ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೊಂದು ಸಾರುಗಳು!

Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೊಟ್ಟೆ ಸಾರು
ಬೇಕಾಗುವ ಸಾಮಗ್ರಿಗಳು

ಮೊಟ್ಟೆ – 6, ಈರುಳ್ಳಿ – 1 (ಹೆಚ್ಚಿದು), ಟೊಮೆಟೊ – 1 (ಮಧ್ಯಮ ಗಾತ್ರದ್ದು), ತೆಂಗಿನಹಾಲು – 1 ಲೋಟ, ಕೆಂಪು ಮೆಣಸಿನ ಪುಡಿ – 4ರಿಂದ 6, ಧನಿಯಾ ಪುಡಿ – 4 ಟೇಬಲ್ ಚಮಚ, ಜೀರಿಗೆ – 1/4 ಟೇಬಲ್ ಚಮಚ, ಅರಿಶಿಣಪುಡಿ – 1/2 ಟೇಬಲ್ ಚಮಚ, ಉಪ್ಪು –ರುಚಿಗೆ, ಎಣ್ಣೆ – 1 ಟೇಬಲ್ ಚಮಚ, ಒಗ್ಗರಣೆಗೆ – ಸಾಸಿವೆ, ಜೀರಿಗೆ 1/2 ಚಮಚ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಜೀರಿಗೆ ಮತ್ತು ಸಾಸಿವೆ ಸೇರಿಸಿ, ಅವು ಸಿಡಿದ ನಂತರ ಅರಿಶಿಣ ಮತ್ತು ಹೆಚ್ಚಿದ ಈರುಳ್ಳಿ ಸೇರಿಸಿ ಬಾಡಿಸಿ. ನಂತರ ಅದಕ್ಕೆ ಉಪ್ಪು ಸೇರಿಸಿ ಇನ್ನಷ್ಟು ಬಾಡಿಸಿ, ಟೊಮೆಟೊ ಸೇರಿಸಿ ಬಾಡಿಸಿ. ನಂತರ ಖಾರದ ಪುಡಿ, ಧನಿಯಾ ಮತ್ತು ಜೀರಿಗೆ ಪುಡಿ, ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತೆಂಗಿನಹಾಲು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಮೊಟ್ಟೆಯನ್ನು ಒಡೆದು ನಿಧಾನಕ್ಕೆ ಗ್ರೇವಿಗೆ ಸೇರಿಸಿ. ನಂತರ ಪಾತ್ರೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ 6ರಿಂದ 8 ನಿಮಿಷ ಕುದಿಸಿ. ಪಾತ್ರೆಗೆ ಸೌಟು ಹಾಕು ಕಲಿಸಬೇಡಿ. ಮೊಟ್ಟೆ ಬೆಂದ ನಂತರ ಉರಿಯನ್ನು ಆರಿಸಿ.

*


ಟೊಮೆಟೊ ಸಾರು
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ – 4 ಟೇಬಲ್ ಚಮಚ, ಟೊಮೆಟೊ – 4 ಸಣ್ಣಗೆ ಕತ್ತರಿಸಿದ್ದು.  ಹುಣಸೆಹಣ್ಣು – ಸ್ವಲ್ಪ, ಬೆಲ್ಲ – 1ರಿಂದ 2 ಚಮಚ, ಉಪ್ಪು – 2 ಟೇಬಲ್‌ ಚಮಚ, ಹಸಿಮೆಣಸು – 1, ಕೊತ್ತುಂಬರಿ ಸೊಪ್ಪು – 2 ಚಮಚ (ಸಣ್ಣಗೆ ಹೆಚ್ಚಿದ್ದು), ಉಡುಪಿ ರಸಂ ಅಥವಾ ಸಾಂಬಾರ್‌ಪುಡಿ – 1/2 ಚಮಚ, ಅರಶಿಣ ಪುಡಿ– 1 ದೊಡ್ಡ ಚಿಟಿಕೆ

ಒಗ್ಗರಣೆಗೆ ಬೇಕಾಗುವ ಸಾಮಗ್ರಿ:  ಸಾಸಿವೆ– 1/2 ಚಮಚ, ಜೀರಿಗೆ – 1/2 ಚಮಚ, ಇಂಗು – 1 ಚಿಟಿಕೆ, ಕರಿಬೇವು – 5ರಿಂದ 6, ತುಪ್ಪ – 2 ಟೀ ಚಮಚ

ತಯಾರಿಸುವ ವಿಧಾನ:  ಕುಕ್ಕರ್‌ನಲ್ಲಿ ತೊಗರಿಬೇಳೆ ಹಾಕಿ ಚೆನ್ನಾಗಿ ತೊಳೆಯಿರಿ. ನಂತರ ಅದಕ್ಕೆ ಅರಿಶಿಣ ಪುಡಿ, ಹನಿ ಎಣ್ಣೆ  ಹಾಗೂ ಅರ್ಧ ಕಪ್‌ ನೀರು ಸೇರಿಸಿ ಎರಡು ವಿಶಲ್‌ ಕೂಗಿಸಿ. ನಂತರ ಟೊಮೆಟೊ, ಉಪ್ಪು ಹಾಗೂ ಸೀಳಿದ ಹಸಿರುಮೆಣಸು ಹಾಕಿ 2 ಕಪ್‌ ನೀರು ಸೇರಿಸಿ ಮತ್ತೆ ಎರಡು ವಿಶಲ್‌ ಕೂಗಿಸಿ. ನಂತರ ಅದೇ ಕುಕ್ಕರ್‌ಗೆ 4 ಕಪ್‌ ನೀರು ಮತ್ತು ಒಂದು ಟೀ ಚಮಚ ಉಪ್ಪನ್ನು ಸೇರಿಸಿ ಮತ್ತೆ ಉರಿ ಹಚ್ಚಿ. ನಂತರ 1 ಚಮಚ ಬೆಲ್ಲ ಹಾಗೂ ಹುಣಸೆ ರಸವನ್ನು ಸೇರಿಸಿ. ನಂತರ ಹೆಚ್ಚಿದ ಕೊತ್ತುಂಬರಿ ಸೊಪ್ಪು, ಒಂದೂವರೆ ಚಮಚ ಉಡುಪಿ ರಸಂ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಒಗ್ಗರಣೆ ತಯಾರಿಸಿ ಸಾಂಬಾರ್‌ಗೆ ಸೇರಿಸಿ.

*


ಮಂಗಳೂರು ಸೌತೆ ಸಾಂಬಾರ್‌
ಬೇಕಾಗುವ ಸಾಮಗ್ರಿಗಳು:
ಸೌತೆಕಾಯಿ – 1 ಮಧ್ಯಮ ಗಾತ್ರದ್ದು, ತೊಗರಿಬೇಳೆ – 2 ಟೇಬಲ್ ಚಮಚ, ಅರಶಿಣ ಪುಡಿ – 1/4 ಚಮಚ, ಕಲ್ಲುಪ್ಪು – 2 ಟೇಬಲ್ ಚಮಚ, ಬೆಲ್ಲ – 1 ಟೇಬಲ್ ಚಮಚ

ಮಸಾಲೆಗೆ ಸಾಮಗ್ರಿಗಳು:  ತೆಂಗಿನತುರಿ – 1ರಿಂದ 2 ಕಪ್‌, ಕೆಂಪು ಮೆಣಸು – 2 ರಿಂದ 3, ಉದ್ದಿನಬೇಳೆ – 1ಟೇಬಲ್ ಚಮಚ, ಧನಿಯಾ – 2 ಟೇಬಲ್ ಚಮಚ

ತಯಾರಿಸುವ ವಿಧಾನ: ಸೌತೆಕಾಯಿ ನೀಟಾಗಿ ಕತ್ತರಿಸಿ ಮಧ್ಯದ ಭಾಗವನ್ನು ತೆಗೆಯಿರಿ. ನಂತರ ಹೋಳುಗಳಾಗಿಸಿ. ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಹಾಕಿ ತೊಳೆಯಿರಿ. ತೊಳೆದ ನಂತರ ನೀರನ್ನು ಬಸಿದು ಪಾತ್ರಗೆ ಅರಿಶಿಣ ಪುಡಿ, ಮೂರು ಹನಿ ಎಣ್ಣೆ, ಒಂದು ಕಪ್‌ ನೀರು ಸೇರಿಸಿ 2 ವಿಶಲ್‌ ಕೂಗಿಸಿ. ನಂತರ ಅದೇ ಕುಕ್ಕರ್‌ನಲ್ಲಿ ಕತ್ತರಿಸಿದ ಸೌತೆಕಾಯಿ,  ಒಂದು ಟೇಬಲ್ ಚಮಚ ಉಪ್ಪು, ಎರಡು  ಲೋಟ ನೀರು ಸೇರಿಸಿ ಎರಡು ವಿಶಲ್ ಕೂಗಿಸಿ. ಆಗ ಸೌತೆಕಾಯಿ, ತೊಗರಿಬೇಳೆ ಎರಡು ಚೆನ್ನಾಗಿ ಬೆಂದಿರುತ್ತದೆ.

ಪ್ಯಾನ್‌ ತೆಗೆದುಕೊಂಡು ಮೆಣಸು, ಉದ್ದಿನಬೇಳೆ, ಧನಿಯಾ, ಜೀರಿಗೆ, ಮೆಂತ್ಯ ಹಾಗೂ ಇಂಗು ಸೇರಿಸಿ ಸ್ಪಲ್ಪ ಎಣ್ಣೆಯನ್ನು ಸೇರಿಸಿ ಹುರಿಯಿರಿ. ಮಿಕ್ಸಿಯಲ್ಲಿ ಹುರಿದ ಸಾಮಗ್ರಿ ಹಾಗೂ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣವನ್ನು ಸೌತೆಕಾಯಿ, ಬೇಳೆ ಬೇಯಿಸಿದ ಕುಕ್ಕರ್‌ಗೆ ಸೇರಿಸಿ ಒಂದು ಚಮಚ ಉಪ್ಪು ಮತ್ತು ಬೆಲ್ಲ ಸೇರಿಸಿ. ನಂತರ ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ಕುದಿಸಿ. ನಂತರ ಒಗ್ಗರಣೆ ಸೇರಿಸಿ.

*


ಮಂಗಳೂರು ಶೈಲಿಯ ಚಿಕನ್‌ ಸುಕ್ಕ
ಬೇಕಾಗುವ ಸಾಮಗ್ರಿಗಳು: 
ಕೋಳಿಮಾಂಸ –1ಕೆ.ಜಿ., ಈರುಳ್ಳಿ– 1, ಏಲಕ್ಕಿ – 2, ಉಪ್ಪು –1 ಟೇಬಲ್ ಚಮಚ, ಎಣ್ಣೆ –1 ಟೇಬಲ್ ಚಮಚ, ತೆಂಗಿನಕಾಯಿ – 1 ದೊಡ್ಡದು.

ಮಸಾಲೆಗೆ
ಧನಿಯಾ – 2 ಚಮಚ, ಜೀರಿಗೆ –1/4 ಚಮಚ, ಸಾಸಿವೆ – 1/4 ಚಮಚ, ಕಾಳುಮೆಣಸು – 1/4 ಚಮಚ, ಲವಂಗ – 4, ದಾಲ್ಚಿನಿ– 1, ಬ್ಯಾಡಗಿ ಮೆಣಸು – 10, ಕಾಶ್ಮೀರಿ ಮೆಣಸು – 6, ಅರಿಶಿಣ ಪುಡಿ –1/4 ಚಮಚ, ಈರುಳ್ಳಿ– 1, ಬೆಳ್ಳುಳ್ಳಿ – 4ರಿಂದ 5 ಎಸಳು, ಶುಂಠಿ–  ಸ್ವಲ್ಪ, ಹುಣಸೆಹಣ್ಣು– ಸ್ವಲ್ಪ, ಉಪ್ಪು– ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲು ಎರಡು ಬಗೆಯ ಮೆಣಸನ್ನು ಹುರಿದುಕೊಳ್ಳಿ. ನಂತರ ಅದೇ ಬಾಣಲಿಯಲ್ಲಿ ಧನಿಯಾ, ಜೀರಿಗೆ, ಸಾಸಿವೆ, ಕಾಳುಮೆಣಸು, ಏಲಕ್ಕಿ, ದಾಲ್ಚಿನಿ, ಈರುಳ್ಳಿ, ಶುಂಠಿ ಹಾಗೂ ಬೆಳ್ಳುಳ್ಳಿಗಳನ್ನು ಹಾಕಿ ಹುರಿದುಕೊಳ್ಳಿ. ಈ ಎಲ್ಲಾ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಜೊತೆಗೆ ಅರಿಶಿಣ ಪುಡಿ ಹಾಗೂ ಉಪ್ಪು, ಹುಣಸೆಹಣ್ಣು  ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಆಗುವ ರೀತಿ ಹುರಿದುಕೊಳ್ಳಿ.

ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿದುಕೊಳ್ಳಿ. ನಂತರ ಅದಕ್ಕೆ ಕೋಳಿಮಾಂಸ, ಏಲಕ್ಕಿ, ಉಪ್ಪನ್ನು ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ. ಅದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ಮತ್ತೆ ಸ್ವಲ್ಪ ಬೇಯಿಸಿ. ನಂತರ ಆ ಮಿಶ್ರಣಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮತ್ತೆ ಕುದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT