ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಗರ್ಭಧಾರಣೆಗೆ ಹತ್ತು ದಿಕ್ಕುಗಳು

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಕ್ಕಳನ್ನು ಪಡೆಯಬೇಕೆಂಬ ಬಯಕೆಯನ್ನು ಇಂದಿನ ಹಲವಾರು ಸಾಮಾಜಿಕ ಸಂಗತಿಗಳು ನಿಯಂತ್ರಿಸುತ್ತಿವೆ ಎನ್ನಬಹುದು. ಆರೋಗ್ಯಪೂರ್ಣ ಜೀವನ, ಸಂತಾನನಿಯಂತ್ರಣಕ್ಕೆ ಇರುವ ಸುಲಭ ಮತ್ತು ಸರಳ ವಿಧಾನಗಳು ಮಕ್ಕಳನ್ನು ಹೆರುವಿಕೆಯನ್ನು ತಡವಾಗಿ ಆಯ್ದುಕೊಳ್ಳುವಂತೆ ಮಾಡಿವೆ.

ಇಷ್ಟು ಮಾತ್ರವಲ್ಲದೆ, ದೈಹಿಕವಾಗಿಯೂ ಆರ್ಥಿಕವಾಗಿಯೂ ಸಬಲಳಾಗಬೇಕೆಂದೂ ಹೆಣ್ಣು ಇಂದು ಬಯಸುತ್ತಿದ್ದಾಳೆ. ಆದರೆ ಹೆಣ್ಣಿನ ವಯಸ್ಸು ಹೆಚ್ಚಿದಂತೆಲ್ಲ ಅವಳ ಫಲವಂತಿಕೆಯ ಅವಕಾಶಗಳು ಕಡಿಮೆಯಾಗುತ್ತ ಹೋಗುವುದು ಸಹಜ; ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಇಂದಿನ ಮಹಿಳೆ ತಡವಾಗಿ ಮಕ್ಕಳನ್ನು ಪಡೆಯಲು ಬಯಸುತ್ತಿದ್ದಾಳೆ.

ಮೂವತ್ತೆರಡು ವರ್ಷಕ್ಕೆ ಸಾಮಾನ್ಯವಾಗಿ ಫಲವಂತಿಕೆಯ ಪ್ರಮಾಣ ಕುಗ್ಗಲು ಆರಂಭವಾಗುತ್ತದೆ; ಮೂವತ್ತೇಳರ ಸುಮಾರಿಗೆ ಈ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ – ಎಂದು ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಹೇಳುತ್ತಿದೆ.

ವಯಸ್ಸು ಹೆಚ್ಚುತ್ತಿರುವಂತೆ ಮಹಿಳೆಯಲ್ಲಿ ಅಂಡಾಣುಗಳ ಸಂಖ್ಯೆಯೂ ಕ್ಷೀಣಿಸುತ್ತಹೋಗುತ್ತದೆ. ಉಳಿದರುವ ಅಂಡಾಣುಗಳು ಕೂಡ ಅಸಹಜ ಡಿಎನ್‌ಎಯನ್ನು ಹೊಂದಿರುವ ಸಾಧ್ಯತೆಯೂ ಉಂಟು. ಇವು ಆರೋಗ್ಯಪೂರ್ಣ ಮಕ್ಕಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಹೀಗೆ ವಯಸ್ಸು ಹೆಚ್ಚಿನ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯಬೇಕು ಎಂದು ಬಯಸುವವರಿಗೆ ಅನುಕೂಲವಾಗಬಲ್ಲ ಮಾರ್ಗವನ್ನು ಕಂಡುಹಿಡಿಯಲು ವೈದ್ಯರು ಮತ್ತು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಇವು ಬಹುಪಾಲು ಕೃತಕ ಗರ್ಭಧಾರಣೆಯನ್ನು (ಐವಿಎಫ್‌/ಐಸಿಎಸ್‌ಐ) ಮೂಲವಾಗಿರಿಸಿಕೊಂಡಿರುವಂಥವು.

ಕೃತಕ ಗರ್ಭಧಾರಣೆಯ ವಿಧಾನದಲ್ಲಿ ಐವಿಎಫ್‌ ತುಂಬ ಪ್ರಗತಿಯನ್ನು ಸಾಧಿಸಿದ್ದರೂ ಕೂಡ ವಯಸ್ಸಿನ ಜೊತೆಗಿರುವ ಸಮಸ್ಯೆಯನ್ನು ಇದು ಪರಿಹರಿಸಲಾರದು. ಹೀಗಾಗಿ ತಮ್ಮ ಅಂಡಾಣುಗಳನ್ನು ಶೈತ್ಯೀಕರಣಕ್ಕೊಳಪಡಿಸಿಕೊಳ್ಳುವ ಮೂಲಕ ಐವಿಎಫ್‌ ವಿಧಾನದಲ್ಲಿ ಎದುರಾಗುವ ತೊಂದರೆಗಳಿಂದ ಪರಿಹಾರ ಕಾಣಬಹುದಾಗಿದೆ.

ಅಂಡಗಳನ್ನು ಶೈತ್ಯೀಕರಣ ಪ್ರಕ್ರಿಯೆಯ ಮೂಲಕ ಸಂರಕ್ಷಿಸುವುದುಂಟು. ಇಂದು ಸಾಮಾನ್ಯವಾಗಿ ಈ ವಿಧಾನವನ್ನು ಮಕ್ಕಳು ತಡವಾಗಿ ಬೇಕು ಎಂದು ಬಯಸುವವರಲ್ಲಿ ಮತ್ತು ಕಿಮೊಥೆರೆಪಿ ಮೊದಲಾದ ಚಿಕಿತ್ಸೆಯಲ್ಲಿರುವವರಲ್ಲಿ. ಇದೀಗ ಕೃತಕ ಗರ್ಭಧಾರಣೆಯ ವಿಧಾನದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ತಂತ್ರಜ್ಞಾನ ಎಂದರೆ ‘ಪ್ರೀ ಇಂಪ್ಲಾನ್‌ಟೇಷನ್‌ ಜೆನಿಟಿಕ್‌ ಸ್ಕ್ರೀನಿಂಗ್‌;. ಇದನ್ನು ‘ಪಿಜಿಎಸ್‌’ ಎಂದೂ ಕರೆಯುತ್ತಾರೆ.

ವಯಸ್ಸು ಹೆಚ್ಚಾಗಿರುವ ಮಹಿಳೆಯರ ಅಂಡಗಳಲ್ಲಿ ಅಸಹಜ ಕ್ರೋಮೋಸೋಮ್‌ಗಳು ಇರುತ್ತವೆ. ಇವು ಅಂಥವರಲ್ಲಿ ಗರ್ಭಪಾತಕ್ಕೆ ಕಾರಣವಾಗುವಂಥವು. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪಿಜಿಎಸ್‌ ನೆರವಾಗಬಲ್ಲದು. ವೈದ್ಯರು ಅಂಡಾಣುವಿನಿಂದ ಒಂದು ಜೀವಕೋಶವನ್ನು ತೆಗೆದುಕೊಂಡು ಅದರ ಡಿಎನ್‌ಎ ವಿಶ್ಲೇಷಣೆಯನ್ನು ಮಾಡುತ್ತಾರೆ.

ಅನಂತರ ಕ್ರೋಮೋಸೋಮ್‌ಗಳನ್ನು ಸಹಜ ಸಂಖ್ಯೆಯಲ್ಲಿ ಹೊಂದಿರುವ ಅಂಡಾಣುಗಳನ್ನು ಗರ್ಭಧಾರಣೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಪಿಜಿಎಸ್‌ ವಿಧಾನದ ಅಳವಡಿಕೆಯಿಂದ 21ರಿಂದ 42 ವರ್ಷದ ಮಹಿಳೆಯರಲ್ಲಿ ಗರ್ಭಧಾರಣೆಯ ಪ್ರಮಾಣ ಹೆಚ್ಚಿರುವುದನ್ನು ಅಂಕಿ–ಅಂಶಗಳು ದೃಢಪಡಿಸಿವೆ.

ಇನ್ನು ಎರಡು–ಮೂರು ವರ್ಷಗಳಲ್ಲಿ ಪಿಜಿಎಸ್‌ ವಿಧಾನದ ಚಿಕಿತ್ಸಾವೆಚ್ಚದಲ್ಲಿ ಕಡಿಮೆಯೂ ಆಗಬಹುದು; ಮಾತ್ರವಲ್ಲ, ಕ್ಷಮತೆಯೂ ಹೆಚ್ಚಿ, ಅದರ ಮತ್ತೂ ಹಲವು ಆಯಾಮಗಳು ಅಳವಡಿಕೆಗೆ ಒದಗಬಹುದು.

ವಯಸ್ಸು ಹೆಚ್ಚಾಗಿರುವ ಮಹಿಳೆಯರಲ್ಲಿ ಕಾಣುವ ಇನ್ನೊಂದು ಸಮಸ್ಯೆ ಎಂದರೆ ಮೈಟೋಕಾಂಡ್ರಿಯಾ; ಇದು ಶಕ್ತಿಯನ್ನು ಉತ್ಪಾದಿಸುವ ಜೀವಕೋಶ. ವಯಸ್ಸು ಹೆಚ್ಚಿದಂತೆಲ್ಲ ಮೈಟೋಕಾಂಡ್ರಿಯಾ ಅದರ ಕ್ಷಮತೆಯನ್ನು ಕಳೆದುಕೊಳ್ಳುತ್ತಬರುತ್ತದೆ. ಆಗ ಜೀವಕೋಶಗಳಿಗೆ ಶಕ್ತಿ ಸರಿಯಾಗಿ ಸಿಗದೆಹೋಗುತ್ತದೆ. ಇದರಿಂದಾಗಿ ಫಲೀಕರಣದ ಅನಂತರದ ಆರೋಗ್ಯಕ್ಕೆ ತೊಂದರೆ ಎದುರಾಗಬಹುದು.

ಮೈಟೋಕಾಂಡ್ರಿಯಾ ಸಂಬಂಧಿತ ರೋಗಗಳು ಇಲ್ಲದ, ಆದರೆ ವಯೋಮಾನಕ್ಕೆ ಸಹಜವಾಗಿ ಮೈಟೋಕಾಂಡ್ರಿಯಾದ ಕ್ಷಮತೆ ಕಡಿಮೆಯಾಗಿರುವ ಮಹಿಳೆಯರಿಗೆ ಹೆಚ್ಚುವರಿ ಮೈಟೋಕಾಂಡ್ರಿಯಾಗಳನ್ನು ನೀಡಿ ಅಂಡಾಣುಗಳ ಜೀವಕೋಶಗಳಿಗೆ ಶಕ್ತಿಯನ್ನು ತುಂಬಲಾಗುತ್ತದೆ.

ಇದಕ್ಕಾಗಿ ಅದೇ ಮಹಿಳೆಯ ಜೀವಕೋಶಗಳನ್ನೇ ಬಳಸಿಕೊಳ್ಳಲಾಗುತ್ತದೆ; ದಾನಿಯ ಆವಶ್ಯಕತೆ ಇಲ್ಲ. ಈ ವಿಧಾನವನ್ನು ‘ಆಗ್‌ಮೆಂಟ್‌’ (AUGMENT) ಎಂದು ಕರೆಯುತ್ತಾರೆ. ಈ ವಿಧಾನ ಇನ್ನೂ ಪ್ರಾಯೋಗಿಕ ಹಂತದಲ್ಲಿಯೇ ಇದ್ದು ಅಧಿಕೃತವಾದ ಮನ್ನಣೆ ಸಿಕ್ಕಿಲ್ಲ.

ಈ ಎಲ್ಲ ವಿಧಾನಗಳು ಗರ್ಭಧಾರಣೆಯಲ್ಲಿ ಪ್ರಯೋಜಕ್ಕೆ ಒದಗುತ್ತಿವೆಯಾದರೂ ಇನ್ನೂ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಅವು ಮತ್ತಷ್ಟು ಹೆಚ್ಚು ಫಲಕಾರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT