ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ ನಿರ್ಮಾಣಕ್ಕೆ ಸಚಿವ ಸಲಹೆ

ಬೀದರ್‌ ಜಿಲ್ಲೆಗೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಭೇಟಿ: ಪಂಡರಗೇರಾದಲ್ಲಿ ರೈತರೊಂದಿಗೆ ಸಂವಾದ
Last Updated 11 ಮಾರ್ಚ್ 2017, 5:50 IST
ಅಕ್ಷರ ಗಾತ್ರ
ಬಸವಕಲ್ಯಾಣ: ಕೃಷಿ ಹೊಂಡ ನಿರ್ಮಾಣದಿಂದ ಒಣ ಬೇಸಾಯಗಾರರಿಗೆ ಅನುಕೂಲ ಆಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.
 
ತಾಲ್ಲೂಕಿನ ಪಂಡರಗೇರಾ ಗ್ರಾಮದ ವ್ಯಾಪ್ತಿಯಲ್ಲಿ ಶುಕ್ರವಾರ ಕೃಷಿ ಹೊಂಡಗಳನ್ನು ಪರಿಶೀಲಿಸಿದ ನಂತರ  ರೈತರೊಂದಿಗೆ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ಹೊಂಡ ನಿರ್ಮಿಸಿ ಪಂಪ್‌ಸೆಟ್ ಒದಗಿಸಲಾಗುತ್ತದೆ. ಹನಿ ನೀರಾವರಿ ಮೂಲಕ ಈ ನೀರನ್ನು ಉಪಯೋಗಿಸಬೇಕು. ಹನಿ ನೀರಾವರಿ ಕೈಗೊಳ್ಳಲು ಶೇ 90ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದರು.
 
ಜಿಲ್ಲೆಯ ಬಸವಕಲ್ಯಾಣ ಮತ್ತು ಹುಮನಾಬಾದ್ ತಾಲ್ಲೂಕುಗಳಲ್ಲಿ ಕೃಷಿ ಹೊಂಡ ಯೋಜನೆ ಜಾರಿಯಲ್ಲಿದೆ. ಉಳಿದ ತಾಲ್ಲೂಕುಗಳಿಗೆ ಇದನ್ನು ವಿಸ್ತರಿಸಲಾಗುವುದು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಕೃಷಿ ಹೊಂಡ ಕೂಡ ಕಡಿಮೆ ಪ್ರಮಾಣದಲ್ಲಿವೆ ಎಂದರು.
 
ಪ್ರತಿ ತಾಲ್ಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ಹೆಚ್ಚಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ₹900 ಕೋಟಿ ವೆಚ್ಚದಲ್ಲಿ 15 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.  25 ಲಕ್ಷ ಕ್ವಿಂಟಲ್ ತೊಗರಿ ಖರೀದಿಸುವ ಸಾಧ್ಯತೆಯಿದೆ. ಇದಕ್ಕಾಗಿ ₹1500 ಕೋಟಿ ವೆಚ್ಚವಾಗುತ್ತದೆ. ರೈತರಿಗೆ ₹5500 ಬೆಲೆ ನೀಡಲಾಗುತ್ತಿದೆ ಎಂದು ತಿಳಿಸಿದರು.
 
ತೊಗರಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ಹಾವಳಿ ತಡೆಗೆ ರೈತ ಸಂಘ ಸಹಕರಿಸಬೇಕು. ರೈತರ ಆಧಾರ ಸಂಖ್ಯೆ, ಧೃಢೀಕರಣ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ ಪಡೆದು ತೊಗರಿ ಖರೀದಿ ಮಾಡಲಾಗುತ್ತಿದೆ. ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಹೇಳಿದರು.
 
ಶಾಸಕ ರಾಜಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ, ಆನಂದ ದೇವಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಜಮಖಂಡಿ, ಡಾ.ಕಿಶೋರ ರಾಠೋಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು.
 
ವಿವಿಧ ಬೇಡಿಕೆ: ರೈತರ ಸಾಲಮನ್ನಾ ಮಾಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಸಚಿವರಿಗೆ ಮನವಿ ಸಲ್ಲಿಸಿದರು.
 
ಕಾಡು ಹಂದಿಗಳಿಂದ ಬೆಳೆ ನಾಶವಾಗುತ್ತಿದೆ. ಉಪಟಳ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಶಿರಗಾಪುರ ಕೆರೆ ಒಡೆದು ಅಪಾರ ಹಾನಿಯಾಗಿದ್ದು ಪರಿಹಾರ ನೀಡಬೇಕು. ತೊಗರಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಸಹಕರಿತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದರು.
 
ಭಾಲ್ಕಿ ವರದಿ:  ಕುಸುಬೆ ಬೆಳೆ ಬೆಳೆಯುವ ಕ್ಷೇತ್ರ ವಿಸ್ತರಿಸಲು ಯಂತ್ರಗಳ ಬಳಕೆ ಸಹಕಾರಿ. ಯಂತ್ರಗಳ ಬಳಕೆಯಿಂದ ಶ್ರಮ, ಸಮಯ, ಹಣ ಉಳಿತಾಯ ಆಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು. 
 
ತಾಲ್ಲೂಕಿನ ಕಟ್ಟಿ ತೂಗಾಂವ ಗ್ರಾಮದ ರೈತ ಕಾಶೀನಾಥ ಹಣಮಂತರಾವ ಡಾವರಗಾಂವ ಎಂಬುವರ ಜಮೀನಿನಲ್ಲಿ ಶುಕ್ರವಾರ ಕುಸುಬೆ ಬೆಳೆ ಕಟಾವು ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು. 
 
ಕುಸುಬೆ ಬೆಳೆಯ ಕಟಾವು, ರಾಶಿ ಕಷ್ಟದ ಕೆಲಸ. ಬೆಳೆ ತುಂಬಾ ಮುಳ್ಳು. ಕಟಾವು ಮಾಡಲು ಆಗಲ್ಲ. 1 ಎಕರೆ ಕುಸುಬೆ ಕಟಾವಿಗೆ ನಾಲ್ಕೈದು ಮಂದಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಿದರೂ ವಾರದ ಅವಧಿ ಬೇಕು. ನಂತರ ಒಣಗಿಸಿ ಬಡಿದು ರಾಶಿ ಮಾಡಬೇಕು. ಕನಿಷ್ಠ ₹ 2 ಸಾವಿರ ಖರ್ಚಾಗುತ್ತದೆ. ಹೀಗಾಗಿ ಕುಸಬೆ ಬೆಳೆ ಬೆಳೆಯುವ ಕ್ಷೇತ್ರ ಕಡಿಮೆ ಆಗುತ್ತಿದೆ. ಆದರೆ ಬೃಹತ್ ಯಂತ್ರದ ಮೂಲಕ ನಡೆಸಿದ ಕಟಾವು-ಒಕ್ಕಣೆಯಲ್ಲಿ ಈ ಸಮಸ್ಯೆ ಇಲ್ಲ. ಒಂದು ಗಂಟೆಯೊಳಗೆ ಎಲ್ಲವೂ ಪೂರ್ಣಗೊಳ್ಳುತ್ತದೆ. ಕುಸುಬೆಯನ್ನು ನೇರವಾಗಿ ಮಾರಾಟಕ್ಕೆ ಒಯ್ಯಬಹುದು ಎಂದು ಕೃಷಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. 
 
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ರೆಡ್ಡಿ, ಆನಂದ ದೇವಪ್ಪ,  ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್. ಸೆಲ್ವಮಣಿ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟಪ್ಪಗೋಳ, ಜಂಟಿ ನಿರ್ದೇಶಕ ಜಿಯಾವಲ್ಲೋದ್ದಿನ್, ತಾ.ಪಂ ಕಾರ್ಯನಿರ್ವಾಹಕ ಸೂರ್ಯಕಾಂತ ಬಿರಾದಾರ್, ಸಹಾಯಕ ಕೃಷಿ ನಿರ್ದೇಶಕ ಇಂದುಧರ ಹಿರೇಮಠ, ಸತೀಶ ಮುದ್ದಾ, ಸತೀಶ ಶೆಟಕಾರ್ ಇದ್ದರು.
 
ಹೆಚ್ಚುವರಿ ಅನುದಾನಕ್ಕೆ  ಮನವಿ 
ಹುಮನಾಬಾದ್ ವರದಿ: ಜಿಲ್ಲೆಗೆ ಕೃಷಿ ಇಲಾಖೆ ಯೋಜನೆಗಳಿಗೆ ಹೆಚ್ಚು ಅನುದಾನ ಒದಗಿಸುವಂತೆ ಶಾಸಕ ರಾಜಶೇಖರ ಬಿ.ಪಾಟೀಲ ಮತ್ತು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ ಶುಕ್ರವಾರ ಕೃಷಿ ಸಚಿವ ಕೃಷ್ಣ ಬೈರೆಗೌಡ ಅವರಿಗೆ ಮನವಿ ಸಲ್ಲಿಸಿದರು.
 
ಕೃಷಿ ಯಂತ್ರೋಪಕರಣ ಖರೀದಿ, ಹೈನುಗಾರಿಕೆ, ಕೃಷಿಹೊಂಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಕೃಷಿ ಯಾಂತ್ರೀಕರಣ ವಿಶೇಷ ಘಟಕ ಯೋಜನೆಯಡಿ ₹1.2 ಕೋಟಿ, ಕೃಷಿ ಯಾಂತ್ರೀಕರಣ ಗಿರಿಜನ ಉಪಯೋಜನೆಯಡಿ ₹85 ಲಕ್ಷ, ಸೂಕ್ಷ್ಮ ನೀರಾವರಿ ಸಾಮಾನ್ಯ ₹8.25 ಕೋಟಿ, ಸೂಕ್ಷ್ಮ ನೀರಾವರಿ ಯೋಜನೆ ಗಿರಿಜನ ಉಪಯೋಜನೆಯಡಿ ₹11 ಲಕ್ಷ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು.
 
ಹೋಬಳಿ ಮಟ್ಟದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖಾಸಗಿ ವ್ಯಾಪಾರಿಗಳು ಪ್ರತಿ ಕ್ವಿಂಟಲ್‌ ತೊಗರಿಗೆ ₹3ರಿಂದ 4 ಸಾವಿರ ಮಾತ್ರ ನೀಡುತ್ತಿದ್ದಾರೆ. ಆದರೆ ಸರ್ಕಾರ ಕ್ವಿಂಟಲ್‌ಗೆ ₹ 5,500 ನೀಡುತ್ತಿದ್ದು, ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಪ್ರಯೋಜನವಾಗಲಿದೆ ಎಂದು ಪ್ರಕಾಶ್‌ ಹೇಳಿದರು.
 
ಉಪವಿಭಾಗಾಧಿಕಾರಿ ಡಾ.ಶರಣಬಸಪ್ಪ ಕೋಟ್ಯಪ್ಪಗೋಳ್‌, ತಹಶೀಲ್ದಾರ್‌ ಡಿ.ಎಂ.ಪಾಣಿ, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಮಲ್ಲಿಕಾರ್ಜುನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಹ್ಮದ್‌ ಅಪ್ಸರಮಿಯ್ಯ, ರಾಜಕುಮಾರ ಇಟಗಿ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT