ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತದಲ್ಲಿ ಆರೋಗ್ಯ ಪಾಲನೆ

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇದೀಗ ತಾನೇ ಶಿವರಾತ್ರಿಯ ಜಾಗರಣೆಯ ಹಬ್ಬ ಮುಗಿದಿದೆ. ಮುಖ್ಯವಾಗಿ ಜಾಗರಣೆ ಮತ್ತು ಉಪವಾಸವಷ್ಟೆ ಅಲ್ಲ. ಶಿವಕಥೆಗಳನ್ನು ಕೇಳುವ ವ್ರತೋಪವಾಸ ಆಚರಿಸುವ ಸಮಯ ಕಳೆಯಿತಷ್ಟೆ. ಅದರ ಮಾರನೆಯ ದಿನ ಅಮಾವಾಸ್ಯೆ. ಇಂತಹ ಕಾಲಘಟ್ಟಗಳನ್ನು ನಮ್ಮ ಪೂರ್ವಿಕರು ಬಹಳ ಸೂಕ್ಷ್ಮವಾಗಿ ಗಮನಿಸಿದರು. ಆಯಾಯ ಸಂದರ್ಭಗಳ ಆಚರಣೆಯನ್ನು ನಮಗುಳಿಸಿದರು. ಚಳಿಗಾಲದ ದಿನಗಳು ಉರುಳಿದವು.

‘ಶಿವ ಶಿವ’ ಎಂದು ಚಳಿ ಬಿಟ್ಟು ಹೋಗುವ ವಿದ್ಯಮಾನ ಜನರ ಬಾಯಿಯಲ್ಲಿಯೇ ಕೇಳಿರುತ್ತೀರಿ. ವಸಂತಾಗಮನ ಎಂದರೆ ಕಫಸಂಚಯದ ಋತು. ದೇಹದ ಬೇರೆ ಬೇರೆ ಅಂಗಾಂಗಗಳಲ್ಲಿ ಕಫದ ಸಂಗ್ರಹಣೆ. ಅದರಿಂದುಂಟಾಗುವ ಅನೇಕ ಕಾಯಿಲೆಗಳು. ನಿದ್ರೆಯ ಅತಿರೇಕತನ ಕಫ ಹೆಚ್ಚಲು ಮೂಲ ಕಾರಣ. ಶಿವರಾತ್ರಿಯ ಜಾಗರಣದಿಂದ ಅತಿ ನಿದ್ದೆಯ ಆಚರಣೆಗೆ ಕಡಿವಾಣ.

ಅನಂತರದ ದಿನಗಳಲ್ಲಿ ಅದೇ ರಿವಾಜನ್ನೇ ಮುಂದುವರಿಸುವ ಸೂಕ್ಷ್ಮ ಪ್ರಜ್ಞೆ ಬೆಳೆಸಲು ಸೂಚನೆ ನೀಡಿದವರು ನಮ್ಮ ಪೂರ್ವಿಕರು. ಶಿವರಾತ್ರಿಯ ಜಾಗರಣೆಯ ಅನಂತರದ ಮತ್ತೊಂದು ಮುಖ್ಯಘಟ್ಟ ಉಪವಾಸ. ಅಂದರೆ ಚಳಿದಿನಗಳಲ್ಲಿ ತಿನ್ನುವಷ್ಟು ಹೊಟ್ಟೆಬಾಕತನ, ಚಪಲ ಅನಂತರದ ದಿನಗಳಲ್ಲಿ ಅನಗತ್ಯ. ಕಫವು ಹೆಚ್ಚುತ್ತದೆ. ಹಾಗಾಗಿ ಹಸಿವೆ ಕುಗ್ಗುತ್ತದೆ.

ಸ್ವಲ್ಪ ಕಡಿಮೆ ತಿನ್ನುವ ರೂಢಿ ಶುರುಮಾಡಿರಿ. ಅಂತಹ ಸೂಚನೆಯನ್ನೇ ಶಿವರಾತ್ರಿಯ ದಿನ ನಮಗೆ ನೀಡಿದವರು ನಮ್ಮ ಪುರಾತನರು. ಜೀರ್ಣಶಕ್ತಿ ಕುಗ್ಗುವ ದೆಸೆಯಿಂದ ಕಡಿಮೆ ಆಹಾರ ಸಾಕೆನಿಸುತ್ತದೆ. ದ್ರವಾಹಾರಕ್ಕೆ ಹೆಚ್ಚಿನ ಒತ್ತು ದೊರಕುತ್ತದೆ. ಅದನ್ನೂ ಮುಂದಿನ ಎರಡು ತಿಂಗಳ ಕಾಲ ಅಭ್ಯಾಸ ಮಾಡಿಕೊಳ್ಳೋಣವೆ?

ಕಫದಿಂದ ತಮೋಗುಣ ಹೆಚ್ಚುತ್ತದೆ. ಮನಸ್ಸು ಅಂತಹ ತಮೋಗುಣದ ಆವರಣಕ್ಕೆ ಒಳಗಾಗಿ ಕ್ಲೇಶ, ಖಿನ್ನತೆಗಳು ಹೆಚ್ಚುತ್ತವೆ. ಅದನ್ನು ಗೆಲ್ಲಬೇಕಾದರೆ ಸತ್ವಗುಣ ಹೆಚ್ಚಬೇಕು. ಧ್ಯಾನ, ಸತ್ಸಂಗ, ಶಿವಕಥೆಯ ಶ್ರವಣ ಮತ್ತು ಜನರೊಡನೆ ಬೆರೆತು ಸದಾಚಾರ ಸಂಗತಿಗಳನ್ನು ಚರ್ಚಿಸುವ ಸತ್ವಗುಣ ಹೆಚ್ಚಿಸುವ ಸಂದರ್ಭ ವಸಂತದ ಮತ್ತೊಂದು ಪ್ರಮುಖ ಕಾಲಘಟ್ಟಕ್ಕೆ ಸಲ್ಲುತ್ತದೆ.  ಆಯಾ ಊರಿನ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ನಡೆಯುವ ಸಂದರ್ಭವನ್ನು ಗುರುತಿಸಿರಿ.

ಬಹುತೇಕ ಎಲ್ಲಾ ಶ್ರದ್ಧಾಕೇಂದ್ರಗಳ ಮತ್ತು ದೇವಾಲಯಗಳ ಜಾತ್ರೆ ನಡೆಯುವುದು ವಸಂತಋತುವಿನಲ್ಲಿಯೇ. ವಸಂತಹಬ್ಬ ಎಂಬ ಹೆಸರಿನ ಆಚರಣೆಯಲ್ಲಿ ನಾಡಿನ ಮಂದಿ ಭೇದಭಾವ ಮರೆತು ಕಲೆತು ಅಹೋರಾತ್ರಿ ಸತ್ಸಂಗ ಮತ್ತು ಸದಾಚರಣೆಯ ಗೋಷ್ಠೀಕಲಾಪಗಳನ್ನು ಅನಾದಿ ಕಾಲದಿಂದ ಆಚರಿಸಿದರು. ಇದು ನಮ್ಮ ಸತ್ವಗುಣವರ್ಧಕ ಆಚರಣೆ. ಇದೀಗ ಕಾಲಿಡುವ ಯುಗಾದಿಯಂತಹ ಹಬ್ಬದಲ್ಲಿ ಸಂಚಯವಾಗುವ ಕಫದೋಷ ನಿರೋಧದ ಅನೇಕ ಆಚರಣೆಗಳು ರೂಢಮೂಲಗೊಂಡಿವೆ.

ಕಷಾಯ ಅಂದರೆ ಒಗರು ರಸ. ತಿಕ್ತ ಎಂದರೆ ಕಹಿ. ಕಟು ಎಂದರೆ ಖಾರ. ಇವು ಮೂರು ರಸಗಳಿಂದ ಕಫದೋಷ ಸಂಚಯಕ್ಕೆ ಕಡಿವಾಣ. ಬೇವಿಗಿಂತ ಕಹಿ ವಸ್ತು ಬೇರಾವುದಿದೆ? ಅಂತಹ ಬೇವಿನ ಬಳಕೆ ಯುಗಾದಿಯ ಸಂದರ್ಭದಲ್ಲಿ ಪ್ರಸಿದ್ಧ! ಇದೀಗ ಪರೀಕ್ಷೆಗಳ ಶ್ರಾಯ. ಒಂದೆಲಗ ಎಂಬ ಎಲೆಗಳು ನೀರಾಸರೆಯವು. ಒಗರು ಕಹಿ ರಸದ ಎಲೆಗಳು ಅವು.

ಗದ್ದೆಬದುವಿನ ಅಂತಹ ಸೊಪ್ಪು ಆಯ್ದು ತಂದು ಹಸಿ ಗೊಜ್ಜು(ತಂಬುಳಿ) ಸೇವನೆಗಿದೆ ಅವಕಾಶ. ಅತ್ತ ಪರೀಕ್ಷೆಯ ಆತಂಕ ಕಳೆಯಲು ಅದು ಸಹಕಾರಿ. ನೆನಪು ಹಾರುವ ಒತ್ತಡ ಇಳಿಕೆ. ವಿದ್ಯಾರ್ಥಿಯು ಸುಲಲಿತವಾಗಿ ಉತ್ತರ ಪತ್ರಿಕೆಯಲ್ಲಿ ಓದಿದ್ದನ್ನು ಬರೆಯುವ ಸದವಕಾಶ.

ಬ್ರಾಹ್ಮಿ ಎಂಬ ಇನ್ನೊಂದು ಸಸ್ಯವೂ ಇದೇ ತೆರನಾದದುದು. ಇವೆರಡೂ ಕಹಿ ಮತ್ತು ಒಗರು ರಸದವು. ಇವನ್ನು ನಿತ್ಯ ಬಳಸಿರಿ. ಕಫ ಮತ್ತು ತಮೋ ಗುಣಗಳನ್ನು ಗೆಲ್ಲಿರಿ.

ಶಿಶಿರ ಎಂದರೆ ಶೀತಋತುಗಳಲ್ಲಿ ದೇಹದ ತುಂಬ ಸಂಚಯಗೊಂಡ ಕಫವು ಸೂರ್ಯನ ಪ್ರಖರತೆಯಿಂದ ಕರಗತೊಡಗುವ ಋತುವೇ ವಸಂತ. ಹಾಗಾಗಿ ಜಾಠರಾಗ್ನಿ ಎಂದರೆ ಹೊಟ್ಟೆ ಹಸಿವೆ ಕೆಡುತ್ತದೆ. ಆಗ ಆಮ ಸಂಚಯ. ಆಮಯ(ರೋಗ)ಗಳ ಸರಮಾಲೆ ಉದ್ಭವ. ಆದ್ದರಿಂದ ಲಘು ಆಹಾರಗಳಷ್ಟೆ ಇದೀಗ ಸಾಕಾಗುತ್ತದೆ. ಮೆಣಸು ಕಾಳು ಪುಡಿ(ಪೆಪ್ಪರ್) ಹಾಕಿದ ಬೆಲ್ಲದ ಪಾನಕ ಕೊಡುವ ಸಂಪ್ರದಾಯ ವಸಂತೋತ್ಸವದಲ್ಲಿತ್ತು. ಅದಕ್ಕೆ ಬೇರೇನೂ ಸೇರದು. ಬಿಸಿ ಬಿಸಿ ನೀರು, ಬೆಲ್ಲ ಮತ್ತು ಕಾಳುಮೆಣಸು ಪುಡಿಗಳಷ್ಟೆ ಇರುತ್ತವೆ.

ಮನೆಗೆ ಬಂದ ಅತಿಥಿಗಳಿಗೆ, ಮನೆಯವರಿಗೆ ಅಂತಹ ಕಷಾಯ ಆರೋಗ್ಯದಾಯಕ. ಕಡುಬಿಸಿಲಿನ ಬೇಗೆ ಮತ್ತು ಆಯಾಸ ಪರಿಹಾರಿ. ಕಫವಿಲಯನಕಾರಿ. ಬಿಸಿ ನೀರಿಗೆ ಶುಂಠಿ ಹಾಕಿ ಕುಡಿದರೆ ಕೂಡ ಅದೇ ತರಹದ ಗುಣಗಳಿವೆ. ಶುಂಠಿಯ ಪಾನಕ ಸೇವನೆಗೆ ಯೋಗ್ಯ.

ಹಿತಮಿತವಾದ ಲಘು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿರಿ. ನಡಿಗೆ, ಸೂರ್ಯ ನಮಸ್ಕಾರಗಳು ಶಕ್ತಿ ಇದ್ದವರಿಗೆ ಸಲೀಸು. ಎಣ್ಣೆ ಸ್ನಾನಕ್ಕಿಂತ ಹದ ಉಗುರು ಬಿಸಿನೀರಿನ ಸ್ನಾನ ಸಾಕು. ಮೈಗೆ ಕಡಲೆಯ ಅಥವಾ ಸೀಗೆಯ ಹಿಟ್ಟು ಉಜ್ಜಿ ಮೈತೊಳೆಯಿರಿ. ಕಫಸಂಚಯ ಮತ್ತು ಅನಗತ್ಯ ಕೊಬ್ಬು ಕರಗಲು ಅದು ಉಪಾಯ. ಸ್ನಾನದ ಅನಂತರ ಕರ್ಪೂರ, ಶ್ರೀಗಂಧ, ಅಗುರು, ಕುಂಕುಮ ಕೇಸರದ ಲೇಪನದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಅದರಿಂದ ಮನೋಲ್ಲಾಸ. ಚರ್ಮಕಾಯಿಲೆಗೆ ತಡೆ.

ಆಯುರ್ವೇದ ಶಾಸ್ತ್ರದಲ್ಲಿ ವಸಂತವಮನ ಎಂಬ ಒಂದು ಸಂಗತಿ ಇದೆ. ವಸಂತಕಾಲದ ಕಫಸಂಚಯ ಹೋಗಲಾಡಿಸಲು ಕೈಗೊಳ್ಳುವ ಉಪಾಯ. ಪಂಚಕರ್ಮದ ಮೊದಲ ಚಿಕಿತ್ಸೆಯಾದ ವಮನ, ಅಂದರೆ ದೋಷ ಹೊರಹಾಕುವ ವಾಂತಿ ಮಾಡಿಸುವ ಚಿಕಿತ್ಸೆ.

ಅದು ರೋಗಿಗಳಿಗೆ ಮಾತ್ರ ಅಲ್ಲ. ರೋಗ ಬರದಿರಲು ಮಾಡುವ ಸ್ವಸ್ಥರಿಗೆ ಕೈಗೊಳ್ಳುವ ಚಿಕಿತ್ಸೆ. ಮೂಗಿಗೆ ಹಾಕುವ ತೀಕ್ಷ್ಣ ತೈಲಾದಿಗಳ ನಸ್ಯಕರ್ಮ ಚಿಕಿತ್ಸೆ ಕೂಡ ವಸಂತಹಬ್ಬದಲ್ಲಿ ಸಮಯೋಚಿತ. ತಲೆಯ ದೋಷಸಂಗ್ರಹ ಹೊರಹಾಕುವ ಉಪಾಯ.

ಹಾಗಲ, ಬೂದುಗುಂಬಳ, ಹೀರೆ, ಸೋರೆ, ಬದನೆ, ಬಾಳೆಯಕಾಯಿಗಳಂತಹ ಕಹಿ, ಒಗರು ರಸದ ತರಕಾರಿಗಳು ವಸಂತಋತುವಿನಲ್ಲಿ ಅಡುಗೆಗೆ ಸೂಕ್ತ. ಮಾವಿನ ಕಾಯಿ ಮತ್ತು ಹಣ್ಣುಗಳೊದಗುವ ಕಾಲವಿದು. ಇಷ್ಟಾನುಸಾರ ಮೆಣಸುಕಾಳು, ಶುಂಠಿಗಳ ಸಂಗಡ ಬಳಸಬಹುದು. ಅದರಿಂದ ಹೃದಯಕ್ಕೆ ಬಲ ಹೆಚ್ಚುತ್ತದೆ. ದ್ರಾಕ್ಷಿಯ ಹುಳಿ ಬರಿಸಿದ ಆಸವ ಸೇವನೆ ಸೂಕ್ತ. ಜೇನಿಗೆ ಜಲವನ್ನು ಕೂಡಿಸಿ ಬೇಸಿಗೆಯ ತಾಪ ಕಳೆಯಲು ಮತ್ತು ದೇಹ ತಂಪಾಗಿಸಲು ಸೇವಿಸಬಹುದು. ಕೇವಲ ಜೇನು ಮಾತ್ರ ಬಳಸುವುದು ಸರಿಯಲ್ಲ.

ಸೂರ್ಯ ತಲುಪದ ಘನ ಕಾನನದಲ್ಲಿ ವನವಿಹಾರ, ತಂಪು ಜಾಗದಲ್ಲಿ (ಸಮ್ಮರ್ ಕಾಟೇಜ್) ವಾಸದ ಸಂದೇಶಗಳು ಆಯುರ್ವೇದದ ಸಂಹಿತೆಗಳಲ್ಲಿವೆ. ನಡು ಮಧ್ಯಾಹ್ನದ ಅಂತಹ ಕಾಲಕ್ಷೇಪ ಸೂಕ್ತ. ಹಗಲು ನಿದ್ದೆ ಸಲ್ಲದು. ಎಳೆಯ ಮಕ್ಕಳು ಮತ್ತು ವೃದ್ಧರಿಗೆ ಮಾತ್ರ ಅದು ಓಕೆ. ಉಳಿದವರಿಗೆ ಬೇಡ. ಹೊಟ್ಟೆ ಬಿರಿಯುವಷ್ಟು ಉಣ್ಣದಿರಿ. ಶೀತದ ಮತ್ತು ಹುಳಿ ರಸದ ಆಹಾರ ಖಂಡಿತ ಬೇಡ. ಆಹಾರದಲ್ಲಿ ಕೊಬ್ಬಿನಂಶಕ್ಕೆ ಸಹ ಅಂಕುಶವಿರಲಿ. ಹೀಗೆ ಈ ಬಾರಿಯ ಬೇಸಿಗೆಯ ಬೇಗೆ ನೀಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT