ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ನ್ಯಾಯಾಲಯ ಉದ್ಘಾಟನೆ

ಹೊನ್ನಾಳಿ ಕಕ್ಷಿದಾರರಿಗೆ ಅನುಕೂಲವಾಗಲಿರುವ ಹಿರಿಯ ಶ್ರೇಣಿ ನ್ಯಾಯಾಲಯ
Last Updated 11 ಮಾರ್ಚ್ 2017, 4:42 IST
ಅಕ್ಷರ ಗಾತ್ರ
ಹೊನ್ನಾಳಿ: ‘ಸಂಚಾರಿ ಹಿರಿಯ ಶ್ರೇಣಿ ನ್ಯಾಯಾಲಯದ ಆರಂಭದಿಂದ ಈ ಭಾಗದ ಕಕ್ಷಿದಾರರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.
 
ಶುಕ್ರವಾರ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿರುವ ಜೆಎಂಎಫ್‌ಸಿ ನ್ಯಾಯಾ ಲಯದ ಆವರಣದಲ್ಲಿ ಸಂಚಾರಿ ಹಿರಿಯ ಶ್ರೇಣಿ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. 
 
‘ಹರಿಹರಕ್ಕೆ ಹೋಲಿಸಿದರೆ ಹೊನ್ನಾಳಿಯಲ್ಲಿ ಹೆಚ್ಚು ಸಿವಿಲ್ ಮೇಲ್ಮನವಿ ಪ್ರಕರಣಗಳಿವೆ. ಹೀಗಾಗಿ ಎರಡು ವರ್ಷಗಳಿಂದ ಇಲ್ಲಿ ಸಂಚಾರಿ ಹಿರಿಯ ಶ್ರೇಣಿ ನ್ಯಾಯಾಲಯದ ಆರಂಭಕ್ಕೆ ಪ್ರಸ್ತಾಪ ಮತ್ತು ಪ್ರಯತ್ನ ನಡೆಯುತ್ತಲೇ ಇತ್ತು.  ಇದೀಗ ಈ ಭಾಗದ ಕಕ್ಷಿದಾರರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
 
‘ಜಿಲ್ಲೆಯಲ್ಲಿಯೇ ಹೊನ್ನಾಳಿ ತಾಲ್ಲೂಕು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.  ಆದರೆ ಮಾದಕ ದ್ರವ್ಯ ಸೇವನೆಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಕಪ್ಪುಚುಕ್ಕೆ ಈ ಬಗ್ಗೆ ಪೊಲೀಸರು ಹೆಚ್ಚು ಗಮನಹರಿಸಬೇಕು  ಎಂದು ಅವರು ಹೇಳಿದರು.
 
‘ಹೊನ್ನಾಳಿಯಲ್ಲಿ ಶೇ 87 ರಷ್ಟು ಬಯಲು ಮುಕ್ತ ಶೌಚಾಲಯ ನಿರ್ಮಾಣ ಪ್ರಯತ್ನ ನಡೆದಿದೆ. ಇನ್ನೂ ಶೇ. 13 ರಷ್ಟು ಶೌಚಾಲಯ  ನಿರ್ಮಾಣವಾದರೆ ನೂರರಷ್ಟು ಶೌಚಾಲಯ ನಿರ್ಮಾಣ ಮಾಡಿದ ಕೀರ್ತಿ ಹೊನ್ನಾಳಿಗೆ ಸಿಗಲಿದೆ. ಈ ಪ್ರಯತ್ನವನ್ನು ಆದಷ್ಟು ಬೇಗ ಮಾಡಬೇಕು’ ಎಂದರು.
 
‘ಲೋಕ ಅದಾಲತ್‌ನಲ್ಲಿ ಹೆಚ್ಚಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು’ ಎಂದು ಅವರು ಸಲಹೆ ನೀಡಿದರು. 
 
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ಈ ಹಿಂದೆ ಹೊನ್ನಾಳಿಯ ಬಹುತೇಕ ವ್ಯಾಜ್ಯಗಳನ್ನು ಶಿಕಾರಿಪುರದ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಬೇಕಾಗಿತ್ತು. ನಂತರ ಹೊನ್ನಾಳಿಯಲ್ಲಿಯೇ ನ್ಯಾಯಾಲಯ ಆರಂಭವಾಯಿತು. ಇದೀಗ ಸಂಚಾರಿ ಹಿರಿಯ ಶ್ರೇಣಿ ನ್ಯಾಯಾಲಯ ಕೂಡಾ ಉದ್ಘಾಟನೆಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಆದಷ್ಟು ಬೇಗ ಈ ನ್ಯಾಯಾಲಯ ಖಾಯಂ ಆಗಲಿ’ ಎಂದರು. 
 
‘ಜಮೀನು ವಿವಾದಗಳ ವ್ಯಾಜ್ಯ ವಿಚಾರಣೆಗೆ ಎ.ಸಿ. ಕೋರ್ಟ್ ಗೆ ದಾವಣಗೆರೆ ಹೋಗಬೇಕಾಗಿದ್ದು, ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಎ.ಸಿ.ಯವರು ವಾರದಲ್ಲಿ ಒಂದು ದಿನ ಹೊನ್ನಾಳಿಗೆ ಬಂದು ಹೋಗುವ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದು ಭರವಸೆ ನೀಡಿದರು. 
 
ವಕೀಲರಾದ ಉಮಾಕಾಂತ್ ಜೋಯ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಉಮೇಶ್ ಹಾಗೂ ಯತಿರಾಜ್ ಮಾತನಾಡಿದರು. ಪ್ರಕಾಶ್ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT