಿ ಇಂಗ್ಲಿಷ್‌ನಲ್ಲಿ ಇರತಕ್ಕದ್ದು ಎಂದು ಸಂವಿಧಾನದ 348ನೇ ವಿಧಿ ಹೇಳುತ್ತದೆ. ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರಿರುವ ಭಾಷೆಗಳನ್ನು ಹೈಕೋರ್ಟ್‌ಗಳಲ್ಲಿ ಬಳಸುವ ಕುರಿತಂತೆ ಸಂಸದೀಯ ಸ್ಥಾಯಿ ಸಮಿತಿ ಇತ್ತೀಚೆಗೆ ಮತ್ತೆ ಪ್ರಸ್ತಾಪಿಸಿದೆ.

‘ಹೈಕೋರ್ಟ್‌ಗಳಲ್ಲಿ ಬಳಸಬೇಕಾದ ಭಾಷೆಗಳ ಬಗ್ಗೆ ನ್ಯಾಯಾಂಗದ ಜೊತೆ ಚರ್ಚಿಸುವ ಅಗತ್ಯವಿಲ್ಲ’ ಎಂದು ಸಮಿತಿ ಹೇಳಿದೆ. ‘ಸಂಸತ್‌ ನ್ಯಾಯಾಂಗದ ಸಲಹೆ ಕೇಳಬಹುದೇ ಹೊರತು ಅದು ನೀಡುವ ಅಭಿಪ್ರಾಯವನ್ನು ತೀರ್ಪು ಎಂದು ಭಾವಿಸಬೇಕಾಗಿಲ್ಲ’ ಎಂಬ ಸಮಿತಿಯ ನಿಲುವು ಹೈಕೋರ್ಟ್‌ನಲ್ಲಿ ಪ್ರಾಂತೀಯ ಭಾಷೆ ಬಳಸಬೇಕೆಂಬ ಕೀರಲು ದನಿಗೆ ಮತ್ತೆ  ಬನಿ ಎರೆದಿದೆ.

ಕರ್ನಾಟಕದಲ್ಲಿನ ಕೋರ್ಟ್‌ಗಳಲ್ಲಿ ಕನ್ನಡದ ಬಳಕೆಯ ಇತಿಹಾಸವನ್ನು ಗಮನಿಸಿದಾಗ ಹುಬ್ಬೇರಿಸುವಷ್ಟು  ಆಶಾದಾಯಕ ಸಂಗತಿಗಳು ನಮಗೆ ಗೋಚರವಾಗುತ್ತವೆ.

ಬ್ರಿಟಿಷರು 1867ರಲ್ಲೇ ನ್ಯಾಯಾಲಯದಲ್ಲಿ ಕನ್ನಡದ ಬಳಕೆ  ಕಡ್ಡಾಯ ಮಾಡಿದ್ದರು! ‘ಜನರ ಭಾಷೆಯನ್ನು ತಿಳಿಯದವನು ಜನರನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ’ ಎಂದು ಬ್ರಿಟಿಷರು ಬಲವಾಗಿ ನಂಬಿದ್ದರು.  

ಶತಮಾನಗಳ ಹಿಂದೆ ವಿದೇಶಿಯರಿಗೆ ಕನ್ನಡವನ್ನು ಕಲಿಯಲು ಯಾರೂ ಒತ್ತಾಯಿಸಿರಲಿಲ್ಲ. ಈಗಿನಂತೆ ಬಹುಮಾನ, ಪ್ರಶಸ್ತಿ, ಮುಂಬಡ್ತಿಗಳ ಆಮಿಷವಿರಲಿಲ್ಲ. ಆದರೂ ಅವರೆಲ್ಲಾ ತಾವಾಗಿಯೇ ಕನ್ನಡ ಕಲಿತರು. ಜನರಿಗೆ ಹತ್ತಿರವಾದರು.

ಜೀಗ್ಲರನೆಂಬ ಆಂಗ್ಲನು ಕನ್ನಡವನ್ನು ಕೇವಲ ಆರು ತಿಂಗಳಿನಲ್ಲಿ ಕಲಿತಿದ್ದ. ರೆವರೆಂಡ್‌ ರೀಡ್‌ ಎಂಬ ಪಾದ್ರಿ ಐದು ವಾರಗಳಲ್ಲಿ ಕನ್ನಡ ಕಲಿತಿದ್ದರು. ಟಿ.ಎಸ್.ರೈಸ್ ಏಳು ತಿಂಗಳಲ್ಲಿ ಕನ್ನಡ ಕಲಿತು ಹಲವಾರು ಗ್ರಂಥಗಳನ್ನು ಕನ್ನಡದಲ್ಲಿಯೇ ರಚಿಸಿದ್ದರು.

ಆಂಗ್ಲ ಅಧಿಕಾರಿಗಳಾಗಿದ್ದ ಫ್ಲೀಟ್‌, ರೈಸ್ ಮುಂತಾದವರು ಕನ್ನಡ ನಾಡಿನಾದ್ಯಂತ ಸಂಚರಿಸಿ ಶಿಲಾಶಾಸನಗಳನ್ನು ಸಂಗ್ರಹಿಸಿ ಕನ್ನಡದ ವಿರಾಟ್‌ ಸ್ವರೂಪವನ್ನು ಪರಿಚಯಿಸಿದ್ದರು.

ದೇಶದಾದ್ಯಂತ ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪೆನಿಯ ಸರ್ಕಾರ ಆರಂಭವಾದಾಗ ಕೋರ್ಟ್ ಕಲಾಪಗಳೆಲ್ಲಾ ಹೆಚ್ಚಾಗಿ ಪರ್ಷಿಯನ್‌ ಭಾಷೆಯಲ್ಲಿಯೇ ನಡೆಯುತ್ತಿದ್ದವು. ಪಾರ್ಸಿ ಭಾಷೆಯ ಉಪಯೋಗ 1836ರಿಂದ ನಿಂತು ಹೋಯಿತು.

ದೇಶದ ದೊಡ್ಡ ಸಂಸ್ಥಾನಗಳು ಎನಿಸಿದ್ದ ಬರೋಡಾ, ಗ್ವಾಲಿಯರ್, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಪಟಿಯಾಲ ಹಾಗೂ ಇನ್ನಿತರ ಕಡೆಗಳಲ್ಲಿ 1950ರವರೆವಿಗೂ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಾಂತೀಯ ಭಾಷೆಗಳೇ ಬಳಕೆಯಾಗುತ್ತಿದ್ದವು. ವಾಸ್ತವಾಂಶ ಏನೆಂದರೆ, ಆಳರಸರ ಸಂಸ್ಥಾನಗಳೆಲ್ಲಾ ಅಳಿದು ಹೋಗಿ ಇವೆಲ್ಲಾ ಸ್ವತಂತ್ರ ಭಾರತದಲ್ಲಿ ವಿಲೀನವಾದಾಗ ಪ್ರಾಂತೀಯ ಭಾಷೆಗಳೆಲ್ಲಾ ಪದಚ್ಯುತಿ ಹೊಂದಿದವು. ತಮ್ಮ ಸ್ಥಾನವನ್ನು ಇಂಗ್ಲಿಷ್‌ ಭಾಷೆಗೆ ಬಿಟ್ಟುಕೊಟ್ಟವು.

ಕರ್ನಾಟಕದ ನ್ಯಾಯಾಲಯಗಳ ಎಲ್ಲ ವ್ಯವಹಾರ ಅಧಿಕೃತ ಭಾಷೆ ಕನ್ನಡದಲ್ಲಿಯೇ ನಡೆಯಬೇಕೆಂಬ ನಿಲುವನ್ನು ಹಲವರು ಆಗಾಗ್ಗೆ ಎತ್ತಿಹಿಡಿಯುತ್ತಲೇ ಬಂದಿದ್ದಾರೆ.

ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಕನ್ನಡವನ್ನೇ ಪ್ರತಿಶತ ನೂರರಷ್ಟು ಬಳಕೆ ಮಾಡಬೇಕೆಂದು ಕರ್ನಾಟಕ ಹೈಕೋರ್ಟ್‌ 2003ರ ಮಾರ್ಚ್‌ 29ರಂದು ಆದೇಶ ಹೊರಡಿಸಿದೆ. ಆದರೆ ರಾಜ್ಯದ ಅತ್ಯುನ್ನತ ಕೋರ್ಟ್‌ ಎನಿಸಿದ ಹೈಕೋರ್ಟ್‌ನ ಎಲ್ಲ ವ್ಯವಹಾರ, ಅರ್ಜಿ ನಮೂನೆಗಳು, ವಕಾಲತ್ತುಗಳು, ತೀರ್ಪುಗಳು, ಕಾನೂನು ಮತ್ತು ಕಲಾಪವೆಲ್ಲವೂ ಕನ್ನಡದಲ್ಲಿಯೇ ಇರಬೇಕು ಎಂಬ ಕನಸು ಮಾತ್ರ ನನಸಾಗಿಲ್ಲ. ಅಧಿಕೃತ ಭಾಷಾ ಕಾಯ್ದೆಯ ಕಲಂ 7ರ ಅನುಸಾರ ರಾಜಸ್ತಾನ್, ಮಧ್ಯಪ್ರದೇಶ, ಅಲಹಾಬಾದ್ ಮತ್ತು ಪಟ್ನಾ ಹೈಕೋರ್ಟ್‌ಗಳಲ್ಲಿ ಅಧಿಕೃತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್‌  ಭಾಷೆ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಇದಕ್ಕೆ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಹೊರತಾಗಿವೆ. ಈ ದಿಸೆಯಲ್ಲಿ ಇನ್ನೂ ಭಗೀರಥ ಪ್ರಯತ್ನ ನಡೆಸುತ್ತಲೇ ಇವೆ.

ಕೋರ್ಟ್‌ಗಳಲ್ಲಿ ಕನ್ನಡದ ಸಾರ್ವಭೌಮತ್ವದ ಬಗ್ಗೆ ಕಳಕಳಿ ವ್ಯಕ್ತಪಡಿಸುವ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ನಮ್ಮ ಹೈಕೋರ್ಟ್‌ನಲ್ಲಿ ಕನ್ನಡ  ಯಾಕಾಗಿ  ಬಳಕೆಯಾಗುತ್ತಿಲ್ಲ  ಎಂಬುದಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದು, ಅಧಿಕಾರಿಗಳ ಬೇಜವಾಬ್ದಾರಿತನ, ವಕೀಲರಲ್ಲಿ ಕನ್ನಡ ಮನಸ್ಸಿನ ಕೊರತೆಗಳಿಂದ ಸಂವಿಧಾನದತ್ತ ಅಧಿಕಾರ ಬಳಕೆ ಆಗದೇ ಇರುವುದು ಎದ್ದು ಕಾಣುತ್ತದೆ. ಕನ್ನಡದ ಕೂಗಿನ ಜೀವದನಿಯಾದ ಸರೋಜಿನಿ ಮಹಿಷಿ ವರದಿ ಮೂಲೆಗೆ ಸರಿದ ಪರಿಣಾಮ ಇಂತಹ ಅನೇಕ ಸಮಸ್ಯೆಗಳನ್ನು ನಾವು ಎದುರಿಸುತ್ತಲೇ ಇದ್ದೇವೆ’ ಎನ್ನುತ್ತಾರೆ.

ಹೈಕೋರ್ಟ್‌ನ ಅಂದಿನ ನ್ಯಾಯಮೂರ್ತಿ ಅರಳಿ ನಾಗರಾಜ್ 2008ರ ಮಾರ್ಚ್‌ 14ರಂದು, ತೆರೆದ ಕೋರ್ಟ್‌ ಕಲಾಪದಲ್ಲಿ ಕನ್ನಡದಲ್ಲೇ  ಆದೇಶ ಬರೆಸಿದರು. ಇದು ಕರ್ನಾಟಕ ಹೈಕೋರ್ಟ್‌ನಲ್ಲಿ ಬರೆಸಲಾದ ಮೊದಲ  ಕನ್ನಡದ ಆದೇಶ.

ದಿವಂಗತ ವಿ.ಎಸ್.ಮಳಿಮಠ ಅವರು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು.  ಆ ಸಂದರ್ಭದಲ್ಲಿ ನ್ಯಾಯದಾನ ವ್ಯವಸ್ಥೆಯ ಕನ್ನಡೀಕರಣಕ್ಕೆ ಅವರು ನೀಡಿದ್ದ ಸಲಹೆಗಳೆಂದರೆ:
* ಕನ್ನಡದಲ್ಲಿ ಹೇಳಿಕೆ ನೀಡುವುದು ಕಕ್ಷಿದಾರನ ಅಧಿಕಾರವಾಗಬೇಕು.
* ತೀರ್ಪುಗಳು ಕನ್ನಡದಲ್ಲಿಯೇ ಇರಬೇಕು.
* ಇಲ್ಲವಾದಲ್ಲಿ ತೀರ್ಪುಗಳು ಕನ್ನಡಕ್ಕೆ ಭಾಷಾಂತರವಾಗಬೇಕು.
* ನ್ಯಾಯಾಧೀಶರಿಗೆ ಕನ್ನಡ ತರಬೇತಿ ಕಡ್ಡಾಯ.
* ವಕೀಲರಿಗೆ ಕನ್ನಡ ಪರೀಕ್ಷೆ ಕಡ್ಡಾಯವಾಗಬೇಕು.
* ನ್ಯಾಯಾಲಯಗಳಲ್ಲಿ ಕನ್ನಡ ಶೀಘ್ರಲಿಪಿಗಾರರ ನೇಮಕವಾಗಬೇಕು.
* ಕಾನೂನು ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು
* ಶಾಸಕಾಂಗದ ಕೆಲಸಗಳು ಕನ್ನಡದಲ್ಲಿಯೇ ನಡೆಯಬೇಕು
* ಕನ್ನಡ ಕಾನೂನು ಸಾಹಿತ್ಯ ವಿಪುಲವಾಗಿ ರಚನೆಯಾಗಬೇಕು
* ಬೇರೆ ಭಾಷೆಯ ಶಬ್ದಗಳು ಕನ್ನಡದಲ್ಲಿ ಅಂಗೀಕಾರವಾಗಬೇಕು.

ಕನ್ನಡದಲ್ಲಿ ಕಾನೂನು ಸಾಹಿತ್ಯ
1846ರಿಂದ ಸ್ವಾತಂತ್ರ್ಯ ಲಭಿಸುವ ತನಕ ಸುಮಾರು 100 ವರ್ಷಗಳ ಕಾಲ ಅವ್ಯಾಹತವಾಗಿ ಕನ್ನಡದಲ್ಲಿ ರಚನೆಗೊಂಡ ನೂರಾರು ಕನ್ನಡ ಕಾನೂನು ಗ್ರಂಥಗಳನ್ನು ಹಾಗೂ ವ್ಯಾಖ್ಯಾನ ಗ್ರಂಥಗಳನ್ನು ಡಾ. ರಾ.ಯ.ಧಾರವಾಡಕರ ಅವರು ‘ಕನ್ನಡದಲ್ಲಿ ಕಾನೂನು ಸಾಹಿತ್ಯ’ ಎಂಬ ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಮುನ್ನೂರಕ್ಕೂ ಮಿಗಿಲಾದ ಗ್ರಂಥಗಳ ಹೆಸರನ್ನು ಪಟ್ಟಿ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಗ್ರಂಥಗಳಲ್ಲಿ ಉಪಯೋಗಿಸಿರುವ ಪತ್ರ ಲೇಖನಗಳು, ಒಪ್ಪಂದ ಮೊದಲಾದವುಗಳನ್ನೂ ಕಾಣಿಸಿದ್ದಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 2003–04ರಲ್ಲಿ ಪ್ರೊ. ಎಸ್.ಸಿ.ಹಿರೇಮಠ ಮತ್ತು ಪ್ರೊ. ವಿ.ಗುಂಜೆಟ್ಟಿ ಅವರ ಸಂಪಾದಕತ್ವದಲ್ಲಿ ‘ಕಾನೂನು ಪದ ವಿವರಣ ಕೋಶ’ ಪ್ರಕಟವಾಗಿದೆ.

ಈ ಕೋಶದಲ್ಲಿ 10 ಸಾವಿರ ಕಾನೂನು ಪದಗಳ ವಿವರಣೆ, ವ್ಯಾಖ್ಯಾನ, ಆ ಬಗ್ಗೆ ವಿವಿಧ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳ ಉಲ್ಲೇಖವಿದೆ. 1,201 ಪುಟಗಳ ಬೃಹತ್‌ ಹೊತ್ತಿಗೆಯಾದ ಈ ಪದ ವಿವರಣ ಕೋಶವು ಕನ್ನಡ ಕಾನೂನು ಸಾಹಿತ್ಯಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ನೀಡಿರುವ ಬಹುದೊಡ್ಡ ಕೊಡುಗೆ. ತೆರೆದ ಕೋರ್ಟ್‌ ಕಲಾಪದಲ್ಲಿನ ವಾದ–ಪ್ರತಿವಾದ, ಚರ್ಚೆಗಳು ಕನ್ನಡದಲ್ಲಿದ್ದು ಕಕ್ಷಿದಾರನಿಗೆ ಅವು ಅರ್ಥವಾಗುವಂತಿರಬೇಕು. ತಾನು ಯಾವ ಕಾರಣಕ್ಕೆ ಸೋತಿದ್ದೇನೆ ಎನ್ನುವುದು ಆತನಿಗೆ ತಿಳಿಯಬೇಕು. ಇವೆಲ್ಲಾ ಅರ್ಥವಾದರೆ ಸೋತ ಸಂದರ್ಭದಲ್ಲಿಯೂ ಆತನಿಗೆ ಸ್ವಲ್ಪ ಸಮಾಧಾನ ದೊರೆಯುತ್ತದೆ.

ಸಾಮ್ರಾಜ್ಯವಾದಿಗಳು ನಮ್ಮ ಮೇಲೆ ಹೊರಿಸಿದ ಇಂಗ್ಲಿಷ್‌ ಭಾಷೆ ಕೋರ್ಟ್‌ಗಳಲ್ಲಿ ಇಂದು ಸಾಕಷ್ಟು ಬೇರು ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ನಿಲುವು ಎಷ್ಟರಮಟ್ಟಿಗೆ ಊರ್ಜಿತವಾಗುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸಬೇಕು.

**

ಹೀಗಿತ್ತು ಬ್ರಿಟಿಷರ ನಿಲುವು

* 1761ರಿಂದ 1872ರವರೆಗೆ ಬಳ್ಳಾರಿ ವಿಭಾಗಾಧಿಕಾರಿಯಾಗಿದ್ದ ಸರ್ ಥಾಮಸ್‌ ಮನ್ರೊ, ಕರ್ನಾಟಕದ ಕೋರ್ಟ್‌ಗಳಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯಗಳನ್ನು ಸಾಮಾಜಿಕ ಪಿಡುಗು ಎಂದು ಕರೆದಿದ್ದರು. ಇದಕ್ಕೆಲ್ಲಾ ನ್ಯಾಯಾಧೀಶರ ಅಜ್ಞಾನವೇ ಕಾರಣ ಎಂದು ಅಂದಿನ ಬ್ರಿಟಿಷ್‌ ಸರ್ಕಾರವನ್ನು ಎಚ್ಚರಿಸಿದ್ದ.

* 1785ರಿಂದ 1861ರವರೆಗೆ ಮೈಸೂರು ಕಮಿಷನರ್‌ ಆಗಿದ್ದ ಮಾರ್ಕ್ ಕಬ್ಬನ್‌ ತನ್ನ ಆಡಳಿತಾವಧಿಯಲ್ಲಿ ಕನ್ನಡ ಬಲ್ಲ ಆಂಗ್ಲರನ್ನು ಮತ್ತು ಕನ್ನಡ ಬಲ್ಲ ಇತರರನ್ನೇ  ಸರ್ಕಾರದ ಹುದ್ದೆಗಳಿಗೆ ನೇಮಿಸಿಕೊಂಡು ಕನ್ನಡ ಬಳಕೆಗೆ ಪ್ರೋತ್ಸಾಹ ನೀಡಿದ್ದ.

* 1802ರಿಂದ 1827ರವರೆಗೆ ಮೈಸೂರಿನ ಸ್ಥಾನಿಕ ಅಧಿಕಾರಿ ಮತ್ತು ಶ್ರೀರಂಗಪಟ್ಟಣದ ಕಲೆಕ್ಟರ್ ಆಗಿದ್ದ ಜೇಮ್ಸ್‌ ಕ್ಯಾಸ್ಮೆಜಾರಿ ಹಾಗೂ 1867ರಿಂದ 1885ರವರೆಗೆ ಮೈಸೂರಿನ ಸ್ಥಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಟಿ.ಜಿ.ಕ್ಲಾರ್ಕ್‌, ಅವರು ತಮ್ಮ ಕಚೇರಿಗೆ ಬರುವ ಎಲ್ಲ ಅರ್ಜಿಗಳೂ ಕನ್ನಡದಲ್ಲಿಯೇ ಇರಬೇಕೆಂದು ಒತ್ತಾಯಿಸುತ್ತಿದ್ದರು ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬರುತ್ತಿದ್ದ ಅರ್ಜಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದರು.

* ಜರ್ಮನಿಯವರಾದ ಬಿ.ಎಲ್‌.ರೈಸ್, ಆರ್.ಎಫ್.ಕಿಟ್ಟೆಲ್‌ ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಅದರ ಶ್ರೇಷ್ಠತೆಗೆ ಮಾರು ಹೋಗಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ಬರೆದರು ಹಾಗೂ ಕನ್ನಡದ ಹಲವು ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದರು. 19ನೇ ಶತಮಾನದಲ್ಲಿ 70 ಸಾವಿರ ಪದಗಳನ್ನು ಒಳಗೊಂಡ ಕನ್ನಡ–ಇಂಗ್ಲಿಷ್‌ ನಿಘಂಟನ್ನು ಸಿದ್ಧಗೊಳಿಸಿದ ಆರ್‌.ಎಫ್‌.ಕಿಟ್ಟೆಲ್‌ ಅವರು ಇದಕ್ಕಾಗಿ ಜರ್ಮನಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದರು.

* ಇಂಗ್ಲಿಷ್‌ ಭಾಷೆಗೆ ಅದರದ್ದೇ ಆದ ಲಿಪಿಯಿಲ್ಲ. ಅದನ್ನು ರೋಮನ್‌ ಲಿಪಿಯಲ್ಲಿ ಬರೆಯಲಾಗುತ್ತದೆ. ಹಿಂದಿ ಭಾಷೆಗೂ ಅದರದ್ದೇ ಆದ ಲಿಪಿಯಿಲ್ಲ. ಅದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ತಮಿಳು ಭಾಷೆಗೆ ಲಿಪಿ ಇದ್ದರೂ ಪ್ರಾಯೋಗಿಕವಾಗಿ ಸರಿಯಿಲ್ಲ. ಏಕೆಂದರೆ ಹೆಚ್ಚಿನ ಉಚ್ಚಾರಗಳಿಗೆ ಒಂದೇ ಲಿಪಿಯನ್ನು ಬಳಸಲಾಗುತ್ತದೆ. ಆದರೆ ಕನ್ನಡ ಭಾಷೆಗೆ ಅದರದ್ದೇ ಆದ ಲಿಪಿಯೂ ಇದ್ದು ಅದನ್ನು ಓದಲೂಬಹುದು ಹಾಗೂ ಬರೆಯಲೂಬಹುದಾಗಿದೆ. ವಿನೋಬಾ ಭಾವೆಯವರು ಕನ್ನಡ ಭಾಷೆಯನ್ನು ‘ವಿಶ್ವಲಿಪಿಗಳ ರಾಣಿ’ ಎಂದೇ ಕರೆದಿದ್ದಾರೆ.

* ಆಂಗ್ಲ ಪೂರ್ವ ಆಳ್ವಿಕೆಯಲ್ಲಿ ಭಾರತೀಯ ಭಾಷೆಗಳೇ ಆಡಳಿತ ಭಾಷೆಗಳಾಗಿದ್ದವು. ಶ್ರುತಿ, ಸ್ಮೃತಿ, ಸೂತ್ರ ಮತ್ತು ಧರ್ಮಶಾಸ್ತ್ರಗಳಲ್ಲಿ ಅನೇಕ ಕಾನೂನು ಶಬ್ದಗಳು ನಮಗೆ ದೊರೆಯುತ್ತವೆ. 

* ವಿಜ್ಞಾನೇಶ್ವರನ ‘ಮಿತಾಕ್ಷರ’ ಮತ್ತು ಜೀಮೂತವಾಹನನ ‘ದಯಾಭಾಗ’ ಗ್ರಂಥಗಳಲ್ಲಿ ಋಣದಾನ, ಉಪನಿಧಿ, ಸ್ವಾಮಿ ಪಾಲು ವಿವಾದ, ವ್ಯವಹಾರ, ಲೇಖ್ಯ... ಇತ್ಯಾದಿ ಪದಗಳನ್ನು ನೋಡಬಹುದು.

*  ಯುರೋಪ್ ಖಂಡದ ಬಹುತೇಕ ಎಲ್ಲಾ ದೇಶಗಳೂ ತಮ್ಮ ಮಾತೃಭಾಷೆಯನ್ನೇ ತಮ್ಮ ನ್ಯಾಯಾಂಗದ ಕಲಾಪಗಳಲ್ಲಿ ಅಧಿಕೃತವಾಗಿ ಬಳಸಿಕೊಳ್ಳುತ್ತಿವೆ.

**

343ನೇ ವಿಧಿ ಏನು ಹೇಳುತ್ತದೆ?

* 1. ದೇವನಾಗರಿ ಲಿಪಿಯಲ್ಲಿರುವ ಹಿಂದಿಯು ಒಕ್ಕೂಟದ ರಾಜಭಾಷೆ ಆಗಿರತಕ್ಕದ್ದು.

* 2. ಒಕ್ಕೂಟದ ಸರ್ಕಾರಿ ಉದ್ದೇಶಗಳಿಗಾಗಿ ಬಳಸಬೇಕಾದ ಅಂಕಿಗಳ ರೂಪವು ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪವಾಗಿರತಕ್ಕದ್ದು.

* (1)ನೇ ಪ್ಯಾರಾದಲ್ಲಿ ಏನೇ ಇದ್ದಾಗ್ಯೂ, ಈ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಒಕ್ಕೂಟದ ಯಾವ ಸರ್ಕಾರಿ ಉದ್ದೇಶಗಳಿಗಾಗಿ ಇಂಗ್ಲಿಷ್‌ ಭಾಷೆಯನ್ನು ಬಳಸಲಾಗುತ್ತಿತ್ತೊ ಆ ಎಲ್ಲಾ ಉದ್ದೇಶಗಳಿಗಾಗಿ ಸಂವಿಧಾನದ ಪ್ರಾರಂಭದಿಂದ ಹದಿನೈದು ವರ್ಷಗಳವರೆಗೆ ಇಂಗ್ಲಿಷ್‌ ಭಾಷೆಯ ಬಳಕೆಯನ್ನು ಮುಂದುವರಿಸಿಕೊಂಡು ಹೋಗತಕ್ಕದ್ದು.

ಆದರೆ, ರಾಷ್ಟ್ರಪತಿಯ ಆದೇಶದ ಮೂಲಕ ಸದರಿ ಅವಧಿಯಲ್ಲಿ ಒಕ್ಕೂಟದ ಸರ್ಕಾರಿ ಉದ್ದೇಶಗಳ ಪೈಕಿ ಯಾವುದೇ ಉದ್ದೇಶಕ್ಕಾಗಿ, ಇಂಗ್ಲಿಷ್ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಮತ್ತು ಅಂತರರಾಷ್ಟ್ರೀಯ ರೂಪದಲ್ಲಿರುವ ಭಾರತೀಯ ಅಂಕಿಗಳ ಜೊತೆಗೆ  ದೇವನಾಗರಿ ರೂಪದಲ್ಲಿರುವ ಬಳಕೆಯನ್ನು ಅಧಿಕೃತಗೊಳಿಸಬಹುದು.

* (3) ಈ ವಿಧಿಯಲ್ಲಿ ಏನೇ ಇದ್ದಾಗ್ಯೂ, ಸಂಸತ್ತು ಸದರಿ ಹದಿನೈದು ವರ್ಷಗಳ ಅವಧಿಯ ತರುವಾಯ
     (ಎ) ಇಂಗ್ಲಿಷ್‌ ಭಾಷೆಯನ್ನು ಅಥವಾ
     (ಬಿ) ದೇವನಾಗರಿ ರೂಪದಲ್ಲಿರುವ ಅಂಕಿಗಳನ್ನು
      ಕಾನೂನಿನ ಮೂಲಕ, ಆ ಕಾನೂನಿನಲ್ಲಿ    
      ನಿರ್ದಿಷ್ಟಪಡಿಸಬಹುದಾದಂತಹ ಉದ್ದೇಶಗಳಿಗಾಗಿ  
      ಬಳಸುವುದನ್ನು ನಿರ್ಬಂಧಿಸಬಹುದು.

**

ಹೀಗಂತಾರೆ...

ಬೇಕಿರುವುದು ನ್ಯಾಯ
ಹೈಕೋರ್ಟ್‌ನಲ್ಲಿ ಯಾವ ಭಾಷೆ ಬಳಸಬೇಕು ಎಂಬ ಜಿಜ್ಞಾಸೆಗಿಂತಲೂ  ನಮಗೆ ಬೇಕಿರುವುದು ಶೀಘ್ರ ಮತ್ತು ಗುಣಮಟ್ಟದ ನ್ಯಾಯ. ಆಸ್ಪತ್ರೆಯಲ್ಲಿ ವೈದ್ಯ ಯಾವ ಭಾಷೆ ಮಾತನಾಡುತ್ತಾನೆ, ಯಾವ ಪ್ರದೇಶಕ್ಕೆ ಸೇರಿದ್ದಾನೆ ಎಂಬುದಕ್ಕಿಂತಲೂ ರೋಗಿಗೆ ಎಂತಹ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾನೆ ಎಂಬುದೇ ಮುಖ್ಯವಾಗಬೇಕು. ಬಡ ಕಕ್ಷಿದಾರನಿಗೆ ಸಾಮಾನ್ಯ ಕನ್ನಡವೇ ದುರ್ಭರವಾಗಿರುವಾಗ  ಹೈಕೋರ್ಟ್‌  ಕಲಾಪವೆಲ್ಲಾ ಕನ್ನಡದಲ್ಲೇ  ನಡೆಯಬೇಕು ಎಂದರೆ ಅದು ಹಾಸ್ಯಾಸ್ಪದ ವಿಚಾರ. 

‘ಹೈಕೋರ್ಟ್‌ಗಳು ಗುಣಮಟ್ಟದ ನ್ಯಾಯ ನೀಡುವಂತಾಗಬೇಕು. ಸಾರ್ವಜನಿಕರ ಹಿತ ಕಾಯುವಂತಿರಬೇಕು. ಅದು ಬಿಟ್ಟು ಜನರಿಗೆ ಅನ್ಯಾಯವಾಗುವಂತಹ ತೀರ್ಪನ್ನು ಉತ್ಕೃಷ್ಟ ಕನ್ನಡದಲ್ಲಿ ಕೊಟ್ಟರೆ ಏನು ಪ್ರಯೋಜನ?


–ಎನ್.ಕುಮಾರ್, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

**
ಆರಂಭದಲ್ಲಷ್ಟೇ ಸಮಸ್ಯೆ
ಪ್ರಾರಂಭದಲ್ಲಿ ಇದು ಕೆಲವು ಸಮಸ್ಯೆಗಳಿಗೆ ಎಡೆಮಾಡಿಕೊಡಬಹುದು. ಆದರೆ ಭವಿಷ್ಯದಲ್ಲಿ ಕನ್ನಡಿಗರಿಗೆ ಅನುಕೂಲವಾಗುತ್ತದೆ. ಗುಣಾತ್ಮಕ ನ್ಯಾಯ ಒದಗಿಸಲು ಸಹಕಾರಿಯಾಗುತ್ತದೆ.  ಹೈಕೋರ್ಟ್‌ಗಳಲ್ಲಿ ಅನ್ಯ ರಾಜ್ಯದ ನ್ಯಾಯಮೂರ್ತಿಗಳ ಮುಂದೆ ಬರುವ ಪ್ರಕರಣಗಳಲ್ಲಿ ಕನ್ನಡದ ಕಡತಗಳನ್ನು ತರ್ಜುಮೆ ಮಾಡುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದೆ. ಇಂತಹ ಪ್ರಕ್ರಿಯೆ ಹೆಚ್ಚಾಗುತ್ತದೆ ಅಷ್ಟೆ.


–ಎಚ್‌.ಎನ್‌.ನಾಗಮೋಹನ ದಾಸ್, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

**

ಸಮೀಕ್ಷೆ ನಡೆಯಲಿ
ರಾಜ್ಯದ ಅಧಿಕೃತ ಭಾಷೆ ಕನ್ನಡವೇ ಆಗಿರುವಾಗ ಹೈಕೋರ್ಟ್‌ನಲ್ಲಿ ಕನ್ನಡ ಬಳಕೆ ಮಾಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹ ತೀರ್ಮಾನ ತೆಗೆದುಕೊಳ್ಳುವ ಮೊದಲು ವಾಸ್ತವದಲ್ಲಿ ಇರುವ ತೊಂದರೆಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಸಮೀಕ್ಷೆ ನಡೆಯಬೇಕು. ಕಾನೂನು ಪುಸ್ತಕ, ಆದೇಶಗಳು, ಅಧ್ಯಾದೇಶಗಳು ಇಂಗ್ಲಿಷ್‌ನಲ್ಲೇ ಇರುವುದನ್ನು ಗಮನಿಸಬೇಕು. ಇದರಿಂದ ಕಕ್ಷಿದಾರರಿಗೆ ಆಗುವ ತೊಂದರೆ, ವಿಳಂಬ ಇವನ್ನೆಲ್ಲಾ ಗಣನೆಗೆ  ತೆಗೆದುಕೊಂಡು ನಂತರ ಸೂಕ್ತ ತೀರ್ಮಾನಕ್ಕೆ ಬರಬೇಕು.


–ಎ.ಎಸ್.ಪೊನ್ನಣ್ಣ, ಹೆಚ್ಚುವರಿ ಅಡ್ವೊಕೇಟ್ ಜನರಲ್‌

**
ಎರಡೂ ಭಾಷೆ ಇರಲಿ
ಹೈಕೋರ್ಟ್‌ನಲ್ಲಿ ಎರಡೂ ಭಾಷೆಗಳ ಬಳಕೆ ಸೂಕ್ತ. ಭಾರತ ಬಹುದೊಡ್ಡ ಗಣರಾಜ್ಯ. ಇಲ್ಲಿಗೆ ವರ್ಗಾವಣೆ ಆಗಿ ಬರುವ ನ್ಯಾಯಮೂರ್ತಿಗಳಿಗೆ ಇಂಗ್ಲಿಷ್‌ ಸೂಕ್ತ ಎನಿಸಿದರೂ ಸ್ಥಳೀಯ ನ್ಯಾಯಮೂರ್ತಿಗಳು ಕನ್ನಡ ಬಳಸುವುದಕ್ಕೆ ಆದ್ಯತೆ ನೀಡಬೇಕು.

ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಇಂಗ್ಲಿಷ್‌ ಮತ್ತು ಕನ್ನಡ ಎರಡನ್ನೂ ಉಪಯೋಗಿಸುವುದು ಅವಶ್ಯ. ಇದರಿಂದ ಗೊಂದಲ ನಿವಾರಣೆಯಾಗುತ್ತದೆ.

ಹೈಕೋರ್ಟ್‌ನಲ್ಲಿ ಬರಿ ಕನ್ನಡದಲ್ಲೇ ಆಡಳಿತ, ಕಲಾಪ ನಡೆಯಬೇಕು ಎಂದರೆ ಕಾಲೇಜುಗಳಲ್ಲಿ ಕನ್ನಡದಲ್ಲಿ ಕಾನೂನು ಕಲಿಕೆಗೆ ಆದ್ಯತೆ ನೀಡಬೇಕಾಗುತ್ತದೆ.

–ಪ್ರತಿಮಾ ಹೊನ್ನಾಪುರ, ಹೈಕೋರ್ಟ್‌ನ ಸರ್ಕಾರಿ ವಕೀಲೆ

**
ಇಂಗ್ಲಿಷ್‌ ಸೂಕ್ತ
ಹೈಕೋರ್ಟ್‌ನಲ್ಲಿ ಶೇಕಡ 100ರಷ್ಟು ಕನ್ನಡ ಬಳಕೆ ಸಾಧ್ಯವೇ ಇಲ್ಲ. ಎಲ್ಲರಿಗೂ ಕನ್ನಡ ಉಪಯೋಗಿಸುವ ಉದ್ದೇಶ ಇದ್ದರೂ ವಾಸ್ತವದಲ್ಲಿ ಇದರ ಅನುಷ್ಠಾನಕ್ಕೆ ಸಾಕಷ್ಟು ತೊಂದರೆಗಳಿವೆ.
ಕನ್ನಡ ಬಳಸಬೇಕೆಂದು ಹೊರಟರೆ ಈಗಿರುವ ಸಾಫ್ಟ್‌ವೇರ್‌ ಬದಲಾವಣೆ ಆಗಬೇಕು. ಬೆರಳಚ್ಚುಗಾರರು, ಶೀಘ್ರಲಿಪಿಕಾರರೆಲ್ಲಾ ಕನ್ನಡದವರೇ ಆಗಬೇಕು.

ಹೈಕೋರ್ಟ್‌ಗೆ ಬೇರೆ ಕಡೆಯ ವಕೀಲರು, ಕಕ್ಷಿದಾರರೂ ಬರುತ್ತಾರೆ. ಆಗ ಅವರಿಗೆ ಕನ್ನಡ ಗೊತ್ತಿಲ್ಲ ಎಂದರೆ ಕಷ್ಟವಾಗುತ್ತದೆ. ಇಂಗ್ಲಿಷ್‌ ಜಾಗತಿಕ ಭಾಷೆ ಎನಿಸಿದ್ದು ಇಂಗ್ಲಿಷ್‌ಗೆ ಆದ್ಯತೆ ನೀಡುವುದೇ ಸೂಕ್ತ.

ಪ್ರಾಂತೀಯ ಭಾಷೆಯ ಬಳಕೆಗೆ ಅನೇಕ ಸಮಸ್ಯೆಗಳಿವೆ. ಈಗ ಕನ್ನಡದಲ್ಲಿ ಆಡಳಿತ ಶುರು ಮಾಡಿದರೆ ನ್ಯಾಯದಾನದಲ್ಲಿ ವಿಳಂಬವಾಗುತ್ತದೆ. ಅಷ್ಟಕ್ಕೂ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳು ವರ್ಗಾವಣೆ ಆಗುತ್ತಿರುತ್ತಾರೆ. ಮುಖ್ಯ ನ್ಯಾಯಮೂರ್ತಿಯಂತೂ ಸದಾ ಹೊರ ರಾಜ್ಯದವರೇ ಇರುತ್ತಾರೆ.

–ಎ.ವಿ.ನಿಶಾಂತ್
ಹೈಕೋರ್ಟ್ ವಕೀಲ

***

–ಬಿ.ಎಸ್.ಷಣ್ಮುಖಪ್ಪ, ಪ್ರಜಾವಾಣಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT