ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ್‌ಗೆ ಬೇಕು ಹೊಸ ವಾರ್ಡ್‌ರೋಬ್‌!

ಪಂಚರಂಗಿ
Last Updated 12 ಮಾರ್ಚ್ 2017, 5:01 IST
ಅಕ್ಷರ ಗಾತ್ರ

*ನಿಮ್ಮ ಬಳಿ ವಿಶೇಷ ಉಡುಗೆ ತೊಡುಗೆಗಳ ದೊಡ್ಡ ಸಂಗ್ರಹ ಇದೆಯಂತೆ ಹೌದಾ?
ಸಿನಿಮಾ ಮತ್ತು ಶೋಗಳಲ್ಲಿ ಯಾವುದೇ ಉಡುಗೆ ತೊಡುಗೆಯನ್ನು ಮತ್ತೆ ಮತ್ತೆ ಬಳಸಬಾರದು ಎಂಬುದು  ನನ್ನ ಹೆಂಡತಿ ಶಿಲ್ಪಾ ಕಂಡಿಷನ್ನು. ನನ್ನ ಡ್ರೆಸ್‌ ಡಿಸೈನರ್ರೂ ಅವಳೇ, ಆಯ್ಕೆ ಮಾಡೋಳೂ ಅವಳೇ. ಹಾಗಾಗಿ ಇಸ್ತ್ರಿ ಮಾಡಿ ಹ್ಯಾಂಗರ್‌ನಲ್ಲಿ ಹಾಕಿಟ್ಟಿದ್ದನ್ನು ಹಾಕ್ಕೊಂಡು ಹೊರಡೋದಷ್ಟೇ ನನ್ ಕೆಲಸ. ಆದರೆ ವಾಪಸ್‌ ಹೋದ ಮೇಲೆ ಮಡಚಿ ವಾರ್ಡ್‌ರೋಬ್‌ನಲ್ಲಿಡೋದು ನನ್ನ ಕೆಲಸ. ‘ಸೂಪರ್ ಮಿನಿಟ್‌’ ಶೋದ ಕಳೆದೆರಡು ಸೀಸನ್‌ಗಳಲ್ಲಿ ಧರಿಸಿದ ಉಡುಗೆಗಳ ವಾರ್ಡ್‌ರೋಬ್‌ಗೆ ಆಗಲೇ ಹಾಕಿದ ಬೀಗ ಹಾಗೇ ಇದೆ. ಮೂರನೇ ಸೀಸನ್‌ಗೆ ಹೊಸ ವಾರ್ಡ್‌ ರೋಬ್‌ ತುಂಬತೊಡಗಿದೆ. ಮನೇಲಿ ಬರೇ ವಾರ್ಡ್‌ರೋಬ್‌ಗಳೇ ತುಂಬ್ತಾವೇನೋ ಅಂತ ಶಿಲ್ಪಾಳಿಗೆ ಆತಂಕ ಶುರುವಾಗಿದೆ.

*ಶಿಲ್ಪಾ ನಿಮ್ಮನ್ನು ಮಗುವಿನಂತೆ ಕಾಳಜಿ ಮಾಡ್ತಾರೆ ಅಲ್ವಾ?
ನಿಜ. ಹಾಗಂತ ಮಗುವಿಗೆ ಹಾಕೋ ಥರ  ಪೌಡರ್‌, ಬಟ್ಟೆ ಎಲ್ಲಾ ಹಾಕಲ್ಲ ಕಣ್ರೀ. ನಾನೇ ಹಾಕ್ಕೊಳ್ಳೋದು. ಆದರೆ ಶಿಲ್ಪಾ ನನ್ನ ದಿನಚರಿಯ ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಗಾ ವಹಿಸುತ್ತಾಳೆ.

*ನಿಮ್ಮ ದಿನಚರಿ ಹೇಗಿರುತ್ತೆ?
ಬೆಳಿಗ್ಗೆ ಒಂದು ಒಂದೂವರೆ ಗಂಟೆ ವ್ಯಾಯಾಮ ಕಡ್ಡಾಯ. ಶೂಟಿಂಗ್‌ ಕಾರಣಕ್ಕೆ ಬೆಳಿಗ್ಗೆ ಮಾಡಲಾಗದಿದ್ದರೆ ಸಂಜೆ ಅರ್ಧ ಗಂಟೆಯಾದರೂ ಲಘು ವ್ಯಾಯಾಮ ಮಾಡ್ತೀನಿ. ನನ್ನ ಅಭಿಮಾನಿಗಳು ಇಷ್ಟಪಡುವಂತೆ ನಾನು ಕಾಣಿಸ್ಕೋಬೇಕಲ್ಲ ಅದಕ್ಕಾಗಿ ಇದೆಲ್ಲಾ ಕಟ್ಟುನಿಟ್ಟಾಗಿ ಪಾಲಿಸ್ತೀನಿ.

*ಹಾಗಿದ್ದರೆ ಆಹಾರದಲ್ಲಿಯೂ ಅದೇ ಶಿಸ್ತು ಪಾಲಿಸುತ್ತೀರಾ?
ಆಹಾರದ ಬಗ್ಗೆ ನಾನು ಯಾವಾಗಲೂ ವಿಧೇಯ ವಿದ್ಯಾರ್ಥಿ. ಬೆಳಿಗ್ಗೆ ಹೊಟ್ಟೆ ತುಂಬಾ ತಿಂಡಿ ತಿನ್ತೀನಿ. ಮಧ್ಯಾಹ್ನ ಧಾನ್ಯಗಳ ಆಹಾರಕ್ಕೆ ಆದ್ಯತೆ. ಮುದ್ದೆ, ಚಪಾತಿ, ರೋಟಿ ಹೀಗೆ ಏನಾದರೂ ಸರಿ. ಜ್ಯೂಸ್‌, ನೀರು ಕುಡೀತೀನಿ. ರಾತ್ರಿ ಎಲ್ಲೇ ಇದ್ದರೂ 7.30ರೊಳಗೆ ಊಟ ಮುಗಿಸುವುದು ಕಡ್ಡಾಯ.

*ಇಷ್ಟೊಂದು ‘ಯಂಗ್‌ ಅಂಡ್‌ ಎನರ್ಜೆಟಿಕ್‌’ ಆಗಿ ಇರುವ ಗುಟ್ಟು ಇದೇನಾ?
ಹೌದು ಮತ್ತೆ? ನೀವು ಯಾವಾಗಲೂ ನಗ್ತಾ ಇರ್ತೀರಲ್ಲ ಅಂತ ಜನ ಕೇಳ್ತಾರೆ.  ನಾನು ಇರೋದೇ ಹೀಗೇ. ಹಿಂದೆ ಇದ್ದಿದ್ದೂ ಹೀಗೇ. ಮುಂದೆ ಇರೋದೂ ಹೀಗೇ. ಬದಲಾಗಬೇಕು ಎಂದು ನನಗೆ ಅನಿಸಲೇ ಇಲ್ಲ. ನಗುನಗುತ್ತಾ ಇದ್ದರೆ ನಾವೂ ಖುಷಿಯಾಗಿರ್ತೀವಿ, ಸುತ್ತಮುತ್ತ ಇರೋರೂ ಖುಷಿಯಾಗಿರ್ತಾರೆ. ಏನಂತೀರಾ?

*ನಿಮ್ಮ ಮೂರು ನಮಸ್ಕಾರಗಳಿಗೆ ಕಾಪಿರೈಟ್‌ ಮಾಡ್ಕೊಂಡಿದ್ದೀರಾ?
ಈ ಗಣೇಶ್‌ ಕನ್ನಡಿಗರ ಮನೆ ಮಗನಾಗಿ ಬೆಳೆದಿದ್ದೇ ಆ ಡೈಲಾಗ್‌ನಿಂದ.  ಕಾಮಿಡಿ ಟೈಂನಲ್ಲಿ ನಾನು ಮೂರು ಸಲ ನಮಸ್ಕಾರ ಹೇಳುವುದನ್ನು ಜನ ಬಹಳ ಇಷ್ಟಪಟ್ಟಿದ್ದರು. ಹಾಗಾಗಿ ನಾನು ನನ್ನ ಅಭಿಮಾನಿಗಳಿಗಾಗಿ ಅದನ್ನು ಮುಂದುವರಿಸಿದ್ದೇನೆ. ನಾವು ಮನರಂಜನೆ ಕ್ಷೇತ್ರದಲ್ಲಿ ಉಳಿದಿರುವುದೇ ಅವರಿಂದಾಗಿ ಅಲ್ವಾ? ಅವರಿಗೇನು ಇಷ್ಟವೋ ಅದನ್ನೇ ಮಾಡೋದು ನಮ್ಮ ಕರ್ತವ್ಯ.

*‘ಪಟಾಕಿ’ ಹಚ್ಚೋದು ಯಾವಾಗ?
‘ಪಟಾಕಿ‘ ನಮ್ಮದೇ ಹೋಂ ಪ್ರೊಡಕ್ಷನ್‌ನ ಹೊಸ ಸಿನಿಮಾ. ಬಹಳ ದಿನಗಳಿಂದ ಅಂದುಕೊಂಡಿದ್ದ ಪೊಲೀಸ್‌ ಅಧಿಕಾರಿಯ ಪಾತ್ರ ಮಾಡಿದ್ದೇನೆ. ಗಣೇಶ್‌ ಸಿನಿಮಾದಲ್ಲಿ ಜನ ನಿರೀಕ್ಷಿಸುವ ತಮಾಷೆ, ಹಾಸ್ಯ, ರೊಮ್ಯಾನ್ಸ್‌, ಒಳ್ಳೆಯ ಹಾಡು ಎಲ್ಲವೂ ಇದೆ. ಎಸಿಪಿಯಾಗಿ ಯೂನಿಫಾರಂನಲ್ಲಿ ಚೆನ್ನಾಗಿ ಕಾಣಿಸ್ತಿದ್ದೀನಿ ಅಂತ ಸೆಟ್‌ನಲ್ಲಿ ಎಲ್ಲರೂ ಹೇಳ್ತಿದ್ರು. ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕು. ಗೆಲ್ಲುವ ನಿರೀಕ್ಷೆ ನನಗಿದೆ. ನೋಡೋಣ.

*‘ಟೈಂ’ ಅನ್ನೋದು ನಿಮಗೆಷ್ಟು ಮುಖ್ಯ?
ನಾನು ಯಾವಾಗಲೂ ಸಮಯಕ್ಕೆ ಬೆಲೆ ಕೊಡ್ತೀನಿ. ‘ಸೂಪರ್‌ ಮಿನಿಟ್‌’ ಶೋ ನನಗೆ ಸಮಯದ ಬೆಲೆಯನ್ನು ಇನ್ನಷ್ಟು ತಿಳಿಸಿಕೊಟ್ಟಿದೆ. ಬೆಳಿಗ್ಗೆ ಎಂಟರಿಂದ ರಾತ್ರಿ 11 ಗಂಟೆವರೆಗೂ ನಾವು ಶೂಟಿಂಗ್‌ ವೇಳೆ ಅಲರ್ಟ್‌ ಆಗಿರಬೇಕು. ಬೇಜಾರು ಮಾಡ್ಕೊಳ್ಳದೆ, ಸಮಯ ವ್ಯರ್ಥ ಮಾಡದೆ ಕೆಲಸ ಮಾಡ್ತೀವಿ. ಸಮಯದ ಬೆಲೆ ಗೊತ್ತಿಲ್ಲದಿದ್ದರೆ ಎಲ್ಲಾ ಕೆಲಸವೂ ಮುಂದಕ್ಕೆ ಹೋಗ್ತಾ ಇರ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT