ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ: ಇರಲಿ ಕಣ್ಣಿನ ಬಗೆಗೂ ಕಾಳಜಿ

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೋಳಿ ಬಣ್ಣಗಳ ಹಬ್ಬ. ಹೋಳಿ ಹುಣ್ಣಿಮೆ ಬಂತೆಂದರೆ ಎಲ್ಲೆಲ್ಲಿಯೂ ಸಂಭ್ರಮಾಚಾರಣೆ. ವಯೋಭೇದವಿಲ್ಲದೆ, ಲಿಂಗಭೇದವಿಲ್ಲದೆ, ಎಲ್ಲೆಡೆಯೂ ಬಣ್ಣದ ಓಕಳಿಯ ಸಂಭ್ರಮ. ಆದರೆ ಈ ಸಂಭ್ರಮಾಚಾರಣೆಯ ಜೊತೆಯಲ್ಲಿ ಕಣ್ಣಿನ ಆರೋಗ್ಯ ಹಾಗೂ ಆರೈಕೆಯ ಬಗ್ಗೆ ಮುಂಜಾಗ್ರತೆಯನ್ನು ವಹಿಸಬೇಕು.

ಹೋಳಿ ಆಡುವ ಸಂದರ್ಭದಲ್ಲಿ ಬಣ್ಣವನ್ನು ಹಿಗ್ಗಾಮುಗ್ಗಾ ಹಚ್ಚುವಾಗ, ಮುಖಕ್ಕೆ ಸಿಂಪಡಿಸುವಾಗ ಅದು ಕಣ್ಣಿಗೆ ಹೋಗಿ ಹಲವು ದುಷ್ಪರಿಣಾಮಗಳಾಗುವ ಸಾಧ್ಯತೆ ಇದೆ. ಹೋಳಿ ಬಣ್ಣಗಳಿಂದ ಚರ್ಮಕ್ಕೂ ಕೂಡ ಅಲರ್ಜಿ ಉಂಟಾಗಬಹುದು. ಕಣ್ಣಿನೊಂದಿಗೆ ಚರ್ಮವನ್ನು ಕೂಡ ಕಾಪಾಡಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ನಾವು ಪ್ರಕೃತಿಯ ನಿಯಮಗಳನ್ನು ಪಾಲಿಸದೆ ಪ್ರಕೃತಿಯ ವಿರುದ್ಧವಾಗಿ ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ. ಹೋಳಿಹಬ್ಬದ ಸಂಭ್ರಮಾಚರಣೆ ಇದಕ್ಕೆ ಹೊರತಾಗಿಲ್ಲ. ನೈಸರ್ಗಿಕವಾಗಿ ಪ್ರಕೃತಿದತ್ತವಾದ ಬಣ್ಣವನ್ನು ಉಪಯೋಗಿಸದೆ ಕೃತಕ ರಾಸಾಯನಿಕ ವಸ್ತುಗಳಿಂದ ಮಾಡಿದಂತಹ ಬಣ್ಣವನ್ನು ಎಲ್ಲರೂ ಹೆಚ್ಚು ಹೆಚ್ಚಾಗಿ ಹೋಳಿ ಹಬ್ಬದ ಸಂದರ್ಭದಲ್ಲಿ ಉಪಯೋಗಿಸುತ್ತಾ ಇರುವುದರಿಂದ ಕಣ್ಣಿಗೆ ಹೆಚ್ಚು ದುಷ್ಪರಿಣಾಮಗಳು ಉಂಟಾಗುತ್ತವೆ.

ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಉಪಯೋಗಿಸುವಂತಹ ಬಣ್ಣಗಳಲ್ಲಿ ಹಲವು ರಾಸಾಯನಿಕ ವಸ್ತುಗಳಿದ್ದು ಅದರಲ್ಲಿ ಸೀಸದಂತಹ ಭಾರವಾದ ಲೋಹದಿಂದ ತಯಾರಿಸಲಾಗಿರುತ್ತದೆ. (ಲೆಡ್ ಸಲ್ಪೈಡ್, ಮರ್ಕ್ಯೂರಿ ಸಲ್ಪೈಡ್, ಭಾರವಾದ ಲೋಹದ ಕ್ಷಾರ ಮತ್ತು ಆಮ್ಲಗಳಿಂದ) ಇವು ಕಣ್ಣಿನ ಒಳಹೊಕ್ಕರೆ, ಕಣ್ಣು ಕೆಂಪಾಗಬಹುದು.

ಜೊತೆಗೆ ಕಾರ್ನಿಯಾದ ಮೇಲೆ ಗಾಯಗಳು ಉಂಟಾಗಬಹುದು; ಅದರಲ್ಲಿರುವ ರಾಸಾಯನಿಕ ವಸ್ತುವಿನಿಂದ ಸುಟ್ಟಗಾಯಗಳಾಗಬಹುದು. ಇದರಿಂದ ಕಣ್ಣಿನ ಸೋಂಕಾಗಿ ತಾತ್ಕಾಲಿಕ ಕುರುಡುತನ, ಕಣ್ಣಿನ ಕೆರಳುವಿಕೆ, ಕಣ್ಣು ಕೆಂಪಾಗುವುದು, ಕಣ್ಣಿನ ಅಲರ್ಜಿ ಉಂಟಾಗುವ ಜೊತೆಗೆ ಮೊಂಡುಗಾಯಗಳಾಗಬಹುದು. ಇದು ಮುಂದೆ ದೃಷ್ಟಿನಾಶಕ್ಕೂ ಕಾರಣವಾಗಬಹುದು.

ಆದುದರಿಂದ, ಕೃತಕ ರಾಸಾಯನಿಕ ವಸ್ತುವಿನಿಂದ ಮಾಡಿದ ಬಣ್ಣಗಳ ಹೊರತಾಗಿ, ನೈಸರ್ಗಿಕವಾಗಿ ದೊರೆಯುವಂತಹ ಹೂ–ಹಣ್ಣುಗಳಿಂದ ತಯಾರಿಸಿದ ಬಣ್ಣವನ್ನು ಉಪಯೋಗಿಸಿ. ಉದಾಹರಣೆಗೆ: ಗುಲಾಬಿಹೂವಿನಿಂದ, ದಾಸವಾಳ, ಪಾಲಾಕ್ ಸೊಪ್ಪು, ಬೀಟರೂಟ್, ಗುಲ್‌ಮೊಹರ್, ಮದರಂಗಿ ಇತ್ಯಾದಿ ಇಂತಹ ನೈಸರ್ಗಿಕ ಬಣ್ಣಗಳು. ಇವು ನೀರಿನಿಂದ ತೊಳೆಯುವುದಕ್ಕೆ ಸುಲಭ ಮತ್ತು ಕಣ್ಣಿಗೆ ಅಪಾಯಗಳನ್ನುಂಟುಮಾಡುವುದಿಲ್ಲ.

ನೀರಿನ ಚೆಂಡಾಟದಿಂದ (Water ba**oon) ಕಣ್ಣಿನ ಮೇಲೆ ಮೊಂಡಗಾಯಗಳಾಗಬಹುದು. ಮಿಣಿ ಮಿಣಿ ಹೊಳೆಯುವ ಕಾಗೆ ಬಂಗಾರದ ಕಣಗಳುಳ್ಳ (ಮೈಕಾ) ಬಣ್ಣದಿಂದ ಕಣ್ಣಿನ ಪಾರದರ್ಶಕ ಪಟಲಕ್ಕೆ ಸವೆತ ಉಂಟಾಗುತ್ತದೆ (Abrasion).

ಹೋಳಿ ಆಡುವ ಸಂದರ್ಭದಲ್ಲಿ ಸಂಪರ್ಕ ಮಸೂರ (ಕಾಂಟಾಕ್ಟ್ ಲೆನ್ಸ್) ಉಪಯೋಗಿಸುವವರು, ತಾತ್ಕಾಲಿಕವಾಗಿ ಅವುಗಳನ್ನು ಉಪಯೋಗಿಸದೆ ಇರುವುದು ಒಳ್ಳೆಯದು. ಅವುಗಳನ್ನು ಉಪಯೋಗಿಸಿದಾಗ ಕಣ್ಣು ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಮಧ್ಯೆ ಬಣ್ಣಗಳು ಸೇರಿಕೊಂಡು, ಹೊರ ಬರಲು ಸಾಧ್ಯವಾಗದೆ ಕಣ್ಣಿಗೆ  ಹಾಗೂ ದೃಷ್ಟಿಗೆ ಹೆಚ್ಚಿನ ಹಾನಿಯುಂಟಾಗಬಹುದು.

ಹೋಳಿಯಲ್ಲಿ ಕಣ್ಣಿನ ಕಾಳಜಿ ಮಾಡಿ
*ಯಾವಾಗಲು ಕಣ್ಣಿಗೆ ರಕ್ಷಣೆಗೆ, ರಕ್ಷಣಾತ್ಮಕ ನೇತ್ರತೊಡುಗೆಗಳನ್ನು ಅಥವಾ ಸನ್ ಗ್ಲಾಸಸ್ ಹಾಕಿಕೊಂಡು ಹೋಳಿ ಆಚರಿಸುವುದು.
*ನಿಮ್ಮ ತಲೆಕೂದಲುಗಳನ್ನು ಒಟ್ಟಿಗೆ ಜೋಡಿಸಿ ಕಟ್ಟಿಕೊಂಡು ಅಥವಾ ತಲೆಗೆ ಟೊಪ್ಪಿಹಾಕಿಕೊಂಡು ಹೋಳಿಬಣ್ಣದ ಆಟವಾಡಬಹುದು. ಇಲ್ಲದೆ ಇದ್ದಲ್ಲಿ ತಲೆ ಮೇಲೆ ಬೀಳುವಂತಹ ಬಣ್ಣದ ನೀರು, ಕಣ್ಣಿಗೂ ಹೋಗಬಹುದು.
*ಕಣ್ಣಿನ ಸುತ್ತಲು ದಪ್ಪನೆಯ ಪದರವಾಗಿ ಕೊಬ್ಬರಿಯೆಣ್ಣೆ ಅಥವಾ ಯಾವುದರೂ ಕ್ರೀಮ್ ಹೆಚ್ಚಬೇಕು. ಇದರಿಂದ ಆಟವಾಡಿದ ನಂತರ, ಕಣ್ಣಿನ ಸುತ್ತಲೂ ಅಂಟಿಕೊಂಡಿರುವ ಬಣ್ಣವನ್ನು ತೆಗೆಯಲು ಸುಲಭವಾಗುತ್ತದೆ.
*ಬಣ್ಣದ ಆಟ ಆಡುವಾಗ, ನಿಮ್ಮ ಸಹವರ್ತಿಗಳಿಗೆ ಮುಖಕ್ಕೆ ಬಣ್ಣ ಹಚ್ಚಬಾರದು ಎಂದು ತಿಳಿಸುವುದು ಒಳಿತು. ಇಲ್ಲದಿದಲ್ಲಿ ಕಣ್ಣಿನ ಹತ್ತಿರವಂತೂ ಹಚ್ಚಬಾರದು.
*ಆಟದ ನಂತರ, ಮುಖಕ್ಕಾಗಿರುವ ಬಣ್ಣವನ್ನು ತೆಗೆಯುವಾಗ ಸ್ನಾನ ಮಾಡುವ ಸಂದರ್ಭದಲ್ಲಿ ಗಟ್ಟಿಯಾಗಿ ಕಣ್ಣು ಮುಚ್ಚಿ, ತಲೆ ಹಾಗೂ ಮುಖವನ್ನು ತೊಳೆಯಬೇಕು.
*ಆಡುವ ಸಂದರ್ಭದಲ್ಲಿ ಒದ್ದೆಯಾದ ನೆಲದ ಮೇಲೆ ಆಡಬಾರದು.
*ಮಕ್ಕಳು ಹೋಳಿಹಬ್ಬದಾಟವಾಡುವ ಸಂದರ್ಭದಲ್ಲಿ ನೀರಿನ ಬಲೂನ್‌ನಲ್ಲಿ ಆಡುವುದನ್ನು ತಪ್ಪಿಸಬೇಕು. ನೀರಿನ ಬಲೂನ್‌ನಿಂದ ಕಣ್ಣಿಗೆ ಅಪಘಾತವಾದರೆ ಕಣ್ಣಿನ ಮೊಂಡೇಟಿನಿಂದಾಗಿ ಅಕ್ಷಿಪಟಲ ಕಳೆದುಕೊಂಡು ಕುರುಡಾಗಬಹುದು.
*ಮಕ್ಕಳಿಗೆ ಪಿಚಕಾರಿಯಲ್ಲಿ ಸುರಕ್ಷಿತವಾಗಿ ಆಡುವ ವಿಧಾನವನ್ನು ಕಲಿಸಬೇಕು. ಪಿಚಕಾರಿಯಿಂದ, ಮುಖಕ್ಕೆ ಅಥವಾ ಕಣ್ಣಿಗೆ ಬಣ್ಣದ ನೀರನ್ನು ಸಿಂಪಡಿಸಬಾರದು. ಹಲವು ಕಡೆಗಳಲ್ಲಿ ದೊಡ್ಡ ಡ್ರಮ್‌ನಲ್ಲಿ ಬಣ್ಣದ ನೀರನ್ನು ತುಂಬಿಟ್ಟು, ಅದನ್ನು ಇತರರ ಮೈಗೆ ಎರಚುವ ಅಭ್ಯಾಸವಿರುತ್ತದೆ. ಇದು ತುಂಬಾ ಅಪಾಯಕಾರಿಯಾಗಿದ್ದು ಇದನ್ನು ಪ್ರೋತ್ಸಾಹಿಸಬಾರದು.
*ಬಣ್ಣವೇನಾದರೂ ಕಣ್ಣಿನೊಳಗೆ ಹೋದಲ್ಲಿ ಕಣ್ಣನ್ನು ಸಾಕಷ್ಟು ಶುದ್ಧವಾದ ನೀರಿನಲ್ಲಿ ತೊಳೆಯಬೇಕು. ಕಣ್ಣನ್ನು ಉಜ್ಜಬಾರದು.ಕಣ್ಣನ್ನು ಗಟ್ಟಿಯಾಗಿ ಕೈಯಲ್ಲಿ ಒತ್ತಿ ಇಟ್ಟುಕೊಳ್ಳಬಾರದು. ಬಟ್ಟೆಯನ್ನು ಕಟ್ಟುವುದು ಅಥವಾ ಬ್ಯಾಂಡೇಜ್ ಹಾಕಬಾರದು. ಇದರ ಬದಲು ಐಸ್‌ಕ್ರೀಂ ಕಪ್ಪನ್ನು ಕಣ್ಣಿನ ಮೇಲಿಟ್ಟು ಸೆಲ್ಲೋಟೇಪ್ ಹಾಕಿ ಅಂಟಿಸಬಹುದು.
ದೃಷ್ಟಿಯಲ್ಲಿ ಏರುಪೇರಾಗಿದ್ದರೆ, ಕಣ್ಣಿನಲ್ಲಿ ತೀವ್ರತರ ನೋವು ಇದ್ದರೆ ಅಥವಾ ಕಣ್ಣು ತುಂಬಾ ಕೆಂಪಾಗಿದ್ದರೆ ಕೂಡಲೇ ನೇತ್ರತಜ್ಞರ ಹತ್ತಿರ ಚಿಕಿತ್ಸೆ ಮಾಡಿಸಬೇಕು. ಯಾವುದೇ ರೀತಿಯ ಕಣ್ಣಿನ ಅಪಘಾತಗಳನ್ನು ಕಡೆಗಣಿಸಬಾರದು.
-ಡಾ. ಕುಮಾರಸ್ವಾಮಿ (ಲೇಖಕರು ನೇತ್ರತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT