ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ವಲ ಯೋಜನೆ ಅನುಷ್ಠಾನಕ್ಕೆ ಕ್ರಮ

ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚನೆ
Last Updated 11 ಮಾರ್ಚ್ 2017, 5:17 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಅರ್ಹ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು. 
 
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ ಅನುಷ್ಠಾನ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪೂರ್ವಭಾವಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
‘ಈ ಯೋಜನೆಯಡಿ ಕೇಂದ್ರ ಸರ್ಕಾರ ಬಿಪಿಎಲ್‌ ಕುಟುಂಬಗಳಿಗೆ ₹ 1.600 ದರದಲ್ಲಿ ಹೊಸ ಅನಿಲ ಸಂಪರ್ಕ ಕಲ್ಪಿಸಲು ಮುಂದಾಗಿದೆ. ರಾಜ್ಯ ಸರ್ಕಾರ ₹ 1 ಸಾವಿರ ಮೊತ್ತವನ್ನು ಅರ್ಹ ಫಲಾನುಭವಿಗೆ ನೀಡಲಿದೆ. ಒಟ್ಟು ₹2.600 ಮೊತ್ತದಲ್ಲಿ ಸಂಪರ್ಕ ದೊರೆಯಲಿದೆ’ ಎಂದರು.
 
‘ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಆಹಾರ ಇಲಾಖೆ ಮತ್ತು ನ್ಯಾಯಬೆಲೆ ಅಂಗಡಿಗಳು ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಆದ್ದರಿಂದ ಇಲಾಖೆ ಉಪನಿರ್ದೇಶಕರು ಈಗಿನಿಂದಲೇ ಜಾಗ್ರತೆ ವಹಿಸಬೇಕು’ ಎಂದು ಹೇಳಿದರು.  
 
‘2011ರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿ ಸಮೀಕ್ಷೆಯಲ್ಲಿ ನೋಂದಣಿ ಆಗಿರುವ ಬಿಪಿಎಲ್ ಕುಟುಂಬದ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಸುಲಭವಾಗಿ ಸಿಗಲಿದೆ’ ಎಂದರು. 
 
‘ಈ ಜನಗಣತಿ ಸಮೀಕ್ಷೆಯಲ್ಲಿ ಕೆಲವರ ಹೆಸರು ನೋಂದಣಿ ಆಗಿಲ್ಲ ಎಂಬ ಕಾರಣಕ್ಕಾಗಿ ಬಿಪಿಎಲ್ ಕುಟುಂಬ ಆಗಿದ್ದರೂ ಸೌಲಭ್ಯ ಸಿಗದಂತಾಗಿದೆ. ಯೋಜನೆಯಲ್ಲಿ ಹೆಸರಿಲ್ಲ ಎಂದು ಕೆಲವರು ಹೇಳಬಹುದು. ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಿ  ಅರ್ಹರಿಗೆ ಯೋಜನೆ ಪೂರೈಸಲು ಸಾಧ್ಯ ಎಂಬುದರ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.
 
‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅರಣ್ಯ ಇಲಾಖೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಂದ ಸರ್ಕಾರದ ವಿವಿಧ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಫಲಾನುಭವಿಗಳು ಉಜ್ವಲ ಯೋಜನೆಯಡಿ ಮತ್ತೊಮ್ಮೆ ಸಂಪರ್ಕ ಪಡೆಯುವಂತಿಲ್ಲ. ಆದ್ದರಿಂದ ಸಂಬಂಧಿಸಿದ ಇಲಾಖೆಗಳು ಗಣಕಯಂತ್ರದ ತಂತ್ರಾಂಶದಲ್ಲಿ ಫಲಾನುಭವಿಯ ಹೆಸರನ್ನು ಕಡ್ಡಾಯವಾಗಿ ಅಳವಡಿಸಬೇಕು’ ಎಂದು ತಿಳಿಸಿದರು.
 
ಸಮೀಕ್ಷೆಯೊಂದರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1.35 ಲಕ್ಷ ಅಡುಗೆ ಅನಿಲ ಸಂಪರ್ಕ ಇಲ್ಲದವರನ್ನು ಕಾಣಬಹುದು. ಅದಕ್ಕಾಗಿಯೇ  ಗ್ಯಾಸ್‌ ಏಜೆನ್ಸಿ ಡೀಲರ್‌ಗಳು ಕೂಡ  ವ್ಯಾಪ್ತಿಯಲ್ಲಿ ಬಿಪಿಎಲ್‌ ಕುಟುಂಬಗಳ ಸಮೀಕ್ಷೆ ನಡೆಸುವ ಮೂಲಕ ಅರ್ಹರನ್ನು ಗುರುತಿಸುವ ಕೆಲಸ ಮಾಡಬೇಕು ಎಂದ ಅವರು, ಹೆಸರು  ಬಿಟ್ಟು ಹೋಗಿದ್ದರೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮುಂದೇನು ಮಾಡಬಹುದು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.
 
ಯೋಜನೆ ಜಿಲ್ಲೆಯಾದ್ಯಂತ ಯಶಸ್ವಿಯಾಗಲು ಮೊದಲು ಸಂಪರ್ಕ ಕಲ್ಪಿಸಲು ಚಾಲನೆ ನೀಡಬೇಕು. ಕೇವಲ ಆಶ್ವಾಸನೆ ನೀಡಿದರೆ  ಯಾವುದೇ ಪ್ರಯೋಜನವಿಲ್ಲ. ಫಲಾನುಭವಿಗಳೇ ಖುದ್ದು ಅರ್ಜಿ ಸಲ್ಲಿಸುವಂಥ ವಾತಾವರಣ ನಿರ್ಮಾಣ ಆಗಬೇಕು ಎಂದು ಜಿಲ್ಲೆಯ ಆರು ತಾಲ್ಲೂಕುಗಳಿಂದ ಬಂದಿದ್ದ ಸ್ಥಳೀಯ ಅಡುಗೆ ಅನಿಲ ವಿತರಕರು ಸಭೆಯಲ್ಲಿ ಜಿಲ್ಲಾಧಿಕಾರಿ ಗಮನ ಸೆಳೆದರು. 
 
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೇಂದ್ರ ಸರ್ಕಾರ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಲು ಸೂಚಿಸಿದೆ. ಅದರಂತೆ ಗಣಕಯಂತ್ರದ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯವಾಗಬೇಕು. ಸರ್ಕಾರದಿಂದ ಆದೇಶ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ ಎಂದು ತಿಳಿಸಿದರು.
 
ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್, ವಿವಿಧ ಇಲಾಖೆಗಳ ಉಪನಿರ್ದೇಶಕರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ವಿತರಕರು ಸೇರಿದಮತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT