ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮರಳಲಿದೆಯೇ ಗೇಣಿ ಪದ್ಧತಿ?

ಸಂಗತ
Last Updated 10 ಮಾರ್ಚ್ 2017, 20:19 IST
ಅಕ್ಷರ ಗಾತ್ರ

1971ರಲ್ಲಿ ಕರ್ನಾಟಕದಲ್ಲಿ ಭೂ ಸುಧಾರಣೆಯ ಎರಡನೆಯ ಹಂತ ಜಾರಿಗೆ ಬಂದು ಜಮೀನುದಾರ-ಗೇಣಿದಾರ ಎಂಬ ಸಾಮಂತವಾದಿ ಭೂಸಂಬಂಧಗಳನ್ನು ಹಾಗೂ ಆ ವರ್ಗಗಳನ್ನು ರದ್ದುಪಡಿಸಿದ 45 ವರ್ಷಗಳ ನಂತರ ಆ ವರ್ಗಗಳನ್ನು ಪುನಃ ಸೃಷ್ಟಿಸಲು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಕೃಷಿ ಎನ್ನುವುದು ನಮ್ಮ ಸಂವಿಧಾನದಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವ್ಯಾಪ್ತಿಗೆ ಸೇರಿದ ವಿಷಯವಾದುದರಿಂದ ಕೃಷಿ ಭೂಮಿಯನ್ನು ಮತ್ತೆ ಗೇಣಿಗೆ ನೀಡುವುದಕ್ಕೆ ಅವಕಾಶ ಮಾಡಿಕೊಡುವ ಮಾದರಿ ಕಾನೂನೊಂದನ್ನು ‘ನೀತಿ ಆಯೋಗ’ ರಚಿಸಿ ಅಂತಹ ಕಾನೂನನ್ನು ಎಲ್ಲಾ ರಾಜ್ಯಗಳೂ ರಚಿಸಬೇಕೆಂದು ಹೇಳುತ್ತಿದೆ.
ಸಾವಿರಾರು ಎಕರೆ ಭೂಮಿ ಹೊಂದಿದ್ದ ಜಮೀನುದಾರರು ಸ್ವತಃ ಕೃಷಿ ಮಾಡುವುದು ಸಾಧ್ಯವಿರಲಿಲ್ಲವಾದುದರಿಂದ ಅವರೇ ಗೇಣಿದಾರ ವರ್ಗವನ್ನು ಸೃಷ್ಟಿಸಿದರು. ಮನಸ್ಸಿಗೆ ಬಂದಂತೆ ಗೇಣಿದಾರರನ್ನು ಒಕ್ಕಲೆಬ್ಬಿಸುವ ಪರಿಪಾಠ ಪ್ರಾರಂಭಿಸಿದರು. ಅವರ ಈ ಅಧಿಕಾರಕ್ಕೆ ಕಡಿವಾಣ ಹಾಕಿ ಗೇಣಿದಾರರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಸ್ವಾತಂತ್ರ್ಯ ಬಂದ ನಂತರ ಕರ್ನಾಟಕವೂ ಸೇರಿದಂತೆ ಬಹುಪಾಲು ರಾಜ್ಯಗಳಲ್ಲಿ ಗೇಣಿದಾರರಿಗೆ ರಕ್ಷಣೆ ನೀಡುವ, ಜಮೀನುದಾರಿ ಪದ್ಧತಿಯನ್ನೇ ರದ್ದುಪಡಿಸುವ ಕಾನೂನುಗಳನ್ನು ರಚಿಸಲಾಯಿತು. ಭೂಸುಧಾರಣೆಯ ಈ ಮೊದಲ ಹಂತದ ನಂತರ 2ನೇ ಹಂತದಲ್ಲಿ ಪ್ರಾರಂಭವಾದ ಉಳುವವನಿಗೆ ಭೂಮಿಯ ಒಡೆತನವನ್ನು ಕೊಡಬೇಕೆಂಬ ಹೋರಾಟದ ಪರಿಣಾಮವಾಗಿ ಗೇಣಿದಾರರಿಗೆ ಅವರ ಸ್ವಾಧೀನದಲ್ಲಿರುವ ಭೂಮಿಯ ಒಡೆತನವನ್ನು ನೀಡುವ ಕಾನೂನುಗಳು ಜಾರಿಗೆ ಬಂದವು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ,  ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ಒಡೆತನವನ್ನು ಹೊಂದಿದ್ದರೂ ಸ್ವಾಧೀನವನ್ನು ಹೊಂದಿರದ ಜಮೀನುದಾರ, ಸ್ವಾಧೀನ ಹೊಂದಿದ್ದರೂ ಒಡೆತನ ಹೊಂದಿರದ ಗೇಣಿದಾರ, ಒಡೆತನ ಹಾಗೂ ಸ್ವಾಧೀನ ಎರಡನ್ನೂ ಹೊಂದಿದ್ದ ರೈತ ಹಾಗೂ ಒಡೆತನ ಹಾಗೂ ಸ್ವಾಧೀನಗಳೆರಡನ್ನೂ ಹೊಂದಿರದ ಕೃಷಿಕೂಲಿ ಎಂಬಂಥ 4 ವರ್ಗಗಳು ಅಸ್ತಿತ್ವದಲ್ಲಿದ್ದವು. ಭೂಸುಧಾರಣೆಯ ಈ ಎರಡು ಹಂತಗಳು ಜಮೀನುದಾರ ಹಾಗೂ ಗೇಣಿದಾರ ಎಂಬ ವರ್ಗಗಳನ್ನು ರದ್ದುಪಡಿಸಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ರೈತ ಹಾಗೂ ಕೃಷಿಕೂಲಿ ಎಂಬ ಎರಡೇ ವರ್ಗಗಳು ಉಳಿದುಕೊಂಡವು. 

ಮುಂದಿನ ಹಂತದ ಭೂಸುಧಾರಣೆಗಳು ರೈತ ಹಾಗೂ ಕೃಷಿಕೂಲಿ ಎಂಬ ಎರಡು ವರ್ಗಗಳನ್ನು ಸಹಕಾರಿ ಕೃಷಿಯ ಮೂಲಕ ಮೇಳವಿಸಿ ಭೂಮಿಯನ್ನು ನಂಬಿರುವ ಒಂದೇ ವರ್ಗವನ್ನು ರಚಿಸುವುದಾಗಬೇಕಿತ್ತು. ಇದು ವರ್ಗಗಳ ಸಮಾನತೆಯತ್ತ ದೊಡ್ಡ ದಾಪುಗಾಲಾಗಬಹುದಿತ್ತು. ಆದರೆ ಇಂದು ಕೇಂದ್ರ ಸರ್ಕಾರ, ರೈತ-ಕೃಷಿಕೂಲಿ ವರ್ಗಗಳನ್ನು ಒಂದೇ ವರ್ಗವನ್ನಾಗಿ ಮಾರ್ಪಡಿಸುವುದು ಹಾಗಿರಲಿ, ಜಮೀನುದಾರ-ಗೇಣಿದಾರ ವರ್ಗಗಳನ್ನು ಮತ್ತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಗೇಣಿಗೆ ಭೂಮಿ ಕೊಡುವುದು ಕಾನೂನು ಬಾಹಿರವಾಗಿದ್ದರೂ, ಕರ್ನಾಟಕದಲ್ಲಿಯೇ ಶೇ6ರಷ್ಟು ಭೂಮಿಯನ್ನು ಗೇಣಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಅಕ್ರಮ ಗೇಣಿಯನ್ನು ಸಕ್ರಮಗೊಳಿಸುವುದೇ ಈ ಹೊಸ ಕಾನೂನಿನ ಉದ್ದೇಶ ಎಂದೂ ಹೇಳಲಾಗುತ್ತಿದೆ. 

ಒಂದು ವಸ್ತುವಿನ ಸ್ವಾಧೀನ ಹೊಂದಿದವನೇ ಆ ವಸ್ತುವಿನ ಒಡೆತನವನ್ನೂ ಹೊಂದಿರಬೇಕು ಎನ್ನುವುದು ನ್ಯಾಯಶಾಸ್ತ್ರದ ಒಂದು ಪ್ರಮುಖ ತತ್ವ. ಒಂದು ವಸ್ತುವಿನ ಒಡೆತನವನ್ನು ಹೊಂದಿರುವವನು ನಾನಾ ಕಾರಣಗಳಿಂದ ಅದರ ಸ್ವಾಧೀನವನ್ನೂ ಹೊಂದಲು ಬಯಸದೇ ಇರುವಾಗ ಅಥವಾ ಅದು ಸಾಧ್ಯವಾಗದೇ ಇರುವಾಗ ಅದನ್ನು ಬೇರೆಯವರಿಗೆ ಬಿಟ್ಟುಕೊಡುತ್ತಾನೆ.

ಇದೇ ತರ್ಕವನ್ನು ಬಳಸಿ ಉಳುವವನಿಗೇ ಭೂಮಿಯ ಒಡೆತನವನ್ನೂ ಕೊಡಬೇಕೆನ್ನುವ ತತ್ವ ಅನುಷ್ಠಾನಕ್ಕೆ ಬಂದದ್ದು. ತಾನೇ ಭೂಮಿಯನ್ನು ಉಳಲು ಆಗದವನು ಅದನ್ನು ಉಳಲು ಸಿದ್ಧರಿರುವ ಬೇರೆಯವರಿಗೆ ಗೇಣಿ ಕೊಡುತ್ತಾನೆ. ಗೇಣಿದಾರ ಕಷ್ಟಪಟ್ಟು ಸಂಪಾದಿಸಿದ ಫಸಲಿನಲ್ಲಿ ಭೂಮಿಯ ಒಡೆತನ ಹೊಂದಿದ್ದೇನೆ ಎಂಬ ಒಂದೇ ಕಾರಣದಿಂದ ಏನೂ ಕಷ್ಟಪಡದ ಭೂಮಾಲೀಕ ಆ ಫಸಲಿನ ಒಂದು ಪಾಲನ್ನು ಪಡೆಯುತ್ತಾನೆ. ಸ್ವತಃ ದುಡಿಯದೇ ಇನ್ನೊಬ್ಬರ ದುಡಿಮೆಯ  ಫಲ ಪಡೆಯುವುದು ಅನೈತಿಕವಷ್ಟೇ ಅಲ್ಲ ಆರ್ಥಿಕ ಶೋಷಣೆಯೂ ಹೌದು. ಇದನ್ನು ತಪ್ಪಿಸಬೇಕಾದರೆ ಒಡೆತನ ಹಾಗೂ ಸ್ವಾಧೀನಗಳೆರಡನ್ನೂ ಒಬ್ಬ ವ್ಯಕ್ತಿಯಲ್ಲಿಯೇ ಸ್ಥಾಪಿಸಬೇಕೆನ್ನುತ್ತಾರೆ ಸಮಾಜವಾದಿಗಳು. ಇದೇ ಇದುವರೆಗಿನ ಭೂಸುಧಾರಣೆಯ ಉದ್ದೇಶ ಹಾಗೂ ತತ್ವವೂ ಆಗಿತ್ತು.

ಆದರೆ ಇಂದು ಕೇಂದ್ರ ಸರ್ಕಾರ ಈ ತತ್ವವನ್ನು ತಲೆಕೆಳಗೆ ಮಾಡುತ್ತಿದೆ. ಭೂಮಿಯನ್ನು ಗೇಣಿಗೆ ಕೊಡುವುದನ್ನು ಕಾನೂನುಬದ್ಧಗೊಳಿಸಲು ‘ನೀತಿ ಆಯೋಗ’ವು 2015ರ ಸೆ. 7ರಂದು ಡಾ.ಟಿ.ಹಕ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಒಂದು ಸಮಿತಿ ಕಳೆದ ವರ್ಷದ ಮಾರ್ಚ್‌ನಲ್ಲಿ ಅಂದರೆ ಬರೀ ಏಳು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ.

ಈ ಶಿಫಾರಸುಗಳಿಗೆ ಕಾರಣಗಳನ್ನು ನೀಡುತ್ತ ಸಮಿತಿ ಹೀಗೆ ಹೇಳಿದೆ: ‘ಸ್ವಾತಂತ್ರ್ಯಾನಂತರದ ದಿನಗಳಲ್ಲಿ ರಚಿಸಲಾದ ಭೂಸುಧಾರಣಾ ಕಾನೂನುಗಳು ಇಂದು ಅಪ್ರಸ್ತುತವಾಗಿವೆ. ಗೇಣಿಪದ್ಧತಿ ಇಂದು ಆರ್ಥಿಕ ಆವಶ್ಯಕತೆಯಾಗಿದೆಯೇ ಹೊರತು ಸಾಮಂತವಾದದ ಚಿಹ್ನೆ ಯಾಗಿರುವುದಿಲ್ಲ. ಈ ಭೂಸುಧಾರಣಾ ಕಾನೂನುಗಳು ಕೃಷಿ ಉತ್ಪಾದನೆಯನ್ನೂ, ಸಮಾನತೆಯ ಸಾಧನೆಯನ್ನೂ, ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯೇತರ ಅಭಿವೃದ್ಧಿಯನ್ನೂ ಕುಂಠಿತಗೊಳಿಸಿವೆ. ಈ ಕಾನೂನುಗಳಿಂದಾಗಿ ಗೇಣಿ ಇಂದು ಅನೌಪಚಾರಿಕವೂ, ಅಸುರಕ್ಷಿತವೂ, ಅದಕ್ಷವೂ ಆಗಿದೆ. ಈ ಕಾನೂನುಗಳು ಅಭಿವೃದ್ಧಿ ವಿರೋಧಿಯೂ ಬಡವರ ವಿರೋಧಿಯೂ ಆಗಿವೆ. ತಮ್ಮ  ಭೂಮಿಯ ಒಡೆತನ ಕಳೆದುಕೊಳ್ಳುವ ಭಯದಿಂದ ಭೂಮಾಲೀಕರು ತಮ್ಮ ಭೂಮಿಯನ್ನು ಬೀಳು ಬಿಡುತ್ತಾರೆಯೇ ಹೊರತು ಗೇಣಿಗೆ ಕೊಡುವುದಿಲ್ಲ. ಹೀಗಾಗಿ ಇಡೀ ದೇಶದಲ್ಲಿ ಸುಮಾರು 2.1 ಕೋಟಿ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ. ಆದುದರಿಂದ ಭೂಮಿಯನ್ನು ಗೇಣಿಗೆ ಕೊಡುವುದನ್ನು ಕಾನೂನುಬದ್ಧಗೊಳಿಸಿ ಭೂಮಾಲೀಕರಿಗೆ ಭೂಮಿಯ ಒಡೆತನದ ಹಕ್ಕಿಗೆ ರಕ್ಷಣೆ ನೀಡಿದರೆ ಅವರು ಹೆಚ್ಚು ಭೂಮಿಯನ್ನು ಗೇಣಿಗೆ ನೀಡುವ ಮೂಲಕ ಹೆಚ್ಚು ಭೂಮಿ ವ್ಯವಸಾಯಕ್ಕೊಳಪಡುತ್ತದೆ. ಚೀನಾ ಹಾಗೂ ವಿಯೆಟ್ನಾಂ ಮೊದಲಾದ  ರಾಷ್ಟ್ರಗಳೂ ಗೇಣಿಪದ್ಧತಿಯನ್ನು ಇತ್ತೀಚೆಗೆ  ಕಾನೂನು ಬದ್ಧಗೊಳಿಸಿವೆ. ಗ್ರಾಮೀಣ ಜನರು ಇಂದು ರಾಜಕೀಯವಾಗಿ ಬಲಶಾಲಿಯಾಗಿರುವುದರಿಂದ ಗೇಣಿ ಪದ್ಧತಿಯು ಶೋಷಣೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಭಾವಿಸುವುದು ಸರಿಯಲ್ಲ.

ಗೇಣಿಪದ್ಧತಿಯಿಂದ ಭೂಮಿ  ಹಲವೇ ಜನರ ಕೈಯಲ್ಲಿ ಕೇಂದ್ರೀಕೃತಗೊಳ್ಳುತ್ತದೆ ಎನ್ನುವುದನ್ನು ತಪ್ಪಿಸಲು ಬೇಕಿದ್ದರೆ ಭೂಹಿಡುವಳಿಗಳ ಮೇಲೆ ರಾಜ್ಯ ಸರ್ಕಾರಗಳು ವಿಧಿಸಿರುವ ಮಿತಿಯ ಒಳಗಡೆ ಮಾತ್ರ ಗೇಣಿಗೆ ಅವಕಾಶ ಮಾಡಿಕೊಡಬಹುದು’.

ತಮ್ಮ ಭೂಮಿಯನ್ನು ಬೀಳು ಬಿಟ್ಟು ನಗರಗಳಲ್ಲಿ ವಾಸವಾಗಿರುವವರಿಗೆ ಭೂಮಿಯನ್ನು ಗೇಣಿಗೆ ಕೊಡಲು ಈ ಮಾದರಿ ಕಾನೂನು ಅವಕಾಶ ಮಾಡಿಕೊಡುತ್ತದೆ. ಇದು ಮತ್ತೆ ಅನುಪಸ್ಥಿತ ಜಮೀನುದಾರ ವರ್ಗವನ್ನು ಹುಟ್ಟುಹಾಕುತ್ತದೆ. ಹಾಗೆಯೇ ಒಬ್ಬ ವ್ಯಕ್ತಿ ಗೇಣಿಗೆ ಪಡೆಯಬಹುದಾದ ಭೂಮಿಗೆ ಮಿತಿ ಇಲ್ಲದಿರುವುದರಿಂದ  ಇದು ಮತ್ತೆ ದೊಡ್ಡ ರೈತರ ವರ್ಗವನ್ನು  ಹುಟ್ಟುಹಾಕುತ್ತದೆ. ಇವೆರಡೂ ಅವಕಾಶಗಳು ಕೃಷಿಯಲ್ಲಿ ಸಮೂಹಪ್ರಾಧಾನ್ಯದ ಬದಲು ವ್ಯಕ್ತಿಪ್ರಾಧಾನ್ಯವನ್ನೇ ಮೆರೆಯುತ್ತವೆ. ಇದರಿಂದಾಗಿ ರೈತ ಹಾಗೂ ಕೃಷಿಕೂಲಿ ವರ್ಗಗಳನ್ನು ಸೇರಿಸಿ ಒಂದೇ ವರ್ಗವನ್ನಾಗಿ ಮಾಡಬಯಸುವ ಭೂಸುಧಾರಣೆಯ 3ನೇ ಹಂತ ಹಿಮ್ಮೆಟ್ಟುತ್ತದೆಯಷ್ಟೇ ಅಲ್ಲ, ಗ್ರಾಮೀಣ ಸಮಾಜ ಇತಿಹಾಸದಲ್ಲಿ ಒಂದು ಹೆಜ್ಜೆ ಹಿಂದೆ ಹೋದಂತಾಗುತ್ತದೆ.

ಕೇಂದ್ರ ಸರ್ಕಾರ ಸೂಚಿಸುತ್ತಿರುವ ಕಾನೂನು ಬರೀ ‘ಮಾದರಿ ಕಾನೂನು’ ಆದುದರಿಂದ ಪ್ರತಿ ರಾಜ್ಯಕ್ಕೂ ತನಗೆ ಅನುಕೂಲವಾಗುವ ರೀತಿ ಈ ಕಾನೂನನ್ನು ಬದಲಾಯಿಸಿ ಜಾರಿಗೆ ತರುವ ಅಧಿಕಾರವಿರುತ್ತದೆ. ಇದನ್ನು ಬಳಸಿಕೊಂಡು, ಕರ್ನಾಟಕದಲ್ಲಿ ಗ್ರಾಮೀಣ ಸಮಾಜದ ಈ ಹಿಮ್ಮೆಟ್ಟುವಿಕೆ ತಪ್ಪಿಸಿ ಅದನ್ನು ಸಮಾಜವಾದಿ ದಿಕ್ಕಿನಲ್ಲಿ ಮುಂದೆ ಕೊಂಡೊಯ್ಯಲು ಪ್ರಯತ್ನಿಸಬಹುದಾಗಿದೆ. ಒಬ್ಬ ವ್ಯಕ್ತಿ ಭೂಮಿಯನ್ನು ಗೇಣಿಗೆ ಪಡೆಯುವುದನ್ನು ತಪ್ಪಿಸಿ ರೈತ ಹಾಗೂ ಕೃಷಿಕೂಲಿಗಳ ಗುಂಪುಗಳು ಮಾತ್ರ ಭೂಮಿಯನ್ನು ಗೇಣಿಗೆ ಪಡೆಯುವಂತಾಗಬೇಕು. ಭೂಮಿಯನ್ನು ಗೇಣಿಗೆ ಕೊಡುವ ಭೂಮಾಲೀಕನ ಒಡೆತನದ ಹಕ್ಕನ್ನು ರಕ್ಷಿಸುವಂತೆಯೇ ಈ ಕಾನೂನಿನಲ್ಲಿ ಗೇಣಿದಾರರ ಸ್ವಾಧೀನದ ಹಕ್ಕಿಗೂ ರಕ್ಷಣೆ ದೊರಕುವಹಾಗೆ ಮಾಡಬೇಕು. ಒಬ್ಬ ವ್ಯಕ್ತಿ ಗೇಣಿಗೆ ಪಡೆಯಬಹುದಾದ ಭೂಮಿಗೆ ಮಿತಿ ನಿಗದಿಪಡಿಸಿ ಗುಂಪು ಪಡೆಯಬಹುದಾದ ಭೂಮಿಗೆ ಮಿತಿ ವಿಧಿಸಬಾರದು. ಈ ಎಲ್ಲ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಮಾದರಿ ಕಾನೂನು ಹೇಳುವಂತೆ ಸರ್ಕಾರಿ ಅಧಿಕಾರಿಗಳಿಗೆ ವಹಿಸದೆ ಪಂಚಾಯಿತಿಗಳಿಗೆ ವಹಿಸಿಕೊಡಬೇಕು.

ಒಟ್ಟಿನಲ್ಲಿ ಈ ಹೊಸ ಕಾನೂನು ಜಮೀನುದಾರ-ಗೇಣಿದಾರ ವರ್ಗಗಳನ್ನು ಪುನರ್ರಚಿಸಿ ಸಮಾಜವನ್ನು ಹಿಂದಕ್ಕೆ  ಕೊಂಡೊಯ್ಯುವುದೋ ಅಥವಾ ಕೊನೆಪಕ್ಷ ಕರ್ನಾಟಕದ ಮಟ್ಟದಲ್ಲಿ ಗುಂಪು ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ಸಮಾಜವನ್ನು ಭೂಸುಧಾರಣೆಯ ಮುಂದಿನ ಹಂತಕ್ಕೆ ಕೊಂಡೊಯ್ಯುವುದೋ ಎನ್ನುವುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT