ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ಉದ್ಯೋಗ ನೀಡಲು ಕ್ರಮ ಕೈಗೊಳ್ಳಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಸೂಚನೆ
Last Updated 11 ಮಾರ್ಚ್ 2017, 5:25 IST
ಅಕ್ಷರ ಗಾತ್ರ
ಚಿತ್ರದುರ್ಗ/ತುರುವನೂರು: ‘ಜಿಲ್ಲೆಯಾದ್ಯಂತ ಬರದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ ಕಾರಣ ನನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲೂ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಜತೆಗೆ ಕೂಲಿ ಕೆಲಸ ನೀಡಬೇಕು’ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
 
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಎಲ್ಲೆಲ್ಲಿ ಆರ್‌ಓ ಘಟಕಗಳನ್ನು ತೆರೆಯಲಾಗಿದೆಯೋ ಅಲ್ಲಿನ ಕೊಳವೆ ಬಾವಿಗಳಲ್ಲಿ ನೀರಿಲ್ಲ ದಿದ್ದರೆ, ಟ್ಯಾಂಕರ್‌ ಮೂಲಕವಾದರೂ ನೀರು ಸಂಗ್ರಹಿಸಿ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು’ ಎಂದರು.
 
‘ತುರುವನೂರು ಹೋಬಳಿಯ ಸಿದ್ದವ್ವನದುರ್ಗ, ಹೊಸಹಟ್ಟಿ, ಜೋಗಿ ಬೋರನಹಟ್ಟಿ, ಹಿರೇಕಬ್ಬಿಗೆರೆ, ಗೊಲ್ಲರಹಟ್ಟಿ, ಚಿಕ್ಕಬ್ಬಿಗೆರೆ, ಕೂನಬೇವು, ಮಾಡನಾಯಕನಹಳ್ಳಿ, ಬಾಗೇನಹಾಳ್, ಚಿಕ್ಕಪ್ಪನಹಳ್ಳಿ, ಸುಲ್ತಾನಿಪುರ, ಕೂನಬೇವು ಗೊಲ್ಲರ ಹಟ್ಟಿ, ಸೂರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.
 
‘ಜನತೆ ಗುಳೆ ಹೋಗುವುದನ್ನು ತಡೆಯಲಿಕ್ಕೆ ಕೆಲಸ ನೀಡಬೇಕಾದ ಅಗತ್ಯ ಇದೆ. ನೀವು ಕೈಗೆತ್ತಿಕೊಳ್ಳುವ ಕಾಮಗಾರಿ ಕುರಿತು ಹೆಚ್ಚಿನ ರೀತಿಯಲ್ಲಿ ಪ್ರಚಾರ ಕೈಗೊಳ್ಳಬೇಕು. ಕೆಲಸಕ್ಕೆ ಬರುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ. ಕೆಲಸವನ್ನಂತೂ ನೀವು ಒದಗಿಸಲೇಬೇಕು. ಕೂಲಿ ಕೆಲಸಕ್ಕಾಗಿ ಕಿಲೋಮೀಟರ್‌ಗಟ್ಟಲೆ ಯಾರೂ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಬರುವುದಿಲ್ಲ. ಆದಷ್ಟು ಕೂಲಿ ಕಾರ್ಮಿಕರು ಒಟ್ಟು ಸೇರುವಂಥ ಹಳ್ಳಿಗಳಲ್ಲಿ ಕಾಮಗಾರಿ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
 
‘ಕೆಲವು ಕಡೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಬೂಬು ಹೇಳುವುದನ್ನು ಕೈಬಿಟ್ಟು ವಾಸ್ತವ ಸ್ಥಿತಿ ವಿವರಿಸಿ. ನೀವು ಕೊಡುವ ಕಾರಣಗಳು ನನಗೆ ಗೊತ್ತು. ಕೆಲವು ಕೆಲಸದ ವ್ಯಾಪ್ತಿ ದೊಡ್ಡದು ಎಂಬ ಕಾರಣಕ್ಕೆ ಕೆಲಸ ಕೈಗೆತ್ತಿಕೊಳ್ಳದಿರುವ ನಿದರ್ಶನಗಳೂ ಇವೆ. ಜನತೆಗೆ ಕೆಲಸ ಒದಗಿಸಲಿಕ್ಕೆ ಆದ್ಯತೆ ನೀಡಬೇಕಾಗಿರುವ ಕಾರಣ ಯಾವುದೇ ನೆಪ ಹೇಳದೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು  ತಿಳಿಸಿದರು. 
 
‘ತುರುವನೂರು ಪಂಚಾಯ್ತಿ ದೊಡ್ಡದಾಗಿದ್ದು, 8 ಹಳ್ಳಿಗೆ 37 ಜನ ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ಅಲ್ಲಿನ ಜನ ಕೂಲಿಯಿಲ್ಲದೆ ಪರದಾಡುತ್ತಿದ್ದಾರೆ. ನೀವು ನೋಡಿದರೆ 70 ಜನಕ್ಕೆ ಕೆಲಸ ನೀಡಿದ್ದೀರಾ ಅಂತಾ ಹೇಳುತ್ತೀರಿ. ಕ್ಷೇತ್ರದ ಜನ ಕೇಳೋ ಪ್ರಶ್ನೆಗೆ ಉತ್ತರ ಕೊಡಲು ಆಗದಂಥ  ಸ್ಥಿತಿಗೆ ತಂದು ನನ್ನನ್ನು ನಿಲ್ಲಿಸಿದ್ದೀರಿ’ ಎಂದು ಬೇಸರ ವ್ಯಕ್ತಪಡಿಸಿದರು.
 
ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯ್ತಿ ಇಒ ಸತೀಶ್‌ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಅಧಿಕಾರಿ ಮನೋಹರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT