ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 11–3–1967

50 ವರ್ಷಗಳ ಹಿಂದೆ
Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಪ್ರಧಾನ ಮಂತ್ರಿಯ ಸರ್ವಾನುಮತದ ಆಯ್ಕೆಗೆ ಸುಗಮ ದಾರಿ: ಮುರಾರಜಿ ಅವರಿಗೆ ಉಪಪ್ರಧಾನಿ ಸ್ಥಾನ ನೀಡಲು ಇಂದಿರಾ ಸಮ್ಮತಿ (ವರದಿ: ಟಿ.ಎಸ್. ರಾಮಚಂದ್ರರಾವ್)
ನವದೆಹಲಿ, ಮಾರ್ಚಿ 10–
ರಾಷ್ಟ್ರದ ಅರ್ಧಭಾಗದಲ್ಲಿ ಅಧಿಕಾರವನ್ನೂ ಕೇಂದ್ರದಲ್ಲಿ ‘ರೋಣಗಲ್ಲು’ ಬಹುಮತವನ್ನೂ ಕಳೆದುಕೊಂಡು ಕೃಶವಾಗಿರುವ ಕಾಂಗ್ರೆಸ್ ಪಕ್ಷ ಶತಾಯಗತಾಯ ಸರ್ವಾನುಮತದ ನೂತನ ಪ್ರಧಾನಿಯನ್ನಾರಿಸುವ ಯತ್ನದಲ್ಲಿ ಹೊಸ ಘಟ್ಟವನ್ನು ಮುಟ್ಟಿದೆ.
ಈ ದಿನ ಮುಂಜಾನೆ ಒಮ್ಮೆ ಹಾಗೂ ಮುರಾರಜಿ ತಮ್ಮ ಸ್ಪರ್ಧೆಯನ್ನು ಘೋಷಿಸಿದ ಬಳಿಕ, ನಡೆದ ಕಾರ್ಯಸಮಿತಿ ಸಭೆಯ ನಂತರ ಸಂಜೆ ಮತ್ತೊಮ್ಮೆ ಕಾಮರಾಜರ ನೇತೃತ್ವದಲ್ಲಿ ‘ದುಂಡು ಮೇಜಿನ ಚರ್ಚೆ’ಗಳು ನಡೆದು ಇಬ್ಬರು ಸ್ಪರ್ಧಿಗಳ ಬಿಗಿಮುಷ್ಟಿ ಸ್ವಲ್ಪ ಸಡಿಲವಾದಂತೆ ಕಾಣುತ್ತಿದೆ.

ಶ್ರೀ ಮುರಾರಜಿ ಅವರಿಗೆ  ಉಪ ಪ್ರಧಾನಮಂತ್ರಿಯ ಸ್ಥಾನ ಕಲ್ಪಿಸಿಕೊಡಲು ಇಂದಿರಾ ಒಪ್ಪಿರುವುದಾಗಿಯೂ ಅದಕ್ಕೆ ಮುರಾರಜಿಯವರ ತತ್‌ಕ್ಷಣದ ಪ್ರತಿಕ್ರಿಯೆ ಬಿಗುವಾಗಿದ್ದರೂ, ಅಂತಿಮವಾಗಿ ಅವರು ಒಪ್ಪಬಹುದೆಂದೂ ನಿರೀಕ್ಷಿಸಲಾಗಿದೆ.

**

ಶಾನ್ಯ ಮುಂಬೈ ಕ್ಷೇತ್ರದಿಂದ ಪುನಃ ಮೆನನ್ ಸ್ಪರ್ಧೆ
ನವದೆಹಲಿ, ಮಾ. 10–
ಈಶಾನ್ಯ ಮುಂಬೈ ಕ್ಷೇತ್ರದಿಂದ ಲೋಕಸಭೆಗೆ ಶ್ರೀ ವಿ.ಕೆ. ಕೃಷ್ಣ ಮೆನನ್ ಪುನಃ ಸ್ಪರ್ಧಿಸುವರೆಂದು ತಿಳಿದು ಬಂದಿದೆ. ಈ ಕ್ಷೇತ್ರದಿಂದ ಆಯ್ಕೆಯಾಗಿರುವ  ಎಸ್.ಜಿ. ಬರ್ವೆ ಅವರು ನಿಧನರಾದುದರಿಂದ ಉಪಚುನಾವಣೆ ನಡೆಯಲಿದೆ. ಚುನಾವಣೆಯ ತಾರೀಕನ್ನು ಚುನಾವಣಾ ಆಯೋಗ ಸದ್ಯದಲ್ಲೇ ಪ್ರಕಟಿಸಲಿದೆ.

**

ಗೋವಿಂದ ಮೆನನ್ ಲೋಕಸಭಾಧ್ಯಕ್ಷ?
ನವದೆಹಲಿ, ಮಾ. 10–
ಹೊಸ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಕೇಂದ್ರ ಸರ್ಕಾರದ ಆಹಾರ ಶಾಖೆ ಸ್ಟೇಟ್ ಸಚಿವರಾದ ಶ್ರೀ ಪಿ. ಗೋವಿಂದ ಮೆನನ್ ಅವರ ಹೆಸರು ಕೇಳಿಬರುತ್ತಿದೆ.

ಈ ಸಲಹೆ ಬಗ್ಗೆ ಇಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿದ ಶ್ರೀ ಮೆನನ್ ಅವರು ತಮ್ಮ ವಿವರಣೆ ನೀಡಿದರೆಂದೂ ವರದಿಯಾಗಿದೆ.

**

ಕಾಂಗ್ರೆಸ್ ಎಂ.ಪಿ. ಗಳಿಗೆ ಮುರಾರಜಿ ಪತ್ರದ ರವಾನೆ ಮುಂದಕ್ಕೆ
ನವದೆಹಲಿ, ಮಾ. 11–
ಪಾರ್ಲಿಮೆಂಟಿನ ಕಾಂಗ್ರೆಸ್ ಸದಸ್ಯರಿಗೆ ತಾವು ಬರೆದಿರುವ ಪತ್ರವೊಂದರ ರವಾನೆಯನ್ನು ಶ್ರೀ ಮುರಾರಜಿ ದೇಸಾಯಿಯವರು ಇಂದು ತಡೆಹಿಡಿದರು.

ಅಂತಿಮವಾಗಿ ರಾತ್ರಿ 11 ಗಂಟೆಗೆ ಈ ಪತ್ರವನ್ನು ಪ್ರಕಟಿಸಲು ನಿರ್ಧರಿಸಿದ್ದ ಅವರು, ಸ್ಪರ್ಧೆಯನ್ನು ತಪ್ಪಿಸಲು ತಾವು ಇನ್ನೂ ಯತ್ನಿಸುತ್ತಿರುವ ಕಾರಣ ಈ ಪತ್ರವನ್ನು ಸದ್ಯದಲ್ಲಿ ಪ್ರಕಟಿಸಬಾರದೆಂದು ಶ್ರೀ ಕಾಮರಾಜರು ತಮಗೆ ತಿಳಿಸಿರುವುದಾಗಿ ರಾತ್ರಿ 11 ರಲ್ಲಿ ವರದಿ ಗಾರರಿಗೆ ತಿಳಿಸಿದರು.

ಈ ಪತ್ರವು ರಾಷ್ಟ್ರದ ಮುಂದೆ ಇರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ, ತಮ್ಮ ಮನಸ್ಸಾಕ್ಷಿಯ ಅತ್ಯುತ್ತಮ ನಿರ್ದೇಶನದಂತೆ ನಾಯಕರನ್ನು ಆರಿಸಬೇಕೆಂದು ಪಕ್ಷದ ಸದಸ್ಯರಿಗೆ ಮನವಿ ಮಾಡಿಕೊಳ್ಳುವುದೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT