ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ 2 ಸಾವಿರ ರೈತರು ಕೃಷಿಯಿಂದ ವಿಮುಖ

ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ: ಪತ್ರಕರ್ತ ಪಿ.ಸಾಯಿನಾಥ್‌ ಆತಂಕ
Last Updated 11 ಮಾರ್ಚ್ 2017, 5:36 IST
ಅಕ್ಷರ ಗಾತ್ರ
ಕಲಬುರ್ಗಿ: ‘ಕಳೆದ 20 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 50 ದಶಲಕ್ಷ ರೈತರು ಕೃಷಿಯಿಂದ ಹಿಂದೆ ಸರಿದಿದ್ದು, ಪ್ರತಿ ನಿತ್ಯ ಸರಾಸರಿ 2 ಸಾವಿರ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ’ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌ ಆತಂಕ ವ್ಯಕ್ತಪಡಿಸಿದರು.
 
ಜಿಲ್ಲೆಯ ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ವ್ಯವಹಾರ ಅಧ್ಯಯನ, ವಾಣಿಜ್ಯ ವಿಭಾಗದ  ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಭಾರತದಲ್ಲಿನ ಶೋಷಿತ ವರ್ಗದ ನಡುವಿನ ಭೂಮಿ ಹಸ್ತಾಂತರ ಮತ್ತು ಆಹಾರ ಅಭದ್ರತೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
 
‘ಪ್ರತಿ ವರ್ಷ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇನ್ನೊಂದೆಡೆ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲದ ಕೆಲಸ ಹುಡುಕಿಕೊಂಡು ಲಕ್ಷಾಂತರ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಇವರೆಲ್ಲ ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದೂ ಗೊತ್ತಾಗುತ್ತಿಲ್ಲ. ಋತುಮಾನ ಆಧರಿಸಿ ಕೆಲವರು ಗುಳೆ ಹೋಗುತ್ತಾರೆ. ಆದರೆ 5–6 ತಿಂಗಳ ಬಳಿಕ ಮತ್ತೆ ತಮ್ಮೂರಿಗೆ ಮರಳುತ್ತಾರೆ. ಆದರೆ ಕೆಲವರು ಶಾಶ್ವತವಾಗಿ ಗ್ರಾಮ ತೊರೆಯುತ್ತಿದ್ದಾರೆ’ ಎಂದು ಹೇಳಿದರು.
 
‘ಶಾಶ್ವತವಾಗಿ ಗುಳೆ ಹೋಗುವವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿರುವ 40 ಕೋಟಿ ಭಾರತೀಯರು ಶಾಲೆಯ ಮುಖವನ್ನೇ ನೋಡಿಲ್ಲ. ಇದರಲ್ಲಿ ದಲಿತರು ಮತ್ತು ಆದಿವಾಸಿಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪದವಿ ಪೂರೈಸಿದವರ ಸಂಖ್ಯೆ ಶೇ 3ರಷ್ಟು ಮಾತ್ರ ಇದೆ. ಇದರಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಅವರು ಹಿಂದುಳಿಯುವಂತಾಗಿದೆ’ ಎಂದು ತಿಳಿಸಿದರು.
 
3.10 ಲಕ್ಷ ರೈತರ ಸಾವು: ‘ದೇಶದಲ್ಲಿ 1995ರಿಂದ 2015ರ ವರೆಗೆ 3.10 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2013ರಲ್ಲಿ ನಡೆದ ಸಮೀಕ್ಷೆ ಪ್ರಕಾರ ರೈತ ಕುಟುಂಬದ ತಿಂಗಳ ಆದಾಯ ₹6,426 ಇತ್ತು. ಕಡಿಮೆ ಆದಾಯದಿಂದಾಗಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಲೇ ಇದೆ. ಭೂಮಿ ಇಲ್ಲದ ರೈತರು ಭೋಗ್ಯಕ್ಕೆ ಭೂಮಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 
 
 ಆದರೆ ಇವರ ಹೆಸರಲ್ಲಿ ಭೂ ದಾಖಲೆಗಳು ಇಲ್ಲದ್ದರಿಂದ ಇವರಿಗೆ ಸಹಕಾರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಸೌಲಭ್ಯ ನೀಡುತ್ತಿಲ್ಲ. ಅನಿವಾರ್ಯವಾಗಿ ಇವರು ಖಾಸಗಿ ಹಣಕಾಸು ಸಂಸ್ಥೆಗಳ ಬಳಿ ಸಾಲು ಪಡೆದು, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ತಿಳಿಸಿದರು.
 
‘ಕೃಷಿ ಭೂಮಿ ಇಲ್ಲದ ರೈತರು, ಭೋಗ್ಯಕ್ಕೆ ಭೂಮಿ ಪಡೆದ ರೈತರು, ಕೃಷಿ ಕೂಲಿ ಕಾರ್ಮಿಕರ ಆತ್ಯಹತ್ಯೆಗಳೂ ಹೆಚ್ಚುತ್ತಿವೆ. ರೈತನ ಪತ್ನಿ ಮೃತಪಟ್ಟರೆ ಆಕೆಯ ಸಾವನ್ನು ಇತರೆ ಸಾವು ಎಂದು ದಾಖಲಿಸಲಾಗುತ್ತಿದೆ. ಲಕ್ಷಾಂತರ ಜನ ರೈತರು, ದಲಿತರು, ಕೃಷಿ ಭೂಮಿ ಹೊಂದಿಲ್ಲ. ಸರ್ಕಾರಗಳು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರೂ ಅದರ ಲಾಭ ಕಾರ್ಪೋರೇಟ್ ಕಂಪೆನಿಗಳಿಗೆ ಸಿಕ್ಕಿದೆಯೇ ಹೊರತು ರೈತರಿಗಲ್ಲ’ ಎಂದರು.
 
ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ವ್ಯವಹಾರ ಅಧ್ಯಯನ ಶಾಲೆಯ ಡೀನ್ ಪ್ರೊ.ಪುಷ್ಪಾ ಎಂ.ಸವದತ್ತಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ತ್ರಿನಾದ್ ನೂಕತೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 
ಪಿ.ಸಾಯಿನಾಥ್‌ ಹೇಳಿದ್ದು..
ವರ್ಣಾಶ್ರಮ ಪದ್ಧತಿ ಜಾರಿ!

ನಮ್ಮ ದೇಶದಲ್ಲಿ ನಿಜ ಅರ್ಥದಲ್ಲಿ ವರ್ಣಾಶ್ರಮ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಗಗಳು ಆಚರಣೆಯಲ್ಲಿವೆ. ಅಂತೆಯೇ ಗ್ರೂಪ್ ‘ಎ’, ಗ್ರೂಪ್ ‘ಬಿ’, ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ವರ್ಗಗಳೂ ಇವೆ.

1ಗಂಟೆವರೆಗೆ ಪಾಠ ಮಾಡಲು ಆಗದು
ಮಹಾರಾಷ್ಟ್ರ ರಾಜ್ಯದ ಸರ್ಕಾರಿ ಶಾಲೆಯೊಂದರ ಶಿಕ್ಷಕರು ಮಧ್ಯಾಹ್ನದ ಬಿಸಿಯೂಟವನ್ನು ಸೋಮವಾರ ಎರಡು ಪಟ್ಟು ನೀಡಬೇಕು. ಇಲ್ಲವಾದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ನಮಗೆ ಪಾಠ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕುತೂಹಲದಿಂದ ಅವರನ್ನು ಪ್ರಶ್ನಿಸಿದಾಗ, ಮಕ್ಕಳು ಶನಿವಾರ ಮಧ್ಯಾಹ್ನ ಮಾಡುವ ಊಟವೇ ಕೊನೆಯದು. ಸೋಮವಾರ ಶಾಲೆಗೆ ಬಂದು ಊಟ ಮಾಡುವವರೆಗೆ ಅವರಿಗೆ ಊಟ ಸಿಗುವುದಿಲ್ಲ. ಅವರು ಪಾಠವನ್ನೂ ಕೇಳುವುದಿಲ್ಲ ಎಂದು ಉತ್ತರ ನೀಡಿದರು.

ವಿಜಯ ಮಲ್ಯನ ಸಾಲಕ್ಕೆ ಸಮ!
ದೇಶದಲ್ಲಿ ಇಂದಿಗೂ ಮ್ಯಾನ್‌ಹೋಲ್‌ಗಳನ್ನು ಪೌರ ಕಾರ್ಮಿಕರೇ ಶುಚಿಗೊಳಿಸುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಿಂದೊಮ್ಮೆ ನಾನು ದೇಶದಲ್ಲಿರುವ ಸಫಾಯಿ ಕರ್ಮಚಾರಿಗಳ ಸಂಖ್ಯೆ ಎಷ್ಟು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದ್ದೆ. ಅವರು, 2 ಲಕ್ಷ ಇದೆ. ಒಬ್ಬರಿಗೆ ₹3 ಲಕ್ಷ ಪರಿಹಾರ ಕೊಟ್ಟರೆ ಅವರು ಈ ಕೆಲಸದಿಂದ ಹಿಂದೆ ಸರಿಯುತ್ತಾರೆ ಎಂದರು.

ಆದರೆ ಸಫಾಯಿ ಕರ್ಮಚಾರಿಗಳ ಸಂಘಟನೆ ಪ್ರಕಾರ ಅವರ ಸಂಖ್ಯೆ 3 ಲಕ್ಷ. ಒಬ್ಬರಿಗೆ ₹3 ಲಕ್ಷದಂತೆ 3 ಲಕ್ಷ ಜನರಿಗೆ ₹9ಸಾವಿರ ಕೋಟಿ ಕೊಡಬೇಕಾಗುತ್ತದೆ ಎಂದು ಲೆಕ್ಕಾಚಾರ ಹಾಕಲಾಯಿತು. ಈ ಹಣ ವಿಜಯ ಮಲ್ಯ ಬ್ಯಾಂಕಿನಲ್ಲಿ ಬಾಕಿ ಉಳಿಸಿಕೊಂಡಿರುವ ಹಣಕ್ಕೆ ಸಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT