ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಪಶ್ವಿಮ ಘಟ್ಟದ ಕಾಡಿನಲ್ಲಿ ಬರಿದಾಗುತ್ತಿರುವ ಜಲ ಮೂಲಗಳು

ಕುಡಿಯುವ ನೀರಿಗೆ ಕಾಡುಪ್ರಾಣಿಗಳ ಪರದಾಟ
Last Updated 11 ಮಾರ್ಚ್ 2017, 5:02 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಲೆನಾಡಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ನೀರಿನ ಸೆಲೆ ಬತ್ತುತ್ತಿರುವುದರಿಂದ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಬಿರು ಬೇಸಿಗೆಯ ತೀವ್ರತೆಯಿಂದ ಕಾಡು ಪ್ರಾಣಿಗಳು ನೀರನ್ನು ಹುಡುಕಿಕೊಂಡು ಹಳ್ಳಿಗಳ ಕಡೆಗೆ ಬರುವಂತಾಗಿದೆ.

ಪಶ್ವಿಮ ಘಟ್ಟದ ಕಾಡಿನಲ್ಲಿ ಝರಿಗಳು ಬತ್ತಿಹೋಗಿವೆ. ಕುಡಿಯುವ ನೀರಿಗಾಗಿ ನದಿ, ತೊರೆಗಳನ್ನು ಆಶ್ರಯಿಸಿದ್ದ ಕಾಡು ಪ್ರಾಣಿಗಳು ಗುಟುಕು ನೀರಿಗಾಗಿ ಕೆಲ ಕಿಲೋ ಮೀಟರ್‌ಗಳಷ್ಟು ದೂರ ಕ್ರಮಿಸಬೇಕಾದ ಸಂದರ್ಭ ಬಂದಿದೆ. ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿಗೆ ನಿರ್ಮಿಸಿರುವ ಕೆರೆಗಳು ಬತ್ತಿವೆ. ಕಾಡಂಚಿನ ನದಿ, ತೊರೆ, ಹಳ್ಳ, ಕೊಳ್ಳಗಳಲ್ಲಿರುವ ಅಳಿದು ಉಳಿದ ನೀರಿಗೆ ಮುಗಿ ಬೀಳುವಂತಾಗಿದೆ.

ಆಗುಂಬೆ ಭಾಗದಲ್ಲಿ ಹರಿಯುವ ಮಾಲತಿ ನದಿ ಬತ್ತಿರುವುದರಿಂದ ವನ್ಯಜೀವಿಗಳು ದಾಹ ತೀರಿಸಿಕೊಳ್ಳಲು ನೀರನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳ ಕಡೆಗೆ ಮುಖ ಮಾಡುವಂತಾಗಿದೆ.  ಕಾಡುಕೋಣ, ಕಡವೆ, ಜಿಂಕೆ, ಕಾಡುಹಂದಿ, ಕಾಡುಕುರಿ, ನರಿ, ಮುಳ್ಳಹಂದಿ, ಚಿಪ್ಪಿನ ಹಂದಿ, ಬರ್ಕ ಸೇರಿದಂತೆ ಅನೇಕ ಪ್ರಾಣಿಗಳು ರೈತರ ಜಮೀನಿನ
ಬಳಿ ಇರುವ ನೀರಿನ ಸೆಲೆಯನ್ನು ಹುಡುಕಿಕೊಂಡ ಬರುತ್ತಿವೆ.

ಅಡಿಕೆ, ಬಾಳೆ ತೋಟಗಳಿಗೆ ಬರುವ ಪ್ರಾಣಿ ಸಂಕುಲ ಲಭ್ಯವಿರುವ ನೀರನ್ನು ಕುಡಿದು ಜೀವ ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿವೆ. ತಾಲ್ಲೂಕಿನ ಬಹುತೇಕ ಕಾಡಿನಲ್ಲಿ ನೀರಿನ ಮೂಲ ಬತ್ತಿರುವುದರಿಂದ ಕಾಡು ಪ್ರಾಣಿಗಳ ಓಡಾಟ ಜನರ ಕಣ್ಣಿಗೆ ಬೀಳುತ್ತಿವೆ.

ಕಾಡಿನಲ್ಲಿರುವ ದೊಡ್ಡ ಪ್ರಾಣಿಗಳಿಗೆ ಈಗ ಕುಡಿಯುವ ನೀರು ಸಿಗುತ್ತಿಲ್ಲ. ಗುಟುಕು ನೀರಿನಿಂದ ಕಾಡುಕೋಣ, ಕಡವೆ, ಜಿಂಕೆ, ಕಾಡುಹಂದಿಗಳ ದಾಹ ತಣಿಯುತ್ತಿಲ್ಲ. ಇಂಥ ಪ್ರಾಣಿಗಳು ಈಗ ಹಳ್ಳಿಗಳ ಕಡೆಗೆ ಮುಖ ಮಾಡಿರುವುದು ಜನರಲ್ಲಿ ಭೀತಿ ಮೂಡಿಸಿದೆ.

ಬತ್ತಿರುವ ನದಿ, ಹಳ್ಳದ ಸಾಲಿನಲ್ಲಿ ಓಡಾಡುವ ಪ್ರಾಣಿಗಳು ಅಲ್ಲಲ್ಲಿ ಅಲ್ಪ ಸ್ವಲ್ಪ ಸಂಗ್ರಹವಿರುವ ಕೊಳಕು ನೀರನ್ನೇ ಕುಡಿಯುತ್ತಿವೆ. ನದಿ ನೀರು ಬತ್ತಿರುವುದರಿಂದ ಜಲಚರಗಳೂ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಅಳಿದುಳಿದ ನೀರಿನಲ್ಲಿ ಇರುವ ಮೀನನ್ನು ಹಿಡಿಯಲು ಕೆಲವರು ವಿಷ ಹಾಕುತ್ತಿದ್ದಾರೆ. ಇದೇ ನೀರನ್ನು ಕಾಡು ಪ್ರಾಣಿಗಳು ಕುಡಿಯುವುದರಿಂದ ಅವುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ಒಂದೆಡೆಗೆ ಮಳೆಗಾಲಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆ ಬಂದಿದೆ. ಇನ್ನೊಂದೆಡೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಳ್ಗಚ್ಚಿನಿಂದ ಕಾಡು ಪ್ರಾಣಿಗಳ ಜೀವಕ್ಕೇ ಕುತ್ತು ಬರುವ ಸನ್ನಿವೇಶ ಸೃಷ್ಟಿಯಾಗಿದೆ.

* ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳು ಚಕ್ರಾ, ವಾರಾಹಿ ಹಿನ್ನೀರನ್ನು ಬಳಕೆ ಮಾಡಿಕೊಳ್ಳುತ್ತಿವೆ. ಕಾಡಿನ ಕೆರೆಗಳಲ್ಲಿ ಸ್ವಲ್ಪ ನೀರಿದ್ದು, ಸದ್ಯಕ್ಕೆ ತೊಂದರೆ ಆಗುವುದಿಲ್ಲ.
ಮೋಹನ್‌ ಕುಮಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

* ಕಾಡುಪ್ರಾಣಿಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಹೆಚ್ಚು ಕಾಳಜಿ ವಹಿಸಬೇಕು. ಅರಣ್ಯ ಪ್ರದೇಶದ ನೀರಿನ ಮೂಲಗಳ ಸಂರಕ್ಷಣೆ ಮಾಡಬೇಕು.
ನಾಗರಾಜ್‌ ಸೌಳಿ, ಪರಿಸರ ಪ್ರೇಮಿ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT