ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಬಗ್ಗೆ ಸೂಕ್ಷ್ಮತೆ ಬೆಳೆಸಿಕೊಳ್ಳಿ

ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರ್ತಿ ನೀಲಿಮಾ ಮಿಶ್ರಾ
Last Updated 11 ಮಾರ್ಚ್ 2017, 4:34 IST
ಅಕ್ಷರ ಗಾತ್ರ
ದಾವಣಗೆರೆ:  ‘ಅವಕಾಶ ಬರಲಿ ಎಂದು ಕಾಯುವುದಕ್ಕಿಂತ ಒಳ್ಳೆಯ ಚಟುವಟಿಕೆಯಲ್ಲಿ ಕಾರ್ಯೋನ್ಮುಖ ರಾದರೆ ಅವಕಾಶಗಳೇ ನಮ್ಮ ಬಳಿ ಬರುತ್ತವೆ’ ಎಂದು ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ನೀಲಿಮಾ ಮಿಶ್ರಾ ಕಿವಿಮಾತು ಹೇಳಿದರು.
 
ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಬಾದರ್‌ಪುರ ಗ್ರಾಮದಲ್ಲಿ ಬಡ ಮಹಿಳೆಯರ, ರೈತರ ಸಬಲೀಕರಣದ ಹಾದಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ನೀಲಿಮಾ, ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ‘ಪಾಠ’ ಮಾಡಿದರು.
 
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಎವಿಕೆ ಕಾಲೇಜು ಜಂಟಿ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರ ಉಪನ್ಯಾಸ ಏರ್ಪಡಿಸಿತ್ತು.
 
‘ನನ್ನ ಗ್ರಾಮದ ಜನ ಶ್ರಮಪಡುತ್ತಿದ್ದರು. ಆದರೆ ಬಡತನದಲ್ಲೇ ನರಳುತ್ತಿದ್ದರು. ಕೆಲವರಿಗೆ ಎರಡು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ. ಇಂಥ ಸೂಕ್ಷ್ಮ ವಿಷಯಗಳು ನನ್ನ ಮನಕಲಕಿದವು. ಅಸಹಾಯಕರು, ಬಡವರ ಬಗ್ಗೆ ಸೂಕ್ಷ್ಮತೆ ಬೆಳೆಸಿಕೊಳ್ಳುವುದು ಮತ್ತು ಅದನ್ನು ಕಾಪಾಡಿಕೊಳ್ಳುವುದು ಬಹಳ ಮಹತ್ವದ್ದು’ ಎಂದು ಅವರು ಹೇಳಿದರು.
 
‘ನಾನು ಪುಣೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ನನ್ನ ಹಳ್ಳಿಯ ಬಡವರಿಗೇನಾದರೂ ಒಳ್ಳೆಯದನ್ನು ಮಾಡಬೇಕೆಂಬ ಬಯಕೆ ಉತ್ಕಟವಾಯಿತು. ಅದಕ್ಕೆ ತಕ್ಕಂತೆ ನನಗೆ 17 ರಾಜ್ಯಗಳ ಪ್ರವಾಸದ ವೇಳೆ ವಿವಿಧ ಸಂಘಟನೆಗಳ ಜೊತೆ ಬೆರೆಯುವ ಅವಕಾಶ ದೊರೆಯಿತು’ ಎಂದು ಅವರು ಹೇಳಿದರು.
 
‘ಹಳ್ಳಿಗೆ ಮರಳಿದ ಮೇಲೆ ಸಬಲೀಕರಣ ಕ್ರಮಗಳಿಗೆ ಮುಂದಾದೆ. ಸ್ವಸಹಾಯ ಗುಂಪುಗಳ ರಚನೆ, ಕಿರು ಹಣಕಾಸು ಯೋಜನೆ, ಕಸೂತಿ ಕಲೆ, ಕೌದಿ ತಯಾರಿಕೆ, ಆಹಾರ ಉತ್ಪನ್ನ ತಯಾರಿಕೆ ಮೊದಲಾದ ಗೃಹ ಉದ್ಯಮಗಳ ಮೂಲಕ ಅವರು ನಿಧಾನವಾಗಿ ತಮ್ಮ ಸಾಮರ್ಥ್ಯ ತಿಳಿದುಕೊಂಡರು. ಸಾಲ ತೆಗೆದುಕೊಳ್ಳಬೇಕಾದರೆ ಶೌಚಾಲಯ ನಿರ್ಮಾಣ ಕಡ್ಡಾಯಗೊಳಿಸಿದೆ. ನನ್ನ ತಾಯಿ ಸಹ ನನ್ನ ಬೆಂಬಲಕ್ಕಿದ್ದರು. ಅವರೂ ಕೊನೆಗಾಲದವರೆಗೂ ಅನಾಥರು, ಅಸಹಾಯಕರಿಗೆ ಊಟ ತಯಾರಿಸಿಕೊಡುತ್ತಿದ್ದರು’ ಎಂದು 45 ವರ್ಷ ವಯಸ್ಸಿನ ನೀಲಿಮಾ ವಿವರಿಸಿದರು.
 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್‌ ರೇಖಾ ನಾಗರಾಜ್‌, ‘ಮನೆ ನಿರ್ವಹಣೆ ಜೊತೆಗೆ ದೈನಂದಿನ ಕೆಲಸ, ಪತಿ, ಮಕ್ಕಳನ್ನು ಅಣಿಗೊಳಿಸುವ ಮಹಿಳೆಯ ಶ್ರಮ ಒಂದು ದಿನಕ್ಕೆ ಸೀಮಿತಗೊಳ್ಳುವುದಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಗೆ ಸ್ಥಾನಮಾನ ದೊರೆಯುತ್ತದೆ. ಆದರೆ ಗೃಹಿಣಿಯಾಗಿ ಮನೆ ನಿರ್ವಹಿಸುವ ಮಹಿಳೆಯ ಶ್ರಮ ಹೊರಗಿನ ಯಾರಿಗೂ ಕಾಣಿಸುವುದಿಲ್ಲ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತಗೊಳ್ಳುವಂಥದ್ದಲ್ಲ’ ಎಂದರು.
 
ಪರಿಷತ್ತಿನ ಅಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ ಅವರು ನೀಲಿಮಾ ಸಾಧನೆ ಕಿರು ಪರಿಚಯ ಮಾಡಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಪ್ರಕಾಶ ಪಿ.ಎಸ್‌. ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಎಂ.ಅನುರಾಧಾ ಸ್ವಾಗತಿಸಿದರು. ಪರಿಷತ್‌ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT